ಒಳ್ಳೆಯ ವ್ಯಕ್ತಿ ಯಾರು?

0
285

✍️ ಝಾಕಿರ್ ಹುಸೈನ್, ಮಂಗಳೂರು

ಒಬ್ಬ ವ್ಯಕ್ತಿ ಉಮರ್(ರ)ರ ಮುಂದೆ ಇನ್ನೊಬ್ಬ ವ್ಯಕ್ತಿಯನ್ನು ಪ್ರಶಂಶಿಸುತ್ತಾರೆ. ಇಂತಿಂತಹ ವ್ಯಕ್ತಿ ಬಹಳ ಒಳ್ಳೆಯವನು. ಉಮರ್(ರ) ಪ್ರಶ್ನಿಸುತ್ತಾರೆ- ನೀನು ಅವರೊಡನೆ ಪ್ರಯಾಣ ಮಾಡಿದ್ದೀಯಾ? ಅವರ ಉತ್ತರ- “ಇಲ್ಲ”. ಉಮರ್(ರ) ಪ್ರಶ್ನಿಸುತ್ತಾರೆ- ನೀನು ಅವರೊಂದಿಗೆ ಹಣಕಾಸಿನ ವ್ಯವಹಾರ ನಡೆಸಿದ್ದೀಯಾ? “ಇಲ್ಲ”. ಆಗ ಉಮರ್(ರ) ಹೇಳುತ್ತಾರೆ- ಹಾಗಾದರೆ ನಿನಗೆ ಅವರ ಬಗ್ಗೆ ಸರಿಯಾಗಿ ತಿಳಿದಿಲ್ಲ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಅವನ ಬಾಹ್ಯರೂಪ, ವೇಷ-ಭೂಷಣಗಳು, ಅವರ ಆರಾಧನಾ ಕರ್ಮಗಳು, ಅವರ ಮಾತು, ಭಾಷಣ ಅಥವಾ ಬರಹಗಳು ಇವುಗಳ ಮೂಲಕ ಅಳೆಯಲಾಗುತ್ತದೆ. ಆದರೆ ಉಮರ್(ರ) ಇವ್ಯಾವುದನ್ನೂ ಪ್ರಸ್ತಾಪಿಸದೆ ಒಬ್ಬ ಮನುಷ್ಯನನ್ನು ಅಳೆಯುವ ಮಾನದಂಡ ಅವರು ಜನರೊಡನೆ ನಡೆಸುವ ವ್ಯವಹಾರಗಳು ಮತ್ತು ಅವರ ವರ್ತನೆಗಳು ಎಂದು ಹೇಳುತ್ತಾರೆ.

ವ್ಯವಹಾರಗಳು ಖಂಡಿತವಾಗಿಯೂ ಈಮಾನಿನ ಪರೀಕ್ಷೆಯಾಗಿದೆ. ಒಬ್ಬ ವ್ಯಕ್ತಿಯ ನಿಜವಾದ ಗುಣನಡತೆ, ಸತ್ಯನಿಷ್ಠೆ ಮತ್ತು ದೇವ ಭಯವು ಅವರ ಹಣಕಾಸಿನ ವ್ಯವಹಾರಗಳಲ್ಲಿ ಬಹಿರಂಗವಾಗುತ್ತದೆ. ಪ್ರವಾದಿ(ಸ) ಹೇಳಿದರು- ಮುಸ್ಲಿಮ್ ಎಂದರೆ ಅವರ ನಾಲಗೆ ಮತ್ತು ಕೈಯಿಂದ ಇತರ ಜನರು ಸುರಕ್ಷಿತವಾಗಿರುವ ವ್ಯಕ್ತಿ. ಒಬ್ಬ ವ್ಯಕ್ತಿ ಸುದೀರ್ಘವಾಗಿ ನಮಾಝ್ ಮಾಡಬಹುದು. ಹೆಚ್ಚು ಉಪವಾಸಗಳನ್ನು ಆಚರಿಸಬಹುದು, ಇಸ್ಲಾಮಿನ ಬಗ್ಗೆ ಅತ್ಯಂತ ಸುಂದರವಾದ ಉಪನ್ಯಾಸಗಳನ್ನು ನೀಡ ಬಹುದು. ಆದರೆ ಅವರ ವ್ಯವ ಹಾರಗಳು ಸರಿಯಿಲ್ಲವೆಂದಾದರೆ ಅವರು ಜನರಿಗೆ ವಂಚನೆ ಮಾಡುವವರಾದರೆ ಅಥವಾ ಅವರು ಜನರ ಹಕ್ಕುಗಳನ್ನು ಕಬಳಿಸುವವರಾದರೆ ಖಂಡಿತವಾಗಿಯೂ ಅವರಲ್ಲಿ ಈಮಾನಿನ ಕೊರತೆ ಇದೆ. ಈಮಾನಿನ ನಿಜವಾದ ಪರೀಕ್ಷೆ- ನಾವು ಹಣವನ್ನು ಹೇಗೆ ಸಂಪಾದಿಸುತ್ತೇವೆ, ಹೇಗೆ ಖರ್ಚು ಮಾಡುತ್ತೇವೆ, ಹಣಕಾಸಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ಹಣದ ವಿಷಯ ಬಂದಾಗ ನಾವು ಎಷ್ಟು ವಿಶ್ವಾಸಾರ್ಹರಾಗಿದ್ದೇವೆ ಎಂಬುದಾಗಿದೆ.

ಮನುಷ್ಯನ ಈಮಾನ್, ಅವರ ಸ್ವಭಾವವನ್ನು ಪರೀಕ್ಷೆಗೊಳಪಡಿಸುವ ಹಣಕಾಸಿನ ವ್ಯವಹಾರಗಳ ಪೈಕಿ ಮೂರು ಮುಖ್ಯ ವ್ಯವಹಾರಗಳು ಹೀಗಿವೆ:

  1. ಸಾಲದ ವ್ಯವಹಾರ:

ಇಂದಿನ ಸಮಾಜದ ಅತ್ಯಂತ ದೊಡ್ಡ ಸಮಸ್ಯೆಗಳಲ್ಲಿ ಒಂದು ಸಾಲದ ಸಂಸ್ಕೃತಿಯಾಗಿದೆ. ಸಾಲವು ಮರಣದ ನಂತರವೂ ವ್ಯಕ್ತಿಯ ಮೇಲೆ ಪರಿಣಾಮ ಬೀರುವಷ್ಟು ಗಂಭೀರ ವಿಷಯವಾಗಿದೆ. ವಿಶ್ವಾಸಿಯ ಆತ್ಮವು ಅವನ ಸಾಲ ತೀರಿಸಲ್ಪಡುವ ವರೆಗೆ ತಡೆಹಿಡಿಯಲ್ಪಟ್ಟಿರುತ್ತದೆ. ಶಹಾದತ್(ಹುತಾತ್ಮ)ನಂಥ ಉನ್ನತ ಸ್ಥಾನಮಾನವೂ ಸಾಲವನ್ನು ರದ್ದುಪಡಿಸುವುದಿಲ್ಲ. ಸಾಲ ತೀರಿ ಸಲು ಸಾಮರ್ಥ್ಯವಿದ್ದು ತಡ ಮಾಡುವುದು ಇಸ್ಲಾಮಿನ ಪ್ರಕಾರ ಅನ್ಯಾಯವಾಗಿದೆ. ಪ್ರವಾದಿ(ಸ) ಈ ದುಆವನ್ನು ಅತೀ ಹೆಚ್ಚು ಮಾಡುತ್ತಿದ್ದರು. `ಅಲ್ಲಾಹುಮ್ಮ ಇನ್ನೀ ಅವೂದುಬಿಕ ಮಿನಲ್ ಮಅï‌ಸಮಿ ವಲ್ ಮಗ್‌ರಮಿ’ (ಓ ಅಲ್ಲಾಹ್! ಪಾಪ ಮತ್ತು ಸಾಲದಿಂದ ನಿನ್ನಲ್ಲಿ ಅಭಯ ವನ್ನು ಬೇಡುತ್ತೇನೆ.) ಸಹಾಬಿಗಳು ಕೇಳಿದರು- “ನೀವು ಸಾಲದಿಂದ ಏಕೆ ಇಷ್ಟೊಂದು ಅಭಯ ಕೋರುತ್ತೀರಿ?” ಅದಕ್ಕೆ ಪ್ರವಾದಿ(ಸ) ಹೇಳಿದರು- “ಸಾಲದಲ್ಲಿ ಸಿಲುಕಿದ ವ್ಯಕ್ತಿ ಸುಳ್ಳು ಹೇಳುತ್ತಾನೆ ಮತ್ತು ವಾಗ್ದಾನ ಮಾಡಿ ಅದನ್ನು ಮುರಿಯುತ್ತಾನೆ.”

ಸಾಲವು ಸ್ವತಃ ಪಾಪವಲ್ಲ. ಆದರೆ ಅದು ಹಲವು ಬಾರಿ ಸುಳ್ಳು ಹೇಳಲು, ಜನರಿಂದ ದೂರವಿರಲು, ವಾಗ್ದಾನಗಳನ್ನು ಮುರಿಯಲು, ಮನಶ್ಶಾಂತಿಯನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಹಿಂದಿನ ಕಾಲದಲ್ಲಿ ಜನರು ಚಿಕಿತ್ಸೆ, ಶಿಕ್ಷಣ, ಕುಟುಂಬದ ಅಗತ್ಯ ಖರ್ಚುಗಳು ಮತ್ತು ತುರ್ತು ಅಗತ್ಯಗಳಿಗಾಗಿ ಸಾಲ ಮಾಡುತ್ತಿದ್ದರು. ಆದರೆ ಇಂದು ದುಬಾರಿ ಮೊಬೈಲ್ ಖರೀದಿಸಲು, ಬ್ರಾಂಡೆಡ್ ವಸ್ತುಗಳನ್ನು ಖರೀದಿಸಲು, ಅದ್ದೂರಿ ಮದುವೆಗಳಿಗಾಗಿ, ಪ್ರವಾಸ-ಮನೋರಂಜನೆ ಹೀಗೆ ಪ್ರತಿಯೊಂದು ವಿಷಯಗಳಿಗೂ ಸಾಲ ಮಾಡಲಾಗುತ್ತದೆ. ಇಒI ಮೂಲಕ ಇವೆಲ್ಲವುಗಳನ್ನು ಖರೀದಿಸಿ ನಾಳಿನ ಆದಾಯವನ್ನು ಇಂದು ಖರ್ಚು ಮಾಡಲಾಗುತ್ತಿದೆ.

ಪವಿತ್ರ ಕುರ್‌ಆನಿನ ಆಯತುದ್ದೈನ್ ಎಂದು ಅರಿಯಲ್ಪಡುವ ಸುಮಾರು ಒಂದು ಪುಟದಷ್ಟು ದೀರ್ಘವಿರುವ ಸೂಕ್ತವು ಚರ್ಚಿಸುವುದು ಇಸ್ಲಾಮಿನ ಯಾವುದೇ ಆರಾಧನಾ ಕರ್ಮಗಳ ಬಗ್ಗೆ ಅಲ್ಲ, ಬದಲಾಗಿ ಮನುಷ್ಯನ ವ್ಯವಹಾರ. ಅದರಲ್ಲೂ ಮುಖ್ಯವಾಗಿ ಸಾಲದ ಬಗ್ಗೆಯಾಗಿದೆ. ಈ ವಿಷ ಯವು ಪ್ರತಿಯೊಂದು ಮನೆ, ಪ್ರತಿಯೊಂದು ವ್ಯಾಪಾರ, ಪ್ರತಿಯೊಂದು ಕುಟುಂಬ ಮತ್ತು ಸಮಾಜದ ಪ್ರತಿಯೊಂದು ಸದಸ್ಯನ ಜೀವನಕ್ಕೆ ನೇರವಾಗಿ ಸಂಬಂಧಿಸಿದ ವಿಷಯವಾಗಿದೆ.

ಸಾಮಾನ್ಯವಾಗಿ ಜನರು ಉಪನ್ಯಾಸಗಳಲ್ಲಿ ನಮಾಝ್, ಉಪವಾಸ ಇಂತಹ ಆರಾಧನಾ ಕರ್ಮಗಳ ಬಗ್ಗೆ ಮಾತಾಡುತ್ತಾರೆ. ಸಾಲ, ವ್ಯವಹಾರ ಇವುಗಳನ್ನು ಸಾಮಾನ್ಯ ಹಣಕಾಸಿನ ವಿಷಯವೆಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಇಸ್ಲಾಮಿನಲ್ಲಿ ಸಾಲವು ಕೇವಲ ಹಣಕಾಸಿನ ವಿಷಯವಲ್ಲ, ಬದಲಾಗಿ ಹಕ್ಕುಗಳ ವಿಷಯ, ಈಮಾನಿನ ವಿಷಯ, ಜವಾಬ್ದಾರಿಯ ವಿಷಯ, ವ್ಯಕ್ತಿತ್ವದ ವಿಷಯ ಮತ್ತು ಅಂತಿಮ ವಾಗಿ ಆಖಿರತ್‌ನ ವಿಷಯವಾಗಿದೆ. ಇಂದು ಅನೇಕ ಜನರು ಸಾಲವನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತಾರೆ.

ಒಂದು ಕ್ಷಣ ಯೋಚಿಸಿ- ಕುರ್‌ಆನಿನ ಅತ್ಯಂತ ದೀರ್ಘವಾದ ಸೂಕ್ತ ಏಕೆ ಸಾಲದ ಬಗ್ಗೆ ಬಂದಿದೆ? ಏಕೆಂದರೆ ಸಾಲದ ವಿಷಯದಲ್ಲಿ ಸಂಬಂಧಗಳು ಹಾಳಾಗುತ್ತವೆ, ಕುಟುಂಬಗಳು ಒಡೆಯುತ್ತವೆ, ಸ್ನೇಹಗಳು ಮುರಿಯುತ್ತವೆ, ನ್ಯಾಯ ಮತ್ತು ಅನ್ಯಾಯದ ಪ್ರಶ್ನೆಗಳು ಉದ್ಭವಿಸುತ್ತವೆ. ಆದ್ದರಿಂದ ಇಸ್ಲಾಮ್ ಈ ವಿಷಯಕ್ಕೆ ವಿಶೇಷ ಮಹತ್ವ ನೀಡಿದೆ. ಒಮ್ಮೆ ಒಬ್ಬ ವ್ಯಕ್ತಿಯ ಮೃತ ಶರೀರವನ್ನು ನಮಾಝಿಗಾಗಿ ತರಲಾಯಿತು. ಪ್ರವಾದಿ(ಸ) ಕೇಳಿದರು- “ಇವರ ಮೇಲೆ ಸಾಲ ಇದೆಯೇ?” “ಹೌದು” ಎಂಬ ಉತ್ತರ ಬಂದಿತು. ಪ್ರವಾದಿ(ಸ) ಹೇಳಿದರು- “ನಿಮ್ಮ ಸಂಗಾತಿಯ ಜನಾಝ ನಮಾಝನ್ನು ನೀವು ಮಾಡಿಕೊಳ್ಳಿ.” ನಂತರ ಒಬ್ಬ ಸಂಗಾತಿ ಸಾಲವನ್ನು ತೀರಿಸುವ ಜವಾಬ್ದಾರಿ ತೆಗೆದು ಕೊಂಡಾಗ ಪ್ರವಾದಿ(ಸ) ಜನಾಝ ನಮಾಝನ್ನು ನಿರ್ವಹಿಸಿದರು. ಇದು ಸಾಲದ ಗಂಭೀರತೆಯನ್ನು ಸಮುದಾಯಕ್ಕೆ ತಿಳಿಸಲು ಪ್ರವಾದಿಯವರು(ಸ) ನೀಡಿದ ಶಿಕ್ಷಣವಾಗಿತ್ತು.

  1. ಮಾರಾಟ-ಖರೀದಿಯಲ್ಲಿ ಪ್ರಾಮಾಣಿಕತೆ:

ಪ್ರವಾದಿ(ಸ) ಹೇಳಿದರು, “ಖರೀದಿದಾರರು ಮತ್ತು ಮಾರಾಟಗಾರರು ಸತ್ಯವನ್ನು ಹೇಳಿ, ವಸ್ತುವಿನ ದೋಷ ವನ್ನು ಸ್ಪಷ್ಟಪಡಿಸಿ ವ್ಯವಹಾರ ನಡೆಸಿದರೆ ಅವರ ವ್ಯವಹಾರದಲ್ಲಿ ಬರ್ಕತ್ ಇರುತ್ತದೆ. ಅವರು ಸುಳ್ಳು ಹೇಳಿ ವಸ್ತುವಿನ ದೋಷವನ್ನು ಮರೆ ಮಾಚಿದರೆ ವ್ಯಾಪಾರದ ಬರ್ಕತ್ ಅಳಿಸಿ ಹೋಗುತ್ತದೆ.” ಈ ಹದೀಸಿನಲ್ಲಿ ಪ್ರವಾದಿಯವರು(ಸ) ಲಾಭ ಎಂಬ ಪದದ ಬದಲಿಗೆ `ಬರ್ಕತ್’ ಎಂಬ ಪದವನ್ನು ಬಳಸಿದರು. ಏಕೆಂದರೆ ಒಬ್ಬ ವ್ಯಕ್ತಿಯು ಸಾವಿರಾರು ಅಥವಾ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು. ಆದರೆ ಅದರಲ್ಲಿ ಬರ್ಕತ್ ಇಲ್ಲದಿದ್ದರೆ, ಆ ಹಣವು ಅನಾ ರೋಗ್ಯಕ್ಕೆ ಖರ್ಚಾಗಬಹುದು. ಕೋರ್ಟ್ ಕೇಸ್‌ಗಳಿಗೆ ಹೋಗಬಹುದು, ಕುಟುಂಬದ ಸಮಸ್ಯೆಗಳಲ್ಲಿ ಕರಗಬಹುದು. ಮನಶ್ಶಾಂತಿ ಕಳೆದು ಹೋಗಬಹುದು. ಆದರೆ ಸ್ವಲ್ಪ ಆದಾಯದಲ್ಲೂ ಬರ್ಕತ್ ಇದ್ದರೆ ಅದು ಸಾಕಾಗುತ್ತದೆ ಮತ್ತು ಸಂತೃಪ್ತಿಯನ್ನು ನೀಡುತ್ತದೆ.

ಇಂದಿನ ವ್ಯಾಪಾರದಲ್ಲಿರುವ ಸಾಮಾನ್ಯ ಸಮಸ್ಯೆಗಳು:

  • ದೋಷಗರಳನ್ನು ಮರೆಮಾಚುವುದು:

ವಾಹನಗಳನ್ನು ಮಾರಾಟ ಮಾಡುವಾಗ ಅದರ ಆಕ್ಸಿಡೆಂಟ್, ಹಿಸ್ಟ್ರಿ ಮರೆ ಮಾಚುವುದು, ಮನೆಯನ್ನು ಬಾಡಿಗೆಗೆ ನೀಡುವಾಗ ಅದರ ಸಮಸ್ಯೆಗಳನ್ನು ಹೇಳದೇ ಇರುವುದು. ಮೊಬೈಲ್ ಅಥವಾ ಇಲೆಕ್ಟ್ರಾನಿಕ್‌ ವಸ್ತುಗಳಲ್ಲಿ ಇರುವ ದೋಷಗಳನ್ನು ತಿಳಿಸದೇ ಮಾರಾಟ ಮಾಡುವುದು.

  • ತಪ್ಪು ಜಾಹೀರಾತುಗಳು:

ಇದು ಜಾಹೀರಾತುಗಳ ಯುಗವಾಗಿದೆ. ಕೆಲವರು ಉತ್ಪನ್ನಗಳ ಗುಣಗಳನ್ನು ಅತಿಯಾಗಿ ಹೇಳುತ್ತಾರೆ. ಇಲ್ಲದ ಗುಣಗಳನ್ನು ಇದೆಯೆಂದು ಹೇಳುತ್ತಾರೆ. ಗ್ರಾಹಕರನ್ನು ಆಕರ್ಷಿಸಲು ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಒಂದು ವಸ್ತು ಸಾಮಾನ್ಯವಾಗಿದ್ದರೂ ಅದನ್ನು ಅತ್ಯುತ್ತಮ'100% ಗ್ಯಾರಂಟಿ’ `ಜೀವನ ಪೂರ್ತಿ ಸಮಸ್ಯೆ ಇಲ್ಲ’ ಇತ್ಯಾದಿ ಹೇಳುವುದು ಪ್ರಾಮಾಣಿಕತೆಯಾಗಲಾರದು.

  • ತೂಕ ಅಳತೆಗಳಲ್ಲಿ ಮೋಸ:

ಇದು ನಮ್ಮ ಸಮಾಜದಲ್ಲಿ ಕಾಣು ವಂತಹ ಸರ್ವೇ ಸಾಮಾನ್ಯವಾದ ಸಮಸ್ಯೆಯಾಗಿದೆ. ಇದು ಕುರ್‌ಆನಿನಲ್ಲಿ ವಿಶೇಷವಾಗಿ ಖಂಡಿಸಲ್ಪಟ್ಟ ಪಾಪವಾಗಿದೆ. `ವೈಲುಲ್ಲಿಲ್ ಮುತಪ್ಪಿಫೀನ್’ (ಅಳತೆ ಮತ್ತು ತೂಕದಲ್ಲಿ ಮೋಸ ಮಾಡುವವರಿಗೆ ವಿನಾಶವಿದೆ) ಎಂದು ಕುರ್‌ಆನ್ ಹೇಳಿದೆ. ಇದು ಕೇವಲ ತೂಕ-ಅಳತೆಗಳ ವಿಷಯ ಮಾತ್ರವಲ್ಲ ಬದಲಾಗಿ- ಕೆಲಸದ ಗಂಟೆಗಳಲ್ಲಿ, ಸೇವೆಗಳ ಗುಣಮಟ್ಟದಲ್ಲಿ, ಒಪ್ಪಂದಗಳ ಪಾಲನೆಯಲ್ಲಿ ಹೀಗೆ ವ್ಯಾಪಾರದ ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯಿಸುತ್ತದೆ.

ಇಸ್ಲಾಮಿನಲ್ಲಿ ವ್ಯಾಪಾರವು ಕೇವಲ ಹಣ ಸಂಪಾದಿಸುವ ಮಾರ್ಗವಲ್ಲ, ಅಲ್ಲಾಹನ ಬಳಿ ಅತ್ಯುನ್ನತ ಸ್ಥಾನಮಾನವನ್ನು ಪಡೆಯುವ ದಾರಿಯಾಗಿದೆ. ಪ್ರವಾದಿ(ಸ) ಹೇಳಿದರು- “ಸತ್ಯವಂತ ಮತ್ತು ಪ್ರಾಮಾಣಿಕ ವ್ಯಾಪಾರಿಯು ಕಿಯಾಮತ್ ದಿನದಲ್ಲಿ ಪ್ರವಾದಿಗಳು, ಸತ್ಯವಂತರು ಮತ್ತು ಹುತಾತ್ಮರ ಜೊತೆಗಿರುವರು.”

3) ಹೂಡಿಕೆ ಅಥವಾ ಇನ್‌ವೆಸ್ಟ್ಮೆಂಟ್

ಉಮರ್(ರ) ಹೇಳಿದಂತೆ ಒಬ್ಬ ವ್ಯಕ್ತಿಯ ನಿಜವಾದ ಸ್ವಭಾವ, ಅವನ ಈಮಾನ್ ಮತ್ತು ಹಣಕಾಸಿನ ವ್ಯವಹಾರಗಳಲ್ಲಿ ಗೋಚರಿಸುತ್ತದೆ. ಇಂದು ಈ ಪರೀಕ್ಷೆ ಸ್ಪಷ್ಟವಾಗಿ ಕಾಣಿಸಿಕೊಳ್ಳುವ ಇನ್ನೊಂದು ಕ್ಷೇತ್ರವೆಂದರೆ ಇನ್ ವೆಸ್ಟ್ಮೆಂಟ್ ಆಗಿದೆ. ಕಳೆದ ಕೆಲವು ದಶಕಗಳಲ್ಲಿ ಮುಸ್ಲಿಮ್ ಸಮಾಜ ದಲ್ಲಿ ಒಂದು ಹೊಸ ಮನೋಭಾವ ಬೆಳೆಯುತ್ತಿದೆ. ಜನರು ವ್ಯಾಪಾರ ಮಾಡಲು ಬಯಸುವುದಿಲ್ಲ, ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ, ನಷ್ಟವನ್ನು ಹೊರಲು ಮನಸ್ಸಿಲ್ಲ, ಆದರೆ ಲಾಭ ಮಾತ್ರ ಬೇಕು. ವ್ಯಾಪಾರದಲ್ಲಿ ಪಾಲುದಾರಿಕೆಗೆ ಸೇರಿ ನಿರ್ದಿಷ್ಟ ಮೊತ್ತವನ್ನು ಪಡೆಯುವವರಿದ್ದಾರೆ. ಇಂದು ಸಾಮಾನ್ಯವಾಗಿ ಕೇಳಿ ಬರುವ ಮಾತುಗಳು- “ನೀವು ಹಣ ಹಾಕಿ, ಉಳಿದುದನ್ನು ನಾನು ನೋಡಿಕೊಳ್ಳುತ್ತೇನೆ.” ಪ್ರತಿ ತಿಂಗಳು ಖಚಿತ ಆದಾಯ ಸಿಗುತ್ತದೆ. ನಿಮ್ಮ ಮೂಲ ಧನಕ್ಕೆ ಯಾವುದೇ ಅಪಾಯವಿಲ್ಲ ಇತ್ಯಾದಿ. ಮೇಲ್ನೋಟಕ್ಕೆ ಇಂತಹ ಪ್ರಸ್ತಾಪಗಳು ಆಕರ್ಷಕವಾಗಿ ಕಾಣಬಹುದು. ಆದರೆ ಇದು ಇಸ್ಲಾಮಿನ ಮೂಲ ನಿಯಮ `No risk, No profit’ ಇದಕ್ಕೆ ವಿರುದ್ಧವಾಗಿದೆ. ಯಾವ ವ್ಯಕ್ತಿ ಲಾಭದಲ್ಲಿ ಪಾಲುದಾರ ನಾಗಲು ಬಯಸುತ್ತಾನೋ ಅವನು ನಷ್ಟದ ಸಾಧ್ಯತೆಯಲ್ಲೂ ಪಾಲುದಾರ ನಾಗಬೇಕು. ಇದು ಇಸ್ಲಾಮಿನ ಆರ್ಥಿಕ ನ್ಯಾಯದ ಅಡಿಪಾಯವಾಗಿದೆ.

ಒಬ್ಬ ವಿಶ್ವಾಸಿಯಾದವನು ಹೂಡಿಕೆ ಮಾಡುವಾಗ ವ್ಯಾಪಾರದ ಕೆಲವು ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಈ ಲಾಭ ನಿಜವಾದ ವ್ಯಾಪಾರದಿಂದ ಬರುತ್ತಿದೆಯೇ, ಲೆಕ್ಕ ಪತ್ರಗಳು ಪಾರದರ್ಶಕವಾಗಿವೆಯೇ, ಈ ವ್ಯವಹಾರ ವನ್ನು ನಾನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆಯೇ, ಇದನ್ನು ದೇವನ ಮುಂದೆ ಸಮರ್ಥಿಸಬಹುದೇ…? ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿದಿರಬೇಕು. ಹಲಾಲ್ ವ್ಯಾಪಾರದಲ್ಲಿ ಲಾಭವು ರಿಸ್ಕ್‌ನ ಜೊತೆಯಲ್ಲೇ ಬರುತ್ತದೆ. ರಿಸ್ಕ್ ಇಲ್ಲದ ಖಚಿತ ಲಾಭದ ಭರವಸೆ ಕೇಳಿದಾಗ ಒಬ್ಬ ವಿಶ್ವಾಸಿಯು ಉತ್ಸಾಹಗೊಳ್ಳುವ ಬದಲು ಎಚ್ಚರಗೊಳ್ಳಬೇಕು.

ಈ ಎಲ್ಲಾ ವಿಷಯಗಳ ಸಾರಾಂಶ ಒಂದೇ:

ಹಣವು ಕೇವಲ ಸಂಪಾದನೆಯ ಸಾಧನವಲ್ಲ. ಅದು ಒಂದು ಅಮಾನತ್ ಆಗಿದೆ. ನಮ್ಮ ನಮಾಝ್, ಉಪವಾಸ ಇತರ ಎಲ್ಲಾ ಆರಾಧನಾ ಕರ್ಮಗಳು ಅಲ್ಲಾಹನ ಹಕ್ಕುಗಳಾಗಿವೆ. ಆದರೆ ನಮ್ಮ ಹಣಕಾಸಿನ ವ್ಯವಹಾರವು ಜನರೊಂದಿಗೆ ಸಂಬಂಧ ಹೊಂದಿದೆ. ಅಲ್ಲಿಯೇ ನಮ್ಮ ಪ್ರಾಮಾಣಿಕತೆ, ನಮ್ಮ ತಕ್ವಾ, ನಮ್ಮ ನ್ಯಾಯ ಪ್ರಜ್ಞೆ ಮತ್ತು ನಮ್ಮ ವ್ಯಕ್ತಿತ್ವದ ನಿಜವಾದ ಪರೀಕ್ಷೆ ನಡೆಯುತ್ತದೆ.