ಅಮೆರಿಕ: ಮೊದಲ ಓಮಿಕ್ರಾನ್ ಪ್ರಕರಣ ದೃಢ

0
65

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ದೃಢಪಟ್ಟಿದೆ. ದಕ್ಷಿಣ ಆಫ್ರಿಕದಲ್ಲಿಂದ ಬಂದ ವ್ಯಕ್ತಿಯಲ್ಲಿ ಈ ರೂಪಾಂತರಿತ ಕೊರೊನ ಕಂಡು ಬಂದಿದ್ದು, ಈತ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದಾನೆಂಬುದಾಗಿ ವರದಿಯಾಗಿದೆ. ನವೆಂಬರ್ 22ಕ್ಕೆ ಈ ವ್ಯಕ್ತಿ ದಕ್ಷಿಣಾಫ್ರಿಕದಿಂದ ಬಂದಿದ್ದ. ಸಣ್ಣ ಲಕ್ಷಣಗಳು ಕಾಣಿಸಿಕೊಂಡಿತ್ತು. ಪರೀಕ್ಷೆ ಮಾಡಿದಾಗ ಇದು ಒಮಿಕ್ರಾನ್ ಎಂಬುದು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.

ಮೊಡರ್ನಾ ವ್ಯಾಕ್ಸಿನ್‍ನ ಎರಡು ಡೋಸನ್ನು ಈ ವ್ಯಕ್ತಿಗೆ ನೀಡಲಾಗಿತ್ತು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಕೊರೋನ ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿತ್ತು. ಇಲ್ಲಿ ಒಟ್ಟು 4.95 ಕೋಟಿ ಜನರಿಗೆ ಕೊರೋನ ಸೋಂಕು ತಗುಲಿದೆ.

ವಿಶ್ವವನ್ನೇ ಆತಂಕಕ್ಕೊಡ್ಡಿ ಬಹಳಷ್ಟು ದೇಶಗಳಲ್ಲಿ ಈಗ ಒಮಿಕ್ರಾನ್ ವರದಿಯಾಗುತ್ತಿದೆ. ಕಳೆದ ದಿವಸ ಸೌದಿ ಅರೇಬಿಯ, ಯುಎಇಯಲ್ಲಿಯೂ ಒಮಿಕ್ರಾನ್‌ನ ಮೊದಲ ಪ್ರಕರಣಗಳು ಕಾಣಿಸಿಕೊಂಡಿದ್ದವು. ಇದನ್ನು ಮೊತ್ತಮೊದಲು ದಕ್ಷಿಣ ಆಫ್ರಿಕದಲ್ಲಿ ಗುರುತಿಸಲಾಗಿತ್ತು. ಈ ಒಮಿಕ್ರಾನ್ 23 ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂಬುದಾಗಿ ವರದಿ ತಿಳಿಸಿದೆ.