ಪ್ರಾರ್ಥನೆಯ ಮನಃಶಾಸ್ತ್ರ

0
40

ಲೇಖಕಿ: ಖದೀಜ ನುಸ್ರತ್ ಅಬುಧಾಬಿ

ಸೃಷ್ಠಿಕರ್ತನೊಂದಿಗೆ ಮನುಷ್ಯನು ಪರಿಶುದ್ದ ಆಧ್ಯಾತ್ಮಿಕ ಮನಸ್ಸಿನಿಂದ ತನ್ನ ಕಷ್ಟ ನಷ್ಟಗಳಿಂದ ಮುಕ್ತಿ ಪಡೆಯಲು ಮತ್ತು ಇಹ ಪರಲೋಕದಲ್ಲಿ ಅವನ ಅನುಗ್ರಹವನ್ನು ಪಡೆಯಲು ಮಾಡುವಂತಹ ಧಾರ್ಮಿಕ ಕ್ರಿಯೆಗೆ ಪ್ರಾರ್ಥನೆಯೆನ್ನುತ್ತೇವೆ. ಅದು ವೈಯುಕ್ತಿಕವಾಗಿಯೂ ಆಗಿರಬಹುದು ಅಥವಾ ಸಾಮೂಹಿಕವಾಗಿಯೂ ಇರಬಹುದು. ಪ್ರಪಂಚದ ಎಲ್ಲ ಧರ್ಮಗಳಲ್ಲೂ ಪ್ರಾರ್ಥನೆಗೆ ಒಂದು ವಿಶಿಷ್ಟ ಸ್ಥಾನವಿದೆ. ಪ್ರತಿಯೊಂದು ಧರ್ಮಕ್ಕೆ ಸೇರಿದವರೂ ಕೂಡಾ ವಿವಿಧ ರೀತಿಯ ಪ್ರಾರ್ಥನೆಯನ್ನು ನಡೆಸುತ್ತಾರೆ. ಎಲ್ಲಾ ಧರ್ಮಗಳು ದೈನಂದಿನ ಮತ್ತು ಸಾಮೂಹಿಕ ಪ್ರಾರ್ಥನೆಗಳನ್ನು ಪ್ರೋತ್ಸಾಹಿಸುತ್ತದೆ.

ಪ್ರಾರ್ಥನೆಯು ಒಂದು ರೀತಿಯ ಆರಾಧನೆಯೂ, ದೇವ ಸ್ಮರಣೆಯೂ, ದೇವನನ್ನು ಪ್ರಶಂಸಿಸುವುದೂ, ಕೃತಜ್ಞತೆ ಸಲ್ಲಿಸುವುದೂ, ತಮ್ಮ ಅಗತ್ಯಗಳನ್ನು ಬೇಡುವುದೂ ಆಗಿದೆ. ಪ್ರಾರ್ಥನೆಯು ಮಾನವನ ಭಾವನಾತ್ಮಕ, ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಮಗೆ ಏನಾದರೂ ಬೇಕಾದಾಗ ಅಥವಾ ಅಗತ್ಯವಿದ್ದಾಗ ಮಾತ್ರ ಪ್ರಾರ್ಥಿಸುವುದಲ್ಲ. ಯಾವಾಗಲೂ ನಮ್ಮ ಮನಸ್ಸನ್ನು ಸರ್ವಶಕ್ತನ ಅಧೀನದಲ್ಲಿ ಕೇಂದ್ರೀಕರಿಸಬೇಕು. ಭೂಮಿ ಆಕಾಶಗಳ ಸರ್ವ ಲೋಕದ ಪ್ರಭುವೂ ಸೃಷ್ಟಿಕರ್ತನೂ ಪರಿಪಾಲಕನು ಕರುಣಾಮಯಿಯಾದ ಪ್ರಚಂಡ ಶಕ್ತಿಯೊಂದಿಗಿರುವ ನಮ್ಮ ಸಂಬಂಧವು ಆತಂಕ, ಚಿಂತೆ, ಭಯ, ಒಂಟಿತನವನ್ನು ನಿವಾರಿಸುವುದು. ಅವನು ಎಲ್ಲವನ್ನೂ ನೋಡುವವನೂ, ಆಲಿಸುವವನೂ ಆಗಿರುತ್ತಾನೆ.

ಓ ಪೈಗಂಬರರೇ, ನನ್ನ ದಾಸರು ನಿಮ್ಮೊಡನೆ ನನ್ನ ಬಗ್ಗೆ ಕೇಳಿದರೆ, ನಾನು ಅವರಿಗೆ ನಿಕಟವಾಗಿದ್ದೇನೆಂದೂ, ಪ್ರಾರ್ಥಿಸುವವನು ನನ್ನನ್ನು ಪ್ರಾರ್ಥಿಸಿದಾಗ ಅವನ ಪ್ರಾರ್ಥನೆಯನ್ನು ಆಲಿಸುತ್ತೇನೆಂದೂ ಅದಕ್ಕೆ ಉತ್ತರಿಸುತ್ತೇನೆಂದೂ ಅವರಿಗೆ ಹೇಳಿರಿ. ಆದುದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನ ಮೇಲೆ ವಿಶ್ವಾಸವಿರಿಸಲಿ. ಅವರು ಸನ್ಮಾರ್ಗ ಪಡೆಯಲೂಬಹುದು.” (ಪವಿತ್ರ ಕುರ್ ಆನ್ 2 :186)

ಪ್ರಾರ್ಥನೆಯೆಂದರೆ ಕೆಲವು ಪದಗಳನ್ನು ಕಂಠಪಾಠ ಮಾಡಿ ಉಚ್ಚರಿಸುವುದು ಮಾತ್ರವಲ್ಲ. ನಮ್ಮ ಮನಸ್ಸಿನ ಅಂತರಾಳದಿಂದ ಭಯ, ನಿರಾಶೆ, ದುಃಖ, ನೋವು, ಬೇಡಿಕೆಗಳನ್ನು ಆತ್ಮಸಮರ್ಪಣೆಯೂಂದಿಗೆ ನಮ್ಮ ಸೃಷ್ಠಿಕರ್ತನ ಮುಂದಿಡುವುದಾಗಿದೆ. ಪ್ರಾರ್ಥನೆಯು ಮಾನಸಿಕ ಖಿನ್ನತೆ, ಒತ್ತಡ, ದುಃಖವನ್ನು ನಿಭಾಯಿಸುವ ಸಾಮರ್ಥ್ಯವನ್ನುಂಟು ಮಾಡುತ್ತದೆ. ಪ್ರಾರ್ಥನೆಯು ಮನುಷ್ಯನನ್ನು ಸ್ವಾಲಂಭಿಯನ್ನಾಗಿ, ವಿನಯಶೀಲನನ್ನಾಗಿಯೂ ಮಾಡುತ್ತದೆ. ಪ್ರಾರ್ಥನೆ ರೋಗ ನಿರೋಧಕ ಶಕ್ತಿ, ಯೊಗ ಕ್ಷೇಮವನ್ನು ಹೆಚ್ಚಿಸುತ್ತದೆ. ತಲೆ ನೋವು ಮತ್ತು ಇತರ ನೋವನ್ನು ನಿಯಂತ್ರಿಸಲು ನಿಭಾಯಿಸಲು ಸಹಾಯ ಮಾಡುತ್ತದೆ. ಸಾಮಾನ್ಯ ಜ್ಞಾನವನ್ನು ಮತ್ತು ಸಾಮಾಜಿಕ ಹಾಗೂ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ. ಸಂತೋಷ ಮತ್ತು ಸಂತೃಪ್ತಿಯನ್ನುಂಟು ಮಾಡುತ್ತಾ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಯನ್ನು ಬೆಳೆಸುತ್ತದೆ. ವೈಯಕ್ತಿಕ ಕೆಲಸಗಳನ್ನು ಮಾಡಲು ಮತ್ತು ಕಷ್ಟ, ಪರೀಕ್ಷೆಗಳನ್ನು ಎದುರಿಸಲು ಧೈರ್ಯ, ಆತ್ಮವಿಶ್ವಾಸ, ಹುರುಪು, ಉತ್ಸಾಹ, ಚೈತನ್ಯ ನೀಡುತ್ತದೆ.

ಪ್ರಾರ್ಥನೆಯು ಸ್ವಯಂ ನಿಯಂತ್ರಣದ ಶಕ್ತಿಯನ್ನು ಪ್ರಬಲಗೊಳಿಸುತ್ತದೆ. ಪ್ರಾರ್ಥನೆಯು ಸ್ಮರಣೆ, ನೆನಪು ಶಕ್ತಿಯನ್ನು ಹೆಚ್ಚಿಸುತ್ತದೆ. ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಅತ್ಯಾಸೆಯನ್ನು ನಿಯಂತ್ರಿಸುತ್ತದೆ. ಪ್ರಾರ್ಥನೆಯು ಕೋಪ ಮತ್ತು ಅನಗತ್ಯ ಆಲೋಚನೆಗಳನ್ನು ನಿಯಂತ್ರಿಸುತ್ತದೆ. ಪ್ರಲೋಭನೆಯಿಂದ ದೂರವಿರಲು, ಮನಸ್ಸಿನಲ್ಲಿರುವ ಆಕ್ರಮಣಕಾರಿ ಭಾವನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಕೆಟ್ಟ ಪರಿಸ್ಥಿತಿಯನ್ನು ಕೂಡಾ ಉತ್ತಮ ದೃಷ್ಟಿಕೋನದಿಂದ ನೋಡುವಂತಹ ಭಾವನೆಯನ್ನುಂಟು ಮಾಡುತ್ತದೆ. ಕೆಟ್ಟ ಚಟಗಳ ಮತ್ತು ಶಕ್ತಿಗಳ ವಿರುದ್ದ ಹೋರಾಡುವವರಿಗೆ ಪ್ರಾರ್ಥನೆಯು ಬ್ರಹ್ಮಾಸ್ತ್ರವಾಗಿರುತ್ತದೆ. ಆಂತರಿಕವಾಗಿ ಗಮನ ಹರಿಸಲು ಮತ್ತು ಶಾಂತವಾಗಿ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ನಮ್ಮ ಪ್ರಾರ್ಥನೆಯು ಸ್ವೀಕೃತವಾದರೂ ಆಗದಿದ್ದರೂ ಕೂಡಾ ನಾವು ಮಾಡುವ ಪ್ರಾರ್ಥನೆಗಳಿಂದ ನಮ್ಮ ಎಲಾ ಸಮಸ್ಯೆಗಳು ಖಂಡಿತವಾಗಿಯು ಪರಿಹಾರವಾಗಿತ್ತದೆ ಎಂಬ ದೃಢ ವಿಶ್ವಾಸ ನಮ್ಮಲ್ಲಿರಬೇಕು. ನಮ್ಮ ಪ್ರಾರ್ಥನೆಗೆ ಕೆಲವೊಮ್ಮೆ ಶೀಘ್ರವಾಗಿ, ತಡವಾಗಿ ಉತ್ತರ ಲಭಿಸಬಹುದು ಅಥವಾ ನಮ್ಮ ಮರಣಾನಂತರ ಖಂಡಿತವಾಗಿಯೂ ಉತ್ತಮ ಪ್ರತಿಫಲ ಸಿಗುವುದು.

“ಪ್ರಾರ್ಥನೆಯು ಆರಾಧನೆಯ ಸತ್ವವಾಗಿದೆ.” -ಪ್ರವಾದಿ ಮುಹಮ್ಮದ್(ಸ)

ಇನ್ನೊಬ್ಬರ ಅನುಪಸ್ಥಿಯಲ್ಲಿ ಅವರ ಒಳಿತಿಗಾಗಿ ಪ್ರಾರ್ಥಿಸುವುದನ್ನು ಇಸ್ಲಾಮ್ ಧರ್ಮವು ಪ್ರೋತ್ಸಾಹಿಸುತ್ತದೆ. ನಾವು ಇನ್ನೊಬ್ಬರಿಗಾಗಿ ಪ್ರಾರ್ಥಿಸುವಾಗ ದೇವಚರರು ನಮ್ಮ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಪ್ರಾರ್ಥನೆಯು ಸಂಬಂಧವನ್ನು ಉತ್ತಮಗೊಳಿಸುತ್ತದೆ. ನಮ್ಮ ಆಪ್ತ ಸಂಬಂಧಿಕರು, ಸ್ನೇಹಿತರಿಗೆ ಪ್ರಾರ್ಥಿಸುವುದರಿಂದ ಪ್ರೀತಿ ಮತ್ತು ವಿಶ್ವಾಸ ಹೆಚ್ಚುತ್ತದೆ. ಇನ್ನೊಬ್ಬರ ಇಹಪರ ಜೀವನದ ಒಳಿತಿಗಾಗಿ ಪ್ರಾರ್ಥಿಸಬೇಕು. ಪರಿಚಯ ಇರುವವರಿಗೂ, ಪರಿಚಯ ಇಲ್ಲದವರಿಗೂ, ಜೀವಂತವಿರುವವರಿಗೂ, ಮರಣ ಹೊಂದಿದವರಿಗೂ ಪ್ರಾರ್ಥಿಸಬೇಕು. ಮಾತಪಿತರು ಮಕ್ಕಳಿಗೆ ಮತ್ತು ಮಕ್ಕಳು ಮಾತಾಪಿತರಿಗೆ ತಮ್ಮ ದೈನಂದಿನ ಜೀವನದಲ್ಲಿ ಪ್ರಾರ್ಥಿಸುವುದಕ್ಕೆ ಬಹಳ ಪ್ರಾಮುಖ್ಯತೆ ಇದೆ.

ಹಸಿವು ಮತ್ತು ಬಾಯಾರಿಕೆ ಹೋಗಲಾಡಿಸಲು ಶರೀರಕ್ಕೆ ನೀರು ಮತ್ತು ಆಹಾರ ಅಗತ್ಯವಿರುವಂತೆ ಪ್ರಾರ್ಥನೆಯು ಮನಸ್ಸಿನ ಇಂಧನವಾಗಿರುತ್ತದೆ. ಅದು ಒಂದು ರೀತಿಯಲ್ಲಿ ಮನಸ್ಸಿನ ಶುದ್ಧೀಕರಣವೂ ಆಗಿದೆ. ಪ್ರಾರ್ಥನೆ ಅವೈಜ್ಞಾನಿಕವೆಂದು ಹೇಳುವುದೂ ಸರಿಯಲ್ಲ. ಅದಕ್ಕೆ ವೈದ್ಯಕೀಯ ಮನಃಶಾಸ್ತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದು ಅನೇಕ ಮಾನಸಿಕ ರೋಗಗಳಿಗೆ ಉತ್ತಮ ಔಷಧಿಯಾಗಿದೆ. ಮಾನವರೊಂದಿಗೆ ನೀವು ಏನಾದರೊಂದು ವಸ್ತು ಪದೇ ಪದೇ ಬೇಡುವಾಗ ಅವರು ಬೇಸರಗೊಳ್ಳಬಹುದು. ಆದರೆ ದೇವನೊಂದಿಗೆ ಹಗಲು ರಾತ್ರಿ ನಿರಂತರ ಬೇಡುವಾಗ ದಾಸನ ಸಂಬಂಧ ಮತ್ತಷ್ಟ ನಿಕಟವಾಗುತ್ತದೆ. ಹಗಲು ರಾತ್ರಿ ಯಾವುದೇ ಸಮಯದಲ್ಲಿ ನಮ್ಮ ಬೇಡಿಕೆಗಳಿಗೆ ಪ್ರಾರ್ಥಿಸಬಹುದಾದರೂ ರಾತ್ರಿಯ ಅಂತಿಮ ಜಾವದಲ್ಲಿ ಮಾಡುವ ಪ್ರಾರ್ಥನೆ ಮಾನವರ ಹೆಚ್ಚಿನ ಮಾನಸಿಕ ಸಂಘರ್ಷಗಳಿಗೆ ಪರಿಹಾರ ನೀಡುವುದು.

LEAVE A REPLY

Please enter your comment!
Please enter your name here