ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಅಯೋಧ್ಯೆ ರಾಮಮಂದಿರ ಸಮರ್ಪಣಾ ಸಮಾರಂಭ ಅಪೂರ್ಣ ಹಾಗೂ ಸಂಪ್ರದಾಯಗಳನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿಕೆ ನೀಡಿರುವ ಶಂಕರಾಚಾರ್ಯರ ವಿರುದ್ಧ ವಿಶ್ವ ಹಿಂದೂ ಪರಿಷತ್ ಅಸಮಾಧಾನ ವ್ಯಕ್ತಪಡಿಸಿದ್ದು, 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠೆಯಲ್ಲಿ ಯಾವುದೇ ವಿಧಿವಿಧಾನ ಉಲ್ಲಂಘನೆಯಾಗಿಲ್ಲ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದರು.
ಹಿಂದೂ ಧರ್ಮ ಆಚಾರಗಳ ಪ್ರಕಾರ ಮಂದಿರ ಪೂರ್ಣಗೊಂಡ ಮೇಲೆ ದೇವ ಪ್ರತಿಷ್ಠೆ ಮಾಡಬೇಕು ಎಂದು ನಿಯಮ ಇಲ್ಲ. ಗರ್ಭಗೃಹ ಪೂರ್ತಿಯಾದರೆ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದು ಎಂದು ಅಲೋಕ್ ಕುಮಾರ್ ಎಎನ್ಐಯೊಂದಿಗೆ ಹೇಳಿದರು.
ನಿರ್ಮಾಣ ಪೂರ್ಣಗೊಳ್ಳದೆ ಮಂದಿರದ ಪ್ರಾಣ ಪ್ರತಿಷ್ಠೆ ಆಚಾರದ ಉಲ್ಲಂಘನೆ ಎಂದು ನಾಲ್ಕು ಮಠಗಳ ಶಂಕರಾಚಾರ್ಯರು ಹೇಳಿದ್ದು ಇದನ್ನು ಪ್ರತಿಪಕ್ಷ ಪಾರ್ಟಿಗಳು ಎತ್ತಿ ಹಿಡಿದು ಬಿಜೆಪಿಯನ್ನು ಪ್ರತಿರೋಧಿಸುತ್ತಿದೆ.
ಬಿಜೆಪಿಗೆ ಉತ್ತರ ಇಲ್ಲದ ಪರಿಸ್ಥಿತಿಯಲ್ಲಿ ವಿಹಿಂಪ ಮುಂದೆ ಬಂದಿದೆ. ಎರಡು ವಿಷಯ ಹೇಳಲಿಕ್ಕಿದೆ ಒಂದು ಬಾಲ ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಕೆಳ ಅಂತಸ್ತಿನಲ್ಲಿ ನಡೆಯುತ್ತಿದೆ. ಅದರ ನಿರ್ಮಾಣ ಕಾಮಗಾರಿ ಮುಗಿದಿದೆ. ಎರಡನೇ ವಿಷಯ ಹಿಂದೂ ಮತಗಳ ಆಚಾರದಂತೆ ಮಂದಿರದ ಕೆಲಸ ಎಲ್ಲ ಮುಗಿಸಿದ ಮೇಲೆ ಮಾತ್ರ ದೇವ ಪ್ರತಿಷ್ಠಾಪನೆ ಆಗಬೇಕೆಂದು ಹಿಂದೂ ಧರ್ಮದಲ್ಲಿಲ್ಲ, ಗರ್ಭಗುಡಿ ಪೂರ್ತಿಯಾದರೆ ದೇವ ಪ್ರತಿಷ್ಠಾಪನೆ ಆಗುತ್ತದೆ ಎಂದು ಅವರು ಹೇಳಿದರು.












