ಇಬ್ಲೀಸ್ ಕರೆಗಂಟೆ’ ಮಾಡಿ ಬರುತ್ತದೆ… ಎಚ್ಚರ! 

0
156

✍️ ಶಹನಾಝ್ ಎಂ.
ಅನುಪಮ ಪತ್ರಿಕೆಯ ನಿಕಟಪೂರ್ವ ಪ್ರಧಾನ ಸಂಪಾದಕಿ ಮತ್ತು ಫ್ಯಾಮಿಲಿ ಆಪ್ತ ಸಮಾಲೋಚಕಿ

ಇಬ್ಲೀಸ್’ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೂ ಅದು ನಮ್ಮ ಅಕ್ಕ-ಪಕ್ಕ (ಸುತ್ತ-ಮುತ್ತ) ಎಲ್ಲಾ ಕಡೆಯೂ ನಮ್ಮ ಒಟ್ಟಿಗೇ ಸಂಚರಿಸುತ್ತಿರುತ್ತದೆ. ಮನೆ ಒಳಗೆ, ಹೊರಗೆ, ಬಜಾರ್‌ನಲ್ಲಿ, ಮೊಬೈಲ್‌ನಲ್ಲಿ, ಟಿ.ವಿ.ಯಲ್ಲಿ, ದೇಹದ ಒಳಗೆ ಎಲ್ಲಾ ಕಡೆಯೂ ಗುಪ್ತವಾಗಿ ಇರುತ್ತದೆ.

ಮಾನವನ ರೂಪದಲ್ಲಿ ಅದು ನಿಮ್ಮ ಮನೆಯ ಕಾಲ್‌ಬೆಲ್ ಮಾಡಿ ತೆರೆದ ಬಾಗಿಲಿನಿಂದ ಒಳಗೆ ಬರುತ್ತದೆ. ಉದಾ: ನಮ್ಮ ಮನೆಯ ಪಕ್ಕದಲ್ಲಿ ಒಂದು ಕುಟುಂಬ ಇದೆ. ಅತ್ತೆ, ಸೊಸೆ, ಮಗ, ಮಕ್ಕಳು ಇದ್ದಾರೆ. ಅತ್ತೆ ಒಂದು ಮದುವೆ ಕಾರ್ಯಕ್ರಮಕ್ಕೆ ಮನೆಯಿಂದ ಹೊರಗೆ ಹೋಗುತ್ತಾರೆ. ಅದನ್ನೇ ಕಾಯುತ್ತಿದ್ದ ಇನ್ನೊಂದು ನೆರೆಯ ಮನೆಯ ಮಹಿಳೆ ಕಾಲ್ ಬೆಲ್ ಮಾಡುತ್ತಾರೆ. ಸೊಸೆ ಬಂದು ಬಾಗಿಲು ತೆರೆಯುತ್ತಾಳೆ. ಎದುರಿನಲ್ಲಿ ನಿಂತ ಮಹಿಳೆಯನ್ನು ನೋಡಿ ಸೊಸೆಯು ನಗುತ್ತಾ ಸಲಾಮ್ ಹೇಳಿ “ಬನ್ನಿ ಆಂಟೀ… ಏನು ವಿಶೇಷ ಏನಾದರೂ ಬೇಕಾಗಿತ್ತಾ!?” ಎಂದು ಕೇಳುತ್ತಾಳೆ. ಆಂಟಿ ನಗುತ್ತಾ “ಏನಮ್ಮಾ ಇಷ್ಟು ಬೆವರು ಹಣೆಯಲ್ಲಿ! ಅಡುಗೆ ಕೆಲಸದಲ್ಲಿ ಇದ್ದಿರಬೇಕಲ್ಲಾ! ಮುಖ ಎಲ್ಲಾ ಇಳಿದು ಹೋಗಿದೆ! ಡಯಟ್ ಮಾಡುತ್ತಾ ಇದ್ದೀಯಾ?! ತುಂಬಾ ಸಪೂರ ಆಗಿದ್ದಿ! ನಿನ್ನ ಅತ್ತೆ… ಇಲ್ಲವೇ ಮನೆಯಲ್ಲಿ? ಯಾವಾಗಲೂ ಬುರ್ಖಾ ಹಾಕಿ ಹೋಗುವುದೇ ಕೆಲ್ಸ ನಿನ್ನ ಅತ್ತೆಗೆ. ಇದೇನು… ಬಟ್ಟೆ ಕೈಯಲ್ಲಿ ಒಗೆಯುತ್ತಾ ಇದ್ದೀಯಾ! ವಾಶಿಂಗ್ ಮೆಷಿನ್ ಇಲ್ಲವೇ!? ನಿನ್ನ ಅತ್ತೆ ಕರೆಂಟ್ ಬಿಲ್ ಹೆಚ್ಚು ಬರುತ್ತೆ ಎಂದು ಕೈಯಲ್ಲಿ ಬಟ್ಟೆ ಒಗೆಯಲು ಹೇಳಿರಬೇಕು. ಇದೇನು ಇಷ್ಟು ಪಾತ್ರೆ ಬೇಸನಿನಲ್ಲಿ? ನೀನೇ ಪಾತ್ರೆ ತೊಳೆಯುವುದಾ? ಕೆಲಸಕ್ಕೆ ಜನ ಇಡಲು ಹೇಳಬೇಕು ಮಗಳೇ ನೀನು. ಪಾಪ… ನಿನಗೆ ಪುಟ್ಟ ಪುಟ್ಟ ಮಕ್ಕಳನ್ನೂ ಕಂಡ ಹಾಗೇ ಆಗುತ್ತದೆ. ಆಕೆಯ ಅತ್ತೆ ಕೂಡ ಮಹಾರಾಣಿಯಾಗೇ ಒಂದು ಕಡ್ಡಿ ಎತ್ತಿ ಆಚೆ ಇಡಲಾರಳು. ನಾನು ಮಗಳಿಗೆ ಸರಿಯಾಗಿ ಬುದ್ಧಿ ಹೇಳಿ ಈಗ ಬೇರೆಯೇ ಮನೆ ಮಾಡಿಕೊಂಡು ಸುಖವಾಗಿದ್ದಾಳೆ… ಈಗ ಯಾರೂ ಅತ್ತೆ ಮನೆಯಲ್ಲಿ ಇರಲು ಬಯಸುವುದಿಲ್ಲ. ನಿನ್ನನ್ನು ಕಾಣುವಾಗ ಪಾಪ’ ಅನಿಸುತ್ತದೆ. ನಿನ್ನ ಗಂಡನೇ ಸರಿ ಇಲ್ಲ. ತಾಯಿಯ ಸೆರಗಿನಲ್ಲೇ ಇರುತ್ತಾನೆ” ಎಂದು. 

ನೆರೆಮನೆಯ ಆಂಟಿಗೆ ಸೊಸೆ ನಗುತ್ತಾ ಹೇಳಿದಳು, “ನನ್ನ ಅತ್ತೆಯವರು ಅಡುಗೆ ಕೆಲ್ಸ ಎಲ್ಲಾ ಮಾಡಿಟ್ಟು ಹೋಗಿದ್ದಾರೆ, ವಾಶಿಂಗ್ ಮಿಷನ್ ಎರಡು ದಿನದಿಂದ ಹಾಳಾಗಿತ್ತು. ಮಕ್ಕಳ ಯೂನಿಫಾರಂ ಅಗತ್ಯ ಇತ್ತು, ಅದಕ್ಕೇ ಕೈಯಲ್ಲಿ ಒಗೆಯುತ್ತಾ ಇದ್ದೆ. ನನ್ನ ಅತ್ತೆ ತುಂಬಾ ಒಳ್ಳೆಯವರೇ… ನೀವು ನನ್ನ ಅತ್ತೆಯ ಎದುರು ಅವರನ್ನು ಮೆಚ್ಚಿಸಲು ಮಾತನಾಡುವಿರಿ. ಅವರ ಬಳಿ ನನ್ನನ್ನು ತೆಗೆಳಿ ಮಾತನಾಡಿದ್ದೂ ನನಗೆ ಗೊತ್ತು. ಯಾಕೆ ಆಂಟಿ… ಸುಮ್ಮನೇ ಗೀಬತ್’ ಮಾಡುವುದು! ನೀವು ನನ್ನ ತಾಯಿಯ ವಯಸ್ಸಿನವರು, ಆದುದರಿಂದ ನಿಮಗೆ ಗೌರವ ಕೊಡುತ್ತೇನೆ. ನನ್ನ ಅತ್ತೆಯ ಬಳಿ “ನನ್ನನ್ನು ಶೋಕಿ ಹೆಣ್ಣು, ಅಹಂಕಾರಿ… ಎಂದು ಹೇಳಿದಿರಲ್ಲಾ! ಈಗ ನನ್ನ ಬಳಿ ಅತ್ತೆಯನ್ನು ದೂರುವಿರಿ! ಇದೆಲ್ಲಾ ಚೆಂದವಲ್ಲಾ ಆಂಟಿ…” ಸೊಸೆ ಹೇಳುತ್ತಿದ್ದಂತೇ ಪಕ್ಕದ ಮನೆಯಾಕೆ ಅಲ್ಲಿಂದ ಮರೆಯಾದಳು. 

ಇನ್ನೊಂದು ಇಬ್ಲೀಸ್ ಗೆಳತಿಯ ರೂಪದಲ್ಲಿ ಬರುತ್ತದೆ. ಇಬ್ಬರು ಗೆಳತಿಯರು ಕೆಫೆ ಒಂದರಲ್ಲಿ ಸೇರಿದ್ದಾರೆ. ತುಂಬಾ ಖುಶಿಯಲ್ಲಿ ಇರುವ ಗೆಳತಿಯರು ವಿವಾಹಿತೆಯರು. “ಬಾನೂ… ನಾನು ಬರುವ ವಾರ ಸಿಂಗಾಪುರಕ್ಕೆ ಟೂರ್ ಹೋಗುತ್ತಾ ಇದ್ದೇನೆ. ಇದು ನನ್ನ ಹತ್ತನೇ ಪ್ರವಾಸ. ನನ್ನ ಪತಿಗೆ ದೇಶ-ವಿದೇಶ ಪ್ರವಾಸ ಹೋಗುವುದೆಂದರೆ ತುಂಬಾ ಇಷ್ಟ. ನಾನೀಗ ಹೊಸ ಮನೆಗೆ ಶಿಫ್ಟ್ ಆಗಿದ್ದೇನೆ. ಅಂದಹಾಗೇ… ನೀನು ವಿದೇಶ ಪ್ರವಾಸ ಮಾಡಿಲ್ಲವೇ?!” ಗೆಳತಿಯ ಮಾತಿಗೆ ಬಾನು ಮುಖ ಬಾಡಿಸಿ “ನನ್ನ ಪತಿಗೆ ಸಮಯವೇ ಇಲ್ಲ ಕಣೇ. ಯಾವಾಗಲೂ ಬಿಝಿ. ಎಲ್ಲಿಯೂ ಕರೆದುಕೊಂಡು ಹೋಗುವುದಿಲ್ಲ. ನೀನು ಬೇಕಾದರೆ ಅಮ್ಮನೊಂದಿಗೆ, ಅಕ್ಕನೊಂದಿಗೆ ಹೋಗು” ಎಂದು ಹೇಳುತ್ತಾರೆ. “ಪತಿಯೊಂದಿಗೆ ಹೋಗುವುದೇ ನನ್ನಾಸೆ. ನಾನು ನಿನ್ನಷ್ಟು ಲಕ್ಕೀ ಆಗಿ ಹುಟ್ಟಿಲ್ಲಾ…!” ಎಂದಳು. “ಛೇ… ಹೌದಾ! ನೀನು ಇಷ್ಟು ಮೃದು ಆಗಿರಬಾರದು, ನಿನ್ನ ಮನೆಯಲ್ಲಿ ನಾದಿನಿ, ಅತ್ತೆ-ಮಾವ, ಎಲ್ಲಾ ಗುಜರಿಗಳೂ ಇದ್ದಾರಲ್ಲಾ… ಮತ್ತೆ ನಿನ್ನನ್ನು ಮಾತ್ರ ತಿರುಗಾಡಲು ಕರೆದುಕೊಂಡು ಅವನು ಹೇಗೆ ಹೋಗಬಲ್ಲ! ಮೊದಲು ನೀನು ಮನೆ ಬೇರೆ ಮಾಡಲು ಹಠ ಹಿಡಿ. ನಿನ್ನ ಪತಿ ಇಂಜಿನಿಯರ್ ತಾನೇ. ನಿನಗೆ ಆ ಮನೆಯಲ್ಲಿ ಉಸಿರುಕಟ್ಟುದಿಲ್ಲವೇ?

ಭಾಭಿಯಂದಿರು, ನಾದಿನಿ… ಎಲ್ಲಾ ಒಟ್ಟಿಗೆ. ಅಬ್ಬಾ ನನಗಂತೂ ಅಂತಹ ಮನೆಯಲ್ಲಿ ಒಂದು ಕ್ಷಣ ಬದುಕಲೂ ಆಗಲಾರದು. ನಾವು ಪ್ರತ್ಯೇಕವಾದಾಗಲೇ ಪತಿಗೆ ಹೆಂಡತಿಯೊಂದಿಗೆ ಎಂಜಾಯ್ ಮಾಡಿ ತಿರುಗಾಡಲು ಸಮಯವೂ ಸಿಗುತ್ತದೆ. ನನಗೆ ಈಗ ತುಂಬಾ ಖುಶಿ. ಶಾಪಿಂಗ್ ಮಾಡಲು ತಡೆಯುವವರೂ ಇಲ್ಲ. ನಾವಿಬ್ಬರೂ ದುಡಿಯುತ್ತೇವೆ. ಹಣವೂ ಉಳಿಸುತ್ತೇವೆ. ಬಾನೂ… ನೀನು ಡಬಲ್ ಡಿಗ್ರಿ ಮಾಡಿ ಏನು ಪ್ರಯೋಜನ! ನೀನು ಮೊದಲು ಒಳ್ಳೆಯ ಜಾಬ್ ಹುಡುಕು. ನಿನ್ನ ಲೈಫ್ ನಿನ್ನ ಕೈಯಲ್ಲಿರಲಿ. ಯಾರದೇ ಗುಲಾಮರಲ್ಲ ನಾವು. ನಿನ್ನ ಪತಿಯನ್ನು ಹೇಗಾದರೂ ಮಾಡಿ ನಿನಗೆ ಕೆಲಸ ಮಾಡಿಸಲು ಒಪ್ಪಿಸು. ನಂತರ ಮೆಲ್ಲನೇ ಅಲ್ಲಿಂದ ಹೊರಗೆ ಬಾ. ನೀನಿನ್ನೂ ಹಳೆ ಕಾಲದ ಹೆಂಗಸರಂತೇ ವರ್ತಿಸಬೇಡಾ… ನನ್ನ ಪತಿ ನಾನು ಹೇಳಿದ ಹಾಗೇ ಇದ್ದಾರೆ…” ಇಬ್ಲೀಸ್ ರೂಪದ ಗೆಳತಿಯ ಮಾತುಗಳು ಆಗಲೇ ಬಾನುವಿನ ತಲೆಯೊಳಗೆ ಹೊಕ್ಕಿತ್ತು. 

ಅದು ಯುವಕರ ಪಾರ್ಟಿ. ಶ್ರೀಮಂತ ಗೆಳೆಯನ ಬರ್ತಡೇ ಪಾರ್ಟಿ. ಎಂಟು ಜನ ಯುವಕರು ರೌಂಡ್ ಟೇಬಲ್ ಮೇಲೆ ಡಿನ್ನರ್ ಮಾಡಲು ಕುಳಿತಿದ್ದಾರೆ. ಇಂದು ಸ್ವಲ್ಪ ಹಾಟ್ ಡ್ರಿಂಕ್ಸ್… ಇರಲಿ, ಕಿಕ್… ಬರದಿದ್ದರೆ ಪಾರ್ಟಿಯಲ್ಲಿ ಮಜಾ ಇಲ್ಲ. ಮದ್ಯದ ಬಾಟಲಿ ಟೇಬಲ್ ಅನ್ನು ಅಲಂಕರಿಸಿತ್ತು. ಮೂವರು ಯುವಕರು ಬಾಟಲಿಗೆ ಕೈ ತಾಗಿಸಲಿಲ್ಲ. ಇಬ್ಲೀಸ್‌ಗೆ ಸಂಕಟ ಶುರುವಾಯಿತು. “ಇಂದು ಗೆಳೆಯನಿಗಾಗಿ… ನಾವೆಲ್ಲಾ ಒಟ್ಟಿಗೆ ಕುಡಿಯಲೇಬೇಕು. ಈ ಕಾಲದಲ್ಲಿ ಇದೆಲ್ಲಾ ಸಾಮಾನ್ಯ. ಯಾವಾಗಲೂ ಕುಡಿಯಬೇಡಿ, ಒಂದು ಸಲ ರುಚಿ ನೋಡಿ, ಮತ್ತೆ ಎಂದಿಗೂ ಕುಡಿಯಬೇಡಿ, ನೀವು ಗಾಂಧಿ ತಾತನಾಗೇ ಮಾಡಬೇಡಿ… ಪ್ಲೀಸ್ ಕಮಾನ್… ಒಂದೇ ಸಲ… ಚಿಯರ್ಸ್ ಮಾಡಿ…” ಗೆಳೆಯನ ಬೇಡಿಕೆಗೆ ಆ ಮೂವರೂ ಗ್ಲಾಸ್ ಎತ್ತಿ ತುಟಿಗೆ ತಾಗಿಸಿದರು. ಇಬ್ಲೀಸ್ ನಗುತ್ತಾ ಚೀಯರ್ಸ್‌ ಎಂದ. 

ಮೊಬೈಲ್ ರಾತ್ರಿ ಹನ್ನೊಂದು ಗಂಟೆಗೆ ರಿಂಗಾಯಿತು. ಅವಳು ನಿದ್ದೆ ಕಣ್ಣಲ್ಲಿ ಮೊಬೈಲ್ ತಡಕಾಡಿ ಹಲೋ… ಎಂದಳು. “ಹಾಯ್… ಸ್ವೀಟಿ! ನಿದ್ದೆ ಬಂತಾ?” ಪುರುಷ ಧ್ವನಿ ಕೇಳಿ ಅವಳ ನಿದ್ದೆ ಪೂರ್ತಿ ಕಳಚಿತ್ತು. “ಯಾರ್ರೀ… ನೀವು!?” ಅವಳು ಕಂಪಿತ ಧ್ವನಿಯಲ್ಲಿ ಕೇಳಿದಳು. “ಎಂತಹ ಸ್ವೀಟ್ ವಾಯ್ಸ್ ನಿನ್ನದು ಸ್ವೀಟಿ…! ನಾನು ಯಾರೆಂದು ತಿಳಿಯಲಿಲ್ಲವೇ? ನಾನು ಜಾಕಿ. ನಿನ್ನ ಕಾಲೇಜಿನಲ್ಲಿ ನಾನೂ ನಿನ್ನ ಬ್ಯಾಚ್‌ನಲ್ಲೇ ಇದ್ದೆ. ಜಾಕಿ ಎಂದೇ ನೀನು ಕರೆಯುತ್ತಾ ಇದ್ದೆ. ನಿನಗೆ ಮದ್ವೆ ಆದ ಸುದ್ದಿ ತಿಳಿದು ತುಂಬಾ ಬೇಸರನೂ ಆಗಿತ್ತು. ಚಿಂತೆ ಇಲ್ಲಾ… ಅವನು ಲಂಡನ್‌ನಲ್ಲಿ ಇರುವುದಲ್ಲವೇ… ಇರಲಿ. ನಮಗೆ ಮಾತನಾಡಲು ಅಡ್ಡಿ ಇಲ್ಲ ತಾನೇ. ನಿನ್ನ ಸುಂದರ ಕಣ್ಣು, ನೀಳವಾದ ಕೂದಲು, ಮೈಕಟ್ಟು ಸದಾ ನನ್ನ ಕಣ್ಣಲ್ಲಿ ಹಸಿರಾಗಿದೆ.” ಅವನು ಹೇಳಿದಾಗ ಅವಳು ಕೋಪದಿಂದ “ನೀನು ಈಗ ಯಾಕೆ ಕಾಲ್ ಮಾಡಿದ್ದು? ನನಗೆ ಯಾವ ಜಾಕಿಯ ನೆನಪೂ ಇಲ್ಲ” ಎಂದು ಕಾಲ್ ಕಟ್ ಮಾಡಿದಳು. ಈ ಕಾಲ್ ನಂತರ ನಿರಂತರ ಬರತೊಡಗಿತ್ತು. ಕಾಲ್ ಮಾಡುವ ಇಬ್ಲೀಸ್‌ಗೆ ತುಂಬಾ ಸಹನೆ ಇತ್ತು. ಕಾಯುವುದರಲ್ಲಿ ಅದಕ್ಕೆ ಮಜಾನೂ ಇತ್ತು. ಇಂದಲ್ಲಾ… ನಾಳೆ ಆಕೆ ಕಾಲ್ ಕಟ್ ಮಾಡದೇ ಖಂಡಿತಾ ಮಾತನಾಡುತ್ತಾಳೆ… ಆಕೆಯ ಸೋಲು ಇಬ್ಲೀಸ್‌ನ ವಿಜಯವೂ ಹೌದು. ಬೇಸರ, ಕೋಪ, ಅಸಹನೆ ಇಬ್ಲೀಸ್‌ನ ಹಿಸ್ಟರಿಯಲ್ಲೇ ಇಲ್ಲ. ಹಲವು ಹೆಣ್ಣುಮಕ್ಕಳನ್ನು ಅನುಕಂಪದ ಮಾತಿನಿಂದ, ಪ್ರೀತಿ, ಕರುಣೆಯ ಮಾತಿನಿಂದ ತನ್ನಡೆಗೆ ಸೆಳೆಯುವ ಯುಕ್ತಿ ಇಬ್ಲೀಸ್‌ಗೆ ಸಲೀಸಾಗಿ ಬರುತ್ತಿತ್ತು. ದಂಪತಿಯನ್ನು ಸಂಶಯದ ಸುಳಿಗೆ ಬೀಳಿಸುವಲ್ಲಿ ಇಬ್ಲೀಸ್‌ಗೆ ತುಂಬಾ ಆನಂದನೂ ಸಿಗುತ್ತಿತ್ತು. ತಲಾಕ್’ ಪದವನ್ನು ಅಪಾರವಾಗಿ ಅದು ಪ್ರೀತಿಸುತ್ತದೆ. ಮೊಬೈಲ್‌ನೊಳಗೇ ಅಂಟಿಕೊಂಡು ಹಗಲೂ-ರಾತ್ರಿ ಕಳೆಯುವುದೆಂದರೆ ಇದಕ್ಕೆ ಇಷ್ಟನೇ.

ಅತ್ತಿಗೆಯ ರೂಪದಲ್ಲಿ ಬಂದ ಇಬ್ಲೀಸ್. ಶೈಮಾ ವಿವಾಹ ಆಗಿ ನಾಲ್ಕನೇ ಚಿಕ್ಕ ಸೊಸೆಯಾಗಿ ಬಂದಾಗ ಆ ಮನೆಯಲ್ಲಿ ಮೂವರು ಹಿರಿಯ ಅಣ್ಣಂದಿರ ಪತ್ನಿಯರು (ಅತ್ತಿಗೆಯರು) ಇದ್ದರು. ಚಿಕ್ಕ ಸೊಸೆ ಎಂದು ಅತ್ತೆ ಶೈಮಾಳನ್ನು ತುಂಬಾನೇ ಪ್ರೀತಿಯಿಂದ ನೋಡಿಕೊಂಡರು. ಶೈಮಾ ಓರ್ವ ಬಡ ಹಾಗೂ ಅನಾಥೆ ಹುಡುಗಿಯಾಗಿದ್ದು ತುಂಬಾ ಒಳ್ಳೆಯ ಗುಣ ನಡತೆಯವಳಾಗಿದ್ದಳು. ಆಕೆಯ ಸೌಂದರ್ಯ ಅತ್ತಿಗೆಗೆ ಮತ್ಸರ ಹುಟ್ಟಿಸಿದ್ದರೆ, ಅತ್ತೆಯ ಪ್ರೀತಿ, ಆತ್ಮೀಯತೆ ಚಿಕ್ಕ ಸೊಸೆಯ ಮೇಲೆ ಅಪಾರ ಇರುವುದೂ ಅತ್ತಿಗೆಯವರಿಗೆ ಉರಿ ತಂದಿತ್ತು. ಇಬ್ಲೀಸ್ ಶೈಮಾಳನ್ನು ಸುತ್ತುವರಿಯಿತು. ಅತ್ತೆಯ ಬಗ್ಗೆ ಹಲವು ದೂರು ಹೇಳಿತು. ಒಂದು ಇಬ್ಲೀಸ್ ಹೇಳಿತು. “ನಾನು ಅತ್ತೆಯ ಸ್ವಂತ ತಮ್ಮನದೇ ಮಗಳು. ಸೊಸೆಯಾಗಿ ಬಂದು ನಾನು ನರಕದಲ್ಲಿ ಬಿದ್ದೆ. ನನಗೆ ಗರ್ಭಿಣಿಯಾದಾಗಲೂ ಸರಿಯಾಗಿ ಊಟ ಕೊಡಲಿಲ್ಲ. ನನಗೆ ಬಯಕೆ ಮಾಡಲಿಲ್ಲ. ಬಂಗಾರ ಹಾಕಲಿಲ್ಲ” ಇಬ್ಲೀಸ್ ಹೇಳುತ್ತಾ ಕಣ್ಣೀರು ಹಾಕಿತು. ಶೈಮಾ ಅತ್ತಿಗೆಯ ಇಮೋಶನಲ್ ಮಾತಿಗೆ ಕರಗುತ್ತಾ ಹೋದಳು. ಸೊಸೆಯಂದಿರನ್ನು ಶೋಷಿಸುವ ಅತ್ತೆಯ ಬಗ್ಗೆ ಆಕೆಯಲ್ಲಿ ದ್ವೇಷವೇ ಹುಟ್ಟತೊಡಗಿತ್ತು. ಅದು ಕ್ರಮೇಣ ಅತ್ತೆಯನ್ನು ಟೀಕಿಸಿ, ಅಪಮಾನಿಸುವ ತನಕ ಹೋಯಿತು. ಅತ್ತೆಗೆ ಬಹಳ ಶಾಕ್ ಆಗಿತ್ತು. ಅಷ್ಟು ಒಳ್ಳೆಯವಳಾಗಿದ್ದ ಚಿಕ್ಕ ಸೊಸೆ ಯಾಕೆ ಬದಲಾದಳು! ಇತರ ಸೊಸೆಯರ ಚಾಡಿ ಮಾತು ಕೇಳಿಯೇ ಚಿಕ್ಕ ಸೊಸೆ ಕೂಡ ಅತ್ತಿಗೆಯರ ಸಹವಾಸ ದೋಷದಲ್ಲಿ ಸಿಲುಕಿದ್ದಾಳೆಂದು ತಿಳಿಯಲು ಹೆಚ್ಚು ತಡವಾಗಲಿಲ್ಲ. ಕೊನೆಗೆ ಅತ್ತೆ-ಸೊಸೆ ನಡುವೆ ಜಗಳವಾಗಿ ಶೈಮಾ ಮನೆ ತೊರೆದು ಹೋದಾಗಲೇ ಇಬ್ಲೀಸ್ ರೂಪದ ಮಹಿಳೆಯರಿಗೆ ನೆಮ್ಮದಿ ಆಗಿತ್ತು. ಅತ್ತಿಗೆಯವರೂ ನಂತರ ಅವಳನ್ನು ಮರೆತಂತೇ ವರ್ತಿಸಿದಾಗಲೇ ಶೈಮಾಳಿಗೆ ತನ್ನ ತಪ್ಪಿನ ಅರಿವಾಗಿದ್ದು, ಅತ್ತಿಗೆಯವರ ನಾಟಕದ ಮಾತಿಗೆ ತಾನು ಅತ್ತೆಯನ್ನು ದೂರ ಮಾಡಿದ್ದು ನೆನೆದು ಅತ್ತಳು.

ಹೀಗೆ ಇಬ್ಲೀಸ್‌ನ ರೂಪದಲ್ಲಿ ಮನೆಯ ಕೆಲಸದಾಕೆಯು ನಾದಿನಿ-ಭಾಭಿಯ ಮಧ್ಯೆ, ಅತ್ತೆ-ಸೊಸೆಯವರ ಮಧ್ಯೆ, ತಾಯಿ-ಮಕ್ಕಳ ನಡುವೆ ಚಾಡಿ ಹೇಳುತ್ತಾ ಮನೆಯ ಒಳಗೆ ಪರಸ್ಪರ ಜಗಳ ಆಗುವಂತೇ ಮಾಡುತ್ತಾಳೆ. ಆದುದರಿಂದ ಮನೆಯ ಪರ್ಸನಲ್ ವಿಷಯ ಕೆಲಸದವರ ಎದುರು ಎಂದಿಗೂ ತರಬಾರದು. ಅದು ಮನೆಯ ಡ್ರೈವರ್ ಆಗಿದ್ದರೂ ಇಬ್ಲೀಸ್‌ನ ಕೆಲಸ ಮಾಡ್ತಾರೆ. ಅಣ್ಣ-ತಮ್ಮಂದಿರ ನಡುವೆ ಅಪನಂಬಿಕೆ, ದ್ವೇಷ ಹುಟ್ಟಿಸುವ ಸಂಬಂಧಿಗಳ ರೂಪದ ಇಬ್ಲೀಸ್‌ಗಳೂ ಸಮಾಜದಲ್ಲಿ ಇದ್ದಾರೆ. ಆದ್ದರಿಂದ ನಾವು ಸದಾ ಇಂತಹ ಮಾನವ ರೂಪದ ಇಬ್ಲೀಸನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ವ್ಯವಹರಿಸಬೇಕು. “ಪ್ರಚೋದನೆ” ಇಬ್ಲೀಸ್‌ನ ತಂತ್ರ – ಕುಟುಂಬದ ಸೌಹಾರ್ದತೆಯ ವೈರಿ “ಇಬ್ಲೀಸ್…”! ಎಚ್ಚರದಲ್ಲಿರಬೇಕು ನಾವು.