ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯದಿಂದ ಕೊರೋನಾ ಸೋಂಕಿತ ಸಾವು: ಕುಟುಂಬಸ್ಥರ ಆರೋಪ

0
673

ಸನ್ಮಾರ್ಗ ವಾರ್ತೆ

ತುಮಕೂರು,ಜು.1: ಅಪಘಾತದಿಂದ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ರೋಗಿಯಲ್ಲಿ ಕೊರೋನಾ ಸೊಂಕು ಪತ್ತೆಯಾಗಿದ್ದು, ಚಿಕಿತ್ಸೆ ಮುಂದುವರಿಸದೇ ನಿರ್ಲಕ್ಷ್ಯ ಮಾಡಿದ್ದರಿಂದ ಸೊಂಕಿತ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಜಿಲ್ಲಾಡಳಿತದ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಮೃತ ಸೋಂಕಿತನ ತಂದೆ ಜಮೀರ್ ಜಾನ್‌ರವರು ಹೇಳುವಂತೆ, ಮರಳೂರು ದಿಣ್ಣೆಯಲ್ಲಿ ನಾವು ವಾಸವಿದ್ದು, ನನ್ನ 29 ವರ್ಷ ಮಗ ಜೂ 26 ರಂದು ಮಧುಗಿರಿ ಬಳಿ ದ್ವಿ ಚಕ್ರ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ನಗರದ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿದ್ದೆವು. ಆತನಿಗೆ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿಟ್ಟುಕೊಂಡು ಚಿಕಿತ್ಸೆ ನೀಡುತ್ತಿದ್ದರು. ಸೋಮವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ಮಾಡುತ್ತೇವೆ ಹಣ ಕಟ್ಟಿ ಎಂದಿದ್ದರು ಬೆನ್ನುಮೂಳೆ ಶಸ್ಸತ್ರಚಿಕಿತ್ಸೆಗೆ 1.30 ಲಕ್ಷ ಆಗುತ್ತದೆ, ಭಜದ ಬಲಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಲು 30 ಸಾವಿರ ಆಗುತ್ತದೆ 10 ಸಾವಿರ ಓಟಿ ಚಾರ್ಜ್ ಆಗುತ್ತದೆ ಎಂದು ಹಣ ಕಟ್ಟಿಸಿಕೊಂಡು ಶಸ್ತ್ರಚಿಕಿತ್ಸೆ ಮಾಡಿದ್ದರು.

ಸೊಮವಾರ ಬೆಳಗ್ಗೆಯಿಂದ ಸಂಜೆ 4 ಗಂಟೆವರೆಗೆ ಶಸ್ತ್ರಚಿಕಿತ್ಸೆ ಮಾಡಿ ಆಪರೇಷನ್ ಯಶಸ್ವಿಯಾಗಿದೆ ರೋಗಿ ಐಸಿಯುಲ್ಲಿದ್ದಾರೆ ಇನ್ನೂ ಐದು ಗಂಟೆ ಬಳಿಕ ಅವರಿಗೆ ಪ್ರಜ್ಞೆ ಬರುತ್ತದೆ ಎಂದು ವೈದ್ಯರು ತಿಳಿಸಿದ್ದರು.

ಬಳಿಕ ರಾತ್ರಿ 20 ಸಾವಿರ ಮೆಡಿಸಿನ್ ತರಿಸಿಕೊಂಡಿದ್ದು, ಶಸ್ತ್ರಚಿಕಿತ್ಸೆ ಬಾಕಿ ವೆಚ್ಚವನ್ನು ಪಾವತಿಸುವಂತೆ ಬಿಲ್ ನೀಡಿದರು. ಮಂಗಳವಾರ ಬೆಳಗ್ಗೆ ಪಾವತಿ ಮಾಡುತ್ತೇವೆ ಎಂದು ನಾವು ತಿಳಿಸಿದ್ದೆವು. ಮಂಗಳವಾರ ಬೆಳಗ್ಗೆ ನಿಮ್ಮ ರೋಗಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ ತಕ್ಷಣ ಬಾಕಿ ಬಿಲ್ ಹಣವನ್ನ ಕಟ್ಟಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು. ನಾವು ಕರೆದುಕೊಂಡು ಹೋಗುವುದಿಲ್ಲ ಇಲ್ಲಿಯೇ ಚಿಕಿತ್ಸೆ ನೀಡಿ ಎಂದು ಒತ್ತಾಯ ಮಾಡಿದ್ದೆವು ಅಷ್ಟರಲ್ಲೇ 12 ಗಂಟೆ ಸುಮಾರಿಗೆ ನಿಮ್ಮ ರೋಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿ ಸಂಪೂರ್ಣ ಬಿಲ್ ಕಟ್ಟಿದರೇ ಮೃತದೇಹ ನೀಡುವುದಾಗಿ ತಿಳಿಸಿದರು ಆಪರೇಷನ್ ಯಶಸ್ವಿಯಾಗಿದೆ ಎಂದು ಹೇಳಿದ ಬಳಿಕ ನಮ್ಮನ್ನು ನೋಡಲು ಬಿಡದೇ ಏಕಾಏಕಿ ಮೃತಪಟ್ಟಿದ್ದಾನೆ ಎನ್ನುತ್ತಾರೆ ನಮ್ಮ ಮಗನ ಸಾವಿಗೆ ನಿಖರ ಕಾರಣ ತಿಳಿಯಬೇಕು ಎಂದು ಸೋಂಕಿತನ ತಂದೆ ಒತ್ತಾಯಿಸಿದ್ದಾರೆ.

ಮೃತ ಸೊಂಕಿತನ ಸಹೋದರ ಖಲೀಂ ಪಾಷ ಮಾತನಾಡಿ ನಮ್ಮ ಅಣ್ಣ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಅಪಘಾತವಾಗಿದ್ದ ಕಾರಣ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದ್ದೆವು. ಶಸ್ತ್ರಚಿಕಿತ್ಸೆಗೂ ಮೊದಲು ಕೊರೋನಾ ಟೆಸ್ಟ್ ಮಾಡಿಸಿದ್ದು ನೆಗೆಟಿವ್ ಇದೆ ಎಂದು ಆಪರೇಷನ್ ಮಾಡಿದ್ದರು. ಇದಾದ ಬಳಿಕ ಆಸ್ಪತ್ರೆಯಲ್ಲಿ ಸರಿಯಾಗಿ ಮಾಹಿತಿ ನೀಡಲಿಲ್ಲ, ನಮ್ಮ ಅಣ್ಣನನ್ನು ನೋಡಲು ಸಹ ಬಿಡಲಿಲ್ಲ, ಚಿಕಿತ್ಸೆ ನೀಡಿರುವ ಯಾವುದೇ ದಾಖಲೆಯನ್ನೂ ನೀಡಿಲ್ಲ, ಹಣ ಕಟ್ಟುವವರೆಗೂ ಮೃತದೇಹ ನೀಡುವುದಿಲ್ಲ ಎಂದರು. ತೀವ್ರ ಒತ್ತಡ ಹೇರಿದ ಬಳಿಕ ಮೃತದೇಹ ನೀಡಿದ್ದು ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಸರ್ಕಾರಿ ನಿಯಮಗಳ ಪ್ರಕಾರ ಅಂತ್ಯಕ್ರಿಯೆ ಮಾಡಿದ್ದೇವೆ. ಆದರೆ ನಮ್ಮ ಅಣ್ಣನ ಸಾವಿಗೆ ನಿಖರ ಕಾರಣ ತಿಳಿಯಬೇಕು ಸಿದ್ದಗಂಗಾ ಆಸ್ಪತ್ರೆ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಿದ್ದಗಂಗಾ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪರಮೇಶ್ ಪ್ರತಿಕ್ರಿಯೆ ನೀಡಿದ್ದು, ರೋಗಿಗೆ ಡಯಾಬಿಟಿಸ್ ಇತ್ತು, ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸ್ಪೈನಲ್ ಇಂಜ್ಯುರಿಯಾಗಿತ್ತು, ಭಜದ ಇಂಜ್ಯುರಿಯಾಗಿತ್ತು. ಆಗಾಗಿ ರೋಗಿಯ ಸಂಬಂಧಿಕರ ಜೊತೆ ಸಂಬಂದಪಟ್ಟ ಎಲ್ಲಾ ವೈದ್ಯರು ಕೌನ್ಸೆಲಿಂಗ್ ಮಾಡಿದ್ದೇವೆ. ಎಲ್ಲಾ ಸಮಸ್ಯೆಗಳನ್ನು ತಿಳಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ನಿಯಮದಂತೆ ಕೋವಿಡ್ ತಪಾಸಣೆಗೆ ಸ್ಯಾಂಪಲ್ ಕಲೆಕ್ಟ್ ಮಾಡಿದ್ದೆವು ಭಾನುವಾರ ವಾದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ನಿಧಾನವಾಗುತ್ತೆ ಎಂದು ಸೊಮವಾರ ಬೆಳಗ್ಗೆ ಖಾಸಗಿ ಲ್ಯಾಬ್‌ಗೆ ಕಳುಹಿಸಿದ್ದೆವು. ಶಸ್ತ್ರ ಚಿಕಿತ್ಸೆ ಮಾಡಲೇಬೇಕಾದ ಅನಿವಾರ್ಯತೆ ಇದ್ದರಿಂದ ಸೋಮವಾರವೇ ಆಪರೇಷನ್ ಮಾಡಿದೆವು. ಬಳಿಕ ಮಂಗಳವಾರ ಬೆಳಗ್ಗೆ ಪರೀಕ್ಷಾ ವರದಿ ಬಂದಿದ್ದು, ಕೋವಿಡ್ ಪಾಸಿಟಿವ್ ಇರುವುದು ದೃಡಪಟ್ಟಿದೆ ಎಂದು ತಿಳಿಸಿದರು. ನಮ್ಮಲ್ಲಿ ಕೋವಿಡ್-19 ಚಿಕಿತ್ಸೆ ಇಲ್ಲ. ಆದ್ದರಿಂದ ಜಿಲ್ಲಾಸ್ಪತ್ರೆಗೆ ಕಳುಹಿಸಲು ಸಿದ್ದತೆ ಮಾಡುತ್ತಿದ್ದೆವು ಅಷ್ಟರಲ್ಲಿ ರೋಗಿ ಮೃತಪಟ್ಟಿದ್ದಾರೆ. ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವಿಲ್ಲ ಎಂದು ಸಿದ್ದಗಂಗಾ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಪರಮೇಶ್ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.