✍️ ಅರಫಾ ಮಂಚಿ
ಸಫಾ ಬೆಟ್ಟದಿಂದ ಪ್ರವಾದಿ ಪ್ರೇಮದ ಆರಂಭ
ಅಲ್ಲಾಹನ ಪ್ರವಾದಿ(ಸ) ರವರು ʻಯಾ ಸಬಾಹಾʼ ಎಂದು ಕೂಗಿ ಸಫಾ ಬೆಟ್ಟದ ತುತ್ತತುದಿಯಿಂದ ಜನತೆಯನ್ನು ಪ್ರಥಮ ಬಾರಿ ಸಾರ್ವಜನಿಕವಾಗಿ ಅಭಿಸಂಬೋಧಿಸಿದರು. ಸಫಾ ಬೆಟ್ಟ ಹತ್ತಿ ಪ್ರವಾದಿವರ್ಯರು(ಸ) ಹೇಳಿದ್ದು ಚಾರಿತ್ರಿಕ ಮತ್ತು ಪಾರತ್ರಿಕ ಸತ್ಯ. ಮಕ್ಕಾದ ಜನತೆಗೆ, ಅಂದಿನ ಸಮಾಜಕ್ಕೆ ಏಕದೇವನನ್ನು “ಲಾ ಇಲಾಹ ಇಲ್ಲಲ್ಲಾಹ್” ಎಂದು ಪರಿಚಯಿಸಿದರು. ಇದು ಬರೇ ಪರಿಚಯ ಮಾತ್ರವಲ್ಲ, ನಾನು ಹೇಳಿದ್ದು ಗಮನವಿಟ್ಟು ಆಲಿಸಿರಿ, ವಿವೇಚಿಸಿ ಒಪ್ಪಿಕೊಳ್ಳಿರಿ ಎಂಬ ಆಹ್ವಾನ ಕೂಡ ಆಗಿತ್ತು.
ಈ ಕರೆಗೆ ಇಸ್ಲಾಮಿನ ಬದ್ಧವಿರೋಧಿಗಳಾದ ಅಬೂಲಹಬ್, ಅಬೂ ಜಹಲ್ ಅವರಂತಹವರೂ ಸಾಕ್ಷಿಯಾಗಿದ್ದಾರೆ. ಆ ಕರೆಗೆ ಓಗೊಟ್ಟು ಇಸ್ಲಾಮ್ಗೆ ಬಂದ ಮುಹಾಜಿರ್ ಶ್ರೇಷ್ಠರೂ ಸಾಕ್ಷಿಯಾಗಿದ್ದಾರೆ. ಪ್ರವಾದಿತ್ವವನ್ನು ಮುಹಮ್ಮದ್(ಸ)ರಲ್ಲಿ ಪ್ರೀತಿಯಿಟ್ಟು ಒಪ್ಪಿಕೊಂಡವರು ಹಾಗೂ ಪ್ರವಾದಿತ್ವ ಮತ್ತು ಅಲ್ಲಾಹನ ಏಕದೇವತ್ವವನ್ನು ಖಂಡತುಂಡವಾಗಿ ವಿರೋಧಿಸಿದವರು ಇದ್ದಾರೆ. ಹೀಗೆ ಪ್ರವಾದಿ ಪ್ರೇಮ ಮತ್ತು ಪ್ರವಾದಿ ವಿರೋಧ ಎಂಬ ಎರಡು ಆಯಾಮಗಳು ಆರಂಭದಲ್ಲೇ ಆ ಸಮಾಜದಲ್ಲಿ ಹುಟ್ಟಿಕೊಂಡಿತು. ಮಕ್ಕಾದ ಚರಿತ್ರೆ ಅಭ್ಯಸಿದವರಿಗೆ ಈ ಎರಡೂ ಕ್ರಿಯಾ ರೂಪ ಗೋಚರಿಸುತ್ತದೆ.
ಪ್ರವಾದಿ ಪ್ರೇಮದ ಸಂಪೂರ್ಣ ಕ್ರಿಯಾಶೀಲತೆಗೆ ತೌಹೀದ್(ಏಕದೇವತ್ವ) ನೆಲೆಯಾಗಿದ್ದರೆ, ಮೂರ್ತಿಗಳು(ದೇವಸಹಭಾಗಿತ್ವ) ಪ್ರವಾದಿ ವಿರೋಧದ ಕ್ರಿಯಾಶೀಲತೆಯಾಗಿದೆ. ಆದ್ದರಿಂದ ಇಂದಿನ ಸಲಾತ್ ಮಜ್ಲಿಸ್ಗಳಲ್ಲಿ, ಸೀರತ್ ಕಾರ್ಯಕ್ರಮಗಳಲ್ಲಿ ಪ್ರವಾದಿ ಪ್ರೇಮದ ಇಷ್ಟೊಂದು ಮೂಲಭೂತ ಮತ್ತು ಆಳವಾದ ಕ್ರಿಯಾರೂಪವನ್ನು ನಿರೀಕ್ಷಿಸುವುದು ಸರಿಯಲ್ಲ. ಆದರೂ ಸೀರತ್ ನಮ್ಮ ಜೀವನದಲ್ಲಿ ಹೇಗೆಲ್ಲಾ ಅಡಕಗೊಂಡಿದೆ ಎಂಬುದನ್ನು ಮಾನದಂಡವಾಗಿಸುವವರು ಇದ್ದಾರೆ. ವಿರೋಧವಿಲ್ಲ. ಹಾಗಾಗಿ ಪ್ರವಾದಿ ಪ್ರೇಮವನ್ನು ಇಂದಿನ ಜನರ ಪ್ರವಾದಿ ಪ್ರೇಮದ ಅಭಿವ್ಯಕ್ತಿಯ ವ್ಯಾಪ್ತಿಗೊಳಪಡಿಸಿ ನಿಗದಿಪಡಿಸಲು ಬರುವುದಿಲ್ಲ ಮತ್ತು ಅಳೆಯಂಗಿಲ್ಲ.
ಅದೇ ಆರನೇ ಶತಮಾನ:
ಪ್ರವಾದಿತ್ವ ಒದಗಿದ ನಂತರವೇ ಪ್ರವಾದಿ ಪ್ರೇಮಕ್ಕೆ ಅಸ್ತಿತ್ವ ಬರುವುದು. ಅದಕ್ಕಿಂತ ಮೊದಲು ಆ ಊರ ಜನರು ಮುಹಮ್ಮದರನ್ನು ಇಷ್ಟಪಡುತ್ತಿದ್ದುದು ಮಕ್ಕಾದ ಸತ್ಯಸಂಧ(ಅಮೀನ್) ಎಂದಾಗಿತ್ತು. ಸಫಾಬೆಟ್ಟದ ಘೋಷಣೆಯೊಂದಿಗೆ ಮುಹಮ್ಮದ್(ಸ) ಪ್ರವಾದಿ ಎಂದು ಆ ನಾಡಿನ ಜನ ಅರಿತರು. ಆವರೆಗೆ ಇದ್ದ ಅಷ್ಟೂ ವಿಶ್ವಾಸ, ಪ್ರೀತಿ ನಿರ್ಣಾಯಕ ರೂಪದಲ್ಲಿ ಅಂದು ವ್ಯಕ್ತವಾಯಿತು. ಏಕದೇವನನ್ನು ಮಾತ್ರ ಒಪ್ಪಿ ಅವನನ್ನೇ ಆರಾಧಿಸಬೇಕು ಎಂಬ ಜೀವನ ಕ್ರಿಯಾ ಕಾರ್ಯದೆಡೆಗೆ ಪ್ರವಾದಿವರ್ಯರು(ಸ) ಆಹ್ವಾನಿಸಿದರು. ಇಡೀ ಸಮಾಜವೇ ರೂಪಾಂತರಗೊಳ್ಳುವ ಮತ್ತು ಕ್ರಿಯಾಂತರಗೊಳ್ಳುವ ʻಯಾ ಸಬಾಹ್ʼ ಕರೆ ಅದಾಗಿತ್ತು. ತಮ್ಮೆಲ್ಲಾ ಆರಾಧ್ಯರನ್ನು ಬಿಟ್ಟು ಅಲ್ಲಾಹನೊಬ್ಬನನ್ನೇ ಆರಾಧಿಸುವುದು ಅಷ್ಟು ಸುಲಭದ ಪ್ರಕ್ರಿಯೆ ಆಗೇ ಇರಲಿಲ್ಲ. ಮುಹಮ್ಮದರನ್ನು(ಸ) ಪ್ರೀತಿಸುವುದು ಬೇರೆ, ತಮ್ಮ ಆರಾಧ್ಯರನ್ನು ತ್ಯಜಿಸುವುದು ಬೇರೆ. ಅದನ್ನು ಒಂದೇ ಎಂದು ಆ ಸಮಾಜ ಒಪ್ಪಲು ಸಿದ್ಧವಾಗುವುದು ಸುಲಭವೂ ಆಗಿರಲಿಲ್ಲ. ಆ ವರೆಗೆ ಇದ್ದ ಇಷ್ಟ ಕಷ್ಟವಾಗಿ ಹೊರಳಿಕೊಂಡಿತ್ತು.
ಈ ಕರೆಯನ್ನು ವಿರೋಧಿಸುತ್ತಾ, ಪ್ರವಾದಿತ್ವವನ್ನು ವಿರೋಧಿಸುತ್ತಾ ಆ ಸಮಾಜದಲ್ಲಿ ಹಲವರಲ್ಲಿ ಮುಹಮ್ಮದರ(ಸ) ಬಗೆಗಿದ್ದ ಇಷ್ಟ ಎದ್ದು ಹೋಗಿತ್ತು. ಪ್ರವಾದಿವರ್ಯರ(ಸ) ಸ್ವತಃ ಚಿಕ್ಕಪ್ಪ-ದೊಡ್ಡಪ್ಪಂದಿರೇ ಮುಹಮ್ಮದರ(ಸ) ಪ್ರವಾದಿತ್ವವನ್ನು ಒಪ್ಪಲು ಸಿದ್ಧರಿರಲಿಲ್ಲ. ಈ ಹಂತಕ್ಕೆ ಬರುವಾಗ ಅವರ ಪ್ರೀತಿ-ವಿಶ್ವಾಸ ಬೂಟಾಟಿಕೆ ಎಂಬಲ್ಲಿಗೆ ಸಾಗಿ ನಿಂತಿತು. ಪ್ರವಾದಿವರ್ಯರನ್ನ(ಸ) ಸಾಕಿ ಸಲಹಿ ಆಶ್ರಯ ನೀಡಿದ ಅಬೂತಾಲಿಬ್ರು ಕೂಡ ಪ್ರವಾದಿವರ್ಯರ(ಸ) ಪ್ರವಾದಿತ್ವ ವಿರೋಧಿಸಿದರು. ಸಹೋದರ ಪುತ್ರ ಎಂಬ ಪ್ರೀತಿ ಇಟ್ಟುಕೊಂಡೇ ಇದು ನಡೆಯಿತು. ಸಂಬಂಧಕ್ಕಿಂತಲೂ ವಿಶ್ವಾಸವೇ ಮನುಷ್ಯನ ಅಧಿಪತ್ಯ ವಹಿಸುತ್ತದೆ ಎಂಬ ನಿದರ್ಶನವೂ ಇದಾಗಿದೆ. ಮುಹಮ್ಮದ್(ಸ) ರವರು ನಿಜ ಪ್ರವಾದಿ ಎಂಬ ಅರಿವಿದ್ದರೂ ಅಬೂತಾಲಿಬರು ಮುಹಮ್ಮದರು(ಸ) ಪರಿಚಯಿಸಿದ ಧರ್ಮವನ್ನು ಸಾಯುವವರೆಗೂ ಸ್ವೀಕರಿಸಲೇ ಇಲ್ಲ. ಅದರಲ್ಲೂ ಪ್ರವಾದಿಯವರ(ಸ) ದೊಡ್ಡಪ್ಪ ಅಬೂಲಹಬ್ ತೀವ್ರವಾಗಿ ವಿರೋಧಿಸುತ್ತಲೇ ಕೊನೆಯಾದರು. ಪ್ರವಾದಿಯವರ(ಸ) ಪ್ರತಿಪಾದನೆಯನ್ನು ಕುರೈಶರು ವಿರೋಧಿಸಿದ್ದು ಊರವರ ಬಾಯಲ್ಲಿ ಅಪಹಾಸ್ಯಕ್ಕೆ ಗುರಿಯಾಗಬಹುದು ಎಂಬ ಹೆದರಿಕೆಯಿಂದ, ಸರದಾರತ್ವ ಹೋಗುವ ಭಯದಲ್ಲಿ, ಮೂರ್ತಿಗಳಿಂದ ಸಿಗುತ್ತಿದ್ದ ಸಂಪಾದನೆ ಕೊನೆಯಾಗುತ್ತದೆ ಎಂಬ ನಿರಾಶೆಯಲ್ಲಿ ಆಗಿತ್ತು ಎಂದು ಚರಿತ್ರೆ ತಿಳಿಸುತ್ತದೆ. ಅಂತೂ ಪ್ರವಾದಿಯವರನ್ನು ಪ್ರೀತಿಸಿದವರು ಇಸ್ಲಾಮಿಗೆ ಬಂದರು, ಪರಲೋಕದಲ್ಲಿ ಗೆದ್ದರು. ವಿರೋಧಿಸಿದವರು ಸತ್ತು ಮಣ್ಣುಪಾಲಾದರು, ಪರಲೋಕದಲ್ಲಿ ನಷ್ಟ ಅನುಭವಿಸಿದರು ಎಂದು ಪವಿತ್ರ ಕುರ್ಆನ್ ಹೇಳುತ್ತದೆ.
“ಪ್ರತಿಯೊಬ್ಬ ಮನುಷ್ಯನ ಶಕುನವನ್ನು ನಾವು ಅವನ ಕೊರಳಿಗೇ ಕಟ್ಟಿ ಬಿಡುತ್ತೇವೆ. ಪುನರುತ್ಥಾನ ದಿನದಂದು ನಾವು ಅವನಿಗಾಗಿ ಒಂದು ಲಿಖಿತವನ್ನು ಹೊರಡಿಸುವೆವು. ಅವನು ಅದನ್ನು ತೆರೆದ ಗ್ರಂಥದಂತೆ ಕಾಣುವನು. ನಿನ್ನ ಕರ್ಮಪತ್ರವನ್ನು ಓದು, ಇಂದು ನಿನ್ನ ಲೆಕ್ಕ ತೆಗೆಯಲು ನೀನೇ ಸಾಕು.” (ಬನೀ ಇಸ್ರಾಯೀಲ್: 13-14)
ಅಲ್ಲಾಹನನ್ನು ಮತ್ತು ಆತನ ಪ್ರವಾದಿ(ಸ) ಅವರನ್ನು ಪ್ರೀತಿಸುವುದರ ಮತ್ತು ಪ್ರೀತಿಸದಿರುವುದರ ಅಂತಿಮ ಪರಿಣಾಮವನ್ನು ಈ ವಚನ ಬಹಿರಂಗಪಡಿಸುತ್ತವೆ.
ತೌಹೀದ್ ಮತ್ತು ಪ್ರವಾದಿ ಪ್ರೇಮ:
“ಅವನನ್ನು ಬಿಟ್ಟು ನೀವು ಯಾರ ದಾಸ್ಯ-ಆರಾಧನೆ ಮಾಡುತ್ತಿರುವಿರೋ ಅವರೆಲ್ಲಾ ನೀವು ನಿಮ್ಮ ಪೂರ್ವಿಕರು ಇರಿಸಿಕೊಂಡಿರುವ ಕೆಲವು ಹೆಸರುಗಳ ವಿನಾ ಇನ್ನೇನೂ ಅಲ್ಲ. ಅಲ್ಲಾಹನು ಅವುಗಳ ಬಗ್ಗೆ ಯಾವ ಪ್ರಮಾಣವನ್ನೂ ಇಳಿಸಿರುವುದಿಲ್ಲ. ಆಜ್ಞಾಧಿಕಾರವು ಅಲ್ಲಾಹನಿಗೆ ಹೊರತು ಇನ್ನಾರಿಗೂ ಇಲ್ಲ. ಅವನ ಹೊರತು ನೀವು ಯಾರ ದಾಸ್ಯ-ಆರಾಧನೆಯನ್ನೂ ಮಾಡಬಾರದೆಂದು ಅವನ ಕಟ್ಟಪ್ಪಣೆ ಇದೆ. ಇದೇ ಅಪ್ಪಟ ಋಜು ಜೀವನ ಮಾರ್ಗ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.” (ಯೂಸುಫ್: 40)
ಮಕ್ಕಾದ ಜನರು ಮಿಥ್ಯಗಳನ್ನು ಆರಾಧಿಸುವುದು ಬಿಡಬೇಕೆಂದು ನೀಡಿದ ಕರೆ ಇದು. ಅಲ್ಲಾಹನ ಹೊರತು ಏನನ್ನೂ ಆರಾಧಿಸುವಂತಿಲ್ಲ, ಅವನೊಬ್ಬನನ್ನೇ ಆರಾಧನೆಗೆ ಅರ್ಹ. ಈ ಆಜ್ಞೆಯನ್ನು ಸ್ವೀಕರಿಸುವುದರೊಂದಿಗೆ ಅವರ ಪ್ರವಾದಿ ಪ್ರೇಮ ಆರಂಭವಾಯಿತು. ಜೀವನದಲ್ಲಿ ಅದನ್ನು ಪಾಲಿಸುವುದರೊಂದಿಗೆ ಅದು ಜೀವನ ಯಾನವಾಯಿತು.
ಏಕದೇವತ್ವದ ಅಥವಾ ತೌಹೀದಿನ ಕರೆಗೆ ಮೊದಲು ಓಗೊಟ್ಟದ್ದು ಯಾರು? ಪ್ರವಾದಿಯವರ ಪ್ರಿಯ ಪತ್ನಿ ಹಝ್ರತ್ ಖದೀಜ(ರ), ನಂತರ ಹಝ್ರತ್ ಅಲಿ(ರ). ಉಳಿದವರೆಲ್ಲ ಇವರ ನಂತರ ಇಸ್ಲಾಮ್ಗೆ ಪ್ರವೇಶಿಸಿದರು. ಇಸ್ಲಾಮ್ ಮತ್ತು ತೌಹೀದ್ ಪ್ರವಾದಿ ಪ್ರೇಮಕ್ಕೆ ಬುನಾದಿ ಎಂಬುದು ಇಲ್ಲಿ ಸೂಚ್ಯವಾಗಿದೆ. ಅಂದರೆ ಪ್ರವಾದಿ ಕರೆ ಕೊಟ್ಟಾಗಲೇ ಸ್ವೀಕರಿಸಲ್ಪಡಬೇಕೆಂದಾದರೆ ಹಾಗೆ ಹೇಳುವ ವ್ಯಕ್ತಿ ಹೆಚ್ಚು ಪ್ರೀತಿಪಾತ್ರನೂ ಇಷ್ಟದ ವ್ಯಕ್ತಿಯೂ ಆಗಿರಬೇಕು. ವಾಸ್ತವದಲ್ಲಿ ಪ್ರವಾದಿವರ್ಯರು(ಸ) ಹಾಗಿದ್ದರು. ಆದ್ದರಿಂದ ಇಬ್ಬರೂ ಇಸ್ಲಾಮ್ ಸ್ವೀಕರಿಸಿ ಏಕದೇವನ ಆಶ್ರಯಕ್ಕೆ ಸೇರಿಕೊಂಡರು. ಪ್ರವಾದಿ ಆದೇಶಗಳು ಇವರ ಮೂಲಕ ಪ್ರಪ್ರಥಮತಃ ಪಾಲಿಸಲ್ಪಟ್ಟವು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪ್ರವಾದಿಯವರ(ಸ) ಹೊರತು ಇವರಿಬ್ಬರಲ್ಲೇ ಮೊಟ್ಟಮೊದಲು ಜಾರಿಗೆ ಬಂತು. ಹಝ್ರತ್ ಖದೀಜ(ರ), ಹಝ್ರತ್ ಅಲಿ(ರ), ಹಝ್ರತ್ ಅಬೂಬಕರ್(ರ) ರವರು ಪ್ರವಾದಿ ಪ್ರೇಮದ ಅದ್ಭುತ ಮಾದರಿಯಾಗಿ ಇಸ್ಲಾಮಿ ಇತಿಹಾಸದಲ್ಲಿ ಸಿಗುವುದು ಅವರೇ ಆರಂಭದ ಮುಸ್ಲಿಮರು ಎಂಬ ಕಾರಣಕ್ಕಾಗಿದೆ. ತ್ಯಾಗ, ಸಮರ್ಥನೆ, ಬೆಂಬಲ ಎಲ್ಲವೂ ಇವರಲ್ಲಿ ಕ್ರಿಯಾ ರೂಪದಲ್ಲಿ ಅಸ್ತಿತ್ವಕ್ಕೆ ಬಂತು. ವಿಶ್ವಾಸ ಮತ್ತು ಪ್ರೀತಿಗೆ ಅಂತಹ ಅದ್ಭುತ ಶಕ್ತಿ ಇದೆ.
ಪ್ರವಾದಿ ಪ್ರೇಮದ ನಾಮಪದ:
ಕೆಡುಕುಗಳಿಂದ ದೂರ ನಿಲ್ಲುವುದು, ಕೆಟ್ಟದ್ದು ಮಾಡದಿರುವುದು, ಒಳಿತು ಮಾಡುವುದು ಇದೂ ಕೂಡ ಪ್ರವಾದಿ ಪ್ರೇಮದ ವ್ಯಾಖ್ಯೆಯ ಒಳಗಿದೆ. ಪ್ರವಾದಿ(ಸ) ರವರ ಬೋಧನೆಯೇ ಒಳಿತಾಗಿದೆ. ಜೀವನದಲ್ಲಿ ಅಳವಡಿಸದೆ ಬಾಯುಪಚಾರಕ್ಕೆ ಹೇಳುವ ಪ್ರವಾದಿ ಪ್ರೇಮ, ಕೂಗುವ ಘೋಷಣೆಗಳನ್ನು ಪ್ರವಾದಿ ಪ್ರೇಮ ಅಲ್ಲ ಎಂದು ಷರಾ ನೀಡಲಾಗದು. ಆದರೂ ಪ್ರವಾದಿಯ(ಸ) ಬೋಧನೆಯನ್ನು ಜೀವನದಲ್ಲಿ ಅಳವಡಿಸಿದಾಗ ಪ್ರವಾದಿ ಪ್ರೇಮ ಕ್ರಿಯಾ ರೂಪಕ್ಕೆ ಬರುತ್ತದೆ. ಅದು ನೈಜ ಪ್ರವಾದಿ ಪ್ರೇಮವಾಗುತ್ತದೆ. ಪ್ರವಾದಿವರ್ಯರು(ಸ) ಕಲಿಸಿರುವ ಪಾಠಗಳು ಮನುಷ್ಯ ಜೀವನದೊಂದಿಗೆ ಪ್ರಕಟವಾದಾಗ ಮಾತ್ರ ಆ ಪ್ರೇಮ ಪೂರ್ಣಗೊಳ್ಳುತ್ತದೆ. ಇವತ್ತು ಸಮಾಜದಲ್ಲಿ ಕಾಣುವ ಬಹಳಷ್ಟು ಸ್ವಲಾತ್ ಮಜ್ಲಿಸ್ಗಳಿಗೆ ಪ್ರವಾದಿ ಪ್ರೇಮದ ಪರಿಪೂರ್ಣ ರೂಪ ಎಂಬ ವ್ಯಾಖ್ಯೆ ನೀಡಲಾಗದು. ಜನರಿಗೆ ಇದರಲ್ಲಿ ನಿಷ್ಠೆ ಮತ್ತು ಆಸಕ್ತಿ ಇರುತ್ತದೆ. ಆದರೂ, ಬಡ್ಡಿ, ಜೂಜು, ವಂಚನೆ ಇತ್ಯಾದಿ ಕೆಡುಕುಗಳಿಂದ ಜನರನ್ನು ದೂರವಿರಿಸಲು ಈ ಸಭೆಗಳು ಶಕ್ತವಾದಾಗ ಪ್ರವಾದಿ ಪ್ರೇಮ ಪ್ರತಿಪಾದನೆಯ ಅರ್ಥ ವ್ಯಾಪ್ತಿಯ ಒಳಗೆ ಬರುತ್ತದೆ. ಯಾಕೆಂದರೆ ಜನ ಹೆಚ್ಚು ಮತ್ತು ಸುಲಭವಾಗಿ ಕೆಟ್ಟುಹೋಗುವುದು ಆರ್ಥಿಕ ವಿಚಾರಗಳಲ್ಲಿ. ಸಂಪತ್ತಿನ ಸಾಕ್ಷಾತ್ ಮಾಲಕ ಅಲ್ಲಾಹನೆಂಬುದು ಇಸ್ಲಾಮೀ ಆರ್ಥಿಕ ದರ್ಶನದ ಪ್ರಾಥಮಿಕ ತತ್ವವಾಗಿದೆ. “ಆಕಾಶಗಳಲ್ಲೂ ಭೂಮಿಯಲ್ಲೂ ಇರುವುದೆಲ್ಲವೂ ಅಲ್ಲಾಹನದು. ನಿಶ್ಚಯವಾಗಿಯೂ ಅಲ್ಲಾಹನು ನಿರಪೇಕ್ಷನೂ ಸ್ವಯಂ ಸ್ತುತ್ಯರ್ಹನೂ ಆಗಿರುತ್ತಾನೆ.” (31:26). ಪ್ರವಾದಿಪ್ರೇಮವು ಪ್ರವಾದಿಯನ್ನು ಪ್ರವಾದಿಯೆಂದು ಗುರುತಿಸಲು ಸಶಕ್ತವಾಗಿರಬೇಕು. ಹೀಗಾದಾಗ ಆ ಪ್ರೇಮವು ಕಾರ್ಯಶುದ್ಧಿ ಮತ್ತು ಜೀವನ ಶುದ್ಧಿಯಾಗುವುದು.
ಆರ್ಥಿಕ ತ್ಯಾಗ ಮತ್ತು ಪ್ರವಾದಿ ಪ್ರೇಮ:
ಅಲ್ಲಾಹನ ಸೃಷ್ಟಿಗಳನ್ನು ಪ್ರೀತಿಸುವುದು, ಅವರಿಗಾಗಿ ನಿಮ್ಮ ಅರ್ಹತೆಯನ್ನು ವ್ಯಯಿಸುವುದು ಪ್ರವಾದಿ ಪ್ರೇಮದ ವಿಸ್ತೃತ ಮಾದರಿಗೆ ಸೇರುತ್ತದೆ. ಅಲ್ಲಾಹನನ್ನು ಮತ್ತು ಆತನ ಪ್ರವಾದಿಯನ್ನು ಪ್ರೀತಿಸುವವನು ಜಿಪುಣನಾಗಲು ಸಾಧ್ಯವಿಲ್ಲ. ಝಕಾತ್ ಬಡವರ ಹಕ್ಕು. ಯಾವ ಶ್ರೀಮಂತನು ಈ ಹಕ್ಕನ್ನು ಪಾಲಿಸುತ್ತಾನೋ ಅವನು ಪ್ರವಾದಿ(ಸ)ಯವರನ್ನು ತುಂಬ ಪ್ರೀತಿಸಿದನು.
ಪವಿತ್ರ ಕುರ್ಆನ್ ಹೀಗೆ ಹೇಳುತ್ತದೆ: “ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಮೇಲೆ ವಿಶ್ವಾಸ ಇರಿಸಿರಿ. ಅವನು ಯಾವ ವಸ್ತುಗಳ ಮೇಲೆ ನಿಮ್ಮನ್ನು ಪ್ರತಿನಿಧಿಯಾಗಿ ಮಾಡಿರುವನೋ ಅವುಗಳಿಂದ ಖರ್ಚು ಮಾಡಿರಿ. ನಿಮ್ಮ ಪೈಕಿ ಸತ್ಯವಿಶ್ವಾಸ ಸ್ವೀಕರಿಸುವವರಿಗೆ ಮತ್ತು ಸಂಪತ್ತನ್ನು ಖರ್ಚು ಮಾಡುವವರಿಗೆ ಮಹಾ ಪ್ರತಿಫಲವಿದೆ.” (57:7) ಅಲ್ಲಾಹನು ನೀಡಿರುವ ಧನದಿಂದ ವ್ಯಯಿಸಿರಿ ಎಂಬುವುದು ಇಲ್ಲಿ ಪವಿತ್ರ ಕುರ್ಆನಿನ ಸ್ಪಷ್ಟ ಆದೇಶ. ಮನುಷ್ಯನಿಗೆ ಶ್ರೀಮಂತರಿಂದ ಅವರ ಹಕ್ಕು ನೀಡುವ ವಿಚಾರವಾಗಿದೆ. ಇಷ್ಟು ಮಾತ್ರವಲ್ಲ ಝಕಾತ್ ಸಂಗ್ರಹಿಸುವಲ್ಲಿಯೂ ಪ್ರವಾದಿ ಪ್ರೇಮ ಇದೆ.
ಅಬೂಬಕರ್(ರ) ರವರು ಪ್ರಥಮ ಖಲೀಫರಾಗಿ ಆಯ್ಕೆಗೊಂಡಾಗ ಕೆಲವರು ಝಕಾತ್ ಕೊಡಲು ನಿರಾಕರಿಸಿದರು. ಖಲೀಫರಾಗಿ ಅವರು ಹೊರಡಿಸಿದ ಘೋಷಣೆಯಲ್ಲಿಯೂ ಅಚಲ ಪ್ರವಾದಿ ಪ್ರೇಮ ಮತ್ತು ವಿಶ್ವಾಸ ಕಾಣಬಹುದು. ಮುಹಮ್ಮದರಿಗೆ(ಸ) ಕೊಟ್ಟ ಒಂದು ತುಂಡು ಹಗ್ಗಕ್ಕಾದರೂ ನಾನು ಯುದ್ಧವೇ ಮಾಡುವೆ ಎಂದು ಖಲೀಫ ಅಬೂಬಕರ್ ಘೋಷಿಸುತ್ತಾರೆ. ಅಂದರೆ; ಪ್ರವಾದಿಯವರು(ಸ) ಸಮಾಜಕ್ಕೆ ಹೇಳಿದ ಝಕಾತ್ನಲ್ಲಿ ಸಿಗುವುದು ಒಂದು ತುಂಡು ಹಗ್ಗವಾದರೂ ಅದು ಕೊಡಲೇಬೇಕು ಎಂಬ ಘೋಷಣೆ ಅದಾಗಿತ್ತು. ಇಸ್ಲಾಮಿನ ವಿಶ್ವಾಸದೊಂದಿಗೆ ಪ್ರವಾದಿ ಪ್ರೇಮ ಇಷ್ಟು ಆಳವಾಗಿ ಬೆಸೆದುಕೊಳ್ಳುತ್ತದೆ. ಇವತ್ತು ಪ್ರವಾದಿಯವರು(ಸ) ಹೇಳಿದ್ದಾರೆ ಎಂದು ಬಹಳಷ್ಟು ಬೋಧಿಸುವುದಿದೆ. ತಮ್ಮ ವಿಚಾರದಲ್ಲಿ ಅದನ್ನು ಪಾಲಿಸದೆ ದೂರ ಇರುವುದಿದೆ. ಇದು ಪ್ರವಾದಿ ಪ್ರೇಮ ಎಂದು ಬೋರ್ಡು ಬರೆದಿಟ್ಟ ಹಾಗೆ ಆಗುವುದು, ಕ್ರಿಯೆಯಲ್ಲಿಲ್ಲದ್ದು ಹೇಳುವುದಕ್ಕೆ ಇರುವುದು ಅಷ್ಟೇ. ಬದಲಾಗಿ ಪ್ರವಾದಿ ಹೇಳಿದ್ದನ್ನು ಸಾಧ್ಯವಿರುವ ಕ್ಷೇತ್ರದಲ್ಲಿ ಪಾಲಿಸುವುದು ನಿಜವಾದ ಪ್ರವಾದಿ ಪ್ರೇಮ ಮತ್ತು ಪ್ರತಿಪಾದನೆಯಾಗಿದೆ. ಪ್ರವಾದಿ(ಸ) ಹೇಳಿದ್ದಾರೆ ಎಂದು ಇತರರಿಗೆ ಪಾಠ ಮಾಡಿ ತಮ್ಮನ್ನು ಅದಕ್ಕೆ ಮೀರಿದವರು ಎಂದು ವರ್ತನೆಯಲ್ಲಿ ತರುವುದು ಇಸ್ಲಾಮಿನ ಶಿಷ್ಟಾಚಾರ ಅಲ್ಲ.
ವಿಶ್ವಾಸ ಮತ್ತು ಪ್ರವಾದಿ ಪ್ರೇಮ:
ಇಸ್ರಾಅ್ ಘಟನೆ ನಡೆದಾಗ ಇಸ್ಲಾಮಿನ ವೈರಿ ಅಬೂಜಹಲ್ ಬಂದು ಹಝ್ರತ್ ಅಬೂಬಕರ್(ರ) ರವರಲ್ಲಿ ನೀನು ಇದನ್ನೂ ನಂಬುವೆಯಾ? ಎಂದು ಹಂಗಿಸಿದ್ದನು. ಈ ಘಟನೆಯ ವಿಷಯ ಹೇಳಿದವರು ಯಾರು ಎಂದು ಅಬೂಬಕರ್(ರ) ಪ್ರಶ್ನಿಸಿದಾಗ; ಮುಹಮ್ಮದ್(ಸ) ರವರು ಹೇಳಿರುವುದು ಎಂದು ತಿಳಿಸಿದನು. ಪ್ರವಾದಿಯವರು(ಸ) ಹೇಳಿದ್ದಾದರೆ ನಾನದನ್ನು ನಂಬುತ್ತೇನೆ ಎಂದು ಅಬೂಬಕರ್(ರ) ತಿಳಿಸಿದರು. ಇಲ್ಲಿ ಅಬೂಬಕರ್ರಿಗೆ ಪ್ರವಾದಿ(ಸ) ಎಷ್ಟು ಇಷ್ಟಪಾತ್ರರು ಎಂದರೆ, ಮಕ್ಕಾದಿಂದ ಸಾವಿರಾರು ಮೈಲು ದೂರದ ಬೈತುಲ್ ಮುಕದ್ದಿಸ್ಗೆ ಹೋಗಿ ಅಲ್ಲಿಂದ ಗಗನಾರೋಹನ ನಡೆಸಲಾಗಿದೆ ಎಂಬುದನ್ನು ಮೊದಲ ಸಲಕ್ಕೆ ಒಪ್ಪುವುದು ಕಷ್ಟ. ಆದರೆ, ಸಣ್ಣ ಹಿಂಜರಿಕೆ ಅಥವಾ ಅಳುಕು ಇಲ್ಲದೆಯೇ ಅದರ ಮೇಲೆ ವಿಶ್ವಾಸವಿಡುತ್ತಾರೆ. ಇದನ್ನು ಪ್ರವಾದಿ ಪ್ರೇಮ, ನಂಬಿಕೆ ಅಥವಾ ವಿಶ್ವಾಸ ಏನೂ ಬೇಕಾದರೂ ಕರೆಯಿರಿ. ಅಸಾಧ್ಯವಾದುದು ಎಂಬುವುದನ್ನು ಸಾಧ್ಯ ಎಂದು ಒಪ್ಪಿಕೊಳ್ಳುವುದು ಚಿಕ್ಕ ವಿಚಾರವಲ್ಲ. ಹೀಗಾಗಿ ಇತಿಹಾಸ ಅಬೂಬಕರ್ರನ್ನು ಸಿದ್ದೀಕುಲ್ ಅಕ್ಬರ್ ಎಂದು ಗುರುತಿಸಿದೆ. ಪ್ರವಾದಿಯವರ(ಸ) ಸತ್ಯಸಂಧತೆಯ ಮೇಲೆ ಅಚಲ ಭರವಸೆ, ಪ್ರೀತಿ ಗೌರವಾದರಗಳ ನಿಜವಾದ ಅಭಿವ್ಯಕ್ತಿ ಇದು.
ಇಂದಿನ ಸಮಾಜದಲ್ಲಿ ಪ್ರವಾದಿ ಪ್ರೇಮ ಮತ್ತು ವಿರೋಧ:
ಈ ಶೀರ್ಷಿಕೆಗೆ ಇಂದಿನ ಮದುವೆ ಆಚರಣೆಗಳನ್ನು ಒಂದು ಉದಾಹರಣೆಯಾಗಿ ಎತ್ತಿಕೊಳ್ಳಬಹುದು. ಬಹುತೇಕ ಮುಸ್ಲಿಮರ ಪಾಲಿಗೆ ಬಹುದೊಡ್ಡ ಬಾಧ್ಯತೆಯಾದ ಮದುವೆಗಳು ಪ್ರವಾದಿ(ಸ) ಕಲಿಸಿಕೊಟ್ಟ ಮಾದರಿಯಲ್ಲಿ ಇಂದಿಲ್ಲ. ಮನುಷ್ಯ ತನ್ನ ಸರಿಯಾದ ಜವಾಬ್ದಾರಿಯನ್ನು ಮದುವೆಯೊಂದಿಗೆ ಆರಂಭಿಸುತ್ತಾನೆ. ಆದರೆ, ಅಲ್ಲೇ ಪ್ರವಾದಿ ಮಾದರಿಯಂತೆ ಸಮಾಜ ನಡೆದುಕೊಳ್ಳುತ್ತಿಲ್ಲ.
ಪ್ರವಾದಿವರ್ಯರ(ಸ) ಶಿಕ್ಷಣದ ಪ್ರಕಾರ ಮದುವೆಯ ಸ್ವೀಕಾರ್ಹತೆಗೆ ಹಣ, ಪ್ರಭಾವ, ಆಸ್ತಿ ಅಂತಸ್ತುಗಳು ಯಾವುದೂ ಬೇಕಿಲ್ಲ; ಇಬ್ಬರು ಸಾಕ್ಷಿ ಇದ್ದರೆ ಸಾಕು. ಇಂದು ಸಾವಿರಾರು ಸಾಕ್ಷಿಗಳಿಲ್ಲದೆ ಮದುವೆಯೇ ಆಗುವುದಿಲ್ಲ. ಮಿತತ್ವ ಇಲ್ಲ. ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಸಾಲ ಮಾಡಿಯಾದರೂ ಮದುವೆ ಆಗುವುದು ಜೀವನ ಪೂರ್ತಿ ಅದನ್ನು ಪಾವತಿಸುವುದರಲ್ಲಿಯೇ ಕಳೆಯುವುದು ಹೊಸ ಪ್ರವೃತ್ತಿಯಾಗಿದೆ.
ಪ್ರವಾದಿವರ್ಯರು(ಸ) ತನ್ನಲ್ಲಿ ಅಲ್ಲಾಹನು ಆದೇಶಿಸಿದ ಒಂಬತ್ತು ಕಾರ್ಯಗಳಲ್ಲಿ ದಾರಿದ್ರ್ಯದಲ್ಲಿಯೂ ಶ್ರೀಮಂತಿಕೆಯಲ್ಲಿಯೂ ಮಿತತ್ವವನ್ನು ಪಾಲಿಸು ಎಂಬುದೊಂದಾಗಿದೆ. ಆದರೆ, ಈ ಸಮಾಜವು ಮದುವೆಯನ್ನೇ ಆರ್ಥಿಕ ದೃಷ್ಟಿಯಲ್ಲಿ ಸಂಕೀರ್ಣಗೊಳಿಸಿದೆ. ಅದ್ದೂರಿಯಾಗಿ ಎಲ್ಲವೂ ಆಗಬೇಕು ಎಂಬಲ್ಲಿಗೆ ಮದುವೆಗಳಲ್ಲಿ ಬಿದ್ಅತ್ಗಳು ವ್ಯಾಪಿಸಿದೆ. ಪ್ರವಾದಿವರ್ಯರು(ಸ) ಮದುವೆಯನ್ನು ಸುಲಭಗೊಳಿಸಿಕೊಟ್ಟಿದ್ದಾರೆ. ಇಂದಿನ ಸಮಾಜ ಹಲವು ಆಚಾರಗಳನ್ನು ತಂದು ಬಹಳ ದುಬಾರಿಗೊಳಿಸುತ್ತದೆ. ಇದನ್ನು ಪ್ರವಾದಿ ವಿರೋಧಕ್ಕೆ ಸಾಕ್ಷಿಭೂತ ಸ್ಥಿತಿ ಎಂದು ಹೇಳಬಹುದು.
ಯಾಕೆಂದರೆ ಮದುವೆ ಕಷ್ಟವಾದಾಗ ಸಹಜವಾಗಿ ವ್ಯಭಿಚಾರದ ಸುಲಭವಾಗುತ್ತದೆ. ಈ ಸ್ಥಿತಿ ಇರುವಾಗ ಮತ್ತು ಸಮಾಜದಲ್ಲಿ ಉಳಿಸಿಕೊಂಡಾಗ ಅದರ ಬಗ್ಗೆ ಧ್ವನಿಯೆತ್ತದೆ ಮೌನವಾಗಿ ಸಹಿಸುವುದು ಅಥವಾ ಅದನ್ನು ರೂಢಿಗೆ ತರುವುದು – ಇದರ ನಡುವೆ ಪ್ರವಾದಿ ಪ್ರೇಮದ ಕೆಟಗರಿಯನ್ನು ಸಾಂಕೇತಿಸಲು ಕಷ್ಟ ಆಗುತ್ತದೆ. ಮದುವೆ ಒಂದೇ ಅಲ್ಲ, ಮನೆ, ಮಸೀದಿ, ರಸ್ತೆ, ಕಟ್ಟಡ, ವಾಹನ ಎಲ್ಲವೂ ಸರಳತೆಯ ವ್ಯಾಖ್ಯೆಗೆ ಸಿಗುತ್ತಿಲ್ಲ. ಬನೂ ಇಸ್ರಾಯಿಲರು ಆಧುನಿಕರಾದಂತಹ ಸ್ಥಿತಿ ಇದುವೇ ಎಂಬ ಭಯವೂ ಕಾಡುತ್ತದೆ. ಇರಲಿ,
ಸಫಾಬೆಟ್ಟದಲ್ಲಿ ʻಯಾ ಸಬಾಹಾʼ ಎಂದು ಪ್ರವಾದಿಯವರು(ಸ) ಕರೆ ನೀಡಿದ್ದು ಒಂದು ಪರಿಷ್ಕೃತ ಮತ್ತು ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿತ್ತು. ಕೇವಲ ಮೂರ್ತಿಪೂಜೆ(ದೇವಸಹಭಾಗಿತ್ವ) ಯನ್ನು ಮಾತ್ರವಲ್ಲ ಸಮಾಜದಲ್ಲಿ ಇರುವ ಕೆಟ್ಟದ್ದನ್ನೂ ಕೈಬಿಟ್ಟು ಶುದ್ಧರಾಗಬೇಕೆಂಬ ಕರೆಯಾಗಿತ್ತು. ಇಂದಿನ ಬಿದ್ಅತ್ಗಳೆಂದರೆ ಸಮಾಜದ ಇಚ್ಛೆ, ದೈಹಿಕ ಇಚ್ಛೆಗಳದೇ ಕಾರುಬಾರು ನಡೆಸುವುದು. ಅದನ್ನು ಬಿಟ್ಟು ಪ್ರವಾದಿ ಪ್ರೇಮಕ್ಕೆ ಅರ್ಥ ನಿಜವಾದ ಕೊಡಬೇಕಿದೆ. ಅಷ್ಟೇ.












