ಬೀರ್ಭೂಮ್ ಹತ್ಯಾಕಾಂಡ| ಜೀವಂತ ಸುಡುವ ಮುನ್ನ ಕ್ರೂರವಾಗಿ ಥಳಿಸಲಾಗಿತ್ತು: ಮರಣೋತ್ತರ ಪರೀಕ್ಷಾ ವರದಿ

0
361

ಮೃತರ ಕುಟುಂಬಗಳನ್ನು ಸಂದರ್ಶಿಸಿದ ಮಮತಾ ಬ್ಯಾನರ್ಜಿ; ಸರಕಾರಿ ಉದ್ಯೋಗ, ಪರಿಹಾರ ಘೋಷಣೆ

ಸನ್ಮಾರ್ಗ ವಾರ್ತೆ

ಕೊಲ್ಕತಾ: ಪಶ್ಚಿಮಬಂಗಾಳದ ಬಿರ್ಭೂಮ್‌ ಜಿಲ್ಲೆಯಲ್ಲಿ ಮಹಿಳೆಯರು ಮಕ್ಕಳ ಸಹಿತ 8 ಮಂದಿಯನ್ನು ಜೀವಂತ ಸುಟ್ಟ ಪ್ರಕರಣದಲ್ಲಿ ಬೆಂಕಿ ಹಚ್ಚುವ ಮೊದಲು ಕ್ರೂರವಾಗಿ ಥಳಿಸಲಾಗಿತ್ತು ಎಂದು ಪೋಸ್ಟ್ ಮಾರ್ಟಂ ವರದಿಯಲ್ಲಿ ಬಹಿರಂಗವಾಗಿದೆ. ಮನೆಗಳಿಂದ ಸಿಕ್ಕ ಕರಕಲಾದ ಮೃತದೇಹದ ಪರಿಶೀಲನೆಯಲ್ಲಿ ಜೀವಂತ ಸುಡುವ ಮೊದಲು ಬಲಿಪಶುಗಳನ್ನು ಕ್ರೂರವಾಗಿ ಹೊಡೆದಿರುವುದು ಫಾರೆನ್ಸಿಕ್ ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಸೋಮವಾರ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದ್ದು, ಇದುವರೆಗೆ ಘಟನೆಗೆ ಸಂಬಂಧಿಸಿ 20 ಮಂದಿಯನ್ನು ಬಂಧಿಸಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಣಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹತ್ಯೆಗಾರರನ್ನು ಬೇಟೆಯಾಡುತ್ತೇವೆ, ಅವರು ಶರಣಾಗದಿದ್ದಲ್ಲಿ ಬಂಧಿಸಲಾಗುವುದು ಮತ್ತು ಪೊಲೀಸರು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಲಿದ್ದಾರೆ ಎಂದು ಗುರುವಾರ ಹೇಳಿದ್ದಾರೆ.

ಮಂಗಳವಾರ 8 ಮಂದಿಯನ್ನು ಜೀವಂತವಾಗಿ ಸುಟ್ಟ ಬೊಗ್ಟುಯಿ ಗ್ರಾಮಕ್ಕೆ ಇಂದು ತೆರಳಿದ ಮಮತಾ ಬ್ಯಾನರ್ಜಿ,10 ಕುಟುಂಬದ ಸದಸ್ಯರಿಗೆ ಖಾಯಂ ಸರ್ಕಾರಿ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದಾರೆ. ರಾಮಪುರಹತ್ ಹತ್ಯಾಕಾಂಡಕ್ಕೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ ಮಮತಾ ಬ್ಯಾನರ್ಜಿ, ಮೃತರ ಸಂಬಂಧಿಕರಿಗೆ ತಲಾ 5 ಲಕ್ಷ ರೂ ಹಾಗೂ ಹಾನಿಯಾದ ಮನೆಗಳ ದುರಸ್ತಿಗಾಗಿ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದರು. ಗಾಯಾಳುಗಳಿಗೆ 50, 000ರೂ. ಪ್ರಕಟಿಸಿದರು.