ಚೂರಿ ಇರಿತಕ್ಕೆ ಯುವಕ ಬಲಿಯಾದ, ಚೂರಿ ಕಮ್ಮಾರನಿಗಾಗಿ ಕಾಯತೊಡಗಿತು..

0
1212

ಏ. ಕೆ. ಕುಕ್ಕಿಲ

ಆ ಯುವಕ ತನ್ನಂತೆಯೇ ಇರುವ ಇನ್ನೋರ್ವ ಯುವಕನಿಗೆ ಚೂರಿಯಿಂದ ತಿವಿದ. ಯುವಕ ಮೃತಪಟ್ಟ. ಕ್ಷಣಾರ್ಧದಲ್ಲಿ ನಡೆದು ಹೋದ ಆ ಘಟನೆಗೆ ಚೂರಿ ಬೆಚ್ಚಿ ಬಿತ್ತು. ಆ ಹತ್ಯೆಯನ್ನು ಅದು ನಿರೀಕ್ಷಿಸಿಯೇ ಇರಲಿಲ್ಲ. ತಾನು ತರಕಾರಿ ಕತ್ತರಿಸಲು ಮಾತ್ರ ಬಳಕೆಯಾಗುತ್ತೇನೆ ಎಂದೇ ಅದು ಅಂದುಕೊಂಡಿತ್ತು. ಕಮ್ಮಾರ ಹಾಗೆಯೇ ಹೇಳಿದ್ದ. ಚೂರಿ ಗೊಂದಲಕ್ಕೆ ಬಿತ್ತು. ಬರಿಯ ಕಬ್ಬಿಣದ ಮುದ್ದೆಯಂತಿದ್ದ ತನಗೆ ಇಷ್ಟು ಸುಂದರವಾದ ರೂಪ ಕೊಟ್ಟ ಕಮ್ಮಾರನಿಗೆ ಅಪಾಯ ಎದುರಾಗಬಹುದೇ? ಸತ್ತ ಯುವಕನ ಕಡೆಯವರು ಕಮ್ಮಾರನನ್ನೇ ಹತ್ಯೆ ಮಾಡಬಹುದೇ? ನನ್ನನ್ನು ತಯಾರಿಸಿದ ತಪ್ಪಿಗೆ ಕಮ್ಮಾರ ಜೀವ ಕಳಕೊಳ್ಳುವನೇ?
ನೋಡನೋಡುತ್ತಲೇ ಜನರ ಗುಂಪೇ ನಿರ್ಮಾಣವಾಯಿತು. ಯುವಕ ತಪ್ಪಿಸಿಕೊಂಡ. ಯಾರ ಕಣ್ಣಿಗೂ ಬೀಳದಂತೆ ಒಳದಾರಿಯಿಂದ ಓಡತೊಡಗಿದ. ಆತನ ಜೇಬಿನಲ್ಲಿದ್ದ ಚೂರಿ ಗಮನಿಸುತ್ತಲೇ ಇತ್ತು. ಆತ ಓಡುತ್ತಾ ಓಡುತ್ತಾ ಕಮ್ಮಾರನ ಮನೆಯ ಬಳಿ ತಲುಪಿದ್ದೇ ತಡ, ಚೂರಿ ಚಂಗನೆ ಜಿಗಿಯಿತು. ಒಂದರ್ಧ ಗಂಟೆ ಕಳೆದಿರಬೇಕು. ಮೃತಪಟ್ಟ ಯುವಕನ ಕಡೆಯವರು ಬೀಸು ನಡಿಗೆಯಲ್ಲಿ ಕಮ್ಮಾರನ ಬಳಿಗೆ ಬಂದರು. ‘ತಪ್ಪಿಸಿಕೋ..’ ಎಂದು ಕಮ್ಮಾರನೊಂದಿಗೆ ಕೂಗಿ ಹೇಳಬೇಕೆಂದು ಚೂರಿ ಅಂದುಕೊಳ್ಳುವಾಗಲೇ, ಆ ವಿಸ್ಮಯಕಾರಿ ದೃಶ್ಯ ಕಾಣಿಸಿತು. ಕಮ್ಮಾರ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ. ಹಣದ ಕಟ್ಟನ್ನು ಪಡೆದುಕೊಂಡು ಬದಲಿಯಾಗಿ ಒಂದು ಚೂರಿಯನ್ನು ಕೊಟ್ಟ. ಜೊತೆಗೇ, ನನ್ನನ್ನು ಸಿಲುಕಿಸಬೇಡಿ ಎಂದು ಕಿರುನಗೆಯೊಂದಿಗೆ ಹೇಳಿದ….
ಪಕ್ಕದಲ್ಲೇ ಬಿದ್ದಿದ್ದ ಕಲ್ಲಿನ ತುಂಡಿಗೆ ತಿಕ್ಕಿ ತನ್ನನ್ನು ಹರಿತಗೊಳಿಸಿಕೊಂಡ ಚೂರಿ, ಕಮ್ಮಾರ ಮನೆಯಿಂದ ಹೊರಬರುವುದನ್ನೇ ಕಾಯತೊಡಗಿತು..