ಸನ್ಮಾರ್ಗ ವಾರ್ತೆ
ಬೆಂಗಳೂರು: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಬಳಿಕ ಮಾಧ್ಯಮಗಳು ಹೆಚ್ಚು ಮೌಲ್ಯವಿರುವ ಪವಿತ್ರವಾದ ಕ್ಷೇತ್ರ. ಆದರೆ ಸಮಾಜದ ಕನ್ನಡಿಯಾಗಬೇಕಿದ್ದ ಮಾಧ್ಯಮಗಳು ಇಂದು ತಪ್ಪುಗಳು ನಡೆದಾಗ ಸುಮ್ಮನಿದ್ದು ಬಿಟ್ಟಿವೆ. ಆ ಹಿನ್ನೆಲೆಯಲ್ಲಿ ಮಾಧ್ಯಮಗಳು ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಒಂದಾಗಿ ಅದರ ವಿರುದ್ಧದ ಧ್ವನಿಯಾಗಬೇಕಾದ ಅವಶ್ಯಕತೆಯಿದೆಯೆಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ. ವಸುಂದರಾ ಭೂಪತಿ ಹೇಳಿದರು.
ಬೆಂಗಳೂರಿನ ಜಯನಗರದಲ್ಲಿರುವ ಸಲಾಂ ಸೆಂಟರ್ನಲ್ಲಿ ಅನುಪಮ ಮಹಿಳಾ ಮಾಸಿಕದ ಇಪ್ಪತ್ತನೇ ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಪತ್ರಿಕೋದ್ಯಮದಲ್ಲಿ ಇಪ್ಪತ್ತು ವರ್ಷಗಳನ್ನು ಪೂರೈಸುವುದು ಎಂದರೆ ಅದು ಸಣ್ಣ ಕೆಲಸವಲ್ಲ. ಸಮಾಜದ ಕಣ್ಣಾಗಿ ಕಳೆದ 20 ವರ್ಷಗಳಿಂದ ಮುಸ್ಲಿಂ ಮಹಿಳೆಯರೇ ನಡೆಸುತ್ತಿರುವ ಅನುಪಮ ಮಹಿಳಾ ಮಾಸಿಕದ ಸಾಧನೆಯು ನಿಜಕ್ಕೂ ಶ್ಲಾಘನೀಯ. ಅನುಪಮ ಇನ್ನಷ್ಟು ಅಭಿವೃದ್ಧಿ ಹೊಂದಿ ಡಿಜಿಟಲೀಕರಣಗೊಂಡು ವಿಶ್ವದ ಎಲ್ಲಾ ಕನ್ನಡ ಸಾಹಿತ್ಯ ಆಸಕ್ತರಿಗೆ ಸಿಗುವಂತಾಗಲಿ ಎಂದು ಅವರು ಆಶಿಸಿದರು.
ಬಳಿಕ ಮಾತನಾಡಿದ ಶ್ರೇಯಾ ಟಿವಿಯ ಪ್ರಧಾನ ಸಂಪಾದಕ ಶ್ವೇತಾ ನಿಹಾಲ್, ಮಾಧ್ಯಮಗಳು ಇಂದು ಬಂಡವಾಳ ಶಾಹಿಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ನೈಜತೆಯನ್ನು ಜನರಿಗೆ ತಲುಪಿಸುತ್ತಿಲ್ಲ. ಇದರಿಂದಾಗಿ ಸಾಮಾನ್ಯ ಜನರು ಮಾಧ್ಯಮಗಳ ಕಾರ್ಯ ವೈಖರಿಯಿಂದ ಬೇಸತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ. ಅನುಪಮ ಮಹಿಳಾ ಮಾಸಿಕವು ಪತ್ರಿಕೋದ್ಯಮದಲ್ಲಿ ವಿಶಿಷ್ಟ ಚಾಪು ಮೂಡಿಸುವ ಮೂಲಕ ಸಮಾಜದ ಬದಲಾವಣೆಗೆ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಶಾಹೀನ್ ಕಾಲೇಜ್ ಇದರ ಅಸಿಸ್ಟೆಂಟ್ ಡೈರೆಕ್ಟರ್ ಆಫಿಯಾ ಹಮೀದ್, ಓದುವಿಕೆಯಿಂದ ಬಹಳಷ್ಟು ಜ್ಞಾನ ಭಂಡಾರವಾಗುತ್ತದೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಇಂದು ಓದುವ ಹವ್ಯಾಸ ಕಡಿಮೆಯಾಗಿವೆ. ಸಮಾಜದ ಬಗ್ಗೆ ತಿಳಿಯಬೇಕಾದರೆ ನಾವು ಸಾಹಿತ್ಯಾಸಕ್ತರಾಗಬೇಕು ಹಾಗೂ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಅನುಪಮ ಓದುಗಳಾಗಿ ಸಾಕಷ್ಟು ವಿವರಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಅನುಪಮ ಮಾಸಿಕದ ಸಹಸಂಪಾದಕಿ ಕುಲ್ಸುಮ್ ಅಬೂಬಕ್ಕರ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಅನುಪಸ್ಥಿತರಿದ್ದ ಸಾಹಿತಿ ಕಮಲಾ ಹಂಪನಾ ದೂರವಾಣಿ ಮೂಲಕ ಅನುಪಮ ಬಳಗಕ್ಕೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಸಂಪಾದಕಿ ಶಹನಾಝ್ ಎಂ. ವಹಿಸಿದ್ದರು. ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಬೆಂಗಳೂರು ಸಂಚಾಲಕಿ ತಸ್ನೀಮ್ ಫರ್ಝಾನ ಉಪಸ್ಥಿತರಿದ್ದರು. ಫಿರ್ದೌಸ್ ಕಾರ್ಯಕ್ರಮ ನಿರೂಪಿಸಿದರು. ಆರಿಬಾ ಅಥಾರ್
ಕಿರಾಅತ್ ಪಠಿಸಿದರು.













