ರೋಹಿಂಗ್ಯನ್ ಮುಸ್ಲಿಂ ನರಮೇಧ ಪ್ರಕರಣವನ್ನು ಕೈಬಿಡಿ; ಇಲ್ಲದಿದ್ದರೆ ಅಲ್ಪಸಂಖ್ಯಾಕ ಸಾಮರಸ್ಯಕ್ಕೆ ತೊಡಕಾದೀತು- ಅಂಗ್ ಸಾನ್ ಸೂಕಿ

0
1166

ಸನ್ಮಾರ್ಗ ವಾರ್ತೆ

ಹೇಗ್, ಡಿ. 13: ರೋಹಿಂಗ್ಯನ್ ಮುಸ್ಲಿಮರನ್ನು ಮ್ಯಾನ್ಮಾರ್ ಸೈನ್ಯ ಸಮೂಲ ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಕೋರ್ಟಿನಲ್ಲಿ (ಐಸಿಜೆ) ಮ್ಯಾನ್ಮಾರ್ ಸ್ಟೇಟ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ವಿಚಾರಣೆ ಎದುರಿಸುತ್ತಿದ್ದು ಪ್ರಕರಣ ಕೈಬಿಡಬೇಕೆಂದು ಸೂಕಿ ಕೋರ್ಟಿನಲ್ಲಿ ಆಗ್ರಹಿಸಿದ್ದಾರೆ. ಕೋರ್ಟಿನ ಯಾವುದೇ ಕ್ರಮ ದೇಶದ ಅಲ್ಪಸಂಖ್ಯಾತರ ನಡುವೆ ಸಾಮರಸ್ಯ ಪ್ರಯತ್ನಗಳನ್ನು ದುರ್ಬಗೊಳಿಸುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮ್ಯಾನ್ಮಾರ್ ವಿರುದ್ಧ ಆಫ್ರಿಕನ್ ದೇಶ ಗಾಂಬಿಯ ಸಲ್ಲಿಸಿದ ಅರ್ಜಿಯ ಕಾರಣದಿಂದ ಸೂಕಿ ಕೋರ್ಟಿನಲ್ಲಿ ಹಾಜರಾಗಬೇಕಾಯಿತು. ಪ್ರಕರಣದಲ್ಲಿ ಮ್ಯಾನ್ಮಾರ್ ನ ವಾದಗಳನ್ನು ಕಟುಭಾಷೆಯಲ್ಲಿ ಗಾಂಬಿಯ ವಕೀಲರು ವಿರೋಧಿಸಿದರು. ಮ್ಯಾನ್ಮಾರಿನ ರಾಖೈನ್ ರಾಜ್ಯದ ಅಲ್ಪಸಂಖ್ಯಾತರು ಇನ್ನೂ ದೌರ್ಜನ್ಯಕ್ಕೆ ತುತ್ತಾಗದಿರಲು ಸೂಕ್ತ ಕ್ರಮ ಕೈಗೊಳ್ಳಭೇಕೆಂದು ವಿಶ್ವಸಂಸ್ಥೆಯ ಉನ್ನತ ಕೋರ್ಟಿಗೆ ಗಾಂಬಿಯದ ವಕೀಲರು ಆಗ್ರಹಿಸಿದರು. ಆದರೆ ಇದನ್ನು ಸೂಕಿ ವಿರೋಧಿಸಿದರೆಂದು ಮ್ಯಾನ್ಮಾರ್ ಟೈಮ್ಸ್ ವರದಿ ಮಾಡಿದೆ.

ಹೇಗ್‍ನಲ್ಲಿ ಮೂರು ದಿವಸದ ವಿಚಾರಣೆಯನ್ನು ಎದುರಿಸಿದ ಸೂಕಿ, ಈ ನ್ಯಾಯ ಪ್ರಕ್ರಿಯೆಯು ದೇಶದ ಈಗಿನ ಸೈನಿಕ ನ್ಯಾಯವ್ಯವಸ್ಥೆಯನ್ನು ಮೂಲೆಗೊತ್ತಿ ಹೊರಗಿನ ವ್ಯವಸ್ಥೆ ಯನ್ನು ಜಾರಿಗೊಳಿಸಿದಂತಾಗುತ್ತದೆ. ಮ್ಯಾನ್ಮಾರ್ ಸರಕಾರ ನಿಯೋಜಿಸಿದ ಸ್ವತಂತ್ರ ತನಿಖಾ ಕಮಿಶನ್‍ನ ಅಂತಿಮ ವರದಿ ಪೂರ್ಣಗೊಂಡರೆ ಎಲ್ಲರಿಗೂ ನ್ಯಾಯ ಸಿಗಲಿದೆ. ಕೇಸು ಕೈಬಿಟ್ಟು ವೈವಿಧ್ಯತೆಯಿಂದ ಒಗ್ಗಟ್ಟು ಸೃಷ್ಟಿಸುವ ಮ್ಯಾನ್ಮಾರ್ ನ ಯತ್ನಕ್ಕೆ ಸಹಕರಿಸಬೇಕೆಂದು ಸೂಕಿ ಹೇಳಿದರು.

ಸೀನಿಯರ್ ಜನರಲ್ ಮಿನ್ ಆಂಗ ಹೆಲಿಂಗ್ ಸಹಿತ ನಾಲ್ವರು ಉನ್ನತ ಮ್ಯಾನ್ಮಾರ್ ಸೈನಿಕಾಧಿಕಾರಿಗಳಿಗೆ ಅಮೆರಿಕದ ಟ್ರಷರಿ ಇಲಾಖೆ ಮಂಗಳವಾರ ದಿಗ್ಬಂಧ ವಿಧಿಸಿದೆ ಎಂದು ಗಾಂಬಿಯದ ವಕೀಲ ಕೋರ್ಟಿಗೆ ತಿಳಿಸಿದರು. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದ ವಕೀಲರು ಸೂಕಿ ಹೇಳುವುದನ್ನು ಒಪ್ಪಲು ಸಾಧ್ಯವಿಲ್ಲ. ಮ್ಯಾನ್ಮಾರಿನ ನ್ಯಾಯ ವ್ಯವಸ್ಥೆ ಸೈನ್ಯದ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು.

2017ರಲ್ಲಿ ಮ್ಯಾನ್ಮಾರಿನ ರಾಖೈನ್‍ನಲ್ಲಿ ಸೇನೆ ರೋಹಿಂಗ್ಯನ್ ಮುಸ್ಲಿಮರ ಸಾಮೂಹಿಕ ಕಗ್ಗೊಲೆ, ಅತ್ಯಾಚಾರ ನಡೆಸಿತ್ತು. ಎಂಟು ಲಕ್ಷ ಜನರು ಬಾಂಗ್ಲಾದೇಶಕ್ಕೆ ಓಡಿ ಬಂದಿದ್ದರು.