ಕೇಂದ್ರ ಸರಕಾರ ಬಾಲ್ಯ ವಿವಾಹ ತಡೆ ಕಾಯ್ದೆಯನ್ನು ಶಕ್ತಗೊಳಿಸಲಿ; ಹೆಣ್ಣು ಮಕ್ಕಳ ವಿವಾಹ ವಯಸ್ಸಿನ ಮಿತಿ ಏರಿಸಿ ಫಲವಿಲ್ಲ- ಮಹಿಳಾ ಲೀಗ್‌ನಿಂದ ಪ್ರಧಾನಿಗೆ ಪತ್ರ

0
644

ಸನ್ಮಾರ್ಗ ವಾರ್ತೆ

ಕೇರಳ,ಅ.23: ಮಹಿಳೆಯರ ಮದುವೆ ವಯಸ್ಸನ್ನು 18ರಿಂದ 21ಕ್ಕೇರಿಕೆ ಮಾಡುವ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಕೇರಳದ ಮುಸ್ಲಿಂ ಲೀಗಿನ ಮಹಿಳಾ ಲೀಗ್ ಆಗ್ರಹಿಸಿದೆ. ಲಿವ್ ಇನ್ ಸಂಬಂಧಗಳು ಮತ್ತು ಮದುವೆಯಿಲ್ಲದೆ ಮಕ್ಕಳನ್ನು ಪಡೆಯುವುದು ಸಾಮಾಜಿಕ ಸಮಸ್ಯೆಗೆ ಕಾರಣವಾಗಬಹುದು ಎಂದು ಮಹಿಳಾ ಲೀಗ್ ಪದಾಧಿಕಾರಿಗಳು ಹೇಳಿದ್ದಾರೆ. ಮದುವೆಯ ವಯಸ್ಸನ್ನು ಹೆಚ್ಚಿಸದಿರಲು ಮಹಿಳಾ ಲೀಗ್ ಪ್ರಧಾನಿಗೆ ಪತ್ರ ಬರೆದಿದೆ ಎಂದು ಮಹಿಳಾ ಲೀಗ್ ಪ್ರಧಾನ ಕಾರ್ಯದರ್ಶಿ ಪಿಕೆ ನೂರ್‍ಬಿನಾ ರಷೀದ್ ತಿಳಿಸಿದರು.

ಹೆಣ್ಣುಮಕ್ಕಳ ಮದುವೆ ವಯಸ್ಸನ್ನು ಹೆಚ್ಚಿಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಜಯ ಜೇಟ್ಲಿಯವರ ನೇತೃತ್ವದಲ್ಲಿ ಹತ್ತು ಮಂದಿ ಸಮಿತಿಯನ್ನು ಕೇಂದ್ರ ಸರಕಾರ ನೇಮಕಗೊಳಿಸಿದೆ. ಇವರ ವರದಿಯ ಆಧಾರದಲ್ಲಿ ತೀರ್ಮಾನ ಕೈಗೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ. ಜೈವ ಪರ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಪರಿಗಣಿಸಿದ ಹಲವು  ದೇಶಗಳು ಹೆಣ್ಣುಮಕ್ಕಳ ಮದುವೆಯನ್ನು 21 ವರ್ಷದಿಂದ 18ವರ್ಷಕ್ಕಿಳಿಸಿದೆ. 2006ರ ಬಾಲ್ಯ ವಿವಾಹ ತಡೆ ಕಾನೂನು ಬಲವಾದ ಕಾನೂನು ಕ್ರಮಗಳನ್ನು ಮತ್ತು ಜೈಲು ಶಿಕ್ಷೆಯನ್ನು ಒಳಗೊಂಡಿದೆ. ಈ ನಿಯಮ ಕಠಿಣವಾಗಿ ಜಾರಿಗೆ ತರುವ ಬದಲು ಮಹಿಳೆಯರ ಮದುವೆಯ ವಯಸ್ಸನ್ನು ಹೆಚ್ಚಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ನೂರ್‍ಬಿನಾ ಹೇಳಿದರು.

ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ಕೂಡಲೇ ನವೀಕರಿಸಿ ನಿರ್ಧರಿಸುವುದಾಗಿ ಕಳೆದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು. ಆದರೆ ಮದುವೆಯ ವಯಸ್ಸು ಎಷ್ಟಾಗಿರಬೇಕೆಂದು ಯಾವಾಗ ಜಾರಿಗೊಳಿಸಬೇಕೆಂದು ಇದುವರೆಗೆ ನಿರ್ಧರಿಸಿಲ್ಲ. ಈ ವಿಷಯದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದ್ದರು