ಉತ್ತರ ಪ್ರದೇಶದಲ್ಲಿ ವೆಲ್ಫೇರ್ ಪಾರ್ಟಿ ನಾಯಕನ ಬಂಧನ: ದಕ್ಷಿಣ ಕನ್ನಡ ಜಿಲ್ಲಾ ವೆಲ್ಫೇರ್ ಪಾರ್ಟಿ ಖಂಡನೆ

0
270

ಸನ್ಮಾರ್ಗ ವಾರ್ತೆ

ಮಂಗಳೂರು: ಪ್ರಸಕ್ತ ರಾಜಕೀಯದಲ್ಲಿಯೇ ಅಪೂರ್ವವಾದ ಕೇವಲ ಮೌಲ್ಯಾಧಾರಿತ ತಳಹದಿಯಲ್ಲಿ ಕ್ರಿಯಾಶೀಲವಾಗಿರುವ ರಾಜಕೀಯ ಪಕ್ಷವಾಗಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮುಖಂಡ ಮುಹಮ್ಮದ್ ಜಾವೇದ್ ಅವರನ್ನು, ಪ್ರವಾದಿ ನಿಂದನೆಯ ವಿರುದ್ಧ ಪ್ರಯಾಗ್ ರಾಜ್‌ನಲ್ಲಿ ಭುಗಿಲೆದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿದ್ದರೂ, ಅವರನ್ನು ಕುಟುಂಬ ಸಹಿತರಾಗಿ ಬಂಧಿಸಿರುವುದು ಖಂಡನೀಯವಾಗಿದೆ.

ರಾಜಕೀಯ ಭ್ರಷ್ಟಾಚಾರಗಳನ್ನು ವಿರೋಧಿಸುವ ಮತ್ತು ಸೈದ್ಧಾಂತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಸಣ್ಣ ರಾಷ್ಟೀಯ ಪಕ್ಷವೊಂದರ ಮೇಲೆ ಸರ್ವಾಧಿಕಾರಿ ಧೋರಣೆಯ ಫ್ಯಾಸಿಸಂ ವಕ್ತಾರರು ಹೊಂದಿರುವ ಭಯ ಹಾಗೂ ಹತಾಶೆಯನ್ನು ತೋರಿಸುತ್ತದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಡ್ವೋಕೇಟ್ ಸರ್ಫರಾಝ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರಕಾರದ ವಿರುದ್ಧ ಪ್ರತಿಭಟಿಸುವ ಪ್ರಜಾಪ್ರಭುತ್ವ ಹಕ್ಕನ್ನು ಕಸಿದುಕೊಂಡಿರುವ ಉತ್ತರ ಪ್ರದೇಶ ಸರಕಾರಕ್ಕೆ ಇದೊಂದು ನೆಪ ಮಾತ್ರವಾಗಿದ್ದು, ಒಟ್ಟಿನಲ್ಲಿ ಸರಕಾರದ ವಿರುದ್ಧದ ಯಾವುದೇ ಪ್ರತಿಭಟನೆಯನ್ನು ಹೀಗೆ ಅಧಿಕಾರ ಬಲದಿಂದ ಹತ್ತಿಕ್ಕುವುದು ಇವರ ನಿರಂಕುಶ ಪ್ರಭುತ್ವದ ಭಾಗವಾಗಿದೆ. ಇದೀಗ ಇದಕ್ಕೆ ಫೆಟರ್ನಿಟಿ ಮೂವ್ಮೆಂಟ್ ಇದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಫ್ರೀನ್ ಫಾತಿಮಾ ರವರ ತಾಯಿ ಮತ್ತು ತಂಗಿಯನ್ನು ಸೇರಿದಂತೆ ತಂದೆ ಜಾವೇದ್ ಮುಹಮ್ಮದ್ ರವರ ಒಟ್ಟು ಕುಟುಂಬವು ಬಂಧನದ ಬಲಿಪಶುವಾಗಿದೆ.

ಪ್ರವಾದಿ ನಿಂದನೆ ಹೇಳಿಕೆಯ ವಿರುದ್ಧದ ವಿದೇಶಿಯರ ಪ್ರತಿಭಟನೆ, ಬಹಿಷ್ಕಾರಕ್ಕೆ ಮಣಿಯುವ ಕೇಂದ್ರ ಸರಕಾರ ಸ್ವದೇಶಿಯರಿಗೆ ಮಾತ್ರ ಪ್ರತಿಭಟಿಸುವ ಹಕ್ಕನ್ನೇ ನಿರಾಕರಿಸುತ್ತಿರುವುದು ಸರಕಾರದ ದ್ವಂದ್ವ ನೀತಿಯನ್ನು ಮತ್ತು ಎಲ್ಲಾ ಧರ್ಮಗಳ ಬಗ್ಗೆ ಸರಕಾರವು ಗೌರವ ಹೊಂದಿದೆ ಎಂಬ ಅಂತರ್ ರಾಷ್ಟ್ರೀಯ ಹೇಳಿಕೆಯ ಅಪ್ರಾಮಾಣಿಕತೆಯನ್ನೂ ತೋರಿಸುತ್ತದೆ. ಅಲ್ಲದೇ, ಇಂದು ಸರಕಾರದ ಪ್ರತಿಯೊಂದು ಹೇಳಿಕೆ ಮತ್ತು ನಾಗರಿಕರಿಗೆ ನೀಡುವ ಭರವಸೆಗಳು ಕಾಪಟ್ಯಗಳಿಂದ ಕೂಡಿದ್ದು, ಅದು ತನ್ನ ಮಾತಿಗೆ ಬದ್ಧತೆ ಇಲ್ಲದಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.