ವಿದೇಶಿ ದೇಣಿಗೆ ಪಡೆಯಲು ರಾಜಕೀಯವೇಕೆ?

0
941

ಸಲೀಮ್ ಬೋಳಂಗಡಿ


ಪ್ರವಾಹದಿಂದ ಕೇರಳವು ತತ್ತರಿಸಿದೆ. ಜನರು ಪ್ರಳಯ ಬಾಧಿತರಾಗಿ ತೀರಾ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ದೊಡ್ಡ ದೊಡ್ಡ ಮಹಲುಗಳಲ್ಲಿ ಮತ್ತು ಕೇರಿಗಳಲ್ಲಿ ಜೀವಿಸಿದವರು ಒಂದಾಗಿ ನಿರಾಶ್ರಿತರ ಶಿಬಿರದಲ್ಲಿ ದಿನದೂಡುತ್ತಿದ್ದಾರೆ. ಎಲ್ಲೆಡೆ ಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಈ ನೆಮ್ಮದಿಯ ವಿಚಾರದ ಮಧ್ಯೆ ಯುನೈಟೆಡ್ ಅರಬ್ ಎಮಿರೇಟ್ಸ್ ಕೇರಳದ ನೆರೆ ಸಂತ್ರಸ್ತರಿಗೆ ಏಳು ನೂರು ಕೋಟಿ ರೂಪಾಯಿ ನೆರವು ನೀಡುವುದಾಗಿ ಘೋಷಿಸಿತು. ಆದರೆ ಈ ಕುರಿತು ಕೇರಳ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ನಡುವೆ ತಿಕ್ಕಾಟ ನಡೆಯುತ್ತಿರುವುದು ಖೇದಕರ ವಿಚಾರ. ಈ ಅನುದಾನವನ್ನು ತರಲು ಕೇಂದ್ರ ಸರಕಾರದ ಕಾನೂನು ಅಡ್ಡಿಯಾಗಿದೆ. 2004ರಿಂದ ಪಾಲಿಸಿಕೊಂಡು ಬಂದ ನೀತಿಯ ಪ್ರಕಾರ ವಿದೇಶಗಳಿಂದ ಬರುವ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಕೇಂದ್ರ ಪ್ರತಿಪಾದಿಸಿದೆ. ಆದರೆ ಯುಎಇ 700 ಕೋಟಿ ನೆರವು ನೀಡಲು ಮುಂದಾಗಿರುವುದನ್ನು ಸ್ವತಃ ಪ್ರಧಾನಮಂತ್ರಿಗಳೇ ಸ್ವಾಗತಿಸಿದ್ದರು. ನೈಸರ್ಗಿಕ ವಿಕೋಪಗಳ ಸಂದರ್ಭ ದಲ್ಲಿ ಪರಸ್ಪರ ಸಹಾಯ ಮಾಡುವುದು ಅತ್ಯಗತ್ಯ. 2016ರ ಮೇ ತಿಂಗಳಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ನಿರ್ವಹಣಾ ಕಾರ್ಯಸೂಚಿಯಲ್ಲಿ ವಿದೇಶಿ ನೆರವು ಪಡೆಯಬಹು ದೆಂಬುದು ಸ್ಪಷ್ಟವಾಗಿದೆಯೆಂದು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದಾ ರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಸೂಚಿಯ ಪ್ರಕಾರ ವಿಕೋಪಗಳ ಸಂದರ್ಭ ಗಳಲ್ಲಿ ಭಾರತ ಸರಕಾರ ವಿದೇಶಗಳ ನೆರವು ಕೇಳಬಾರದು. ಆದರೆ ವಿದೇಶಿ ಸರಕಾರಗಳು ತಾವಾಗಿಯೇ ಸದುದ್ದೇಶದಿಂದ ಸಂತ್ರಸ್ತರಿಗೆ ನೆರವು ನೀಡಲು ಮಂದೆ ಬಂದರೆ ಕೇಂದ್ರ ಸರಕಾರ ಅದನ್ನು ಸ್ವೀಕರಿಸಬಹುದು. ಕೇಂದ್ರ ಗೃಹ ಇಲಾಖೆಯ ಜೊತೆಗೆ ನೆರವು ನೀಡಲು ಬಯಸುವ ವಿದೇಶಗಳೊಂದಿಗೆ ಸಂಪರ್ಕ ಸಾಧಿಸಬಹುದು. ಹೀಗಿರುವಾಗ ಅದನ್ನು ಪಡೆದರೆ ಭಾರತದ ಕಾನೂನಿಗೆ ತೊಂದರೆಯಾಗದು. ಆದ್ದರಿಂದ ಕೇಂದ್ರ ಸರಕಾರ ಈ ಅನುದಾನವನ್ನು ತಿರಸ್ಕರಿಸಿರು ವುದು ನ್ಯಾಯಸಮ್ಮತವಲ್ಲ ಎಂದೇ ವಿಶ್ಲೇಷಿಸಬೇಕಾ ಗಿದೆ. 2004ರಲ್ಲಿ ಸುನಾಮಿ ಸಂಭವಿಸಿದಾಗ ವಿದೇಶಿ ದೇಣಿಗೆಯನ್ನು ನಿರಾಕರಿಸಿದ್ದನ್ನು ಕೇಂದ್ರ ಸರಕಾರ ನೆನಪಿಸುತ್ತಿದೆ. ಆದರೆ ಅಂದಿನ ಮನಮೋಹನ್ ಸಿಂಗ್‍ರ ನೇತೃತ್ವದ ಯುಪಿಎ ಸರಕಾರ ಸಂಸ್ಥೆಗಳ ಮುಖಾಂತರ ದೇಣಿಗೆ ರವಾನಿಸಲು ಅವಕಾಶ ಕಲ್ಪಿಸಿತ್ತೆಂಬುದನ್ನು ಇಲ್ಲಿ ನೆನಪಿಸಲೇಬೇಕು. ಇದೇ ನಿಯಮದ ಪ್ರಕಾರ ರೆಡ್‍ಕ್ರಾಸ್ ಸಂಸ್ಥೆಯು 1.5 ಕೋಟಿ ದೇಣಿಗೆಯನ್ನು ಕೇರಳಕ್ಕೆ ಹಸ್ತಾಂತರಿಸಿದೆ. ಇದು ವಿದೇಶಗಳಿಂದ ದೇಣಿಗೆ ಸ್ವೀಕಾರವಲ್ಲವೇ? ಹೀಗಿರುವಾಗ ಕೇಂದ್ರ ಈ ದ್ವಂದ್ವ ನೀತಿ ಅನುಸರಿಸಲು ಕಾರಣವೇನಿರಬಹುದು ಎಂದೇ ಅನುಮಾನಿಸಬೇಕಾಗುತ್ತದೆ. ಕೇಂದ್ರ ಸರಕಾರ ಅರಬ್ ರಾಷ್ಟ್ರದ ಈ ಅನುದಾನವನ್ನು ಪಡೆಯಲು ಮುಂದಾಗದಿರುವುದರ ವಿರುದ್ಧ ಸಿಪಿಐಎಂ ನಾಯಕರೊಬ್ಬರು ಸುಪ್ರೀಮ್ ಕೋರ್ಟ್‍ನ ಮೆಟ್ಟಿಲೇರುವ ಸೂಚನೆ ನೀಡಿರುವುದು ಗಮನಾರ್ಹ. ಈ ಮಧ್ಯೆ ಯುಎಇ ತಾನು ನೆರವು ನಿ ೀಡು ವುದಾಗಿ ಅಧಿಕೃತವಾಗಿ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಳಯಬಾಧಿತ ಪ್ರದೇಶ ಗಳಿಗೆ ನೆರವಿನ ಮಹಾಪೂರ ಹರಿದು ಬ ರುತ್ತಿರುವುದನ್ನು ತಡೆಯುವಂತಹ ರೀತಿಯ ಈ ವಿವಾದ ನಿಜಕ್ಕೂ ಸಮಂಜಸವಲ್ಲ. ಕೇಂದ್ರ ಸರಕಾರವು ಕೇರಳದ ಪ್ರಕೃತಿ ವಿಕೋಪಕ್ಕೆ ¸ ಸ್ಪಂದಿಸಿಲ್ಲ ಎನ್ನಲಾಗದು. ದೊಡ್ಡ ಪ್ರಮಾಣದಲ್ಲಿಯೇ ರಕ್ಷಣಾ ಕಾರ್ಯಾ ಚರಣೆ ನಡೆಸಿದೆ. 40 ಹೆಲಿಕಾಪ್ಟರ್‍ಗಳು, 31 ವಿಮಾನಗಳು, 182 ರಕ್ಷಣಾ ತಂಡಗಳು, 18 ವೈದ್ಯರ ತಂಡಗಳೂ ಎನ್.ಡಿ.ಆರ್.ಎಫ್.ನ 58 ತುಕಡಿಗಳೂ 500 ಬೋಟ್‍ಗಳೂ ಕೇರಳದ ಜನರ ರಕ್ಷಣೆಗೆ ಇಳಿದಿವೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ.
ಈ ಮಧ್ಯೆ ಕೇಂದ್ರದ ಸಚಿವರಾದ ಬಾಬುಲ್ ಸುಪ್ರಿಯೋರವರು ಕೇರಳದ ಮುಖ್ಯಮಂತ್ರಿಗಳನ್ನು ವಿಮರ್ಶಿಸುತ್ತಾ, ‘ಏಳುನೂರು ಕೋಟಿ ನೀಡುತ್ತೇವೆ ಎಂದು ಹೇಳಿದ್ದಕ್ಕೆ ದಾಖಲೆ ಇದೆಯೇ’ ಎಂದು ಪ್ರಶ್ನಿಸಿದ್ದಾರೆ. ಎರಡು ರಾಜಕೀಯ ಪಕ್ಷಗಳ ನಡುವಿನ ಗುದ್ದಾಟದೆಡೆಗೆ ಇದು ಸಾಗುತ್ತಿರುವುದನ್ನು ಸ್ಪಷ್ಟಪಡಿಸುತ್ತಿದೆ. ಯುಎಇಯ ರಾಯಭಾರಿ ಅಹ್ಮದ್ ಅಲ್ ಬನ್ನ, “ನಮ್ಮ ಸರಕಾರಯಾವುದೇ ನಿರ್ದಿಷ್ಟ ಮೊತ್ತವನ್ನು ಘೋಷಣೆ ಮಾಡಿಲ್ಲ. ಆದರೆ ಆರ್ಥಿಕ ನೆರವು ನೀಡಲು ಸಿದ್ಧರಿದ್ದೇವೆ” ಎಂದು ಹೇಳಿದ್ದರು. ಬಿಜೆಪಿಯ ಆರೋಪ ಮತ್ತು ರಾಯಭಾರಿಯ ಹೇಳಿಕೆಯನ್ನು ತಳ್ಳಿಹಾಕಿದ ಮುಖ್ಯಮಂತ್ರಿಗಳು ಕೇರಳದ ಲೂಲು ಗ್ರೂಪ್‍ನ ಮಾಲಿನ ಎಂ.ಎ. ಯೂಸುಫ್ ಅಲಿಯವರು ಈದ್ ಶುಭಾಶಯ ಕೋರಲು ಶೇಖ್ ಮುಹಮ್ಮದ್ ಬಿನ್ ಝಾಇದ್ ಅಲ್ ನಹ್ರಾನ್‍ರ ಬಳಿ ತೆರಳಿದಾಗ ಅವರು, “ನಾನು ಕೇರಳಕ್ಕೆ ಆರ್ಥಿಕ ನೆರವು ನೀಡುವ ಕುರಿತು ಪ್ರಧಾನಿಗಳ ಬಳಿ ಮಾತನಾಡಿದ್ದೇನೆ” ಎಂಬ ಮಾಹಿತಿ ನೀಡಿದ್ದರು. ನಾನು ಇದನ್ನು ಸಾರ್ವ ಜನಿಕವಾಗಿ ಘೋಷಿಸಲೇ ಎಂದು ಯೂಸುಫ್ ಅಲಿಯವರಲ್ಲಿ ಕೇಳಿದಾಗ ‘ಹಾಗೇ ಮಾಡುವುದರಲ್ಲಿ ತಪ್ಪೇನೂ ಇಲ್ಲವೆಂದು’ ಹೇಳಿದ್ದರು ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಈ ಮೂಲಕ ಯುಎಇಯ ನೆರವನ್ನು ಸ್ವೀಕರಿಸಲು ಕೇಂದ್ರದ ಮೇಲೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಡ ಹೇರುತ್ತಿದ್ದಾರೆ. ಆದರೆ ಕೇರಳಕ್ಕೆ ಯುಎಇ ನೆರವು ಘೋಷಿಸಿದ್ದಕ್ಕೆ ಗಲ್ಫ್ ಮಾಧ್ಯಮ ಹಾಗೂ ಮಾತೃಭೂಮಿ ಪತ್ರಿಕೆಗಳು ಧನ್ಯವಾದ ಸಲ್ಲಿಸಿದ ವರದಿಗಳೂ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಲೇಬೇಕು. ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಗಾದೆಯನ್ನು ನೆನಪಿಸುವಂತಿದೆ ಕೇಂದ್ರದ ನಡೆ. ಒಂದುವೇಳೆ, ಕೇಂದ್ರ ಆ ಮೊತ್ತವನ್ನು ತಡೆ ಹಿಡಿಯುವುದಾದರೆ ಸ್ವತಃ ತಾನೇ ಆ ಮೊತ್ತವನ್ನು ಭರಿಸಬೇಕು. ಜನರು ಸಂಕಷ್ಟ ಬವಣೆಗಳನ್ನು ಅನುಭವಿಸುತ್ತಿರುವಾಗ ಇಂತಹ ವಿವಾದಗಳು ಅಸಹನೀಯವಾಗಿದೆ.