ಜನಾಂಗೀಯ ಮೇಲ್ಮೆಯ ಯುರೋಪಿಯನ್ ಪರದೆಯನ್ನು ಕಿತ್ತೆಸೆದ ಫೆಲೆಸ್ತೀನ್ ಹೋರಾಟ

0
118

ಸನ್ಮಾರ್ಗ ವಾರ್ತೆ

-ಸಯ್ಯದ್ ಸಆದತುಲ್ಲಾ ಹುಸೈನಿ
ಜ.ಇ. ಹಿಂದ್ ರಾಷ್ಟ್ರೀಯ ಅಧ್ಯಕ್ಷರು

“ಓ ಸತ್ಯವಿಶ್ವಾಸಿಗಳೇ, ನೀವು ದೇವ ಭಯವನ್ನಿರಿಸಿಕೊಂಡರೆ ಅಲ್ಲಾಹನು ನಿಮಗೆ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸುವ ಒಂದು ಒರೆಗಲ್ಲನ್ನು ಒದಗಿಸುವನು.” (ಅನ್‌ಫಾಲ್- 29)

ಓರ್ವ ಕುರ್‌ಆನ್ ವ್ಯಾಖ್ಯಾನಗಾರ ಈ ಸೂಕ್ತಕ್ಕೆ ನೀಡುವ ಅಂತಃ ದೃಷ್ಟಿಯುಳ್ಳ, ಸತ್ಯವಿಶ್ವಾಸದ ಶಕ್ತಿಯನ್ನು ನೀಡುವ ವ್ಯಾಖ್ಯಾನ ಹೀಗಿದೆ: “ಫುರ್ಕಾನ್ ಎಂದರೆ ಪರೀಕ್ಷೆಯಾಗಿದೆ. ಒಳಿತನ್ನು ಕೆಡುಕಿನಿಂದ ಬೇರ್ಪಡಿಸುವ ಪರೀಕ್ಷೆ. ವಿಶ್ವಾಸಿ ಸಮೂಹದ ಸಾಮೂಹಿಕ ತೀರ್ಮಾನಗಳು, ದುಷ್ಟಶಕ್ತಿಗಳ ವಿರುದ್ಧ ಅವರ ಹೋರಾಟವೂ ಈ ಅರ್ಥದಲ್ಲಿ ಫುರ್ಕಾನ್ ಆಗುತ್ತದೆ. ಅಂತಹ ಸಮಾಜದ ಅಸ್ತಿತ್ವವು ಇತರ ಸಮಾಜಗಳಿಗೆ ಒಳಿತು ಮತ್ತು ಕೆಡುಕನ್ನು ಪ್ರತ್ಯೇಕಿಸುವ ಮಾನದಂಡವಾಗುತ್ತದೆ. ಅವರ ಸಾಧನೆಗಳು ಇತಿಹಾಸದಲ್ಲಿ ಫುರ್ಕಾನ್ ಆಗುತ್ತದೆ. ಅವರ ನೇತೃತ್ವದ ಯುದ್ಧಗಳು ಸತ್ಯ ಯಾವುದು, ಅಸತ್ಯ ಯಾವುದೆಂದು ನಮಗೆ ತೋರಿಸುತ್ತದೆ. ಇತಿಹಾಸವು ಸದಾಕಾಲ ಅವರ ಸಾಧನೆಗಳೊಂದಿಗಿರುತ್ತದೆ.

ಈ ಸೂಕ್ತದಲ್ಲಿ ಅಲ್ಲಾಹನು ಹೇಳುತ್ತಾನೆ: “ನೀವು ಸೂಕ್ಷ್ಮತೆ ಮತ್ತು ಭಯಭಕ್ತಿಯುಳ್ಳವರಾದರೆ ನಿಮ್ಮ ಮೂಲಕ ನಾವು ಒಂದು ಪ್ರಕಾಶವನ್ನು ಪಸರಿಸುತ್ತೇವೆ. ಆ ಬೆಳಕಿನಲ್ಲಿ ಲೋಕವು ಸತ್ಯ ಮತ್ತು ಅಸತ್ಯವನ್ನು ತಿಳಿದುಕೊಳ್ಳುತ್ತದೆ. ವಿಶ್ವದ ಸಮೂಹಗಳಿಗೆ ನೀವು ಸತ್ಯವನ್ನು ಅರ್ಥ ಮಾಡಿಕೊಳ್ಳುವ ಮಾದರಿ ಸಮಾಜವಾಗಿ ಬದಲಾಗುವಿರಿ.”

ನಿಸ್ಸಂದೇಹವಾಗಿ ಹೇಳಬಹುದು, ಈಗ ನಡೆಯುತ್ತಿರುವ ಫೆಲೆಸ್ತೀನ್ ಸ್ವಾತಂತ್ರ್ಯ ಹೋರಾಟವು ಇಂದಿನ ಕಾಲದ ಬಹುದೊಡ್ಡ ಫುರ್ಕಾನ್ (ಫುರ್ಕಾನ್ ಕಬೀರ್) ಆಗಿ ಪರಿವರ್ತಿತಗೊಂಡಿದೆ. ಈ ವಂಚನೆಯ ಜಗತ್ತಿನಲ್ಲಿ ಸಂಸ್ಕೃತಿ ಮತ್ತು ಘನತೆಯ ಹಕ್ಕುದಾರರೆಂದು ಸ್ವಯಂ ಹೇಳಿಕೊಳ್ಳುತ್ತಿರುವ ಬೃಹತ್ ಶಕ್ತಿಗಳನ್ನು ಈ ರೀತಿ ತೆರೆದು ತೋರಿಸಿದ ಒಂದು ಘಟನೆ ಇತ್ತೀಚಿನ ಚರಿತ್ರೆಯಲ್ಲಿ ಉಂಟಾಗಿಲ್ಲ.

ಮಾನವ ಹಕ್ಕುಗಳು, ನ್ಯಾಯ, ಸ್ವಾತಂತ್ರ್ಯ, ಪ್ರಜಾ ಪ್ರಭುತ್ವ ಮುಂತಾದವುಗಳ ಸುಂದರ ಮುಖವಾಡ ಧರಿಸಿದ್ದ ಪಾಶ್ಚಾತ್ಯ ಶಕ್ತಿಗಳ ಕುತಂತ್ರಗಳನ್ನು ಇದು ಬಯಲುಗೊಳಿಸಿದೆ. ಒಳಗೆ ಈ ಶಕ್ತಿಗಳು ಎಷ್ಟೊಂದು ಹಿಂಸಾತ್ಮಕ ಮತ್ತು ದ್ವೇಷವನ್ನು ಕಾರುತ್ತಿದೆಯೆಂಬುದೂ ಬಹಿರಂಗವಾಗಿದೆ. ಈ ವನ್ಯ ಮೃಗಗಳು 16ನೇ ಶತಮಾನದಿಂದಲೂ ಜಗತ್ತನ್ನು ರಕ್ತಮಯಗೊಳಿಸುತ್ತಿವೆ. ಲಕ್ಷಾಂತರ ಜನರನ್ನು ಗುಲಾಮರನ್ನಾಗಿ ಮಾಡಿದ ಬಳಿಕ ಆ ಕ್ರೂರ ಜಂತುಗಳು ವಿಶ್ವವನ್ನೇ ವಶಪಡಿಸಿಕೊಂಡು ಅಲ್ಲಿರುವುದನ್ನೆಲ್ಲಾ ಕೊಳ್ಳೆ ಹೊಡೆಯಿತು.

ಪಾಶ್ಚಿಮಾತ್ಯ ನಾಗರಿಕತೆಯು ಯಾವುದೇ ನೈತಿಕ ಅಡಿಪಾಯ ಅಥವಾ ಮಾನವೀಯತೆಯನ್ನೇ ಹೊಂದಿಲ್ಲದ ಒಂದು ಭಯಾನಕ ಅಸ್ತಿತ್ವವೆಂದು ಫೆಲೆಸ್ತೀನ್‌ನ ಹೋರಾಟದ ಶಕ್ತಿಯು ನಮಗೆ ತೋರಿಸಿಕೊಟ್ಟಿತು. ಆ ನಾಗರಿಕತೆಯು ಮರೆಮಾಚಿದ ಎಲ್ಲಾ ಸುಳ್ಳುಗಳನ್ನು ಫೆಲೆಸ್ತೀನ್‌ನ ಪ್ರತಿರೋಧವು ಬಹಿರಂಗ ಪಡಿಸಿತು.

ಆ ನಾಗರಿಕತೆಯ ದೃಷ್ಟಿಯಲ್ಲಿ ಏಶ್ಯನ್ನರು ಮತ್ತು ಆಫ್ರಿಕನ್ನರು ಈಗಲೂ ಅವರ ಪ್ರಜೆಗಳು ಮತ್ತು ಗುಲಾಮರಾಗಿದ್ದಾರೆ. ಅವರ ಭೂಮಿ ಮತ್ತು ಸಂಪತ್ತು ತಮ್ಮದೆಂದೂ ತಮ್ಮಿಚ್ಛೆಯಂತೆ ತಾವು ಅದನ್ನು ಉಪಯೋಗಿಸುತ್ತೇವೆಂದು ಅವರು ಈಗಲೂ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ.

ವರ್ಷಗಳ ಹಿಂದೆಯೇ ಮೌಲಾನಾ ಅಲೀಮಿಯಾ ಇದರ ಕುರಿತು ಮುನ್ನೆಚ್ಚರಿಕೆ ನೀಡಿದ್ದಾರೆ. ಅವರು ಹೀಗೆ ಬರೆದರು,
ಇದು ಬೇಟೆಯಾಡುವ ಸ್ಥಳವಾಗಿದೆ. ಬೇಟೆಗಾರರು ಆಯುಧಗಳೊಂದಿಗೆ ಬರುತ್ತಾರೆ. ದೇಶಗಳನ್ನು ಬೇಟೆಯಾಡಿ ಹಿಡಿಯುತ್ತಾರೆ. ದೇಶ ವಾಸಿಗಳನ್ನು ಮರ್ದಿಸುತ್ತಾರೆ. ಬೃಹತ್ ಶಕ್ತಿಗಳಿಗೆ ಪೌರ್ವಾತ್ಯ ರಾಷ್ಟ್ರಗಳು ತಮಗೆ ಅಗತ್ಯವಾದ ಕಚ್ಛಾ ವಸ್ತುಗಳ ಮೂಲ ಮಾತ್ರವಾಗಿದೆ. ಪೆಟ್ರೋಲ್ ಮತ್ತು ಇತರ ವಸ್ತುಗಳು ಪೂರೈಕೆಯಾಗುತ್ತಿರಬೇಕು. ಯುದ್ಧಗಳುಂಟಾದರೆ ಅವರನ್ನು ತಮ್ಮ ಸಹಾಯಕರನ್ನಾಗಿ ಸೇರಿಸಿಕೊಳ್ಳಬಹುದು. ಅವರನ್ನು ಕೂಲಿಯಾಳುಗಳಾಗಿ ನೇಮಿಸಿಕೊಳ್ಳಬಹುದು. ಪಾಶ್ಚಾತ್ಯರು ಪೌರ್ವಾತ್ಯರನ್ನು ತಮ್ಮ ಅಡುಗೆ ಮನೆಯ ಇಂಧನವಾಗಿ ಮಾತ್ರ ಕಾಣುತ್ತಾರೆ. ಅವರಿಗೆ ಯಾವುದೇ ಬೆಲೆಯನ್ನೂ, ಪರಿಗಣನೆಯನ್ನೂ ನೀಡುವುದಿಲ್ಲ. ಆ ರಾಷ್ಟ್ರಗಳ ಭವಿಷ್ಯವನ್ನು ನಿರ್ಧರಿಸುವವರು ತಾವೆಂಬುದು ಅವರ ಭಾವನೆ. ಅವರನ್ನು ಮನುಷ್ಯರನ್ನಾಗಿ ಕಾಣದೆ ಕೇವಲ ವಸ್ತುವಿನಂತೆ ಪರಿಗಣಿಸುತ್ತಾರೆ. ಆ ಶಕ್ತಿಗಳೊಂದಿಗೆ ಹೋರಾಡುವ ಶಕ್ತಿ ಇಂದು ಇಲ್ಲ. ಇತರ ಸಮೂಹಗಳೆಲ್ಲವೂ ತಮ್ಮ ಶಕ್ತಿಯನ್ನು ಕಳೆದುಕೊಂಡಿವೆ. ತಮ್ಮ ಧ್ಯೇಯವನ್ನೂ ಮರೆತು ಬಿಟ್ಟಿವೆ. ಕರ್ಮ ಭೂಮಿಯಿಂದ ಅವರು ಹಿಂದೆ ಸರಿದಿದ್ದಾರೆ.

ಇಂತಹ ಶೋಚನೀಯವಾಗಿರುವ ಒಂದು ಲೋಕದಲ್ಲಿ ಫೆಲೆಸ್ತೀನಿಯನ್ನರು ತಮ್ಮ ಘನತೆಯನ್ನು ಎತ್ತಿ ಹಿಡಿದು ಈ ರಾಕ್ಷಸರಿಗೆ ಇಂಧನವಾಗಲು ನಾವು ಸಿಗಲಾರೆವೆಂದು ತೋರಿಸಿಕೊಟ್ಟರು. ಮಾತ್ರವಲ್ಲ, ತೃತೀಯ ಜಗತ್ತಿನ ಇಂಧನವಾಗಲು ನಾವು ಅವಕಾಶ ನೀಡುವುದಿಲ್ಲ ಎಂದು ಬಹಿರಂಗಪಡಿಸಿದರು. ಶತಮಾನಗಳಿಂದ ನಡೆಯುತ್ತಿರುವ ಈ ಪ್ರಕ್ರಿಯೆಯನ್ನು ತಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ.

ಆದ್ದರಿಂದ ಇದು ದೊಡ್ಡ ಫುರ್ಕಾನ್ ಮಾತ್ರವಲ್ಲ, ಮಹಾ ಗೋಡೆ’ ಕೂಡಾ ಹೌದು. ದುಲ್‌ಕರ್ನೈನ್‌ನ ಅಣೆಕಟ್ಟಿ ನಂತೆ, ಇದು ಪಾಶ್ಚಿಮಾತ್ಯ ನಾಗರಿಕತೆಯ ಪ್ರವಾಹದಿಂದ ಇಡೀ ಜಗತ್ತನ್ನು ಸಂರಕ್ಷಿಸುತ್ತದೆ. ಇಂಥ ಒಂದು ಪ್ರತಿರೋಧ ಇಲ್ಲದಿದ್ದರೆ ಪಾಶ್ಚಿಮಾತ್ಯ ರಕ್ತಪಿಪಾಸು ವಸಾಹತು ಶಾಹಿಯ ಎರಡನೇ ಅಲೆ ಇಪ್ಪತ್ತೊಂದನೇ ಶತಮಾನದಲ್ಲಿ ಬರಲಿದೆ. ಆದ್ದರಿಂದ, ತೂಫಾನುಲ್ ಅಕ್ಸಾದ ಪ್ರಯೋಜನ ಇಡೀ ತೃತೀಯ ಜಗತ್ತಿಗಾಗಿದೆ. ಅವರು ದುರ್ಬಲ ರಾಷ್ಟ್ರಗಳಿಗೆ ಈ ಮೂಲಕ ಸಂರಕ್ಷಣೆಯನ್ನು ನೀಡಿದರು.

ಆದ್ದರಿಂದ ಮಾನವೀಯತೆಯು ಫೆಲೆಸ್ತೀನಿಯನ್ ಹೋರಾಟಗಾರರಿಗೆ ಕೃತಜ್ಞತೆಯ ಋಣಭಾರವನ್ನು ಹೊಂದಿದೆ. ಈ ಲೇಖನದಲ್ಲಿ ನಾವು ತೂಫಾನುಲ್ ಅಕ್ಸಾ ಬಹಿರಂಗಪಡಿಸಿದ ಈ ದುಷ್ಟಶಕ್ತಿಗಳ ಭಯಾನಕ ಮುಖಗಳನ್ನು ಪಟ್ಟಿ ಮಾಡಲು ಪ್ರಯತ್ನಿಸುತ್ತೇವೆ.

ಜನಾಂಗೀಯ ಝಿಯೋನಿಝಂ ಎಂಬುದು ನಮ್ಮ ಕಾಲದ ಅತ್ಯಂತ ಭಯಾನಕವಾದ ಜನಾಂಗೀಯ ಸಿದ್ಧಾಂತವಾಗಿದೆ. ಪಾಶ್ಚಿಮಾತ್ಯ ದೇಶಗಳು ತಾವು ಮಾನವ ಸಮಾನತೆಯ ಪರವಾಗಿರುವವರು ಎಂದು ನಿರಂತರವಾಗಿ ಕೊಚ್ಚಿಕೊಳ್ಳುತ್ತಿರುತ್ತಾರೆ.ಆದ್ದರಿಂದ ಜನಾಂಗೀಯವಾದವನ್ನು ನಿರ್ಮೂಲನ ಮಾಡುವುದೇ ತಮ್ಮ ದೊಡ್ಡ ಮಹಾತ್ವಾಕಾಂಕ್ಷೆ ಎಂದು ಅವರು ಹೇಳುತ್ತಿರುತ್ತಾರೆ.ಹಲವು ರಾಷ್ಟ್ರಗಳನ್ನು ಅವರು ಜನಾಂಗೀಯವಾದಿಗಳು ಎಂದು ಲೇಬಲ್ ಹಚ್ಚುತ್ತಾರೆ.

1966ರಲ್ಲಿ ವಿಶ್ವಸಂಸ್ಥೆಯು ಎಲ್ಲಾ ರೀತಿಯ ಜನಾಂಗೀಯ ತಾರತಮ್ಯವನ್ನು ತೊಡೆದು ಹಾಕುವ ಅಂತಾರಾಷ್ಟ್ರೀಯ ಕಾನೂನನ್ನು ಘೋಷಿಸಿತು. (International convention on the elimination of all forms of racial discrimination) ಈ ವಿಷಯದಲ್ಲಿ ದೊಡ್ಡ ಮಾನವೀಯತೆಯನ್ನು ಪ್ರತಿಪಾದಿಸುತ್ತಾ, ಈ ಅಂತಾರಾಷ್ಟ್ರೀಯ ಕಾನೂನನ್ನು ಅನೇಕ ತೃತೀಯ ಜಗತ್ತಿನ ದೇಶಗಳ ವಿರುದ್ಧ ಪಾಶ್ಚಾತ್ಯರು ಪ್ರಯೋಗಿಸಿದ್ದಾರೆ. ಆದರೆ ಫೆಲೆಸ್ತೀನಿಯನ್ ಪ್ರತಿರೋಧ ಹೋರಾಟಗಳು,ಇಂದು ವಿಶ್ವದ ಅತ್ಯಂತ ಕೆಟ್ಟ ಜನಾಂಗೀಯವಾದಿಗಳು ಯಾರೆಂದರೆ ಅದು ಝಿಯೋನಿಸ್ಟ್ ಗಳು ಮತ್ತು ಅವರ ಬೆಂಬಲಿಗರು ಎಂದು ಜಗತ್ತಿಗೆ ತೋರಿಸಿಕೊಟ್ಟಿದೆ.

ಜನಾಂಗೀಯವಾದವು ಇಸ್ರೇಲ್‌ನ ನಿರ್ಮಾಣದ ಅಡಿಪಾಯವಾಗಿದೆ. ಜನಾಂಗೀಯತೆಯು ಪೌರತ್ವದ ಆಧಾರವಾಗಿದೆ ಎಂದು ತನ್ನ ಮೂಲಭೂತ ಕಾನೂನಿನಲ್ಲಿ ಬರೆದಿರುವ ವಿಶ್ವದ ಏಕೈಕ ದೇಶ ಇಸ್ರೇಲ್ ಆಗಿದೆ. ಇಸ್ರೇಲಿನ ಕುಪ್ರಸಿದ್ಧವಾದ ಲಾ ಆಫ್ ರಿಟರ್ನ್ ಮೂಲಭೂತ ಕಾನೂನಿನ ಭಾಗವಾಗಿದೆ. ಆ ಕಾನೂನಿಗೆ ಸಾಂವಿಧಾನಿಕ ಸ್ಥಾನಮಾನವಿದೆ. ಜಾತಿಯ ಆಧಾರದ ಮೇಲೆ ತಾರತಮ್ಯವಿದೆ. ಅಲ್ಲಿ ವರ್ಣಭೇದ ನೀತಿಯ ಗೋಡೆ ಕಟ್ಟಲಾಗಿದೆ. ವಂಶೀಯತೆಯು ಇಸ್ರೇಲ್‌ನ ಇತಿಹಾಸಕ್ಕೆ ಮಾತ್ರ ಸೀಮಿತವಾಗಿಲ್ಲ. ಪಾಶ್ಚಾತ್ಯರ ಇತಿಹಾಸವು ವರ್ಣಭೇದ ನೀತಿಯ ಇತಿಹಾಸವೂ ಆಗಿದೆ. ಇಸ್ರೇಲ್ ರಾಷ್ಟ್ರದ ನಿರ್ಮಾಣ ಮತ್ತು ಅದನ್ನು ಇಲ್ಲಿಯವರೆಗೆ ಉಳಿಸಿದ್ದು ಬಿಳಿ ಜನಾಂಗೀಯ ಯೋಜನೆಯ ಮುಂದುವರಿಕೆ ಎಂಬುದನ್ನು ಇಲ್ಲಿ ಅರ್ಥಮಾಡಿಕೊಳ್ಳ ಬೇಕು.

ಭೌಗೋಳಿಕವಾಗಿ ಇಸ್ರೇಲ್ ಏಷ್ಯಾ ಖಂಡದಲ್ಲಿದೆ. ನಾಗರಿಕ’ ದೃಷ್ಟಿಕೋನದಿಂದ ನೋಡಿದರೆ (ಜನಾಂಗೀಯವಾಗಿ ನೋಡಿದರೆ ಎಂಬುದೇ ಸೂಕ್ತ) ಇಸ್ರೇಲ್ ಯುರೋಪ್‌ನ ಭಾಗವೂ ಆಗಿದೆ. ಈ ಆಧಾರದಲ್ಲಿ ಅದು ಯುರೋಪಿಯನ್ ಯೂನಿಯನ್‌ನ ಸದಸ್ಯತ್ವಕ್ಕೆ ಅಪೇಕ್ಷೆ ಸಲ್ಲಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಇಸ್ರೇಲ್ ಈಗಾಗಲೇ ಹಲವಾರು ಯುರೋಪಿಯನ್ ಒಕ್ಕೂಟಗಳ ಸದಸ್ಯ ರಾಷ್ಟ್ರವಾಗಿದೆ.

ಪ್ರಪಂಚದ ನಾನಾ ಭಾಗಗಳಿಂದ ಇಸ್ರೇಲ್ ಕರೆತಂದು ಫೆಲೆಸ್ತೀನ್ ನೆಲದಲ್ಲಿ ನೆಲೆಗೊಳಿಸಿ ಪೌರತ್ವ ನೀಡಲ್ಪಟ್ಟವರು ವಿವಿಧ ವಂಶ ಮತ್ತು ವರ್ಣದವರು ಎಂಬ ಸತ್ಯ ಬಹುತೇಕರಿಗೆ ತಿಳಿದಿಲ್ಲ. ಹೀಗೆ ಕರೆ ತಂದವರಲ್ಲಿ 32% ಬಿಳಿಯರಾಗಿದ್ದಾರೆ. ನೀಲಿ ಕಣ್ಣಿನ ಮತ್ತು ಕೆಂಪು ಕೂದಲಿನ ಅವರನ್ನು 'ಅಶ್ಶನಾಝಿ'ಯಹೂದಿಯರು ಎಂದು ಕರೆಯಲಾಗುತ್ತಿದೆ. ಅವರು ಯುರೋಪಿಯನ್ ಮೂಲದವರು. ಅವರು ಅಮೇರಿಕನ್ ಯಹೂದಿಗಳಲ್ಲಿ ಎಪ್ಪತ್ತೈದು ಪ್ರತಿಶತವನ್ನು ಹೊಂದಿದ್ದಾರೆ. ಇಸ್ರೇಲ್‌ನಲ್ಲಿ 45% ಮಿಝ್‌ರಾಹಿ’ ಯಹೂದಿಗಳಿದ್ದಾರೆ. ಮಿಝ್‌ರಾಹಿ ಯಹೂದಿಯೆಂದರೆ ಮೊದಲು ಫೆಲೆಸ್ತೀನ್‌ನಲ್ಲಿ ವಾಸಿಸುತ್ತಿದ್ದ ಅಥವಾ ಇಸ್ರೇಲ್ ಸ್ಥಾಪನೆಯ ಬಳಿಕ ಮದ್ಯಪ್ರಾಚ್ಯ ಅಥವಾ ಉತ್ತರ ಆಫ್ರಿಕಾದಿಂದ ಬಂದವರು. ಅವರು ಬಣ್ಣ ಮತ್ತು ಜನಾಂಗೀಯತೆಯಲ್ಲಿ ಅರಬರನ್ನು ಹೋಲುತ್ತಾರೆ.

ಬೇಥಾ ಇಸ್ರೇಲ್’ ಎಂದು ಯಹೂದಿಗಳ ಇನ್ನೊಂದು ಗುಂಪು ಇದೆ. ಅವರು ಆಫ್ರಿಕನ್ ಮೂಲಕ ಕಪ್ಪು ಜನರು. ಅವರು ಇಸ್ರೇಲ್ ಜನಸಂಖ್ಯೆಯ ಮೂರು ಶೇಕಡಾ ಇದ್ದಾರೆ. ಭಾರತದ ವಿವಿಧ ಭಾಗಗಳಿಂದ (ಮಹಾರಾಷ್ಟ್ರ, ಈಶಾನ್ಯ ರಾಜ್ಯಗಳಂತಹ ಪ್ರದೇಶಗಳಿಂದ) ಇಸ್ರೇಲ್‌ಗೆ ವಲಸೆ ಹೋದವರನ್ನು ಬೆನೆ ಇಸ್ರೇಲ್’ ಎಂದೂ ಅಥವಾ `ಶಾನಿವಾರ್ ತೆಲಿ’ ಎಂದೂ ಕರೆಯಲಾಗುತ್ತದೆ.

ಇಸ್ರೇಲ್ ಆಡಳಿತ ಯಂತ್ರದ ಮುಖ್ಯ ಗುರಿ, ಬಿಳಿ ವಂಶಜರಾದ ಅಶ್ಶನಾಝಿಗಳ ಹಿತಾಸಕ್ತಿಗಳನ್ನು ಕಾಪಾಡುವುದೆಂಬುದು ಇಸ್ರೇಲ್‌ನ ರಾಜಕೀಯವನ್ನು ಅರಿತಿರುವವರಿಗೆ ತಿಳಿದ ಸತ್ಯವಾಗಿದೆ.

ಈ ಬಿಳಿಯ ಯಹೂದಿಯರ ಹಿತಾಸಕ್ತಿಗಳನ್ನು ಸಂರಕ್ಷಿಸಲು ತಮ್ಮ ಸಕಲ ಧಾರ್ಮಿಕ ಮೌಲ್ಯಗಳನ್ನು ಕಿತ್ತೆಸೆಯಲು ಅಮೇರಿಕಾ ಹಾಗೂ ಇಸ್ರೇಲ್ ಸಿದ್ಧವಾಗುತ್ತದೆ. ಇಸ್ರೇಲ್‌ನ ಓರ್ವ ಯಹೂದಿಗಾಗಿ ಸಾವಿರಾರು ಅರಬ್ ವಂಶಜರನ್ನು ಮಾತ್ರವಲ್ಲ, ಅರಬ್ ವಸಾಹತುಗಳನ್ನು ಬಲಿಕೊಡಬೇಕಾಗಿ ಬಂದರೂ ಅವರಿಗೆ ಅದು ಸಮಸ್ಯೆಯಾಗುವುದಿಲ್ಲ. ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಮಿಜ್ರಾಹಿ, ಬೇಥಾ ಇಸ್ರಾಯೀಲ್, ಶಾನಿವಾರ್ ತೇಲಿ ವಂಶಜರಾದ ಸೈನಿಕರನ್ನು ನಿಯೋಜಿಸಲಾಗುತ್ತದೆ ಎಂದೂ ಹೇಳಲಾಗುತ್ತದೆ.

ನಮ್ಮಲ್ಲಿ ಕೆಳಜಾತಿ ವ್ಯವಸ್ಥೆಯಲ್ಲಿರುವಂತೆ ಅಲ್ಲಿಯೂ ಕೆಳಜಾತಿಯ ಯಹೂದಿಯರೊಂದಿಗೆ ವಿವಾಹವನ್ನು ಅಪಮಾನವೆಂದು ಭಾವಿಸಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಹಾಗೂ ಇತರೆಡೆಗಳಲ್ಲಿ ಈ ವಿಭಾಗದವರಿಗಾಗಿ ಪ್ರತ್ಯೇಕ ಸೀಟುಗಳನ್ನು ಇರಿಸಲಾಗುತ್ತದೆ ಎಂಬ ದೂರುಗಳೂ ಕೇಳಿ ಬಂದಿತ್ತು. ಇದರ ವಿರುದ್ಧ ಪ್ರತಿಭಟನೆಗಳೂ ನಡೆದಿವೆ. ಈ ಜನಾಂಗೀಯ ತಾರತಮ್ಯದ ಅತಿ ದೊಡ್ಡ ಬಲಿ ಪಶುಗಳು ಭಾರತೀಯ ಯಹೂದಿಯರೆಂದೂ ಹೇಳಲಾಗುತ್ತದೆ.
(ಮುಂದುವರಿಯುವುದು)