ಟ್ರಂಪ್ ಆಗಮನ ವಿವಾದದಲ್ಲಿ

0
1484

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸಂದರ್ಶನಕ್ಕೆ ಸಿದ್ಧತೆ ಪೂರ್ಣಗೊಳ್ಳುತ್ತಿದ್ದು ಈ ನಡುವೆ ಗುಜರಾತಿನ ನಮಸ್ತೆ ಟ್ರಂಪ್ ಕಾರ್ಯಕ್ರಮದ ಸಂಘಟಕರ ಕುರಿತು ವಿವಾದ ಸೃಷ್ಟಿಯಾಗಿದೆ. ಅಹ್ಮದಾಬಾದಿನ ಸ್ಟೇಡಿಯಂನಲ್ಲಿ ಡೊನಾಲ್ಡ್ ಟ್ರಂಪ್ ನಾಗರಿಕ್ ಅಭಿನಂದನ್ ಸಮಿತಿ ಎಂಬ ಗುಪ್ತ ಸಂಘಟನೆಯು ಸ್ವಾಗತ ಸಜ್ಜಾಗಿದೆ ಎಂದು ಕೇಂದ್ರ ವಿದೇಶ ಸಚಿವಾಲಯ ಹೇಳುವುದರೊಂದಿಗೆ ಹೊಸ ವಿವಾದ ಸೃಷ್ಟಿಯಾಗಿದೆ.

ಒಂದು ಖಾಸಗಿ ಸಂಘಟನೆ ಕಾರ್ಯಕ್ರಮಕ್ಕೆ ಸರಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವುದು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಪ್ರಶ್ನಿಸಿತು. ವಿದೇಶ ಸಚಿವಾಲಯ ವಕ್ತಾರ ತಿಳಿಸುವ ಮೊದಲು ಆ ಸಂಘಟನೆಯ ಹೆಸರನ್ನೇ ಕೇಳಿಲ್ಲ. ಈಗ ಹಠಾತ್ತಾಗಿ ಎಲ್ಲಿಂದ ಇಂತಹದೊಂದು ಸಂಘಟನೆ ಬಂದಿದೆ ಎಂದು ಕಾಂಗ್ರೆಸ್‍ ವಕ್ತಾರ ರಣ್‍ದೀಪ್ ಸುರ್ಜೇವಾಲ ಪ್ರಶ್ನಿಸಿದ್ದಾರೆ. ಟ್ರಂಪ್‍ರ ಅಹ್ಮದಾಬಾದ್ ಸಂದರ್ಶನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಈವರೆಗೆ ಯಾರೂ ಕೇಳದ ಸಂಘಟನೆಯ ಹೆಸರನ್ನು ರವೀಶ್ ಕುಮಾರ್ ಹೇಳಿದ್ದಾರೆ. ಹ್ಯೂಸ್ಟನ್‍ಲ್ಲಿ ನರೇಂದ್ರ ಮೋದಿಗಾಗಿ ಹೌಡಿಮೋಡಿ ಕಾರ್ಯಕ್ರಮದ ರೀತಿಯಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಇದೆ ಎಂದು ಹೇಳಿದರು. ಪ್ರತಿಪಕ್ಷಗಳಿಗೆ ಆಹ್ವಾನ ಇದೆಯೇ ಎಂದು ಕೇಳಿದಾಗ ಅಹ್ಮದಾಬಾದಿನ ಸಂಘಟನೆಗಳಲ್ಲಿ ಅದನ್ನು ಕೇಳಬೇಕೆಂದು ರವೀಶ್ ಕುಮಾರ್ ಹೇಳಿದರು. ಗುಜರಾತ್ ಸರಕಾರ ಕಾರ್ಯಕ್ರಮ ಸಂಘಟಿಸುತ್ತಿಲ್ಲ, ಡೊನಾಲ್ಡ್ ಟ್ರಂಪ್ ನಾಗರಿಕ್ ಅಭಿನಂದನ್ ಸಮಿತಿ ಸಂಘಟಿಸಿದ್ದು ಎಲ್ಲ ತೀರ್ಮಾನಗಳನ್ನು ಅವರೇ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಮಿತಿಯ ಹಿಂದೆ ಯಾರಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೆವಾಲ ಪ್ರಶ್ನಿಸಿದರು. ಖಾಸಗಿ ಏಜೆನ್ಸಿಗಾಗಿ ಗುಜರಾತ್ ಸರಕಾರ 120 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವುದು ಯಾಕೆ? ಈ ಸಂಘಟನೆ ಯಾವಾಗ ಅಮೆರಿಕ ಅಧ್ಯಕ್ಷರಿಗೆ ಆಹ್ವಾನ ನೀಡಿತು ಮತ್ತು ಅದನ್ನು ಅಮೆರಿಕ ಸರಕಾರ ಯಾವಾಗ ಸ್ವೀಕರಿಸಿತೆಂದು ಹೇಳಲಿ ಎಂದು ಸುರ್ಜೇವಾಲರು ಹೇಳಿದರು.