ದೇವಸ್ಥಾನದ ಹಣ ಮತ್ತು ಸರ್ಕಾರದ ಖಜಾನೆ

0
493

ಸನ್ಮಾರ್ಗ ವಾರ್ತೆ

ಬರಹ : ಆರ್ ಪಿ.

ಬಿಜೆಪಿ ಸೋತು ವಿರೋಧ ಪಕ್ಷದ ಸ್ಥಾನಕ್ಕೆ ಬಂದು ಕೂರುತ್ತಿದ್ದಂತೆ ‘ದೇವಾಲಯದ ಹುಂಡಿ ಹಣ’ ಕುರಿತಂತೆ ಅದ್ರ PR Cell ಗಳು ( ಪ್ರಚಾರಕರು, ಪ್ರಚಾರ ಸಂಸ್ಥೆಗಳು) ದೊಡ್ಡ ಸುದ್ದಿ ಎಬ್ಬಿಸಲು ಶುರು ಮಾಡುತ್ತಾರೆ. ಹುಂಡಿಯ ಹಣವನ್ನು ಸರ್ಕಾರ ತನ್ನ ಬೇರೆ ಯೋಜನೆಗಳಿಗೆ ಅಥವಾ ಇಸ್ಲಾಮ್/ಕ್ರೈಸ್ತ ಮತಗಳ ಉಪಯೋಗಕ್ಕೆ ಕೊಡುತ್ತದೆ ಎಂದು ವಿಪರೀತವಾಗಿ ಸುಳ್ಳು ಸುದ್ದಿ ಎಬ್ಬಿಸುತ್ತಾರೆ. ಆದ್ರೆ ಅದು ಸಾಧ್ಯವೇ ಎಂದು ಬಹುತೇಕರು ಕ್ರಾಸ್ ಚೆಕ್ ಮಾಡುವುದಿಲ್ಲ.‌ ಗೊತ್ತಿರುವ ಕೆಲವರು ಕೂಡ ಇದನ್ನ ಹೊರಕ್ಕೆ ಹೇಳದೇ ದೊಂಬಿ ಏಳಲಿ ಎಂದೇ ಬಯಸಿ ಸುಮ್ಮನಿರುತ್ತಾರೆ..( ಇಂತಹವರು ಯಾರು ಎಂದು ವಿಶೇಷವಾಗಿ ಉಲ್ಲೇಖಿಸಿಬೇಕಿಲ್ಲ ಅಲ್ಲವೇ?!)

ದೇವಾಲಯಕ್ಕೆ ಬರುವ ಭಕ್ತಾದಿಗಳ ಹಣದ ಬಳಕೆ ಕುರಿತು ಸ್ಪಷ್ಟವಾದ ಕಾನೂನು ಇದೆ.

“ಕರ್ನಾಟಕ ಹಿಂದೂ ಧರ್ಮಾದಾಯ ಸಂಸ್ಥೆಗಳು ಮತ್ತು ದತ್ತಿ ಕಾಯಿದೆ 1997” 2003 ರಲ್ಲಿ‌ ಜಾರಿಯಾಯಿತು. ಈ ಕಾಯಿದೆಯು ಮತ್ತೆ ಎರಡು ಬಾರಿ ತಿದ್ದುಪಡಿಯಾಗಿ 2011 ರಲ್ಲಿ ಪೂರ್ಣ ಜಾರಿಗೆ ಬಂದಿದೆ. ಈ ಕಾಯಿದೆಯಂತೆ ಭಕ್ತಾದಿಗಳು ಹುಂಡಿಯಲ್ಲಿ ಹಾಕುವ ಹಣ, ಸೇವಾರೂಪವಾಗಿ ಕೊಡ ಮಾಡುವ ಹಣದ ಶೇಕಡಾ ನೂರು ಭಾಗವೂ ದೇವಳದ ಖಾತೆಯಲ್ಲೇ ಜಮೆಯಾಗುತ್ತದೆ.

ಮುಜರಾಯಿ ಕಾಯಿದೆಯಂತೆ ದೇವಳಗಳನ್ನು ಅವುಗಳ ಆದಾಯದ ಆಧಾರದಲ್ಲಿ “A”, “B”, “C” ಗ್ರೇಡ್ ಗಳ ದೇವಾಲಯಗಳಾಗಿ ವಿಂಗಡಿಸಲಾಗಿದೆ. ₹25 ಲಕ್ಷಕ್ಕಿಂತ ಹೆಚ್ಚಿನ ಆದಾಯದ ದೇವಸ್ಥಾನಗಳು “A” ಗ್ರೇಡ್ , ಎಂದೂ ₹ 10 ರಿಂದ 25 ಲಕ್ಷ ವರೆಗಿನ ಆದಾಯದ ದೇವಸ್ಥಾನಗಳು “B”ಗ್ರೇಡ್ ಎಂದೂ ,ಅದಕ್ಕಿಂತ ಕೆಳಗಿನ ಆದಾಯದ ದೇವಸ್ಥಾನಗಳು “C” ಗ್ರೇಡ್ ಎಂದೂ ವರ್ಗೀಕರಣ ಮಾಡಲಾಗಿದೆ. ಕಾಯಿದೆಯ ಸೆಕ್ಷನ್ 17 ರಂತೆ ದೇವಸ್ಥಾನಗಳಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚಿನ ಆದಾಯ ಬರುವ ಆದಾಯದಲ್ಲಿ ವಾರ್ಷಿಕವಾಗಿ ಆದ ಖರ್ಚುಗಳೆಲ್ಲ ಕಳೆದು ಉಳಿಕೆಯಾದ ನಿವ್ವಳ ಲಾಭದ ಶೇಕಡಾ‌ ಹತ್ತು ಹಣ ಹಾಗೂ ಐದು ಲಕ್ಷಕ್ಕಿಂತ ಹತ್ತು ಲಕ್ಷದ ವರೆಗಿನ ಶ್ರೇಣಿಯ ದೇವಸ್ಥಾನಗಳ ನಿವ್ವಳ ಆದಾಯದ ಶೇಕಡಾ ಐದು ಹಣ ಮಾತ್ರ ಸರ್ಕಾರದ ಮುಜರಾಯಿ ಖಾತೆಯ ಸಾಮಾನ್ಯ ಸಂಗ್ರಹಣಾ ನಿಧಿಗೆ (ಸರ್ಕಾರದ ಸಾಮಾನ್ಯವಾದ ನೇರ ಖಾತೆ ಅಲ್ಲ) ಜಮೆಯಾಗುತ್ತದೆ.

ಐದು ಲಕ್ಷಕ್ಕಿಂತ ಕಡಿಮೆ ಆದಾಯದ ದೇವಸ್ಥಾನಗಳಿಂದ ಈ ಹಣ ಪಡೆಯುವಂತಿಲ್ಲ. ಈ ಹಣ ಹೊರತುಪಡಿಸಿ ಉಳಿದ ಹಣ ದೇವಳದ ಖಾತೆಯಲ್ಲೇ ನಿಗದಿತ ಠೇವಣಿಯಾಗಿ ಇದ್ದು ದೇವಳದ ಅಭಿವೃದ್ಧಿಗೆ ಮಾತ್ರ ಖರ್ಚು ಮಾಡಬಹುದಾಗಿದ್ದು ಸರ್ಕಾರ ಈ ಹಣವನ್ನು ಈವರೆಗೂ ಸ್ವಾಧೀನಕ್ಕೆ ಪಡೆದುಕೊಂಡಿಲ್ಲ. ಬೇರೆ ಉದ್ದೇಶಕ್ಕಾಗಿ ಉಪಯೋಗಿಸಲು ಕಾಯಿದೆಯಲ್ಲಿ ಅವಕಾಶವೂ ಇಲ್ಲ.

ಸಾಮಾನ್ಯ ಸಂಗ್ರಹಣಾ ನಿಧಿ ಅಥವಾ Common pool fund ಎಂಬುದು ಮೇಲೆ ಹೇಳಿದಂತೆ ಸರಕಾರ ದೇವಳದ ದೇವಾಲಯಗಳಿಂದ ಸಂಗ್ರಹವಾದ ಹಣವು ಸರಕಾರದ ಖಜಾನೆಗೆ ಸೇರದೆ ಮುಜರಾಯಿ ಇಲಾಖೆಯಲ್ಲೇ ಇರುತ್ತದೆ. ಆಯುಕ್ತರು ಈ ಖಾತೆಯನ್ನು ನಿರ್ವಹಿಸುತ್ತಾರೆ. ಈ ಹಣವನ್ನು ಉಪಯೋಗಿಸುವಲ್ಲಿಯೂ ಕಾಯಿದೆಯಲ್ಲಿರುವ ನಿಯಮಾವಳಿಗಳೇ ಅನ್ವಯವಾಗುತ್ತದೆ.‌ ಹೆಚ್ಚಿನ ವಿವರಗಳಿಗಾಗಿ ಕಾಯಿದೆಯ ಸೆಕ್ಷನ್ 17, ನಿಯಮ 18 ಹಾಗೂ 19 ನೋಡಬಹುದಾಗಿದೆ.

ದೇವಸ್ಥಾನದ ಪೂಜಾ ವಿಧಿಗಳಿರುವ ಆಗಮ ಪ್ರವರ ಪ್ರವೀಣ ತರಗತಿಗಳನ್ನು ನಡೆಸಲು, ವೇದ ಪಾಠ ಶಾಲೆಗಳಿಗಾಗಿ, ಹಿಂದೂ ಧಾರ್ಮಿಕ ತರಗತಿ, ಉಪನ್ಯಾಸಗಳಿಗಾಗಿ, ವೃದ್ಧಾಶ್ರಮ – ಅನಾಥಾಶ್ರಮಗಳನ್ನು ನಡೆಸಲು ಮತ್ತು ಆರ್ಥಿಕವಾಗಿ ಹಿಂದುಳಿದ ‘ಸಿ’ ಗ್ರೇಡ್ ದೇವಸ್ಥಾನಗಳ ಹಾಗೂ ಇತರ ಬಡ ಖಾಸಗಿ ಹಿಂದೂ ದೇವಾಲಯಗಳ ಜೀರ್ಣೋದ್ಧಾರಗಳಿಗಾಗಿ ಅಥವಾ ಇತರ ಯಾವುದೇ ಹಿಂದೂ ಧರ್ಮದ ಉದ್ದೇಶಗಳಿಗಾಗಿ ಖರ್ಚು ಮಾಡಲು ಕಾಯಿದೆಯಲ್ಲಿ ಅವಕಾಶವಿದೆ. ಅದೂ ಕೂಡ‌ ರಾಜ್ಯ ಧಾರ್ಮಿಕ ಪರಿಷತ್ ನಲ್ಲಿ ನಿರ್ಣಯವಾದಂತೆ ಇಲಾಖೆ ಖರ್ಚು ಮಾಡಬೇಕಿದೆ. ಅದೇ ರೀತಿ ನಿಯಮಗಳನ್ನು ಈವರೆಗೂ ಮುಜರಾಯಿ ಇಲಾಖೆ ಪಾಲಿಸುತ್ತಿದೆ.

ಧಾರ್ಮಿಕ ದತ್ತಿ ಕಾಯ್ದೆ, ರಾಜ್ಯ ಧಾರ್ಮಿಕ ಪರಿಷತ್ತು, ಮುಜರಾಯಿ ಇಲಾಖೆಯ ಕಾನೂನು, ನಿಯಮಾವಳಿಗಳೇ ಇಷ್ಟು ಕಟ್ಟುನಿಟ್ಟಾಗಿರುವಾಗ ದೇವಸ್ಥಾನದ ಹಣವನ್ನ ಯಾವ ಮಸೀದಿ ಅಥವಾ ಚರ್ಚ್ ಗಳಿಗೆ, ಹಜ್ ಯಾತ್ರೆಗೆ ಕೊಡಲು ಸಾಧ್ಯ!

ಆದ್ರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ

ಕೊಲ್ಲೂರು ಮೂಕಾಂಬಿಕೆ ದೇವಳದ ಹಣವನ್ನು RSS ನ ಪರಿವಾರ ಸಂಸ್ಥೆಯಾದ ಕಲ್ಲಡ್ಕ ಪ್ರಭಾಕರ ಭಟ್ ಅವರ ಶಾಲೆಗೆ ನಿರಂತರವಾಗಿ ಕೊಡಲಾಗಿತ್ತು.

ಮಂಗಳೂರಿನ ವೆಂಕಟರಮಣ ದೇವಳ ಹಣವನ್ನು ಬಿಜೆಪಿಯ ಬ್ರಿಗೇಡ್ ಒಂದರ ಮುಖಂಡನೊಬ್ಬ ದುರುಪಯೋಗ ಮಾಡಿಕೊಂಡ ಬಗ್ಗೆ ಬಿಜೆಪಿಯ RTI ಕಾರ್ಯಕರ್ತರಾದ ವಿನಾಯಕ ಬಾಳಿಗ ಅವರು ಪತ್ತೆ ಮಾಡಿ ಪ್ರತಿಭಟಿಸಿದ್ದರು. ನಂತರ ಅವರ ಕಗ್ಗೊಲೆಯಾಗಿತ್ತು.

ಹಾಗೆಯೇ ಈಚೆಗೆ ನಂಜನಗೂಡು ದೇವಳದ ಹಣವನ್ನು ಅಲ್ಲಿನ‌ ಬಿಜೆಪಿ ಶಾಸಕ ಹರ್ಷವರ್ಧನ್ ಅವರು ಅವರ ಕ್ಷೇತ್ರದ ಕೆಲಸಗಳಿಗೆಂದು ಕಾಯ್ದೆಯನ್ನು ಉಲ್ಲಂಘಿಸಿ ಬಸವರಾಜ ಬೊಮ್ಮಾಯಿ ಅವರಿಂದ ವಿಶೇಷ ಆದೇಶ ಹೊರಡಿಸಿ ಬಳಿಸಿಕೊಂಡಿದ್ದಾರೆ.

ಹಾಗೆ ನೋಡಿದರೆ ಈ ಇತರೆ ಸರ್ಕಾರಗಳ ಅವಧಿಗಿಂತ ಬಿಜೆಪಿಯ ಅವಧಿಯಲ್ಲೇ ದೇವಾಲಯಗಳ ಹಣ ಮತ್ತು ಅಲ್ಲಿನ ಆಚರಣೆಗಳಲ್ಲಿ ಅತಿಯಾದ ಹಗರಣ ಮತ್ತು ಹಸ್ತಕ್ಷೇಪಗಳು ಉಂಟಾಗಿರುವುದು.

ಈಗ ಕಾಂಗ್ರೆಸ್ ಸರ್ಕಾರ ಆ ಕುರಿತು ಹೆಚ್ಚಿನ ತನಿಖೆಗಳನ್ನು ಮಾಡಿಸಲೇ ಬೇಕು. ಬಯಲಿಗೆಳೆದು ತಕ್ಕ ಶಿಕ್ಷೆ ಮತ್ತು ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕು.

ನೆನೆಪಿರಲಿ..
ತಮಿಳುನಾಡಿನ ದೊಡ್ಡ ದೊಡ್ಡ ದೇವಳಗಳು ‘ಹಿಂದೂಗಳಿಗೆ ಮಾತ್ರ ಪ್ರವೇಶ’ ಎಂಬ ಬೋರ್ಡು ಹೊತ್ತು ನಿಂತಿವೆ. ಆದರೆ ಕರ್ನಾಟಕದ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲ ದೇವಾಲಯಗಳಲ್ಲಿ ‘ಯಾವುದೇ ಜಾತಿ, ಜನಾಂಗ, ಧರ್ಮದವರು ದೇವಾಲಯಕ್ಕೆ ಬರಬಹುದು, ಅದಕ್ಕೆ ಯಾರು ಅಡ್ಡಿಪಡಿಸುವಂತಿಲ್ಲ’ ಎಂಬ ಸ್ವಾಗತ ಪತ್ರವಿದೆ. ಇದು ಆಚಂದ್ರಾತಾರಕ ಮುಂದುವರಿಯಲಿ. ಕನ್ನಡನಾಡು ಸರ್ವಜನಾಂಗ ಶಾಂತಿಯ ತೋಟವಾಗಿರಲಿ.

✍️ಆರ್. ಪಿ