ವಿಚ್ಛೇದನಕ್ಕಾಗಿ ವರ್ಷಗಟ್ಟಲೆ ಕೋರ್ಟು-ಕಛೇರಿ ಅಲೆದಾಡುವ ದಂಪತಿಗಳು ಮತ್ತು ತಲಾಕ್

0
903

ಮುಹಮ್ಮದ್‌ ಸಿದ್ದೀಕ್‌, ಜಕ್ರಿಬೆಟ್ಟು

ಬಸ್ಸಲ್ಲಿ ಪ್ರಯಾಣಿಸುವಾಗ ಪಕ್ಕದ ಸೀಟಲ್ಲಿ ಕೂತು ಪರಿಚಿತರಾದ ಸಿವಿಲ್‌ ಇಂಜಿನಿಯರೊಬ್ಬರು, ಇಸ್ಲಾಮಿನ ತಲಾಕ್‌ನ ಕುರಿತು ಆಕ್ಷೇಪಿಸಿ ವಾದಿಸಿದರು. ದೀರ್ಘ ಚರ್ಚೆಯ ಬಳಿಕ, ನಾನು ಒಂದೆರೆಡು ದಾಂಪತ್ಯ ಸಮಸ್ಯೆಗಳನ್ನು ಅವರ ಮುಂದಿಟ್ಟು ಇದಕ್ಕೆ ನೀವೇ ಪರಿಹಾರ ಸೂಚಿಸಿ ಅಂದೆ. ಅವರು ಮೌನವಾದರು. ನಾನು ಮತ್ತೆ ಮುಂದುವರಿದು, ಘಟನೆಯೊಂದನ್ನು ಅವರ ಮುಂದಿಟ್ಟೆ! ಆತನೊಂದಿಗಿನ ಬದುಕು ಆಕೆಗೆ ಸಾಕು ಸಾಕಾಗಿದೆ. ಆಕೆಯೊಂದಿಗಿನ ಒಡನಾಟ ಆತನಿಗೂ ಅಸಹ್ಯ ಹುಟ್ಟಿಸಿದೆ. ದೂರದ ನೋಟಕ್ಕೆ ದಂಪತಿಗಳಂತಿದ್ದರೂ, ಅಲ್ಲಿ ಪರಸ್ಪರ ಪ್ರೀತಿ, ಪ್ರೇಮ, ಸಹಕಾರ, ಆಕರ್ಷಣೆ, ಅನುಕಂಪಗಳ್ಯಾವುವೂ ಉಳಿದಿಲ್ಲ. ಹೊಂದಾಣಿಕೆಯ ಕಟ್ಟಕಡೆಯ ಪ್ರಯತ್ನಗಳೂ ಫಲಿಸಿಲ್ಲದ ಆ ದಂಪತಿಗಳ ಬಗ್ಗೆ ನೀವು ಏನು ಹೇಳುತ್ತೀರಿ? ಅವರು ಮನನೊಂದು ಆತ್ಮಹತ್ಯೆ ಮಾಡಬೇಕಾ? ಅಥವಾ ಸಾಯುವ ತನಕ ತೋರಿಕೆಗೆ ದಂಪತಿಗಳಂತಿದ್ದು ನರಕ ಸದೃಶವಾಗಿಯೇ ಮುಂದುವರಿಯಬೇಕಾ? ನಾನು ನೇರವಾಗಿ ಅವರೊಂದಿಗೆ ಕೇಳಿದೆ. ಆಗ ಅವರು ಸಮಜಾಯಿಸಿಕೊಂಡು ಹೇಳಿದರು: ಇಲ್ಲ, ಅಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಬೇರೆ ಮಾತು, ಆವಾಗ ವಿಚ್ಛೇದನ ಕೊಡಬಹುದು‌. ಆದರೆ ಅಷ್ಟು ಹೇಳಿ ಅವರು ಸುಮ್ಮನಾಗಲಿಲ್ಲ. ಎಷ್ಟು ಮಾತ್ರಕ್ಕೂ ತಲಾಕ್‌ ಮಾತ್ರ ಬೇಡವೆಂದು ನಗುತ್ತಲೇ ಕುಟುಕಿದರು. ನಾನು ಹೇಳಿದೆ: ಸಾರ್‌, “ವಿಚ್ಛೇದನ” ಎಂಬ ಕನ್ನಡ ಪದವನ್ನೇ ಅರಬಿ ಭಾಷೆಯಲ್ಲಿ “ತಲಾಕ್” ಅನ್ನುತ್ತಾರೆ. ತಲಾಕ್‌ ಅಂದರೆ ಕತ್ತು ಕೊಯ್ಯುವ ಬ್ರಹ್ಮಾಸ್ತ್ರವಲ್ಲ. ಅವರಿಗೆ ಅಚ್ಚರಿಯಾಯಿತು. ಪಾಪ! ಅವರು ತಲಾಕ್‌ ಅಂದರೆ ಏನೋ ಬ್ರಹ್ಮಾಸ್ತ್ರವೆಂದೇ ಭಾವಿಸಿರಬೇಕು.

ಹೌದು! ಬಹಳಷ್ಟು ಮಂದಿಗೆ ಇಸ್ಲಾಮಿನ ಬಗ್ಗೆ ಏನೂ ತಿಳಿದಿಲ್ಲ. ಮುಸ್ಲಿಮರೂ ಇದಕ್ಕೆ ಅಷ್ಟೇ ಕಾರಣಕರ್ತರು. ಅವರು ಇಸ್ಲಾಮಿನ ಸಂದೇಶಗಳನ್ನೂ ಪವಿತ್ರ ಕುರ್‌ಆನನ್ನೂ ದೇಶಬಾಂಧವರ ಮುಂದೆ ತೆರೆದಿಡದೆ ಖಾಸಗಿ ಆಸ್ತಿಯೆಂಬ ಭ್ರಮೆಯಲ್ಲಿದ್ದಾರೆ. ಆದ್ದರಿಂದಲೇ ಈ ಸಮಾಜದಲ್ಲಿ ಅಜ್ಞಾನಗಳು ರಾರಾಜಿಸುತ್ತಿವೆ. ನಿಜವಾಗಿ, ಇಸ್ಲಾಮ್‌ ತಲಾಕನ್ನು ನಿರುತ್ತೇಜಿಸುತ್ತದೆ. ಆದರೆ ಅದರ ಅನಿವಾರ್ಯತೆ ಕಂಡರೆ, ಹತ್ತುಹಲವು ನಿಬಂಧನೆಗಳೊಂದಿಗೆ ಅದಕ್ಕೆ ಅನುವು ಮಾಡಿಕೊಡುತ್ತದೆ.

ಒಂದೇ ಬಾರಿಗೆ ಏಕ ಕಾಲದಲ್ಲಿ ಮೂರು ತಲಾಕ್‌ ಹೇಳಬಾರದು. ಹೊಂದಾಣಿಕೆಗೆ ಅವಕಾಶವದು. ಹೃದಯದಲ್ಲಿ ಸದಾ ಪರಮತ ದ್ವೇಷವನ್ನೇ ಮೆತ್ತಿಕೊಂಡಿರುವವರು ಮಾತ್ರ, ಕಾಮಾಲೆ ಕಣ್ಣಿನಿಂದ ತಲಾಕ್‌ನ ಸೌಂದರ್ಯವನ್ನು ನೋಡಿ ನಂಜು ಕಾರುತ್ತಾರೆ.’ದಂಪತಿಗಳು ವಿಚ್ಛೇದನಕ್ಕಾಗಿ ವರ್ಷಗಟ್ಟಲೆ ಕೋರ್ಟು-ಕಛೇರಿ ಅಲೆದಾಡಿ, ಆರೋಪ-ಪ್ರತ್ಯಾರೋಪಗಳೊಂದಿಗೆ ಆಯುಷ್ಯವನ್ನು ಸವೆಸುವುದು ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಬೀದಿಪಾಲಾಗಿಸುವುದು ಸರಿಯೇ?’

ಹಾಗೆಯೇ, ಸ್ವಂತ ಪತ್ನಿಯನ್ನೇ ತಿರುಗಿ ನೋಡದವರು ಇಂದು ಅಧಿಕಾರದ ಮದದಿಂದ ಮುಸ್ಲಿಮರ ತಲಾಕ್‌ನ ವಿರುದ್ಧ ಮಸೂದೆ ಮಂಡಿಸಲು ಹೊರಟಿದ್ದಾರೆ. ಕೈಲಾಗದವ ಮೈ ಪರಚಿಕೊಂಡಂತೆ. ಅದು ಮುಸ್ಲಿಮ್‌ ಮಹಿಳೆಯರೊಂದಿಗಿನ ಅನುಕಂಪವೆಂದೂ ಬಿಂಬಿಸಲಾಗುತ್ತದೆ. ವಾಸ್ತವದಲ್ಲಿ ಅನುಕಂಪದ ಪರದೆಯನ್ನು ಸರಿಸಿ ನೋಡಿದರೆ ಭಯಾನಕ ಚಿತ್ರಣಗಳು ಹೊತ್ತಿ ಉರಿಯುತ್ತವೆ.

ಗುಜರಾತ್‌ನ ಭಯಾನಕ ಮುಸ್ಲಿಮ್‌ ಹತ್ಯಾಕಾಂಡಕ್ಕೆ ನೇತೃತ್ವ ಕೊಟ್ಟವರಾರು? ರಕ್ತದ ಮಡುವಿನಲ್ಲಿ ಬಿದ್ದು ಚಡಪಡಿಸಿ ಹುತಾತ್ಮರಾದ ಅಮ್ಮಂದಿರಿಗೆ ನ್ಯಾಯ ನಿರಾಕರಿಸಿದವರಾರು? ಎದೆಹಾಲು ಹೀರುವ ಶಿಶುವನ್ನೂ ಬಿಡದೆ ಸಹಸ್ರಾರು ಅಮ್ಮಂದಿರನ್ನು ನಿರಾಶ್ರಿತ ಶಿಬಿರಕ್ಕೆ ತಳ್ಳಿದವರಾರು? ತುಂಬು ಗರ್ಭಿಣಿಯ ಗರ್ಭಕ್ಕೆ ಕತ್ತಿಹಾಕಿ, ಭ್ರೂಣವನ್ನು ಕತ್ತಿಯ ಮೊನೆಯಿಂದ ಎತ್ತಿ ಹಿಡಿದ ಕ್ರೂರಿಗಳನ್ನು ರಕ್ಷಿಸಿದವರಾರು? ಕೋಮುಗಲಭೆ ಸೃಷ್ಟಿಸಿ ಮುಸ್ಲಿಮ್‌ ಮಹಿಳೆಯರ ಪತಿಯರನ್ನು/ಸಹೋದರರನ್ನು ಕ್ರೂರವಾಗಿ ಕೊಂದು ಅವರನ್ನು ತಬ್ಬಲಿಗಳನ್ನಾಗಿ ಮಾಡಿದವರಾರು? ಅವರ ಹೆತ್ತವರ ವೃದ್ಧಾಪ್ಯವನ್ನೂ ನೋಡದೆ ಬರ್ಬರವಾಗಿ ಕೊಂದು ಹಾಕಿದವರಾರು? ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರಾರು? ಗೋವಿನ ಹೆಸರಲ್ಲಿ ಅವರ ಪುರುಷರನ್ನು ಅಮಾನವೀಯವಾಗಿ ನರಹತ್ಯೆ ನಡೆಸಿದವರಾರು? ಮತ್ತು ಈಗಲೂ ಬೇಟೆಯಾಡುವವರಿಗೆ ರಕ್ಷಣೆ ಒದಗಿಸುವವರಾರು? ಹೌದು! ಇಸ್ಲಾಮಿನ ಆದರ್ಶಗಳನ್ನು ವೈಚಾರಿಕವಾಗಿ ಎದುರಿಸಲಾಗದವರು, ಇಸ್ಲಾಮಿನ ವಿರುದ್ಧ ನಂಜು ಕಾರುತ್ತಲೇ ಬುಸುಗುಡುತ್ತಲೇ ತಮ್ಮ ಆಯುಷ್ಯವನ್ನು ಸವೆಸುತ್ತಾರೆ.

ವಿಶೇಷವೇನೆಂದರೆ, ಇಸ್ಲಾಮೀ ಶರೀಅತ್‌ನಲ್ಲಿ ವಿಚ್ಛೇದನದ ಹಾದಿ ಪುರುಷನಿಗಿಂತ ಮಹಿಳೆಗೆ ಅತಿ ಸುಲಭ ಮತ್ತು ಸರಳವಿದೆ.ಅದನ್ನು”ಖುಲಾ” ಅನ್ನುತ್ತಾರೆ. ಖುಲಾಕ್ಕೆ ಆತ ಒಪ್ಪಿಗೆ ಸೂಚಿಸದಿದ್ದರೂ “ಫಸ್ಕ್‌”ನ ಮೂಲಕವೂ ಆಕೆಗೆ ಬೇರ್ಪಡಬಹುದು.”ತಲಾಕ್‌ ಮತ್ತು ಖುಲಾ”ಗಳೆರಡೂ ಅತ್ಯಂತ ಅನಿವಾರ್ಯ ಮತ್ತು ಸನ್ನಿಗ್ಧ ಘಟ್ಟದಲ್ಲಿ ಬದುಕು ನೀಡುವ ಅನುಗ್ರಹವಾಗಿದೆ. ಅದೆಂದೂ ದುರ್ಬಳಕೆಯಾಗಬಾರದೆಂಬ ಕಟ್ಟಪ್ಪಣೆಯೂ ಇದೆ. ಎಲ್ಲೋ ಯಾರೋ ತಲಾಕನ್ನು ದುರುಪಯೋಗಿಸಿಕೊಂಡ ಮಾತ್ರಕ್ಕೆ, ಗುಲ್ಲೆಬ್ಬಿಸಿ ಆ ಪವಿತ್ರ ವ್ಯವಸ್ಥೆಯನ್ನೇ ವಿರೂಪಗೊಳಿಸುವ ಅಗತ್ಯವಿಲ್ಲ. ನೆಗಡಿ ಎಂದು ಮೂಗನ್ನೇ ಕತ್ತರಿಸುವ ಹುಚ್ಚು ಸಾಹಸವೇಕೆ?