ಟಿಪ್ಪು ಕಟೌಟ್, ಡಿಜೆ, ರಸ್ತೆ ತಡೆ: ಮೀಲಾದ್ ಆಚರಣೆ ಹೀಗೇಕೆ?

0
375

✍️ ಏ.ಕೆ. ಕುಕ್ಕಿಲ

ಮೀಲಾದ್ ರ‍್ಯಾಲಿ ಸಾಗುತ್ತಿತ್ತು. ಪುಟ್ಟ ಮಕ್ಕಳು ದಫ್ ಬಾರಿಸುತ್ತಾ ರಸ್ತೆಯ ಬದಿಯಲ್ಲಿ ಶಿಸ್ತಾಗಿ ನಡೆಯುತ್ತಿದ್ದರು. ಆ ದಫ್‌ಗೆ ಪೂರಕವಾಗಿ ಹಿನ್ನೆಲೆ ಹಾಡು ಸೊಗಸಾಗಿ ಕೇಳಿ ಬರುತ್ತಿತ್ತು. ಇದೇವೇಳೆ, ರಸ್ತೆಗೆ ತಾಗಿಕೊಂಡಿರುವ ಎರಡಂತಸ್ತಿನ ಮನೆಯ ಬಾಲ್ಕನಿಯಲ್ಲಿ ಸುಮಾರು 60ರಿಂದ 70 ವರ್ಷ ವಯಸ್ಸಿನ ಹಿರಿಯರೊಬ್ಬರು ಈ ರ‍್ಯಾಲಿಯನ್ನು ವೀಕ್ಷಿಸುತ್ತಾ ನಿಂತಿದ್ದರು. ಅವರೊಳಗೂ ಒಂದು ಪುಳಕ. ಮಕ್ಕಳ ಶಿಸ್ತಿನ ನಡೆ, ದಫ್, ಹಾಡು ಎಲ್ಲವೂ ಅವರೊಳಗೂ ರೋಮಾಂಚನವನ್ನು ಹುಟ್ಟುಹಾಕಿತು. ನಿಧಾನಕ್ಕೆ ಅವರೂ ಆ ಹಾಡಿಗೆ ಮತ್ತು ದಫ್‌ಗೆ ಅನು ರೂಪವಾಗಿ ಹಾಡತೊಡಗಿದರು. ದಫ್ ಬಾರಿಸುವ ರೀತಿಯಲ್ಲಿ ತಾವೂ ಕೈಸನ್ನೆ ಮೂಲಕ ದಫ್ ಬಾರಿಸುತ್ತಾ ಸಂತೋಷ ವ್ಯಕ್ತಪಡಿಸಿದರು. ಮೊಬೈಲ್ ಕ್ಯಾಮರಾದಲ್ಲಿ ತಾನು ಸೆರೆಯಾಗುತ್ತಿದ್ದಾನೆ ಅನ್ನುವುದೂ ಅವರಿಗೆ ಗೊತ್ತಿರಲಿಲ್ಲ…

ಕೇರಳದ ಮೀಲಾದ್ ರ‍್ಯಾಲಿಯ ಸಮಯದಲ್ಲಿ ಕಂಡುಬಂದ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಬಹಳವೇ ಸದ್ದು ಮಾಡಿತು. ಅಸಂಖ್ಯ ಮಂದಿ ಈ ವೀಡಿಯೋ ವೀಕ್ಷಿಸಿದರು. ಒಬ್ಬರಿಗಿಂತ ಒಬ್ಬರು ಚೆಲುವಾದ ಅಭಿಪ್ರಾಯ ವ್ಯಕ್ತಪಡಿಸಿದರು. ಧರ್ಮದ ಆಚರಣೆಯು ಎಷ್ಟು ಸಹಜವಾಗಿ ಮತ್ತು ನೋಡುಗರಲ್ಲಿ ಎಂಥ ಚೈತನ್ಯವನ್ನು ಮೂಡಿಸಬಲ್ಲುದು ಎಂಬುದಕ್ಕೆ ಈ ವೀಡಿಯೋ ಸಾಕ್ಷಿ ಎಂದು ಅನೇಕ ಮಂದಿ ಬರೆದರು. ಒಂದು ರ‍್ಯಾಲಿ ಹೇಗಿರಬೇಕು ಎಂಬುದಕ್ಕೆ ಈ ವೀಡಿಯೋ ಪುರಾವೆ ಎಂದೂ ಬರೆದರು. ಪ್ರವಾದಿಯನ್ನು(ಸ) ಅತ್ಯಂತ ಸರಳವಾಗಿ ಮತ್ತು ಯಾವ ನೇರ ಬೋಧನೆಯೂ ಇಲ್ಲದೇ ಅರ್ಥ ಮಾಡಿಸಿದ ಹೃದಯಂಗಮ ಘಟನೆ ಎಂದೂ ಅನೇಕರು ಬರೆದರು. ಅಂದಹಾಗೆ,

ಈ ಬಾರಿಯ ಮೀಲಾದ್ ಆಚರಣೆಯ ಕೆಲವು ಕಾರಣಗಳಿಗಾಗಿ ಚರ್ಚೆಯಲ್ಲಿದೆ. ಬೆಂಗಳೂರಿನ ಬಸವನಗುಡಿಯಿಂದ ಚಿಕ್ಕಮಗಳೂರಿನ ವರೆಗೆ, ಬಾಗಲಕೋಟೆಯಿಂದ ಶಿವಮೊಗ್ಗದ ವರೆಗೆ ಮತ್ತು ಮಹಾರಾಷ್ಟ್ರ ಮತ್ತಿತರ ರಾಜ್ಯಗಳವರೆಗೆ ಈ ಚರ್ಚೆ ವಿಸ್ತರಿಸಿದೆ. ಪ್ರವಾದಿ ಮುಹಮ್ಮದ್‌ರ(ಸ) ಮೇಲೆ ಪ್ರೀತಿಯಿಟ್ಟು ಮಾಡುವ ಕಾರ್ಯಕ್ರಮಗಳು ಹೇಗಿರಬೇಕು, ಹೇಗಿರಬಾರದು ಮತ್ತು ಈ ಬಾರಿ ನಡೆಸಲಾದ ಮೀಲಾದ್ ರ‍್ಯಾಲಿಗಳು ಪ್ರವಾದಿ ಚರ್ಯೆಗೆ ಎಷ್ಟು ಹೊಂದುತ್ತಿತ್ತು ಎಂಬಲ್ಲಿ ವರೆಗೆ ಚರ್ಚೆ ನಡೆಯುತ್ತಿದೆ.

ಪ್ರವಾದಿ ಮುಹಮ್ಮದ್‌ರು(ಸ) ಅತ್ಯಂತ ಸರಳವಾಗಿ ಬದುಕಿದರು. ಅವರ ಜೀವನ ಕ್ರಮ ರಾಜರಂತೆ ಇರಲಿಲ್ಲ. ತನ್ನನ್ನು ಅವರು ಪರಿಚಯಿಸುತ್ತಿದ್ದುದೇ ದೇವನ ದಾಸ ಎಂದಾಗಿತ್ತು. ತನ್ನ ಬಡ ಅನುಯಾಯಿಗಳ ರೀತಿಯಲ್ಲಿಯೇ ಅವರೂ ತೀರಾ ಕಡಿಮೆ ಸೌಲಭ್ಯಗಳನ್ನಷ್ಟೇ ಬಯಸಿದರು. ಮಣ್ಣಿನ ಇಟ್ಟಿಗೆಗಳಿಂದ ಕಟ್ಟಲಾದ ಮನೆ, ಖರ್ಜೂರದ ಎಲೆಗಳಿಂದ ಮಾಡಲಾದ ಛಾವಣಿ ಮತ್ತು ಅತೀ ಕಡಿಮೆ ಪೀಠೋಪಕರಣಗಳು ಅವರ ಬದುಕಾಗಿತ್ತು. ಹುಲ್ಲಿನ ಹಾಸಿಗೆ, ಚರ್ಮದ ಮೇಲೆ ಖರ್ಜೂರದ ನಾರು ತುಂಬಿದ ತಲೆದಿಂಬು. ಒಮ್ಮೆ ಅವರ ಅನುಯಾಯಿ ಉಮರ್ ಕೇಳಿದ್ರು,

‘ಕಿಸ್ರಾ ಮತ್ತು ಕೈಸರ್ ದೊರೆಗಳು ಐಶಾರಾಮದಲ್ಲಿ ಬದುಕುತ್ತಿದ್ದಾರೆ. ನೀವಾದರೋ ತೀರಾ ಅದಕ್ಕೆ ವಿರುದ್ಧವಾಗಿ ಬದುಕುತ್ತಿದ್ದೀರಿ’. ಪ್ರವಾದಿ(ಸ) ಹೇಳಿದರು, “ಅವರಿಗೆ ಇಹಲೋಕ, ನಮಗೆ ಪರಲೋಕ.”

ಪ್ರವಾದಿಯವರ(ಸ) ಆಹಾರದ ಬಗ್ಗೆ, ಉಡುಪಿನ ಬಗ್ಗೆ ಮತ್ತು ಕೊನೆಗಾಲದಲ್ಲಿ ಅವರು ಬಿಟ್ಟು ಹೋದ ಆಸ್ತಿಯ ಬಗ್ಗೆ ಪರಿಶೀಲಿಸುವಾಗ ಅವರು ಆಡಂಬರವನ್ನು ಇಷ್ಟಪಡದ ಮತ್ತು ತೀರಾ ಸಹಜವಾಗಿ ಮತ್ತು ಸರಳವಾಗಿ ಬದುಕುವುದನ್ನು ಇಷ್ಟ ಪಡುವ ವ್ಯಕ್ತಿಯಾಗಿದ್ದರು ಅನ್ನುವುದು ಗೊತ್ತಾಗುತ್ತದೆ. ಬಹಳ ಮುಖ್ಯವಾಗಿ,

ತನ್ನ ಬದುಕಿನುದ್ದಕ್ಕೂ ಸಾರ್ವಜನಿಕ ಶಿಸ್ತಿನ ಬಗ್ಗೆ ಅವರು ಅತೀವ ಎಚ್ಚರಿಕೆಯನ್ನು ಪಾಲಿಸಿದರು. ತನ್ನ ಅನುಯಾಯಿಗಳಿಗೂ ಸಾರ್ವಜನಿಕ ಶಿಸ್ತನ್ನು ಅತೀ ಮಹತ್ವ ಕೊಟ್ಟು ಬೋಧಿಸಿದರು. ರಸ್ತೆಯಿಂದ ಹಾನಿಕಾರಕ ವಸ್ತುಗಳನ್ನು ನೀಗಿಸುವುದು ವಿಶ್ವಾಸದ ಭಾಗವಾಗಿದೆ ಎಂದು ತನ್ನ ಅನುಯಾಯಿಗಳಿಗೆ ಅವರು ಕಲಿಸಿದರು. ರಸ್ತೆಯಲ್ಲಿ ಕುಳಿತುಕೊಳ್ಳ ಬೇಡಿ ಎಂದು ಹೇಳಿದ್ದಷ್ಟೇ ಅಲ್ಲ, ಹಾಗೆ ಕುಳಿತುಕೊಳ್ಳುವುದರಿಂದ ಸಾರ್ವಜನಿಕರಿಗೆ ಆಗುವ ತೊಂದರೆಯ ಬಗ್ಗೆಯೂ ವಿವರಿಸಿದರು. ಸಾರ್ವಜನಿಕ ಸಂಚಾರಕ್ಕೆ ತಡೆಯಾಗುವಂತೆ ರಸ್ತೆಯನ್ನು ಕಿರಿದುಗೊಳಿಸುವುದನ್ನು ವಿರೋಧಿಸಿದರು. ಯಾರಿಗೂ ತೊಂದರೆ ಕೊಡಬೇಡಿ ಮತ್ತು ಯಾರಾದರೂ ತೊಂದರೆ ಕೊಟ್ಟರೆ ಪ್ರತಿ ಕಿರುಕುಳ ಕೊಡಬೇಡಿ ಎಂದೂ ತನ್ನ ಅನುಯಾಯಿಗಳಿಗೆ ಎಚ್ಚರಿಕೆ ನೀಡಿದರು. ತನ್ನ ಅನು ಯಾಯಿ ರಸ್ತೆಯಲ್ಲಿರುವ ಕೊಂಬೆಯನ್ನು ದೂರ ಸರಿಸಿರುವುದನ್ನು ಪ್ರಶಂಸಿಸಿದ ಪ್ರವಾದಿಯವರು(ಸ), ಆತ ಸ್ವರ್ಗದಲ್ಲಿ ಸಂಚರಿಸುತ್ತಿರುವುದನ್ನು ತಾನು ನೋಡುತ್ತಿರು ವುದಾಗಿ ಹೇಳಿದರು.

ಒಮ್ಮೆ ತನ್ನ ಅನುಯಾಯಿಗಳೊಂದಿಗೆ ಪ್ರವಾದಿ ಪ್ರಯಾಣದಲ್ಲಿದ್ದರು. ಬೆಟ್ಟವನ್ನು ಹತ್ತುವಾಗ ಅಥವಾ ಏರನ್ನು ಏರುವಾಗ ಅನುಯಾಯಿಗಳು ಏರಿದ ದನಿಯಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗಿದರು. ಆದರೆ ಪ್ರವಾದಿ(ಸ) ಈ ಏರಿದ ಧ್ವನಿಯನ್ನು ಒಪ್ಪಿಕೊಳ್ಳಲಿಲ್ಲ. ಅಲ್ಲಾಹನು ಕಿವುಡನಲ್ಲ, ಆತ ಸರ್ವಶ್ರುತ ಮತ್ತು ನಿಮ್ಮ ಹತ್ತಿರದಲ್ಲಿ ಇರುವವನಾಗಿದ್ದಾನೆ ಎಂದು ಹೇಳಿ, ಶಬ್ದ ಮಾಲಿನ್ಯದ ಪಾಠ ಹೇಳಿಕೊಟ್ಟರು. ಯಾವುದೇ ಸಂದರ್ಭದಲ್ಲೂ ಅತೀವ ಕರ್ಕಶವನ್ನು ಅವರು ಇಷ್ಟಪಡಲಿಲ್ಲ.

ವಿಷಾದ ಏನೆಂದರೆ,

ಪ್ರವಾದಿ(ಸ) ಮೇಲಿನ ಪ್ರೀತಿಯ ಹೆಸರಲ್ಲಿ ನಡೆಯುವ ಮೀಲಾದ್ ಕಾರ್ಯ ಕ್ರಮಗಳು ಅದರಲ್ಲೂ ರ‍್ಯಾಲಿಗಳು ಅವರ ಅಷ್ಟೂ ಮಾದರಿಯನ್ನು ತಿರಸ್ಕರಿಸುವ ರೀತಿಯಲ್ಲಿ ನಡೆಯುತ್ತಿದೆ. ರ‍್ಯಾಲಿಯ ಕಾರಣದಿಂದ ಮುಖ್ಯ ರಸ್ತೆಗಳು ಗಂಟೆಗಟ್ಟಲೆ ಮುಚ್ಚುತ್ತವೆ. ಅದರಿಂದಾಗಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಹೀಗೆ ಸಾಲುಗಟ್ಟುವ ವಾಹನಗಳಲ್ಲಿ ತುರ್ತಾಗಿ ತಲುಪಬೇಕಾದವರು ಇರಬಹುದು. ಚಿಕಿತ್ಸೆಗೆ ತೆರಳುವವರು ಇರಬಹುದು. ರ‍್ಯಾಲಿಯ ಮಾಹಿತಿಯಿಲ್ಲದೇ ಆ ದಾರಿಯಾಗಿ ಬಂದು ಸಿಲುಕಿಕೊಂಡವರು ಇರಬಹುದು. ಅಂದಹಾಗೆ,

ಇವರೆಲ್ಲರ ಭಾವನೆ ಏನಿರಬಹುದು? ಪ್ರವಾದಿಯ(ಸ) ಬಗ್ಗೆ ಇವರ ನಿಲುವು ಏನಾಗಬಹುದು? ರಸ್ತೆಯಲ್ಲಿ ಬಿದ್ದಿರುವ ಸಣ್ಣ ಕಲ್ಲು, ಮುಳ್ಳು, ಕೊಂಬೆಗಳನ್ನು ನೀಗಿಸುವುದನ್ನು ಪುಣ್ಯದಾಯಕ ಎಂದು ಕಲಿಸಿಕೊಟ್ಟ ಪ್ರವಾದಿ(ಸ) ಅನುಯಾಯಿಗಳು ರಸ್ತೆಯನ್ನು ಬ್ಲಾಕ್ ಮಾಡುವುದು ಎಷ್ಟರ ಮಟ್ಟಿಗೆ ಪ್ರವಾದಿ(ಸ) ಪ್ರೇಮವಾಗುತ್ತದೆ? ಪ್ರವಾದಿ(ಸ) ಪ್ರೇಮದ ಹೆಸರಲ್ಲಿ ನಡೆಸುವ ರ‍್ಯಾಲಿಯು ಸಾರ್ವಜನಿಕರಲ್ಲೂ ಪ್ರೇಮ ಭಾವನೆಯನ್ನು ಮೂಡಿಸುವಂತೆ ಇರ ಬೇಡವೇ?

ರಸ್ತೆಯಲ್ಲಿ ವಾಹನ ಸಾಗಾಟಕ್ಕೆ ಅವಕಾಶವಾಗುವಂತೆ ರ‍್ಯಾಲಿಯನ್ನು ಕೊಂಡೊಯ್ಯಲು ಸಾಧ್ಯವಿಲ್ಲವೇ? ಬೃಹತ್ ವಾಹನ ಜಾಥಾದ ಬದಲು ಪುಟ್ಟ ಮಕ್ಕಳು ದಫ್ ಬಾರಿಸುತ್ತಾ ರಸ್ತೆಯ ಸಣ್ಣದೊಂದು ಭಾಗವನ್ನು ಮಾತ್ರ ಬಳಸಿಕೊಂಡು ಸಾಗುವುದಕ್ಕೆ ಏನು ತೊಂದರೆಯಿದೆ? ಅದು ನೋಡುಗರನ್ನೂ ಸೆಳೆಯುತ್ತದೆ. ಬಹುಸಂಖ್ಯಾತ ಹಿಂದೂಗಳೂ ಅದನ್ನು ನೋಡಿ ಆನಂದಿಸುತ್ತಾರೆ. ಪ್ರವಾದಿಯ ಬಗ್ಗೆ ಅವರಲ್ಲೂ ಒಳ್ಳೆಯ ಭಾವನೆಯನ್ನು ಅದು ಮೂಡಿಸಬಲ್ಲುದು. ಅದರ ಬದಲು ರಸ್ತೆಯನ್ನಿಡೀ ಆಕ್ರಮಿಸುವ ನೂರಾರು ವಾಹನಗಳು ಮತ್ತು ಆಳೆತ್ತರದ ಬಾವುಟಗಳು ಒಟ್ಟು ಸಮಾಜಕ್ಕೆ ಸಾರುವ ಸಂದೇಶ ಏನು? ಅದನ್ನು ಬೀಸುತ್ತಾ ಮತ್ತು ಏರುಧ್ವನಿಯಲ್ಲಿ ಘೋಷಣೆ ಕೂಗುತ್ತಾ ಸಾಗುವುದು ಮುಸ್ಲಿಮೇತರರಲ್ಲಿ ಯಾವ ಭಾವನೆಯನ್ನು ಮೂಡಿಸಬಲ್ಲುದು? ಅದರಲ್ಲೂ,

ವಾಹನ ಜಾಥಾದಲ್ಲಿ ಹಲವು ಅತಿರೇಕಗಳು ಕಾಣಿಸಿವೆ. ಕಾರಿನ ಸನ್‌ರೂಫ್‌ನಲ್ಲಿ ದೇಹ ಹೊರಹಾಕಿ ಮುಖ ಮುಚ್ಚಿ ಆಳೆತ್ತರದ ಬಾವುಟ ಬೀಸುವ ದೃಶ್ಯಗಳು ನಮ್ಮ ರಾಜ್ಯದಲ್ಲಿ ನಡೆದಿವೆ. ಇನ್ನೊಂದೆಡೆ, ಟಿಪ್ಪು ಸುಲ್ತಾನ್ ಕಟೌಟ್ ಅನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗಿದೆ. ಡಿಜೆಯನ್ನು ಬಳಸಲಾಗಿದೆ. ಚಿಕ್ಕಮಗಳೂರಿನಲ್ಲಿ 40 ಅಡಿ ಎತ್ತರದ ಟಿಪ್ಪು ಕಟೌಟನ್ನು ಸರ್ಕಲ್‌ನಲ್ಲಿ ನಿಲ್ಲಿಸಲಾಗಿದೆ. ಇವೆಲ್ಲ ಏನು? ಇದು ಪ್ರವಾದಿ(ಸ) ಪ್ರೇಮವೇ? ಪ್ರವಾದಿಗೂ ಈ ಕಟೌಟ್‌ಗೂ ಡಿಜೆಗೂ ಮುಖ ಮುಚ್ಚಿ ಬಾವುಟ ಹಾರಿಸುವುದಕ್ಕೂ ಏನು ಸಂಬಂಧ? ಪ್ರವಾದಿ(ಸ) ಪ್ರೇಮವನ್ನು ಪ್ರಕಟಿಸಬೇಕಾದ ರೀತಿ ಹೀಗೆಯೇ? ಈ ಎಲ್ಲವನ್ನೂ ನೋಡುತ್ತಿರುವ ದೇಶದ ಬಹುಸಂಖ್ಯಾತ ಹಿಂದೂಗಳು ಏನಂದು ಕೊಳ್ಳಬಹುದು? ಇವೆಲ್ಲ ಇಸ್ಲಾಮಿನ ಭಾಗ ಎಂದು ಅಂದು ಕೊಳ್ಳಲಾರರೇ? ಪ್ರವಾದಿ(ಸ) ಪ್ರೇಮವೆಂದರೆ, ಅದರಲ್ಲಿ ಟಿಪ್ಪು ಕಟೌಟ್ ಇರಲೇಬೇಕು ಎಂದು ಭಾವಿಸಲಾರರೇ? ಡಿಜೆ, ಡ್ಯಾನ್ಸ್ ಗಳೆಲ್ಲ ಪ್ರವಾದಿ(ಸ) ಪ್ರೇಮವನ್ನು ಪ್ರಕಟಪಡಿಸುವ ಋಜು ಆಚರಣೆಗಳು ಎಂದವರು ಭಾವಿಸಿದರೆ, ಅದಕ್ಕೆ ಯಾರು ಹೊಣೆ? ನಿಧಾನಕ್ಕೆ ಇವುಗಳೇ ನಿಜ ಆಚರಣೆಗಳಾಗಿ ಮತ್ತು ಪ್ರವಾದಿ(ಸ)ಯ ನಿಜ ಬೋಧನೆಗಳು ಸವಕಲಾಗಿ ಮಾರ್ಪಟ್ಟರೆ, ಅದರ ಹೊಣೆಯನ್ನು ಯಾರು ಹೊತ್ತುಕೊಳ್ಳಬೇಕು? ಸದ್ಯದ ಅಗತ್ಯ ಏನೆಂದರೆ,

ಬಾಲ್ಕನಿಯಲ್ಲಿ ನಿಂತು ರ‍್ಯಾಲಿಯನ್ನು ಆನಂದಿಸುವಂಥ ಮತ್ತು ಆ ರ‍್ಯಾಲಿಯ ಸೌಂದರ್ಯಕ್ಕೆ ಮನಸೋತು ತನಗರಿವಿಲ್ಲದಂತೆ ಆ ರ‍್ಯಾಲಿಯಲ್ಲಿ ಲೀನವಾಗುವಂಥ ಸಹಜತೆಯನ್ನು ಪ್ರವಾದಿ(ಸ) ಪ್ರೇಮದ ಆಚರಣೆಗೆ ಒದಗಿಸಿಕೊಡಬೇಕು. ಅಂಥದ್ದೊಂದು ವಾತಾವರಣ ನಿರ್ಮಾಣವಾಗಬೇಕೆಂದರೆ, ರ‍್ಯಾಲಿಗಳು ಅಷ್ಟೇ ಸಹಜ ಮತ್ತು ಸುಂದರವಾಗಿರಬೇಕು. ಪ್ರವಾದಿಯ(ಸ) ಹೆಸರಲ್ಲಿ ಪ್ರಾರಂಭವಾಗುವ ಯಾವುದೇ ಗಲ್ಲಿ, ಹಳ್ಳಿ, ನಗರದ ರ‍್ಯಾಲಿಗಳು ಸಾರ್ವಜನಿಕರಿಗೆ ಎಳ್ಳಷ್ಟೂ ತೊಂದರೆಯಾಗದಂತೆ ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಅಡಚಣೆಯಿಲ್ಲದೇ ಸಾಗುತ್ತಲೇ ಮನಸಾರೆ ಅನುಭವಿಸುವಂತಿರಬೇಕು. ಅಬ್ಬರ ಇರಬಾರದು. ಡಿಜೆಗಳು, ಕಟೌಟ್‌ಗಳಿಗೆ ಜಾಗ ಇರಬಾರದು. ಶಿಸ್ತುಬದ್ಧವಾದ ಮತ್ತು ಕಿವಿಗಡಚಿಕ್ಕದ ಹಾಡು ಮತ್ತು ದಫ್‌ಗಳಿಗಷ್ಟೇ ಜಾಗ ಇರಬೇಕು. ಮುಖ್ಯ ರಸ್ತೆಯಲ್ಲಿ ರ‍್ಯಾಲಿ ಸಾಗಿದರೂ ವಾಹನ ಸಂಚಾರಕ್ಕೆ ಅಡಚಣೆಯಾಗದಷ್ಟು ಶಿಸ್ತು ಕಾಪಾಡಿಕೊಳ್ಳಬೇಕು. ರಸ್ತೆಯನ್ನು ಇಡಿಯಾಗಿ ಬಳಸದೇ, ಒಂದು ಬದಿಯಲ್ಲಿ ರ‍್ಯಾಲಿ ಸಾಗಬೇಕು ಮತ್ತು ಶಿಸ್ತನ್ನು ಎಳ್ಳಷ್ಟೂ ತಪ್ಪಿಸಬಾರದು.

ಈ ದೇಶದಲ್ಲಿ ಆಚರಣೆಗಳು ಅನೇಕ ಇವೆ. ಈ ಎಲ್ಲ ಆಚರಣೆಗಳಂತೆ ಪ್ರವಾದಿ ಪ್ರೇಮದ ಆಚರಣೆಗಳೂ ನಡೆಯುವುದಾದರೆ, ಅದು ಪ್ರವಾದಿಯನ್ನು ಈ ದೇಶಕ್ಕೆ ಮಾದರಿಯಾಗಿ ಕಟ್ಟಿ ಕೊಡಲಾರದು. ಪ್ರವಾದಿಯ(ಸ) ರ‍್ಯಾಲಿಯನ್ನು ಈ ದೇಶದ ಹಿಂದೂಗಳು ಮತ್ತು ಇನ್ನಿತರ ಧರ್ಮೀಯರು ಆನಂದದಿಂದ ಮತ್ತು ಭಯ ಇಲ್ಲದೇ ವೀಕ್ಷಿಸುವ ರೀತಿಯಲ್ಲಿರಬೇಕು. ರ‍್ಯಾಲಿಯಾಗಲಿ, ಘೋಷಣೆಯಾಗಲಿ ಅಥವಾ ಹಾಡೇ ಆಗಲಿ ಎಲ್ಲದರಲ್ಲೂ ಈ ದೇಶದ ಮಂದಿ ಪ್ರವಾದಿಯನ್ನು ದರ್ಶಿಸಬೇಕು. ಅವರನ್ನು ಅಧ್ಯಯನ ನಡೆಸುವುದಕ್ಕೆ ಪ್ರೇರಣೆ ಒದಗಿಸುವಂತಿರಬೇಕು. ಅಂದಹಾಗೆ,

ಕೇರಳದ ಆ ಹಿರಿಯ ವ್ಯಕ್ತಿಯನ್ನು ಪ್ರವಾದಿ(ಸ) ಪ್ರೇಮ ಭಾವನೆಯಲ್ಲಿ ‘ತೇಲುವಂತೆ’ ಮಾಡಿದ ಆ ಮೀಲಾದ್ ರ‍್ಯಾಲಿ ನಿಜಕ್ಕೂ ಆದರ್ಶಪ್ರಾಯ.