“ಬಿ.ಜೆ.ಪಿ ಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ರಾಜಕೀಯ ಬಿಡುವುದೇ ಲೇಸು”- ಮಾಯಾವತಿ

0
641

ಸನ್ಮಾರ್ಗ ವಾರ್ತೆ

ತೀವ್ರ ಹಿಂದೂ ನಿಲುವಿನೊಂದಿಗೆ ಮುಂದುವರಿಯುತ್ತಿರುವ ಬಿ.ಜೆ.ಪಿ ಯೊಂದಿಗೆ ಯಾವುದೇ ಕಾರಣಕ್ಕೂ ಬಹುಜನ ಸಮಾಜ್ ಪಾರ್ಟಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಅಧ್ಯಕ್ಷೆ ಮಾಯಾವತಿ ಪ್ರಸ್ತಾಪಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಮಾಯಾವತಿ ಈ ತೀರ್ಮಾನ ಹೇಳಿಕೊಂಡಿದ್ದಾರೆ.

“ಬಿ‌.ಜೆ.ಪಿ ಮತ್ತು ಬಿ.ಎಸ್.ಪಿ ಒಟ್ಟಿಗೆ ಮುಂದೆ ಸಾಗದು. ಅಂತಹ ಕೋಮುವಾದಿ ಪಕ್ಷಗಳ ಜೊತೆಸೇರಿ ಬಿ.ಎಸ್.ಪಿಗೆ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ” ಎಂದು ಮಾಯಾವತಿ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ತನ್ನ ಮಾತುಗಳನ್ನು ತಿರುಚಿಕೊಳ್ಳುತ್ತಿದೆಯೆಂದೂ, ಆ ಮೂಲಕ ಮುಸ್ಲಿಮರನ್ನು ತಮ್ಮಿಂದ ದೂರವಾಗಿಸುವ ದುರುದ್ದೇಶವಿದೆಯೆಂದೂ ಮಾಯಾವತಿ ಆರೋಪಿಸಿದರು.

ಸಮಾಜವಾದಿ ಪಕ್ಷವನ್ನು ಸೋಲಿಸಲು ಅಗತ್ಯ ಬಂದಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತೇವೆ ಎಂದು ಮಾಯಾವತಿ ಈ ಹಿಂದೆ ಹೇಳಿಕೊಂಡಿದ್ದರು. ಆದರೆ ಕೋಮುವಾದ, ಜಾತಿವಾದ, ಬಂಡವಾಳಶಾಹಿ ನಿಲುವಿನೊಂದಿಗೆ ಮುನ್ನಡೆಯುತ್ತಿರುವ ಬಿ.ಜೆ.ಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂದ ತಾನು ರಾಜಕೀಯದಿಂದ ವಿರಮಿಸುವುದೇ ಒಳಿತು ಎಂದು ಮಾಯಾವತಿ ಹೊಸ ಪ್ರಸ್ತಾವನೆಯೊಂದಿಗೆ ಮುಂದೆ ಬಂದಿದ್ದಾರೆ.