ತುಮಕೂರು: ನಿರಂತರ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳ ಖಂಡಿಸಿ ವೆಲ್ಫೇರ್ ಪಾರ್ಟಿಯಿಂದ ಪ್ರತಿಭಟನೆ; ದ್ವಿಚಕ್ರ ವಾಹನಕ್ಕೆ ಬಿಳಿ ಬಟ್ಟೆ ಹೊದಿಸಿ, ಅಣುಕು ಶವಪೂಜೆ

0
502

ಸನ್ಮಾರ್ಗ ವಾರ್ತೆ

ತುಮಕೂರು: ಕೇಂದ್ರ ಸರಕಾರ ನಿರಂತರವಾಗಿ ಇಂಧನ ಬೆಲೆಗಳ ಹೆಚ್ಚಳ ಮಾಡುತ್ತಿರುವುದನ್ನು ವಿರೋಧಿಸಿ, ಕೂಡಲೇ ಹೆಚ್ಚಳವಾಗಿರುವ ಪೆಟ್ರೋಲ್, ಡಿಸೇಲ್ ಮತ್ತು ಅಡುಗೆ ಅನಿಲ ದರವನ್ನು ವಾಪಸ್ ಪಡೆಯುಬೇಕೆಂದು ಆಗ್ರಹಿಸಿ ಇಂದು ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು, ಮುಖಂಡರು ನಗರದ ಬಿ.ಎಸ್.ಎನ್.ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಅಶೋಕ ರಸ್ತೆಯ ಬಿ.ಎಸ್.ಎನ್.ಎಲ್. ಕಚೇರಿ ಎದುರು ಸಮಾವೇಶಗೊಂಡಿದ್ದ ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಹಾಗೂ ಸಾರ್ವಜನಿಕರು, ದ್ವಿಚಕ್ರ ವಾಹನಕ್ಕೆ ಬಿಳಿ ಬಟ್ಟೆ ಹೊದಿಸಿ, ಅಣುಕ ಶವಪೂಜೆ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಈ ವೇಳೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್, ಕಳೆದ ಒಂದು ವರ್ಷದಿಂದ ಮಹಾಮಾರಿ ಕೋರೋನದಿಂದಾಗಿ ಜನ ಸಾಮಾನ್ಯರ ಕಷ್ಟ ಹೇಳತೀರದಾಗಿದೆ. ಜನರ ಕಷ್ಟವನ್ನು ತಗ್ಗಿಸುವ ಬದಲು ಸರಕಾರ ಇಂಧನ ಬೆಲೆಗಳನ್ನು ಹೆಚ್ಚಳ ಮಾಡುವ ಮೂಲಕ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ದೂರಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂಧನಗಳ ಮೇಲೆ ಶೇ30ರಷ್ಟು ತೆರಿಗೆ ವಿಧಿಸುವ ಮೂಲಕ ಜನಸಾಮಾನ್ಯರು ಬದುಕಿಗೆ ಕೊಳ್ಳಿ ಇಡಲು ಹೊರಟಿದೆ. ಇಂಧನ ಬೆಲೆ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಳದಿಂದಾಗಿ ಸಾರಿಗೆ ವೆಚ್ಚ ಹೆಚ್ಚಲಿದೆ. ಇದರ ಪರಿಣಾಮ ದಿನನಿತ್ಯದ ದಿನಸಿ ಸೇರಿದಂತೆ ಗೃಹೋಪಯೋಗಿ ವಸ್ತುಗಳ ಬೆಲೆಗಳು ಹೆಚ್ಚಳವಾಗುವ ಮೂಲಕ ಜನರ ಬದುಕು ಅದೋಗತಿಗೆ ಇಳಿಯಲಿದೆ. ಆದ್ದರಿಂದ ಸರಕಾರ ಕೂಡಲೇ ಇಂಧನ ಬೆಲೆಗಳನ್ನು ಇಳಿಸಬೇಕು ಎಂದು ತಾಹೀರ್ ಹುಸೇನ್ ಆಗ್ರಹಿಸಿದರು.

ವೇಲ್ಫೇರ್ ಪಾರ್ಟಿ ಅಫ್ ಇಂಡಿಯಾದ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ಮಾತನಾಡಿ, ಇಂಧನ ಬೆಲೆಗಳು ಹೆಚ್ಚಾಗಿ, ಜನಸಾಮಾನ್ಯರು ತೊಂದರೆಗೀಡಾದರೂ,ಯುಪಿಯ ಸರಕಾರದ ವಿರುದ್ದ ಗುಡುಗಿದ್ದ ಬಿಜೆಪಿ ಪಕ್ಷದ ಯಾವ ಮುಖಂಡರು, ಮಹಿಳಾ ಮಣಿಗಳು ಬಾಯಿ ಬೀಡುತ್ತಿಲ್ಲ. ಅಲ್ಲದೆ ರೈತರ ಹೆಸರಿನಲ್ಲಿ ಸೆಸ್ ಹಾಕಿ ಹಾವನ್ನು ಹೊಡೆದು ಹದ್ದಿಗೆ ಹಾಕುವಂತಹ ಕೆಲಸವನ್ನು ಕೇಂದ್ರ ಸರಕಾರ ಮಾಡಲು ಹೊರಟಿದೆ. ಇದರ ವಿರುದ್ದ ವೇಲ್ಫೇರ್ ಪಾರ್ಟಿ ಅಫ್ ಇಂಡಿಯಾ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ಪಿ.ಎನ್.ರಾಮಯ್ಯ, ಹಳ್ಳಿಯ ಕಡೆ ಒಂದು ಗಾಧೆ ಇದೆ. ಆಡೋ ಹುಡುಗನ ಕೈಗೆ ಮನೆ ಅಧಿಕಾರ ಕೊಟ್ಟರೆ, ಒಡೆ ಬಂದ ಹೊಲ ಕೊಯ್ದು ಒಟ್ಟಿದ ಅನ್ನುವ ಹಾಗೇ ಸಂಸಾರದ ಗಂಧ ಗಾಳಿಯೂ ಗೊತ್ತಿಲ್ಲದ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ರಂತಹವರ ಕೈಗೆ ಅಧಿಕಾರ ನೀಡಿದ ಪರಿಣಾಮ ಜನ ಸಮಾನ್ಯರ ಕಷ್ಟಗಳೇ ಅರ್ಥವಾಗುತ್ತಿಲ್ಲ. ತಾವು ಮಾಡಿದ್ದೇ ಕಾನೂನು ಎಂಬಂತೆ ವರ್ತಿಸುತ್ತಿದ್ದಾರೆ. ಧರ್ಮ, ದೇವರ ಹೆಸರಿನಲ್ಲಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆದು ತಮ್ಮ ಹಿಡನ್ ಅಜೆಂಡಾಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ.

ಜನರ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿದ್ದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ, ನೌಕರರನ್ನು ಉಳ್ಳುವರ ಗುಲಾಮರನ್ನಾಗಿಸುತ್ತಿದ್ದಾರೆ. ಜನಸಾಮಾನ್ಯರು ಇಂತಹವರಿಗೆ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ವೇಲ್ಫೇರ್ ಪಾರ್ಟಿ ಅಫ್ ಇಂಡಿಯಾದ ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್, ಪರಮೇಶ್ವರಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.