ಪ್ರವಾದಿ(ಸ) ಮತ್ತು ಕ್ಷಮೆ

0
240

ಸನ್ಮಾರ್ಗ ವಾರ್ತೆ

✍️ ಸಬೀಹಾ ಫಾತಿಮಾ

ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರಲ್ಲಿ ನಿಮಗೊಂದು ಅತ್ಯುತ್ತಮ ಮಾದರಿ ಇತ್ತು (ಪವಿತ್ರ ಕುರ್‌ಆನ್- 33: 21)’ ಎಂದು ಸ್ವತಃ ಅಲ್ಲಾಹನು ಸರ್ಟಿಫಿಕೇಟ್ ನೀಡಿದ ವ್ಯಕ್ತಿತ್ವವದು. ಒಂದು ವೇಳೆ ಪ್ರವಾದಿಯವರ(ಸ) ಜೀವನದ ಪ್ರತಿಯೊಂದು ವಿಷಯವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಜೀವಿಸಲು ಪ್ರಯತ್ನಿಸಿದರೆ ನಮ್ಮನ್ನು ನಾವು ಸಜ್ಜನ ವ್ಯಕ್ತಿಗಳ ಸಾಲಿನಲ್ಲಿ ಸೇರಿಸಿಕೊಳ್ಳಲು ಅದುವೇ ಧಾರಾಳ ಸಾಕಾಗಬಹುದು.

ಕೋಪ ಎಂಬುದು ಮನುಷ್ಯನಿಂದ ಸಹಜವಾಗಿ ನಿಯಂತ್ರಿಸಲು ಸಾಧ್ಯವಾಗದ ವಿಷಯವಾಗಿದೆ. ಕೋಪಿಸಿಕೊಳ್ಳದ ವ್ಯಕ್ತಿಗಳೇ ಜಗತ್ತಿನಲ್ಲಿ ಇರಲಿಕ್ಕಿಲ್ಲ. ಕೋಪವನ್ನು ನಿಯಂತ್ರಿಸಬೇಕು ಮತ್ತು ಜನರ ತಪ್ಪುಗಳನ್ನು ಕ್ಷಮಿಸಬೇಕು ಎಂಬುದು ಇಸ್ಲಾಂ ಧರ್ಮವು ಅಪೇಕ್ಷಿಸುವ ಮಹತ್ವಪೂರ್ಣವಾದ ಸದ್ಗುಣವಾಗಿದೆ. ಸ್ವರ್ಗಕ್ಕೆ ಅರ್ಹವಾದ ಸತ್ಯವಿಶ್ವಾಸಿಗಳ ಗುಣವಿಶೇಷತೆಗಳನ್ನು ವರ್ಣಿಸುತ್ತಾ ಕುರ್‌ಆನ್ ಹೀಗೆ ಹೇಳುತ್ತದೆ:
ಓ ಪೈಗಂಬರರೇ, ನೀವು ಜನರೊಡನೆ ಹೀಗೆ ಹೇಳಿಬಿಡಿರಿ, “ನೀವು ನಿಜವಾಗಿಯೂ ಅಲ್ಲಾಹನನ್ನು ಪ್ರೀತಿಸುತ್ತೀರೆಂದಾದರೆ ನನ್ನ ಅನುಸರಣೆ ಮಾಡಿರಿ. ಅಲ್ಲಾಹ್ ನಿಮ್ಮನ್ನು ಪ್ರೀತಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅವನು ಮಹಾಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.” (ಕುರ್‌ಆನ್- 3 :34)

ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುವುದು, ಕೋಪವನ್ನು ನಿಯಂತ್ರಿಸುವುದು, ಕ್ಷಮಾಶೀಲತೆ ಈ ಗುಣಗಳು ಮನುಷ್ಯನನ್ನು ಸ್ವರ್ಗಕ್ಕೆ ಅರ್ಹಗೊಳಿಸುತ್ತದೆ.
ಪವಿತ್ರ ಕುರ್‌ಆನ್ ಇನ್ನೊಂದೆಡೆ ಪ್ರವಾದಿಯವ(ಸ)ರೊಂದಿಗೆ ಮತ್ತು ಆ ಮೂಲಕ ಸಕಲ ಮನುಷ್ಯರೊಂದಿಗೆ ಕ್ಷಮಾಶೀಲರಾಗಿರಿ ಸರ್ವವಿಧಿತ ಒಳಿತುಗಳನ್ನು ಬೋಧಿಸಿರಿ ಮತ್ತು ತಿಳಿಗೇಡಿಗಳೊಡನೆ ಜಗಳ ಆಡಬೇಡಿರಿ ಎಂದು ಉಪದೇಶಿಸಿದೆ.

ಕ್ಷಮೆಯ ಅತ್ಯುತ್ತಮ ಮಾದರಿ ಪ್ರವಾದಿಯವರ(ಸ) ಜೀವನಪೂರ್ತಿ ನಾವು ನೋಡಬಹುದಾಗಿದೆ. ಅವರು ತಮ್ಮ ವೈಯಕ್ತಿಕ ವಿಷಯಗಳಿಗಾಗಿ ಜನರೊಂದಿಗೆ ಕೋಪಿಸಿಕೊಳ್ಳುತ್ತಿರಲಿಲ್ಲ. ಪ್ರತೀಕಾರ ಎಸಗುತ್ತಿರಲಿಲ್ಲ. ಆದರೆ ವಿಷಯ ಜನರಿಗೆ ಸಂಬಂಧಪಟ್ಟಿದ್ದರೆ ಸಮುದಾಯಕ್ಕೆ ಸಮಾಜಕ್ಕೆ ತೊಂದರೆಯಾಗುವಂತಹ ವಿಷಯಗಳನ್ನು ಧೈರ್ಯವಾಗಿ ಎದುರಿಸಿದ್ದರು. ಯುದ್ಧವನ್ನು ಮಾಡಿದ್ದರು.

ಮಕ್ಕಾದಲ್ಲಿ ಪ್ರವಾದಿ ಮುಹಮ್ಮದರಿಗೆ(ಸ) ಅಲ್ಲಿಯ ನಿವಾಸಿಗಳು ಜೀವನವನ್ನು ಅಸಹನೀಯಗೊಳಿಸಿದಾಗ, ಅವರು ಆರಂಭದಲ್ಲಿ ತಾಯಿಫ್ ಎಂಬ ಪ್ರದೇಶಕ್ಕೆ ವಲಸೆ ಹೋದರು. ಆದರೆ ತಾಯಿಫ್ ಜನರು ಅವರಿಗೆ ಸಂರಕ್ಷಣೆಯನ್ನು ನೀಡುವುದರ ಬದಲಾಗಿ ಅವರನ್ನು ಪಡ್ಡೆ ಹುಡುಗರನ್ನು ಹಿಂದೆ ಬಿಟ್ಟು ಕಲ್ಲೆಸೆದು ಸತಾಯಿಸಿ ನೋಯಿಸಿ ಓಡಿಸಿ ಬಿಟ್ಟಿದ್ದರು. ಅವರಿಂದ ಪಾರಾಗಿ ಬಂದ ಪ್ರವಾದಿಯವ(ಸ) ರೊಂದಿಗೆ ತಾವಿಚ್ಚಿಸಿದರೆ ಎರಡು ಪರ್ವತಗಳನ್ನು ಢಿಕ್ಕಿ ಹೊಡೆಸಿ ಆ ನಿಷೇಧಿಗಳನ್ನು ಸರ್ವನಾಶ ಮಾಡಿಬಿಡುವುದಾಗಿ ದೇವಚರರು ಘೋಷಿಸಿದರು. ಆದರೆ ಪ್ರವಾದಿಯವರು(ಸ) ಅದಕ್ಕೆ ಒಪ್ಪಲಿಲ್ಲ. ಅವರನ್ನು ಕ್ಷಮಿಸುವಂತೆ ಅಲ್ಲಾಹನೊಂದಿಗೆ ಪ್ರಾರ್ಥಿಸಿದರು. ಅವರ ಮುಂದಿನ ತಲೆಮಾರಿನಲ್ಲಾದರೂ ಸತ್ಯದ ಬೆಳಕನ್ನು ಸ್ವೀಕರಿಸುವ ಜನರು ಬರಬಹುದು ಎಂಬ ಶುಭ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.

ಇದೇ ರೀತಿಯಲ್ಲಿ ಮಕ್ಕಾ ವಿಜಯದ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದರು(ಸ) ವಿಜಯಿಯಾಗಿ ಮಕ್ಕಾವನ್ನು ಪ್ರವೇಶಿಸುತ್ತಾ ನಾನಿಂದು ತಮ್ಮೊಂದಿಗೆ ಯಾವ ರೀತಿಯ ವರ್ತನೆಯನ್ನು ತೋರಿಸಬಹುದು ಎಂದು ತಾವು ನಿರೀಕ್ಷಿಸುತ್ತಿರುವಿರಿ ಎಂದು ಪ್ರಶ್ನಿಸಿದರು. ಅವರ ಬಾಯಿ ಕಟ್ಟಿತ್ತು. ಆದರೆ ಪ್ರವಾದಿಯವರು(ಸ) ನಾನು ಪ್ರವಾದಿ ಯೂಸುಫ್(ಅ) ತನ್ನ ಸಹೋದರರಿಗೆ ಹೇಳಿದಂತೆ ಹೇಳುವೆ, ನಾನು ಇಂದು ತಮ್ಮೆಲ್ಲರನ್ನು ಕ್ಷಮಿಸಿರುತ್ತೇನೆ ಎಂದು ಘಂಟಾಘೋಷವಾಗಿ ಸಾರಿ ಬಿಟ್ಟರು. ಅಧಿಕಾರ, ಆಡಳಿತ ಕೈಗೆ ಬಂದಿದ್ದರೂ ವಿಜಯಿಯಾಗಿ ಮರಳಿ ಬಂದಿದ್ದರೂ ತಮ್ಮನ್ನು ಕ್ಷಣ ಕ್ಷಣಕ್ಕೂ ಪೀಡಿಸಿದ್ದ ಹುಟ್ಟಿದ ಊರಿನಿಂದಲೇ ಓಡಿಸಿದ್ದ ಜನರನ್ನೆಲ್ಲ ಅವರು ಕ್ಷಮಿಸಿಬಿಟ್ಟರು. ಇತಿಹಾಸದುದ್ದಕ್ಕೂ ಈ ರೀತಿಯ ಕ್ಷಮೆಗೆ ಇನ್ನೊಂದು ಉದಾಹರಣೆಯನ್ನು ನೀಡಲಿಕ್ಕೆ ಸಾಧ್ಯವಿಲ್ಲ.

ಅದೇ ಸಂದರ್ಭದಲ್ಲಿ ಅನೇಕ ಘಟನೆಗಳು ನಡೆದವು. ಬದ್ರ್ ಯುದ್ಧದಲ್ಲಿ ಪ್ರವಾದಿಯವರ(ಸ) ಚಿಕ್ಕಪ್ಪ ಹಂಝರನ್ನು ಕೊಂದಿದ್ದ ವಹ್ಶಿಯೆಂಬ ವ್ಯಕ್ತಿ ಪ್ರವಾದಿ ಯವರ(ಸ) ಬಳಿಗೆ ಬರುತ್ತಾರೆ. ಪ್ರವಾದಿಯವರಿಗೆ(ಸ) ಅವರ ಪರಿಚಯವಿದ್ದರೂ ಅವರು ಯಾವ ರೀತಿಯ ಪ್ರತೀಕಾರವನ್ನು ಸ್ವೀಕರಿಸುವುದಿಲ್ಲ. ಬಹಳ ವಿಶಾಲ ಹೃದಯದಿಂದ ಅವರನ್ನು ಕ್ಷಮಿಸಿ ಬಿಡುತ್ತಾರೆ.

ಇದೇ ರೀತಿ ವಹ್ಶಿಗೆ, ಹಂಝರನ್ನು ವಧಿಸುವ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದ ಅಬೂಸೂಫಿಯಾನರ ಪತ್ನಿ ಹಿಂದ್ ಹಂಝರ ಮೃತ ಶರೀರದಿಂದ ಕರುಳನ್ನು ಹೊರತೆಗೆದು ಜಗಿದು ತನ್ನ ತಂದೆ ಮತ್ತು ಸಹೋದರನ ವಧೆಗೆ ಪ್ರತೀಕಾರವನ್ನು ತೀರಿಸಿದ್ದರು. ಇದನ್ನು ತಿಳಿದಿದ್ದರೂ ಪ್ರವಾದಿಯವರು ಹಿಂದ್‌ರನ್ನು ಕ್ಷಮಿಸಿದರು.

ಇಕ್ರಿಮ ಪ್ರವಾದಿ ಮುಹಮ್ಮದರ(ಸ) ಅತೀ ದೊಡ್ಡ ಶತ್ರುವಾಗಿದ್ದ ಅಬೂಜಹಲನ ಮಗನಾಗಿದ್ದರು. “ಅಜ್ಞಾನದ ತಂದೆ” ಎಂದು ಹೆಸರಿಸಲ್ಪಟ್ಟಿದ್ದ ಇವರನ್ನು ಪ್ರವಾದಿಯವರು ತನ್ನ ಕಾಲದ ಫಿರ್‌ಔನ್ ಎಂದು ಕೂಡ ವರ್ಣಿಸಿದ್ದರು. ಇಕ್ರಿಮ ತಂದೆಯೊಂದಿಗೆ ಸೇರಿ ಪ್ರವಾದಿ(ಸ) ಅವರನ್ನು ಬಹಳ ದ್ವೇಷಿಸಿದರು ಮತ್ತು ಪೀಡಿಸಿದರು. ಪ್ರವಾದಿಯವರನ್ನು(ಸ) ಹೀನೈಸುವ ಒಂದು ಅವಕಾಶವನ್ನು ಕೂಡ ಅವರು ಬಿಟ್ಟು ಕೊಟ್ಟಿರಲಿಲ್ಲ. ಬದ್ರ್ ಯುದ್ಧದಲ್ಲಿ ಅಬೂಜಹಲ್ ಕೊಲ್ಲಲ್ಪಟ್ಟ ಬಳಿಕ ಅವರು ಪ್ರವಾದಿಯವರ(ಸ) ಅತೀ ದೊಡ್ಡ ಶತ್ರುವಾಗಿ ಮಾರ್ಪಟ್ಟರು. ಅನೇಕ ಯುದ್ಧಗಳಲ್ಲಿ ಅವರ ವಿರುದ್ಧ ಸಂಚು ರೂಪಿಸಿದ ವೀರಾವೇಶದಿಂದ ಹೋರಾಡಿದ ಹಿನ್ನೆಲೆ ಅವರಿಗಿತ್ತು.

ಇಂತಹ ಇಕ್ರಿಮ ಪ್ರವಾದಿಯವರು(ಸ) ಮಕ್ಕಾದ ಮೇಲೆ ವಿಜಯವನ್ನು ಸಾಧಿಸಿದಾಗ ಮಕ್ಕಾದಿಂದ ಜಿದ್ದಾದ ಕಡೆಗೆ ಪಲಾಯನ ಮಾಡಲು ಹೊರಟರು. ಅವರ ಪತ್ನಿ ಉಮ್ಮು ಹಾಕಿಮ್ ಅವರನ್ನು ತಡೆದು ಹಿಂದೆ ಕರೆತರಲು ಪ್ರಯತ್ನಿಸಿದರು. ಅವರಿಗೆ ಪ್ರವಾದಿಯವರು(ಸ) ಸಾರ್ವತ್ರಿಕ ಕ್ಷಮಾದಾನ ನೀಡುತ್ತಿರುವ ವಿಷಯವನ್ನು ತಲುಪಿಸಿ ಹಿಂದಿರುಗಲು ಪ್ರೇರೇಪಿಸಿದರು. ತನ್ನ ಗತಕಾಲದ ಶತ್ರುವಿನಿಂದ ಭಯಭೀತರಾಗಿ ಹಿಂದಿರುಗಿದ ಇಕ್ರಿಮರನ್ನು ಪ್ರವಾದಿಯವರ(ಸ) ಸನ್ನಿಧಿಗೆ ಕರೆತಂದಾಗ ಅವರನ್ನು ಕೂಡ ಕ್ಷಮಿಸಿ ಬಿಡಲಾಯಿತು.

ಹೀಗೆ ಪ್ರವಾದಿಯವರ(ಸ) ಜೀವನದುದ್ದಕ್ಕೂ ಸಾಲು ಸಾಲು, ಕ್ಷಮೆ ನೀಡಿದ ಘಟನೆಗಳು ಕಂಡು ಬರುತ್ತವೆ. ಪವಿತ್ರ ಕುರ್‌ಆನ್ ಇದೇ ಸಂದೇಶವನ್ನು ನಮ್ಮ ಮುಂದಿರಿಸುತ್ತದೆ.
ಅಲ್ಲಾಹನು ನಿಮ್ಮನ್ನು ಕ್ಷಮಿಸಬೇಕೆಂದು ನೀವು ಇಚ್ಛಿಸುವುದಿಲ್ಲವೇ? ಅಲ್ಲಾಹ್ ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.” (ಸೂರ: ಅನ್ನೂರ್: 22)