ನಿಜಕ್ಕೂ ಬನೂ ಇಸ್ರಾಈಲರು ಯಾರು?

0
957

ಸನ್ಮಾರ್ಗ ವಾರ್ತೆ

ಸಯ್ಯದ್ ಸಾದತುಲ್ಲಾ ಹುಸೈನಿ
ಜ.ಇ. ಹಿಂದ್ ರಾಷ್ಟ್ರೀಯ ಅಧ್ಯಕ್ಷರು

(ಕಳೆದ ಸಂಚಿಕೆಯಿಂದ)

19ನೇ ಶತಮಾನದ ಅಂತ್ಯದ ವೇಳೆಯಲ್ಲಿ ವಿಶ್ವದ ವಿವಿಧ ಭಾಗಗಳ ಯಹೂದಿಯರು ಫೆಲೆಸ್ತೀನ್‌ನ ಫಲವತ್ತಾದ ಪ್ರದೇಶಗಳಿಗೆ ವಲಸೆ ಬರಲು ಆರಂಭಿಸಿದ್ದರು. ಇದು ನಿಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆ ವಾಸಿಸುತ್ತಿದ್ದ ಭೂಮಿ ಎಂದು ಆ ಯಹೂದಿಯರೊಂದಿಗೆ ಹೇಳಲಾಯಿತು.

ಇಂದಿನ ಇಸ್ರೇಲ್‌ನಲ್ಲಿ ಬನೂ ಇಸ್ರಾಈಲರಲ್ಲಿ ಸಂಬಂಧಿಸಿದ ನೈಜ ಯಹೂದಿಯರು ಎಷ್ಟಿದ್ದಾರೆ, ಇವರೊಂದಿಗೆ ಸಂಬಂಧವಿಲ್ಲದ ಆರ್ಯ ವಂಶಜರಾದ ಬಿಳಿಯ ಯಹೂದಿಯರು (ಇವರು ವಿವಿಧ ಕಾಲಗಳಲ್ಲಿ ವಿವಿಧ ಕಾರಣಗಳಿಂದ ಯಹೂದಿ ಧರ್ಮ ಸ್ವೀಕರಿಸಿದವರು) ಎಷ್ಟಿದ್ದಾರೆ- ಇವೆಲ್ಲಾ ಪರಿಶೀಲಿಸಬೇಕಾದ ವಿಷಯಗಳಾಗಿವೆ.

ಇಂದಿನ ಇಸ್ರೇಲ್‌ನಲ್ಲಿ ‘ಬನೂ ಇಸ್ರಾಈಲ್’ಗೆ ಸೇರಿರುವ ಯಹೂದಿಯರು ಬಹಳ ಕಡಿಮೆಯಿದ್ದಾರೆಂದು ಯಹೂದಿ ಇತಿಹಾಸಕಾರರು ಸಾಕ್ಷಿ ಹೇಳುತ್ತಾರೆ. ಮೂಲ ಬನೂ ಇಸ್ರಾಈಲರ ಕಥೆ ಇದಾಗಿದ್ದರೆ, ಈಗಿರುವ ಯಹೂದಿಯರಿಗೆ ಫೆಲೆಸ್ತೀನ್‌ನ ಭೂಮಿಯ ಮೇಲೆ ಹಕ್ಕು ಸ್ಥಾಪಿಸಲು ಯಾವುದೇ ಮಾನದಂಡವಿಲ್ಲ.

ಪ್ರವಾದಿ ಇಬ್ರಾಹೀಮ್(ಅ) (ಬನೂ ಇಸ್ರಾಈಲ್ ಮತ್ತು ಅರಬಿಗಳು ಇವರ ವಂಶಜರು) ಇರಾಕ್‌ನಿಂದ ಫೆಲೆಸ್ತೀನ್‌ಗೆ ತಲುಪುತ್ತಾರೆ. ಅಲ್ಲಿ ಅವರ ಮೊಮ್ಮಗ ಪ್ರವಾದಿ ಯಾಕೂಬ್‌ರು(ಅ) ತನ್ನ ಕುಟುಂಬದೊಂದಿಗೆ ಮಗ ಯೂಸುಫ್(ಅ) ಈಜಿಪ್ಟ್ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ತಲುಪುತ್ತಾರೆ. ಇವರ ವಂಶಪರಂಪರೆಯೇ ನಿಜವಾದ ಬನೂ ಇಸ್ರಾಈಲ್ ಆಗಿದೆ.

ಈಜಿಪ್ಟ್ ನಲ್ಲಿ ಸುದೀರ್ಘ ಕಾಲ ಗುಲಾಮರಾಗಿ ಜೀವಿಸಬೇಕಾಗಿ ಬಂದ ಬನೂ ಇಸ್ರಾಈಲರು ಬಳಿಕ ಮೂಸಾ(ಅ)ರ ಕಾಲದಲ್ಲಿ ಫೆಲೆಸ್ತೀನ್‌ಗೆ ಮರಳಿ ಬರುತ್ತಾರೆ. ನಲ್ವತ್ತು ವರ್ಷ ಕಾಲ ಯುದ್ಧ ಭೂಮಿಯಲ್ಲಿ ಅಲೆದಾಡಿದ ಬಳಿಕ ಇವರು ಪೂರ್ವ ಜೋರ್ಡಾನ್‌ಗೆ ತಲುಪುತ್ತಾರೆ. ಅಲ್ಲಿ ಪ್ರವಾದಿ ಮೂಸಾ(ಅ) ನಿಧನ ಹೊಂದುತ್ತಾರೆ. ಪ್ರವಾದಿ ಮೂಸಾ(ಅ)ರ ಉತ್ತರಾಧಿಕಾರಿ ಯೂಶವಬಿನ್ ನೂನ್‌ರ ನೇತೃತ್ವದಲ್ಲಿ ಯಹೂದಿಯರು ಮೊತ್ತ ಮೊದಲು ಫೆಲೆಸ್ತೀನ್‌ಗೆ ಬರುತ್ತಾರೆ. ತಾಲೂತ್‌ನ ನೇತೃತ್ವದಲ್ಲಿ ಯುದ್ಧವನ್ನು ಜಯಿಸಿದ (ಕ್ರಿ.ಪೂ. 1047) ಬಳಿಕ ಆ ವಲಯದ ನಿಯಂತ್ರಣವನ್ನು ಅವರು
ಪಡೆದುಕೊಂಡರು. ನಂತರ ಪ್ರವಾದಿ ದಾವೂದ್(ಅ)ರ ಆಳ್ವಿಕೆ ನಡೆಯುತ್ತದೆ. ಅದರ ಬಳಿಕ ಸುಲೈಮಾನ್(ಅ)ರ ಉಜ್ವಲ ಆಳ್ವಿಕೆಗೆ ಫೆಲೆಸ್ತೀನ್ ಸಾಕ್ಷಿಯಾಗುತ್ತದೆ.

ಅವರ ಬಳಿಕ ಇಸ್ರಾಈಲ್ ಸಂತತಿಗಳ ನಡುವೆ ಆಂತರಿಕ ಯುದ್ಧ ಸ್ಫೋಟಗೊಳ್ಳುತ್ತದೆ. ಕ್ರಿ.ಪೂ. 587ರಲ್ಲಿ ಬ್ಯಾಬಿಲೋನಿ ಯನ್ ಯುದ್ಧದಲ್ಲಿ ಎರಡನೇ ನಬೂಕದ್ ನಸರ್ ಜೆರೂಸಲೆಂ ಅನ್ನು ಕೊಳ್ಳೆ ಹೊಡೆದು ಯಹೂದಿಯರನ್ನು ಬಂಧಿಗಳಾಗಿಸಿ ಅವರನ್ನು ಬ್ಯಾಬಿಲೋನಿಯಾಕ್ಕೆ ಗಡೀಪಾರು ಮಾಡಲಾಯಿತು. ಹೀಗೆ ಅವರು ವಿಶ್ವದ ನಾನಾ ಭಾಗಗಳಲ್ಲಿ ಚದುರಿ ಹೋದರು.

ಆದರೆ ಫೆಲೆಸ್ತೀನಿಯನ್ನರು ವಿಶಿಷ್ಟವಾದ ಸಾಂಸ್ಕೃತಿಕ ಗುರುತಿನಿಂದ ನಾಲ್ಕು ಸಾವಿರ ವರ್ಷಗಳಿಂದ ಈ ಭೂಪ್ರದೇಶದಲ್ಲಿ ವಾಸಿಸುವವರಾಗಿದ್ದಾರೆ.

ಹೀಗೆ ನೋಡುವಾಗ, ಬನೂ ಇಸ್ರಾಈಲರು ಮೂರು ಸಾವಿರ ವರ್ಷಗಳ ಹಿಂದೆ ಬೇರೆ ದೇಶದಿಂದ ಫೆಲೆಸ್ತೀನ್‌ಗೆ ಬಂದವರಾಗಿದ್ದರೆ, ಅವರು ಫೆಲೆಸ್ತೀನ್‌ನಲ್ಲಿ ಕೇವಲ 400 ವರ್ಷ ವಾಸಿಸಿದ್ದರು ಮತ್ತು ಆಳ್ವಿಕೆ ನಡೆಸಿದ್ದರು.

ಇದನ್ನಿಟ್ಟುಕೊಂಡು ಯಹೂದಿಯರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದಾರೆ ಎಂದಾದರೆ, ‘ಭಾರತಕ್ಕೆ ಮರಳಿ ಬರುವ ಹಕ್ಕು’ ತಮಗೂ ಇದೆಯೆಂದು ಬ್ರಿಟನ್ ಹಕ್ಕು ಮಂಡಿಸುವ ದಿನವೂ ದೂರವಿರಲಿಕ್ಕಿಲ್ಲ. ಬ್ರಿಟಿಷರು ಹಲವಾರು ವರ್ಷಗಳ ಕಾಲ ಭಾರತದಲ್ಲಿ ವಸಾಹತುಶಾಹಿ ನಡೆಸಿದ್ದರಲ್ಲವೇ? ಫ್ರಾನ್ಸ್, ಇಟಲಿ, ಸ್ಪೇನ್ ಹಾಗೂ ರಷ್ಯಾ ದೇಶಗಳು ಕೂಡಾ ತಮ್ಮ ಹಿಂದಿನ ವಸಾಹತುಗಳ ಮೇಲೆ ಈ ಮರಳುವ ಹಕ್ಕು ಪ್ರತಿಪಾದಿಸಬಹುದು. ಯಹೂದಿಯರು ಫೆಲೆಸ್ತೀನ್‌ನ ಮೇಲೆ ಹಕ್ಕು ಸ್ಥಾಪಿಸಬಹುದಾದರೆ ಅರಬರು ಯಾಕೆ ಸ್ಪೇನ್‌ನ ಮೇಲೆ ಹಕ್ಕು ಮಂಡಿಸಬಾರದು?

ಹೀಗೆ ಫೆಲೆಸ್ತೀನ್‌ನಲ್ಲಿ ಸಾವಿರಾರು ವರ್ಷಗಳಿಂದ ವಾಸಿಸುತ್ತಿದ್ದ ಜನರನ್ನು ಹೊಡೆದೋಡಿಸಿದ ಬಳಿಕ ಇಸ್ರೇಲ್ ಅಸ್ತಿತ್ವಕ್ಕೆ ಬಂದಿತು. ಅದರ ಅಡಿಪಾಯ ಎಷ್ಟು ಟೊಳ್ಳಾಗಿದೆ? ಅದರ ರಚನೆಯ ನಂತರ ಫೆಲೆಸ್ತೀನ್ ಜನತೆಯಲ್ಲಿ ಅರ್ಧದಷ್ಟು ಜನ ತಾಯ್ನೆಲದಿಂದ ಹೊರ ಹಾಕಲ್ಪಟ್ಟರು. ಅವರು ಜೋರ್ಡಾನ್, ಸಿರಿಯ, ಈಜಿಪ್ಟ್ ನಲ್ಲೂ ನಿರಾಶ್ರಿತರಾಗಿ ಬದುಕುತ್ತಿದ್ದಾರೆ.

ಇಸ್ರೇಲ್ ಅಸ್ತಿತ್ವಕ್ಕೆ ಬಂದ ಬಳಿಕವೂ ಸೆಟ್ಲರ್ ಕೊಲೋನಿಯಲಿಝಂ ಕೊನೆಗೊಳ್ಳಲಿಲ್ಲ. ಕಳೆದ 75 ವರ್ಷಗಳಿಂದ ಇಸ್ರೇಲ್ ತನ್ನ ಗಡಿಯನ್ನು ವಿಸ್ತರಿಸುತ್ತಲೇ ಇದೆ. ವಿಶ್ವ ಸಂಸ್ಥೆಯ ನಿರ್ಣಯಕ್ಕೆ ಇಸ್ರೇಲ್ ಸ್ವಲ್ಪವೂ ಬೆಲೆ ನೀಡುವುದಿಲ್ಲ. ಅಂತಾರಾಷ್ಟ್ರೀಯ ಕಾನೂನುಗಳನ್ನು ಪಾಲಿಸಲು ಪಾಶ್ಚಾತ್ಯ ದೇಶಗಳು ಇಸ್ರೇಲ್‌ನ ಮೇಲೆ ಒತ್ತಡ ಹೇರುವುದಿಲ್ಲ. ಯಹೂದಿ ವಲಸೆಗಾರರಿಗಿಂತ ಫೆಲೆಸ್ತೀನಿಯನ್ನರ ಸಂಖ್ಯೆಯು ಇಮ್ಮಡಿ ಇದೆ. ಅವರಲ್ಲಿ ಅರ್ಧದಷ್ಟು ಜನ ಬೇರೆ ದೇಶಗಳಲ್ಲಿದ್ದಾರೆ. ಆಕ್ರಮಿತ ಪ್ರದೇಶಗಳಲ್ಲಿಯೂ ಫೆಲೆಸ್ತೀನಿಯನ್ನರು ಯಹೂದಿ ಜನಸಂಖ್ಯೆಯನ್ನು ಮೀರಿಸುತ್ತಾರೆ. ಅಲ್ಲಿ ಅವರು ಎರಡು ಸಣ್ಣ ಪ್ರದೇಶಗಳಿಗೆ (ಗಾಝ ಮತ್ತು ವೆಸ್ಟ್ ಬ್ಯಾಂಕ್) ಅವರನ್ನು ಸೀಮಿತವಾಗಿಸಲಾಗಿದೆ. ಇದರಲ್ಲಿ ವೆಸ್ಟ್ ಬ್ಯಾಂಕ್ ಅನ್ನು ಪರಸ್ಪರ ಸಂಬಂಧವಿಲ್ಲದ ಸಣ್ಣ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಒಂದು ಫೆಲೆಸ್ತೀನಿ ಗ್ರಾಮದ ನಾಲ್ಕು ಭಾಗವು ಯಹೂದಿ ವಲಸೆಗಾರರ ಪ್ರದೇಶವಾಗಿರುತ್ತದೆ. ವೆಸ್ಟ್ ಬ್ಯಾಂಕ್‌ ನ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಹೋಗಲು ವರ್ಣಿಸಲು ಸಾಧ್ಯವಿಲ್ಲದಂತಹ ಅಡೆತಡೆಗಳನ್ನು ದಾಟಬೇಕು. ಈ ವಿಂಗಡನೆಯನ್ನು ಎ.ಬಿ.ಸಿ. ಝೋನ್‌ಗಳು ಎಂದು ಹೆಸರಿಸಿ ಓಸ್ಲೋ ಒಪ್ಪಂದವನ್ನು ಅಂಗೀಕರಿಸಲಾಗಿದೆ.

ಆದರೆ ಇಸ್ರೇಲ್ ತನ್ನ ಆಕ್ರಮಣವನ್ನು ಅಲ್ಲಿಯೇ ನಿಲ್ಲಿಸಲು ಉದ್ದೇಶಿಸಿಲ್ಲ. ಓಸ್ಲೋ ಒಪ್ಪಂದವು ಫೆಲೆಸ್ತೀನಿಗಳದ್ದೆಂದು ಹೇಳಿದ ಪ್ರದೇಶಗಳಲ್ಲೂ ಅವರು ಯಹೂದಿ ವಸಾಹತನ್ನು ನಿರ್ಮಿಸುತ್ತಿದ್ದಾರೆ. ಬೈತುಲ್ ಮಕ್ದಿಸ್ ಇರುವ ಪೂರ್ವ ಜೆರುಸಲೇಮ್‌ನಲ್ಲಿ ವಸಾಹತು ನಿರ್ಮಾಣವು ಅತ್ಯಂತ ತೀವ್ರಗತಿಯಿಂದ ನಡೆಯುತ್ತಿದೆ.

ವಸಾಹತುಗಳ ವಿಸ್ತರಣೆಯಿಂದ ಇಸ್ರೇಲ್ ಏನನ್ನು ಬಯಸುತ್ತಿದೆ? ಅದರ ವಾದವೇನು? ಇವೆಲ್ಲವನ್ನು ಅಧಿಕೃತವಾಗಿ, ಸ್ಪಷ್ಟವಾಗಿ ವಿವರಿಸಲಾಗಿಲ್ಲ. ಆದರೆ ಗ್ರೇಟರ್ ಇಸ್ರಾಯೇಲ್ (Ertz Israel) ಎಂಬ ಕನಸು ಇಸ್ರೇಲ್‌ನ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ವಲಯಗಳಲ್ಲಿ ಸದಾ ಚರ್ಚಿಸಲ್ಪಡುತ್ತಿದೆ. ಹಾಗಾದರೆ ಈ ವಿಶಾಲ ಇಸ್ರೇಲ್ (Greater Israel) ಎಂದರೇನು? ಅದನ್ನು ನಿಖರವಾಗಿ ವ್ಯಾಖ್ಯಾನಿಸಲಾಗಿಲ್ಲ.

ಇದರ ಅತ್ಯಂತ ಸಂಕ್ಷಿಪ್ತ ವಿವರಣೆ ಹೀಗಿದೆ: ಮೆಡಿಟರೇನಿಯನ್ ಸಮುದ್ರದಿಂದ ಜೋರ್ಡಾನ್ ನದಿಯ ವರೆಗೆ (From river to sea) ವ್ಯಾಪ್ತಿಯಿರುವ ಭೂಪ್ರದೇಶ. ಅಂದರೆ, ಸಂಪೂರ್ಣ ಫೆಲೆಸ್ತೀನ್‌ನ ಭೂಮಿ. ಈಗಿನ ಇಸ್ರೇಲ್, ವೆಸ್ಟ್ ಬ್ಯಾಂಕ್, ಗಾಝಾ, ಜೆರುಸಲೇಂ ಎಲ್ಲವೂ ಸೇರಿದೆ. ಇದು ಬೈಬಲ್‌ನಲ್ಲಿ ಹೇಳಿದ ‘ದಾನ್ ನಿಂದ ಬೆರ್ಶೇವ’ (From Dan to Beer Sheva) ವರೆಗಿನ ಪ್ರದೇಶಗಳಾಗಿವೆ. ಈಗ ಅಸ್ತಿತ್ವದಲ್ಲಿರುವ ಇಸ್ರೇಲಿನ ಅತ್ಯಂತ ಉತ್ತರ ಮತ್ತು ದಕ್ಷಿಣದ ನಗರಗಳಾಗಿವೆ. ಫೆಲೆಸ್ತೀನಿಯನ್ನರಿಗೆ ಈಗ ಪರಿಮಿತವಾಗಿ ನಿಯಂತ್ರಣವಿರುವ ಆ ಸಣ್ಣ ಪ್ರದೇಶದಿಂದಲೂ ಅವರನ್ನು ಹೊರಹಾಕಿ ಫೆಲೆಸ್ತೀನನ್ನು ಸಂಪೂರ್ಣ ವಶಪಡಿಸಿಕೊಳ್ಳಲು ಇಸ್ರೇಲ್ ಬಯಸುತ್ತದೆ ಎಂಬುದು ಇದರ ಅರ್ಥ. ವಿಶಾಲ ಇಸ್ರೇಲ್‌ನ ಇನ್ನೊಂದು ವ್ಯಾಖ್ಯಾನ, ಈಗ ಹೇಳಿದ ಪೌರಾಣಿಕ ಫೆಲೆಸ್ತೀನ್ ಭೂಪ್ರದೇಶದೊಂದಿಗೆ ಜೋರ್ಡಾನ್‌ನ ಕೆಲವು ಭಾಗಗಳು ಮತ್ತು ಸೀನಾಯ್ ದ್ವೀಪಗಳು, ಸಿರಿಯಾದ ಗೋಲಾನ್ ಬೆಟ್ಟಗಳೂ ಸೇರಿದ ಭೂಭಾಗಗಳಾಗಿವೆ. ಈ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಇಸ್ರೇಲ್ ಪ್ರಯತ್ನಿಸುತ್ತಿದೆ.

ವಿಶಾಲ ಇಸ್ರೇಲ್‌ನ 3ನೇ ವ್ಯಾಖ್ಯಾನ ಹೀಗಿದೆ: ನೈಲ್‌ನಿಂದ ಯುಪ್ರೆಟಿಸ್ ವರೆಗೆ ವ್ಯಾಪಿಸಿರುವ ಭೂಪ್ರದೇಶ. ಈ ಕಲ್ಪನೆಯು ಹೆಚ್ಚು ಜನಪ್ರಿಯವಾಗಿದೆ. ಬೈಬಲ್ ಹೀಗೆ ಹೇಳುತ್ತದೆ ಎಂಬ ವಾದವಿದೆ. ಅದರ ಪ್ರಕಾರ, ಫೆಲೆಸ್ತೀನ್, ಜೋರ್ಡಾನ್ ಮತ್ತು ಲೆಬನಾನ್, ಸಿರಿಯಾದ ಹೆಚ್ಚಿನ ಭಾಗಗಳು, ಸೀನಾಯ್ ದ್ವೀಪ, ಈಜಿಪ್ಟ್‌ ನ ಪೂರ್ವ, ಮೆಡಿಟರೇನಿಯನ್ ಕರಾವಳಿ ಪ್ರದೇಶ, ಇರಾಕ್‌ನ ಅರ್ಧಕ್ಕಿಂತ ಹೆಚ್ಚು ಭಾಗ (ಬಸ್ತಾರ, ನಫ್ಫ್ ಮತ್ತು ಕರ್ಬಲವೂ ಸೇರಿ), ತುರ್ಕಿಯ ಒಂದು ಭಾಗ, ಮದೀನಾ ಸೇರಿದಂತೆ ಸೌದಿ ಅರೇಬಿಯಾದ ದೊಡ್ಡ ಭಾಗ ಗ್ರೇಟರ್ ಇಸ್ರೇಲಿನ ಪರಿಧಿಯಲ್ಲಿ ಬರುತ್ತದೆ. ಝಿಯೋನಿಝಂನ ಆರಂಭಿಕ ಪ್ರತಿಪಾದಕರಿಗೆ ಇದೇ ಕನಸು ಇತ್ತು. ಯಾಸಿರ್ ಅರಫಾತ್‌ರ ಅಭಿಪ್ರಾಯದಲ್ಲಿ ಇಸ್ರೇಲ್‌ನ ಪತಾಕೆಯಲ್ಲಿರುವ ಎರಡು ನೀಲಿ ಗೆರೆಗಳು ನೈಲ್ ಮತ್ತು ಯುಪ್ರೆಟಿಸ್ ನದಿಗಳನ್ನು ಪ್ರತಿನಿಧಿಸುತ್ತದೆ. ನೂರರ ಇಸ್ರೇಲಿ ಶೆಕಲ್ ಕರೆನ್ಸಿಯಲ್ಲಿ ಕಾಣುವ ಗೆರೆಯೂ ಅದುವೇ.

ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವರಾಗಿದ್ದ ಮೋಶೆ ದಯಾನ್ ಹೀಗೆ ಹೇಳಿರುವುದಾಗಿ ಉದ್ಧರಿಸಲಾಗಿದೆ, “ಈಗ ನಾವು ಜೆರುಸಲೇಮ್ ಅನ್ನು ವಶಪಡಿಸಿಕೊಂಡಿದ್ದೇವೆ. ಇನ್ನು ನಾವು ಮದೀನಾ ಮತ್ತು ಬ್ಯಾಬಿಲೋನ್‌ನ ಕಡೆಗೆ ಸಾಗುತ್ತಿದ್ದೇವೆ.”

ಇದು ಕೇವಲ ಭಾವನಾತ್ಮಕ ಮಾತುಗಳೋ ಅಥವಾ ಸೈದ್ಧಾಂತಿಕ ಕಲ್ಪನೆಯೋ ಅಲ್ಲ. ಇಸ್ರೇಲ್ ಹುಟ್ಟಿದಾಗಿನಿಂದ ಈ ವಿಸ್ತರಣಾ ಕಾರ್ಯಗಳು ಅವ್ಯಾಹತವಾಗಿ ನಡೆಸಲಾಗುತ್ತಿದೆ. ಪ್ರತೀ ವರ್ಷವೂ ಇಸ್ರೇಲ್‌ನ ಅಧೀನಕ್ಕೆ ಬರುವ ವಸಾಹತು ಪ್ರದೇಶಗಳ ಸಂಖ್ಯೆಯು ಹೆಚ್ಚುತ್ತಲೇ ಇದೆ. ಅದಕ್ಕಾಗಿ ಇಡೀ ವಿಶ್ವವೇ ಇಸ್ರೇಲನ್ನು ದೂಷಿಸುತ್ತಿದೆ. ಯುದ್ಧ ನಡೆಸಿಯೂ ಅಲ್ಲಿನ ಜನರನ್ನು ದೊಡ್ಡ ವಿಪತ್ತಿಗೆ ಸಿಲುಕಿಸಿಯಾದರೂ ವಲಸೆಯ ಪ್ರಕ್ರಿಯೆಯು ನಿರಂತರವಾಗಿ ಮುಂದುವರಿಯುತ್ತಿದೆ. ಈ ಧೋರಣೆಯಿಂದಾಗಿಯೇ ಮೇಲೆ ಹೇಳಿದ ಕಲ್ಪನೆಗಳು ಇಸ್ರೇಲ್ ಬಹಳ ರಹಸ್ಯವಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆಗಳು ಎಂದು ವಿಶ್ವವು ಭಾವಿಸುತ್ತಿದೆ.
(ಮುಂದುವರಿಯುವುದು)