ನಾವು ಅಂದ್ರುವಿನ ಮದುವೆಗೆ ಹೋದೆವು..

0
2501

ಉಮ್ಮು ಫಾತಿಮಾ

ಹೀಗೆ ಕೆಲವು ವರ್ಷದ ಹಿಂದೆ..

ಪ್ರಪಂಚದ ಎರಡನೇ ತಂಪಿನೂರೆಂದು ಹೆಸರು ಪಡೆದ ನನ್ನ ಅತ್ಯಂತ ಪ್ರೀತಿಯ ಊರಾದ ಚಿಕ್ಕಮಗಳೂರಿನಲ್ಲಿದ್ದೆ. ಅವತ್ಯಾಕೊ ಅಲ್ಲಿ ಯಾವತ್ತಿಗಿಂತ ಬಹಳ ಜಾಸ್ತಿನೆ ಮಂಜು ಮುಸುಕಿತ್ತು. ಜನಗಳಿಗೆ ಹೊದ್ದುಕೊಂಡ ಚಾದರ ಬ್ಲಾಂಕೆಟ್ನಿಂದ ಹೊರ ಬರಲೇ ಮನಸ್ಸಿರಲ್ಲ ಅಂತಹಾ ಚಳಿಯ ಸಮಯ. ನಮಾಝ್’ಗೆ ಎದ್ದವರೂ ನಮಾಝ್ ಮುಗಿಸಿ ಮತ್ತೆ ಹೊದ್ದು ಮಲಗೋರೆ..ಜಾಸ್ತಿ.

ಆದರೆ ಆ ದಿನ ನಮಿಗೋ.. ಊರಿಗೆ ಹೊರಡೋ ಸಂಭ್ರಮ. ಸಂಭಂದಿಕರ ಮದುವೆ ಕರಾವಳಿಯ ಆಗಿನ ಪ್ರತಿಷ್ಠಿತ ಹಾಲ್’ನಲ್ಲಿತ್ತು. ಬರಲೇಬೇಕೆಂಬ ಬಲವಂತದ ಆಮಂತ್ರಣದ ಜತೆಗೇ ಬಾರದಿದ್ದಲ್ಲಿ ಮತ್ತೆ ನೋಡ್ವಾ.. ಅನ್ನೊ ಆತ್ಮೀಯ ದಮ್ಕಿ ಬೇರೆ ಹಾಕಿದ್ರು. ಅದರ ಜತೆ ಜತೆಗೆ ಇನ್ನೊಂದು ಮದ್ವೆ ಕರೆಯೋಲೆ ಬಂದಿತ್ತು ಇವರು ಸಂಬಂದಿಕರೂ ಹೌದು, ಜತೆಗೆ ನಮ್ಮ-ಅವರ ಕುಟುಂಬದಲ್ಲಿ ಸ್ನೇಹ-ಬಾಂದವ್ಯವೂ ಬಹಳ ಇತ್ತು. ಈ ಮದುವೆ ಇನ್ನೊಂದು ಹಾಲ್’ನಲ್ಲಿ.

ಮದುವೆಗಳಿಗೆ ಬಾರಿ ಕಡಿಮೆ ಹೋಗುವ ನಾವು ಇವೆರೆಡೂ ಮದುವೆಗೆ ಹೋಗಲೇಬೇಕೆಂದು ತೀರ್ಮಾನ ಮಾಡಿದೆವು. ಅಷ್ಟರಲ್ಲಿ ಹೊರಡುವ ದಿನಕ್ಕೆ ಎರಡು ದಿನ ಇರುವಾಗಲೇ ಬಂದಿತ್ತು ಮತ್ತೊಂದು ಮದುವೆಯ ಕರೆ. ಸಣ್ಣಂದಿನಿಂದಲೇ ನಮ್ಮ ಮನೆಯಲ್ಲಿ ಬೆಳೆದಿದ್ದ ಹುಡುಗ ‘ಅಂದ್ರು’ ಅವನು ಕೂಡ ಮದ್ವೆ ಅದೇ ದಿನದಂದು ಇಟ್ಟಿದ್ದ. ಬಡವನ ಮದುವೆ ಬರಲೇಬೇಕೆಂದು ಪರಿಪರಿಯಾಗಿ ಬೇಡ್ಕೊಂಡ. ನಾವೂ ಹೇಳಿಬಿಟ್ಟೆವು, ‘ನೋಡಪ್ಪಾ ಅಂದ್ರು, ಹೇಗೂ ಈಗಾಗಲೇ.. ಎರಡು ಮದುವೆಯ ಕರೆ ಬಂದಿದೆ, ನಾವು ಮದುವೆ ಪಂಕ್ಷನ್’ಗೆ ಹೋಗುವುದೆ ಅಪರೂಪ. ಆದರೆ ಇವೆರಡೂ ಮದುವೆ ತಪ್ಪಿಸುವಂತಿಲ್ಲ. ಕೆಲಸ ಕಾರ್ಯ ಬಹಳವಿದ್ದ ಪ್ರಯುಕ್ತ ಇಲ್ಲಿಂದ ಮದುವೆಯ ದಿನವೇ ಹೊರಟು ಬರಬೇಕಷ್ಟೆ.. ಇನ್ಶಾ ಅಲ್ಲಾಹ್ ! ಆ ಎರಡು ಮದುವೆ ಮುಗಿಸಿ ಸಮಯ ಹೊಂದಿದರೇ ಮಾತ್ರಾ.. ನಿನ್ನ ಮದುವೆಗೆ ಬರುವೆವು ಪಕ್ಕಾ ಅಲ್ಲ ಆಯ್ತಾ.ನಮ್ಮ ಮಾತು ಕೇಳಿ ‘ಅಂದ್ರು’ ಅಳುವ ಹಾಗೆ ಮಾತಾಡಿದ

‘ನೀವು ಹಾಗೆ ಹೇಳಬೇಡಿ ಪ್ಲೀಸ್.. ನನ್ನ ಮದುವೆಗೆ ಬರಲೇಬೇಕು.. ಎಷ್ಟು ಹೊತ್ತಾದರು ಸರಿ ನಾನು ಕಾಯುವೆನು.’

ಅವನ ಮಾತಿಗೆ ಮರುನುಡಿಯಲಾಗದೆ ‘ನೋಡ್ವ ಸರಿ’ ಎಂದೆವು. ಆದರೆ ಮನಸ್ಸು ಹೇಳುತ್ತಿತ್ತು ಹೇಗೆ ಹೋಗೊದು..? ಕಂಡಿತಾ ಟೈಮು ಸಾಕಾಗಲಿಕ್ಕಿಲ್ಲ.

ಅದೇ ರೀತಿ ಅಂದು ಚಳಿ’ಗೆ ಎದ್ದು ನಿತ್ಯ ಕರ್ಮ ಮುಗಿಸಿ ‘ಗುಡ್ ಡೇ ಬಿಸ್ಕಿಟ್, ಜತೆಗೆ ಬಿಸಿ ಬಿಸಿ ಕಣ್ಣನ್ ದೇವನ್ ಟೀ’ಯ ರುಚಿಯನ್ನು ಗಡಿಬಿಡಿಯಲ್ಲೇ ಸವಿದು.. ಊರಿನ ಕಡೆ ಹೊರಟಾಗ ಘಾಟಿಯುದ್ದಕ್ಕೂ ಕಾರಿನ ಹೈಬೀಮ್ ಲೈಟ್ ಹಾಯಿಸ್ಕೊಂಡೇ ಬಂದಿದ್ದೆವು. ಮಂಜಿನ ಮಬ್ಬಿನಲಿ ದಾರಿ ಕಾಣಿಸದ ಭಯದ ಜತೆಗೆ ತಂಗಾಳಿಯಲ್ಲಿ ತೇಲಾಡುತ್ತಾ ಬರುವ ಅನುಭವ ನಮಗೆ. ಮೂಡಿಗೆರೆಯಾಗಿ ಕೊಟ್ಟಿಗೆರೆ ತಲುಪುತ್ತಲೇ ಹೇಳೋದೇ ಬೇಡ.. ಮಾತಾಡಲೂ ಅಸಾಧ್ಯವೇ.. ತೀರದ ಚಳಿಗೆ ಹಲ್ಲುಗಳೂ ಕಟಕಟನೆ ಬಡಿಯುತ್ತಿದ್ದವು. ಹೋಗ್ತಾ ಬರುತ್ತಾ ಬಹಳ ವರುಷದಿಂದ ದಾರಿಯ ಸರ್ವೀಸ್ ಇದ್ದ ಕಾರಣ ಪತಿಯವರು ಅಂದಾಜಿನ ಕಸರತ್ತಿನಲ್ಲೆ ಡ್ರೆವಿಂಗ್ ಮಾಡುತ್ತಿದ್ದರು. ಅಂತೂ ಇಂತೂ ನಮ್ಮ ‘ಉಮ್ಮ ಮನೆಗೆ’ ಬಂದು ತಲುಪಿದಾಗ ಗಂಟೆ ಒಂಬತ್ತು ತೋರಿಸುತ್ತಿತ್ತು. ಅಲ್ಲಿಂದ ಉಮ್ಮನವರೂ ಅಕ್ಕನವರೂ ಅವರ ಮಕ್ಕಳೂ ನಮ್ಮಲ್ಲಿ ‘ಜತೆಗೆ ಮದುವೆಗೆ ಹೋಗುವಾ’ ಎಂದು ಹೇಳಿ ಕಾಯುತ್ತಿದ್ದರು. ನಾವಲ್ಲಿ ತಲುಪಿದಾಗ ಉಮ್ಮ’ನವರಿಗೆ ಮನಸ್ಸು ಕೇಳ್ತದಾ.. ‘ನಾಸ್ಟ ಮಾಡಿ, ದೋಸೆ ತಿನ್ನಿ’ ಎನ್ನುತ್ತಾ ಅವರು ಮದುವೆಗೆ ಹೊರಡುವ ಆ ಗಡಿಬಿಡಿಯಲ್ಲೂ ಬಿಸಿಬಿಸಿ ದೋಸೆ ಹುಯ್ದು ಕೊಟ್ಟರು. ಅಮ್ಮನ ಕೈ ಅಡುಗೆಯ ಆ ಘಮಘಮ ಪರಿಮಳವು ಮೂಗಿಗೆ ಅಡರಿ ಮನ ಇನ್ನೂ ಇನ್ನೂ ತಿನ್ನಲು ಹಂಬಲಿಸಿದ್ದರೂ.. ಪಕ್ಕದಲ್ಲಿನ ಗೋಡೆಯ ಮೇಲಿದ್ದ ಗಡಿಯಾರವು ಸಮಯ ಮೀರುತ್ತಿದ್ದುದ್ದನ್ನು ತೋರಿಸಿ ಎಚ್ಚರಿಸುತ್ತಿತ್ತು.

ಗಡಿಬಿಡಿಯಲ್ಲೆ ಎರಡು ದೋಸೆ ಹೊಟ್ಟೆಗಿಳಿಸಿ ಮದುವೆಗೆ ಹೊರಟೆವು.

ನಿಖಾಹ್’ ಸಮಯಕ್ಕೆ ತಲುಪಬೇಕೆಂದು ಆತುರ ಬೇರೆ.. ಗಂಟೆ ಹನ್ನೊಂದಕ್ಕೆ ನಿಖಾಹ್ ಎಂದು ತಿಳಿಸಿದ್ರು. ಮದುವೆ ಹಾಲ್’ಗೆ ಹೋಗಿ ತಲುಪಿದಾಗ ದೂರ ದೂರಕ್ಕೂ ವಾಹನಗಳ ರಾಶಿ. ಗಂಡಸರಿಗೆ ಅಲ್ಲಿ ಇನ್ನೊಂದು ತಲೆಬಿಸಿ.. ಕಾರು ಎಲ್ಲಿ ನಿಲ್ಲಿಸುವುದು..? ಹೇಗೆ ನಿಲ್ಲಿಸುವುದು..? ನಿಲ್ಲಿಸುವ ಜಾಗ ಸರಿಯಾಗಿದೆಯಾ.? ಏನೂ ತೊಂದರೆ ಇಲ್ವಲ್ಲಾ ಕಾರಿಗಾಗಲಿ.. ಬೇರೆ ಜನರಿಗಾಗಲಿ.. ಹೀಗೆ ಎಲ್ಲಾ ನೋಡ್ಕೊಂಡು ಜಾಗ ಹೊಂದಿಸಿ ಕಾರು ನಿಲ್ಲಿಸಿ ಹಾಲ್’ನೊಳಗೆ ಬರುವಾಗ ಸಮಯ ಹನ್ನೆರಡರ ಹತ್ರ. ಅಲ್ ಹಂಮ್ದುಲಿಲ್ಲಾ ಮದುಮಗ ಅದಾಗಲಷ್ಟೆ ನಿಖಾ:’ಗೆ’ ಕೂರಲು ಸ್ಟೇಜ್ ಮೇಲೆ ಹೋಗುತ್ತಿದ್ದ. ನಿಖಾಹ್ ಆದ ತಕ್ಷಣ ಮದುಮಗ ಹಾಗೂ ಮದುಮಗಳನ್ನು ಬಿಟ್ಟರೇ ಉಳಿದೆಲ್ಲಾರ ಮನ ಊಟದ ಬಗ್ಗೆನೇ ಯೋಚಿಸುತ್ತಿರುತ್ತದೆ.

ಮೇಲಿನಿಂದ ಇಣುಕಿದಾಗ ನಮಗೆ ಮದುಮಗನ ಹಾಲತ್ ನೋಡಿ ನಗಬೇಕೋ ಅಳಬೇಕೋ ತಿಳಿಯದಾಯ್ತು. ಯಾರಾ ಹತ್ತು ಮಂದಿ ಮದುಮಗನಿಗೆ ಪ್ರೀತಿಯಿಂದ ಹೂವಿನ ಹಾರ ತಂದು ಹಾಕಿದ್ದರು..ಅದನ್ನೆ ತೆಗೆದೂ ತೆಗೆದೂ ಮತ್ತೆ ಮತ್ತೆ ಹಾಕುತ್ತಿದ್ದರು ಹಲವಾರು ಯುವಕರು. ವೀಡಿಯೊ ಪೋಸ್’ಗಾಗಿ.. ಆ ನಾಲ್ಕು ಹಾರ ತೆಗೆಯುವುದೂ ಮತ್ತೆ ಹಾಕುವುದೂ..ಅಲ್ಲಾಹ್ ! ಅವರುಗಳ ಕ್ಯೂ ಬೆಳೆಯುತ್ತಲೇ ಇದ್ದು ಇನ್ನೂರರಷ್ಟು ಜನ ಕ್ಯೂನಲ್ಲಿ ನಾಮುಂದೂ ತಾ ಮುಂದೂ ಎಂದು ಪೈಪೋಟಿಯಲ್ಲಿ ನಿಂತಿದ್ದರು. ಇನ್ನು ಇದೆಲ್ಲಾ ಮುಗಿದು ಮದುಮ ಊಟ ಮಾಡಿ ರೆಡಿಯಾಗಿ ಇನ್ನೊಂದು ಬೀಟ್’ಕೂಡುವುದೆನ್ನುವ. ಮದುಮಗಳಿಗೆ ಹಾರ ತೊಡಿಸುವ (ಬಂದಿ ತೊಡಿಸುವ) ಕಾರ್ಯಕ್ರಮ ಆಗುವಾಗ ಸಾಯಂಕಾಲವಾದರೂ ಆಗಬಹುದು. ನಾವು ಇನ್ನೊಂದೂರಲ್ಲಿ ಮದುವೆಗೆ ಬೇರೆ ಹೋಗಬೇಕಲ್ಲ ಎಂದು ಯೋಚಿಸುತ್ತಾ.. ಊಟದ ಹಾಲ್ ಬಳಿ ಹೋಗಿ ನೋಡಿದರೇ.. ಅಲ್ಲಿನ ಬೃಹತ್ ಕ್ಯೂ ಹಾಗೂ ಜನರ ನೂಕು ನುಗ್ಗಲು ನೋಡಿ ಖರೇ ಆಯ್ತು ಇಲ್ಲಿ ಇನ್ನು ಊಟ ಸಿಗುವಾಗ ಮೂರು ಗಂಟೆಯೇ ಸರಿ ಎಂದು.

ಊಟಕ್ಕಾಗಿ ನಿಂತ ಕ್ಯೂ ನೋಡಿ ಪೆಚ್ಚು ಮೋರೆ ಹಾಕಿ ವಾಪಾಸ್ ಬರುತ್ತಿರುವ ಜನರನ್ನು ನೋಡಿ ಕಂಡೂ ಕಾಣದ್ಹಾಗೆ ಮಾಡುತ್ತಿದ್ದರು ಮದುವೆ ಮನೆಯವರು.. ಅವರು ತಾನೆ ಏನು ಮಾಡಬಲ್ಲರು ಪ್ರತಿಷ್ಠೆಗೆ ತಕ್ಕದಾಗಿ ಕಂಡ ಕಂಡವರನ್ನೆಲ್ಲಾ ಆಹ್ವಾನಿಸಿದ್ದಾರೆ. ಬಂದವರು ಹೇಗೆ ಬಂದಿದ್ದಾರೆ.. ಎಷ್ಟು ದೂರದಿಂದ.. ಎಷ್ಟು ಕಷ್ಟಪಟ್ಟು ಬಂದಿದ್ದಾರೆ ಅದೆಲ್ಲಾ ಅಲ್ಲಿ ಯಾರಿಗೂ ಬೇಡ.ಇನ್ನು, ಬಂದವರು ಉಣ್ಣಲೀ.. ಬಿಡಲಿ.. ತಮಗೆ ಏನೂ ತಿಳಿಯದಂತೆ ಇದ್ದು ಬಿಟ್ಟರೆ ಮುಗಿಯಿತು. ಇಲ್ಲಿ ಇನ್ನು ಊಟಕ್ಕೆ ನಿಂತರೆ ಅಲ್ಲಿ ಇನ್ನೊಂದು ಮದುವೆ ಮುಗಿಯ ಬಹುದಲ್ವಾ..ಹೌದು ! ಅವರಿಗೆ ಯಾಕೆ ಬೇಜಾರು ಮಾಡಿಸಬೇಕು.

ಯೋಚಿಸ್ತಾ ಇಲ್ಲಿ ಮದುವೆ ಮನೆಯವರಿಗೆ ‘ಹೊರಡ್ತೇವೆ’ ಎಂದು ಹೇಳಿ ನಾವು ಉಣ್ಣದೆ ಹಾಗೆಯೇ ಇನ್ನೊಂದು ಮದುವೆ ಹಾಲ್’ನತ್ತ ಹೊರಟೆವು.

ಅಲ್ಲಿ ತಲುಪಿದಾಗ ಮದುವೆ ಮನೆಯವರ ಕುಶಿ ಕೇಳೋದೆ ಬೇಡ.. ಹಿತವಾಗೆ ನಗು ನಗುತ್ತಾ ಸ್ವಾಗತಿಸಿ ಮದುವೆಗೆ ಬಂದ್ರಲ್ಲ ಬಹಳ ಕುಶಿ ಆಯ್ತೆಂದು.. ಪ್ರೀತಿಯಿಂದ ನಮ್ಮ ಕೈಯನ್ನು ಹಿಡ್ಕೊಂಡೇ ಮಾತಾಡಿಸಿದರು.

ಕರಾವಳಿಯ ಬಿಸಿಲ ಬೇಗೆಗೆ ಬೆವರೊರೆಸಿ ಸುಸ್ತಾಗಿರುವ ನಮ್ಮ ಹೊಟ್ಟೆ ಹಸಿವಿನಿಂದ ಚುರುಗುಟ್ಟುತ್ತಿತ್ತು. ಮದುವೆಗೆ ಹೋಗೋದೆ ಅಪರೂಪ.. ತೀರಾ.. ಒತ್ತಾಯಿಸಿದ್ದಲ್ಲಿ ಮಾತ್ರಾ ಅಲ್ಲಿ ಉಣ್ಣುವವಳು ನಾನು. ಆದರೆ ಇಂದ್ಯಾಕೋ ಹೊಟ್ಟೆಯ ತಾಳ ಜೋರಾಗಿತ್ತು. ಅಷ್ಟೊತ್ತಿಗಾಗಲೇ ಅಲ್ಲಿ ಯಾರದಾ ಮಾತು ಕಿವಿಗೆ ಬಿತ್ತು ‘ಊಟ ಇಲ್ಲಂತೆ, ಒಂದು ಗಂಟೆಗೇ.. ಊಟ ಕಾಲಿಯಾಗಿದೆಯಂತೆ. ತಮ್ಮ ಊರಿನ ಎಲ್ಲಾ ಮನೆಯವರನ್ನು ಕರೆದಿದ್ರಲ್ಲ ಹಾಗೆ. ಜನ ಜಾಸ್ತಿಯಾಗಿ ಊಟ ಖಾಲಿಯಾಗಿದೆಯಂತೆ. ಇದನ್ನು ಕೇಳಿಸಿಕೊಂಡು ನಮ್ಮಲ್ಲಿ ಯಾರಾ ಊಟದ ಹಾಲ್ ಕಡೆ ಹೋಗಿ ನೋಡಿ.. ವಿಷಯ ನಿಜವೆಂದರು. ಅಲ್ಲಿ ಎಲ್ಲಾ ಕಾಲಿ ಕಾಲಿ ಕಾಣುತಿದೆ. ಅಡುಗೆಯವರು ಮಾತ್ರಾ ಅಲ್ಲಿದ್ದು ಅವರು ತಮ್ಮ ಪಾತ್ರೆ ಪಗಡೆಗಳನ್ನು ಪ್ಯಾಕಿಂಗ್ ಮಾಡ್ತಿದ್ದಾರೆ. ಅನ್ನುತ್ತಲೇ..

ಮ್…ಸರಿ ಇನ್ನು ಏನ್ತಾನೆ ಮಾಡೋಕಾಗ್ತದೆ.. ನಾವು ಬಂದಿದ್ದಕ್ಕೆ ಮದುವೆ ಮನೆಯವರಿಗೆ ಕುಶಿಯಾದರು ಆಯ್ತಲ್ಲಾ. ಅದಷ್ಟು ಸಾಕು ಎನ್ನುತ್ತಾ.. ಅಲ್ಲಿ ಸ್ವಲ್ಪ ಹೊತ್ತು ಕುಳಿತ್ತಿದ್ದು ನಾವಿನ್ನು ಹೊರಡ್ತೇವೆಂದು ಅವರಿಗೂ ತಿಳಿಸಿ.. ಚುರುಗುಟ್ಟುತ್ತಿರುವ ಹೊಟ್ಟೆಯನ್ನೊತ್ಕೊಂಡು ನಮ್ಮ ತವರಿನ ಕಡೆ ಪ್ರಯಾಣ ಬೆಳೆಸಿದೆವು. ಕಾರಿನಲ್ಲಿರುವ ಎಲ್ಲಾರ ಮುಖಗಳೂ ಬಾಡಿದ್ದವು. ಬಿಸಿಲ ತಾಪ ಬೇರೆ ಸಹಿಸಲಸಾದ್ಯ. ಒಂದೊಂದೇ ಊರು ದಾಟುತ್ತಾ ಕಾರು ಮುಂದಕ್ಕೆ ಚಲಿಸುತ್ತಿತ್ತು. ಇನ್ನೇನು ಮನೆಯ ದಾರಿಯತ್ತ ಕಾರಿನ ಸ್ಟೇರಿಂಗ್ ತಿರುಗಿಸಲಿದ್ದ ಪತಿಯವರು ಒಮ್ಮೆಲೇ ಕೇಳಿದರು ‘ಹೇಗೂ ಆಯ್ತಲ್ಲ.. ನಮ್ಮ ಹುಡುಗ ‘ಅಂದ್ರು’ವಿನ ಮದುವೆ ಯಾಕೆ ಬಾಕಿಡಬೇಕು.? ಅಲ್ಲಿಗೂ ಹೋಗಿ ಬರುವನಾ..? ಇದನ್ನು ಕೇಳಿ ನಮ್ಮ ‘ಉಮ್ಮ’ನವರ ಕಣ್ಣುಗಳು ಸಂತಸದಿಂದ ಅರಳಿದವು

‘ಹೌದು ನಾನೂ.. ಅದೇ ಹೇಳಬೇಕೆಂದಿದ್ದೆ.. ಎಲ್ಲಿ ನಿಮಗೆಲ್ಲಾ ಸುಸ್ತಾಗುತ್ತಿದೆಯೋ ಎಂದು ಯೋಚಿಸಿ ಸುಮ್ಮನಿದ್ದೆ ಎಂದರು.

ಕಾರು ಇದೀಗ ನೇರ ‘ಅಂದ್ರು’ವಿನ ಊರಿನ ಚಲಿಸ ತೊಡಗಿತು. ನಮ್ಮ ಮುಖಗಳಲ್ಲೂ ಹೊಸ ಜಾಗಕ್ಕೆ ಪಯಣ ಬೆಳೆಸಿರುವುದರಿಂದ ಸಂತಸ ಮೂಡಿತ್ತು. ಮುಂಚೆ ಅಂದ್ರು ನಮ್ಮ ಮನೆಯಲ್ಲಿರುವಾಗಿನ ಒಂದೊಂದೇ ವಿಷಯಗಳನ್ನು ಕುಶಿಯಿಂದಲೇ ನೆನಪಿಸಿ ಹೇಳುತ್ತಾ ನಾವೂ ನಗುತ್ತಾ ಸಾಗಿದ್ದೆವು.

ಹೌದು ! ಅವನೊಬ್ಬ ಪಾಪದ ಸಾಧು ಹುಡುಗನಾಗಿದ್ದ ‘ಅಂದ್ರು’ ನಮ್ಮೆಲ್ಲರಲ್ಲೂ ತುಂಬಾ ಪ್ರೀತಿ ಅವನಿಗೆ. ತಾಯಿ ಇಲ್ಲದ ತಬ್ಬಲಿ ಅವನಿಗೆ ನಮ್ಮ ಉಮ್ಮನವರೆಂದರೆ ಪ್ರಾಣ. ಅವನ ಮುಗ್ದತೆ ಸಾಧು ಸ್ವಭಾವದಲ್ಲೂ ಬಹಳ ತಮಾಷೆಯ ಮಾತುಗಳೂ ಇದ್ದವು.. ಸದಾ ನಗು ನಗುತ್ತಾ ಇರುವ ‘ಅಂದ್ರು’ ನಮ್ಮ ಮನೆಮಂದಿಗೆಲ್ಲಾ ಪ್ರೀತಿಯ ವ್ಯಕ್ತಿಯಾಗಿದ್ದ. ಹಾಗಾಗಿಯೇ ನಾವು ‘ಅಂದ್ರು’ ಕರೆದದ್ದಕ್ಕೆ ಹೋಗಿಲ್ಲ ಅಂತ ಅವನು ಬೇಜಾರು ಮಾಡಬಾರದೆಂದು.. ಹೀಗೆ ಹೋಗಿ.. ಹಾಗೆ ಬರುವಾಂತ.. ಮಾತಾಡಿಕೊಳ್ಳುತ್ತಾ.. ಹೊರಟದ್ದು. ಸಮಯ ಮೂರುವರೆ’ ಮದುವೆ ಮುಗಿದಿರಬಹುದು.. ಮದುವೆ ‘ಮನೆ’ಯಲ್ಲಿಯೇ ಇಟ್ಟಿದ್ದ ಕಾರಣ ಪರವಾಗಿಲ್ಲ. ನಮಗೆ ‘ಮದುಮಗ’ ಕಾಣಲು ಸಿಕ್ಕರೆ ಸಾಕಿತ್ತೆಂದು ಮಾತಾಡ್ತಾ ಹೋದೆವು. ಕೆಲವು ಕಡೆ ವಿಚಾರಿಸುತ್ತಾ ಅಂತೂ ಇಂತೂ ಅಂದ್ರು’ವಿನ ಮನೆ ತಲುಪಿದೆವು. ಚೊಕ್ಕದಾದ ಕಂಪೌಂಡಿನ ಪುಟ್ಟ ಮನೆ. ಗೇಟಿನ ಬಳಿ ಕಾರು ನಿಂತಿದ್ದೇ ತಡ ಎರಡ್ಮೂರು ಹಿರಿಯ ವ್ಯಕ್ತಿಗಳೂ. ಮಕ್ಕಳೂ.. ಓಡಿ ಬಂದರು.

‘ಅಂದ್ರು’ ಇದ್ದಾನ’ ನಾವು ಕೇಳುತ್ತಲೇ.. ಅವರು ಪ್ರೀತಿ ಆದರದಿಂದ ‘ಇಳಿಯಿರಿ, ಬನ್ನಿ, ಬನ್ನಿ’ ಎಂದು ಕರೆದರು. ಅಷ್ಟೊತ್ತಿಗಾಗಲೆ ಬಾಗಿಲಲ್ಲಿ ಹೊರಗೆ ಇಣುಕಿದ ‘ಅಂದ್ರು’ ಮದುಮಗ ನಮ್ಮನ್ನು ಕಂಡವನೇ ಜೀವ ಸಿಕ್ಕವನ ಹಾಗೆ ಮುಖದ ತುಂಬಾ ಸಂತಸದ ನಗು ತುಂಬಿಕೊಂಡು ಓಡಿ ಬಂದ ಕಾರಿನ ಬಳಿ. ಅವನ ಹಾಗೂ ಅಲ್ಲಿನ ಜನರ ಸಂತಸ ಸಡಗರ ಕಂಡು ನಾವೂ ನಗುಮುಖದೊಂದಿಗೇ ಕಾರಿನಿಂದಿಳಿದು ಆ ಮನೆಯೊಳ ಹೊಕ್ಕೆವು. ಮನೆಯ ಚವಾಡಿಯಲ್ಲಿದ್ದ ಕೆಲವು ಕುರ್ಚಿ ಸೋಪಾಗಳಲ್ಲಿ ನಾವು ಪವಡಿಸಿದೆವು. ಸೀಲಿಂಗ್ ಫ್ಯಾನಿನ ಗಾಳಿ ಸಾಕಾಗಲಾರದೆಂದು ಇನ್ನೊಂದು ಸ್ಟಾಂಡ್ ಫ್ಯಾನ್’ಅನ್ನೂ ಹೊತ್ತು ತಂದು ನಮಗೆಲ್ಲಾರಿಗೂ ತಂಪು ಗಾಳಿಬರುವ ಹಾಗೆ ಇಡಲಾಯಿತು. ಅಷ್ಟೊತ್ತಿಗೆ ಒಬ್ಬರು ಟ್ರೇ’ಯಲ್ಲಿ ದೊಡ್ಡ ದೊಡ್ಡ ಗ್ಲಾಸ್’ಗಳಲ್ಲಿ ತಂಪು ಶರ್ಬತ್ ತಂದುಕೊಟ್ಟರು. ನಮಗೆ ಇದು ಬಹಳ ಕುಶಿಕೊಟ್ಟಿತು.

ಮದುವೆಯಲ್ಲಿ ಊಟವಿಲ್ಲದಿದ್ದರೂ ಶರ್ಬತ್ ಆದರೂ ಕೊಡಬಹುದಿತ್ತು ಅನಿಸಿ ಬೇಸರವೆನಿಸಿದ್ದ ನಮಗೇ.. ಇಲ್ಲಿ ಕೊಟ್ಟ ಶರ್ಬತ್ ಬಹಳವೇ ರುಚಿಸಿತು. ‘ಸಾಕಪ್ಪ ಶರ್ಬತ್ ಕೊಟ್ರಲ್ಲ’ ಅಂತ ಕುಶಿಯಿಂದಲೇ ನಾವು ಯೋಚಿಸುತ್ತಿರುವಾಗಲೇ. ಕೆಲವರು ಬಂದು ‘ಬನ್ನಿ ಕೈ ತೊಳೆಯಿರಿ’ ಅಂತ ಕರೆದಾಗ ‘ಯಾಕೆ.?’ ಎಂದು ಕೇಳಿದೆವು.. ಅಲ್ಲೆ ಗೋಡೆ ಮೇಲೆ ತೂಗಿದ್ದ ಡೊಡ್ಡದಾದ ಗಡಿಯಾರ ಸಮಯ ನಾಲಕ್ಕು ತೋರಿಸುತ್ತಿದ್ದದ್ದನ್ನು ನೋಡುತ್ತಾ..

‘ನೀವು ಗಂಟೆ ನೋಡಬೇಡಿ, ಬನ್ನಿ ಊಟ ಮಾಡಲೇ ಬೇಕು, ಬೇಡವೆನ್ನಬಾರದು’ ಎಂದಾಗ ಅವರು, ನಾವು ಮೌನವಾದೆವು..

ಬೆಳಿಗ್ಗೆ ರೆಡಿ ಮಾಡಿದ ಮದುವೆ ಊಟ ಇಷ್ಟೊತ್ತಿಗೆ ತಣ್ಣಗಾಗಿ ಹೇಗಾಗಿರಬಹುದು.. ಹಳ್ಳಿಯಲ್ಲಿ ಜನ ಜಾಸ್ತಿ ಸೇರ್ತಾರೆ ಬೇರೆ.. ಅನ್ನ ಕಾಲಿಯಾಗಿ ಪಾತ್ರೆಯ ತಳದಲ್ಲಿ ಅಂಟಿದಂತಿರಬಹುದು.. ಊಟ ಕೊಡದೆ ಕಳಿಸಲಾಗದೇ ಮುಜುಗರದಿಂದ ಬಡಿಸಿರಬಹುದು ಪಾಪ ನಮ್ಮಿಂದಾಗಿ ಸುಮ್ನೆ ತೊಂದರೆ ಇವರಿಗೆ.. ನಮ್ಮ ಯೋಚನೆಯನ್ನು ದೂರತಳ್ಳಿ ಮುಗ್ದತೆಯೇ ಮೂರ್ತಿವೆತ್ತಂತ ಆತ್ಮೀಯರಂತಾ ಆ ವ್ಯಕ್ತಿಗಳು ಬಹಳ ಒತ್ತಾಯಿಸುವಾಗ ನಿರಾಕರಿಸಲಾಗದೇ ಊಟಕ್ಕೆದ್ದೆವು.

ಕೈ ತೊಳೆದು ಬಂದು ಊಟಕ್ಕೆ ಕುಳಿತ ನಮಗೇ ಅಲ್ಲಿ ಮನೆಮಂದಿ ಒಬ್ಬೊಬ್ಬರೆ ತಂದಿಟ್ಟ ಊಟವನ್ನು ಕಂಡಾಗ ಬಹಳ ಆಶ್ಚರ್ಯ ಆಯಿತು.. ನಿಜಕ್ಕೂ ನಾವೆಲ್ಲರು ಕೆಲವು ಕ್ಷಣ ಮಾತೇ ಮರೆತೆವು.. ಹೌದು! ಘಮಘಮಿಸುವ ಬಿಸಿ ಬಿಸಿ ಹೊಗೆಯಾಡುವ ತುಪ್ಪದನ್ನ (ನೈಚೋರು) ಮಟನ್ ಕರಿ, ಚಿಕನ್ ಕಬಾಬ್.. ಬೇಳೆ ಸಾಂಬಾರ್, ಸಲಾಡ್ (ಕಚ್ಚಂಬರ್) ಮಿಡಿಮಾವಿನ ಉಪ್ಪಿನಕಾೖ.. ಜತೆಗೆ ಪ್ರೀತಿಯ ಒತ್ತಾಯದ ಉಪಚಾರ ಮತ್ತೆ ಮತ್ತೆ ಬಡಿಸಿದರು.. ನಾವು ತಿಂದಿದ್ದೆ ತಿಂದಿದ್ದು ಅಷ್ಟೂ…… ಸ್ವಾದಭರಿತವಾಗಿತ್ತು ಊಟ.
‘ತುಪ್ಪದ ಊಟ ಅಂದ್ರೆ ಇದಪ್ಪಾ.. ಇದುವೆ ಮದುವೆಯ ಊಟ’ ಅಂತ ಬಿರಿಯಾನಿಯನ್ನು ಹೆಚ್ಚಾಗಿ ಇಷ್ಟಪಡದ ನನ್ನ ಪತಿಯವರು ಸಂತಸದಿಂದ ಮದುಮಗನ ಬಳಿ ಹೇಳಿದರು.

ಅಲ್ಲದಿದ್ದರೆ ತೀರಾ ಜಾಸ್ತಿ ಹಸಿವಾದ್ರೆ ಉಣ್ಣಲು ಆಗುವುದಿಲ್ಲ..ಆದರೆ ಇಲ್ಲಿ ನಾವು ಅವರುಗಳ ಮತ್ತೆ ಮತ್ತೆ ಬಡಿಸುವಿಕೆಗೆ ಹೊಟ್ಟೆ ಬಿರಿಯುವಷ್ಟು ತಿಂದಿದ್ದೇ ತಿಂದಿದ್ದು..ಸಂತಸ ನಮಗಿಂತಲೂ ಎರಡುಪಟ್ಟು ಜಾಸ್ತಿ ಅವರುಗಳ ಮುಖದಲ್ಲಿ ತುಳುಕಾಡುತಿದ್ದವು. ಊಟ ಆದಮೇಲೆ ಸ್ವಲ್ಲ ಮಾತಿನಲ್ಲಿ ಕುಳಿತೆವು ಅದಾಗಲೇ ಬಂತು ಸಿಹಿತಿಂಡಿ ತಿನಿಸು ಜತೆಗೆ ಬಿಸಿಬಿಸಿ ಟೀ’..ನಿಜವಾಗಲು ಅಲ್ಲಿನ ಆ ಮನೆಯ ವಾತಾವರಣ ಆ ಜನರ ಪ್ರೀತಿ ಸತ್ಕಾರ ಕಂಡೂ.. ಅಷ್ಟೂ ಸ್ವಾದಬರಿತ ಊಟವನ್ನೂ ಉಂಡೂ.. ನಮ್ಮ ಹೊಟ್ಟೆಯೊಂದಿಗೆ ಹೃದಯಾನೂ ತುಂಬಿತ್ತು. ನಾವು ಹೊರಡುವಾಗ ಎಲ್ಲಾರಿಗೂ ಧನ್ಯವಾದ ಅರ್ಪಿಸುವಾಗ

‘ನೀವುಗಳು ಪ್ರೀತಿಯಿಟ್ಟು ಬಂದದ್ದಕ್ಕೆ ಧನ್ಯವಾದ’ವೆಂದು ಅವರುಗಳು ಹೇಳುವುದನ್ನು ಕೇಳಿದಾಗ ನಿಜಕ್ಕೂ ನನ್ನ ಗಂಟಲ ನರಗಳುಬ್ಬಿದ್ದವು.

ಅಲ್ಲಿಂದ ಮನೆಯ ಕಡೆ ಹೊರಟ ನಮ್ಮೆಲ್ಲರ ಬಾಯಿಯಿಂದ ‘ಅಂದ್ರು’ವಿಗೆ ಮತ್ತು ಆ ಮನೆಯವರಿಗೆ ಹೊಗಳಿಕೆ.. ದುವಾಗಳೇ.. ಉದುರಿದ್ದವು. ಸೃಷ್ಠಿಕರ್ತನು ನಮಗೆ ರಿಝ್ಕ್ ನೀಡುವ ಭಾಗ್ಯ ಯಾರಲ್ಲಿಟ್ಟಿರುತ್ತಾನೋ ಅಲ್ಲಿಗೆ ಹೋಗಿ ನಾವು ತಲುಪಲೇ ಬೇಕು. ಹೌದು ! ಅಲ್ಲಿ ಮದುವೆ ಮುಗಿದಿತ್ತು ಮದುಮಗಳು ಬಂದು ಹೋಗಿನೂ ಆಗಿತ್ತು.. ನಾವು ಅಲ್ಲಿ ಹೋಗಿ ತಲುಪಿದ್ದೇ ಗಂಟೆ ನಾಲ್ಕಕ್ಕೆ.. ಹೋಗಿ ಐದೇ ನಿಮಿಷಕ್ಕೆ ಊಟ ತಂದಿಟ್ಟಿದ್ದರು ಅದೂ ಬಿಸಿಬಿಸಿ ಸ್ವಾದಭರಿತ. ಮಾಷಾ ಅಲ್ಲಾಹ್!

ಆಡಂಬರದ ಆರ್ಭಟದ ಮದುವೆಗಳೆಲ್ಲಿ..

ಪ್ಲೇಟ್ ಊಟಕ್ಕಾಗಿ ನಡೆಸುವ ಆ ನೂಕುನುಗ್ಗಲು ಗದ್ದಲ ಗುದ್ದಾಟವೋ.. ಅದನ್ನೆಲ್ಲಾ ನೋಡಿ ಉಣ್ಣದೆ ಹಾಗೆಯೇ ಹೋಗುವ ಜನರು ಒಂದೆಡೆಯಾದರೆ.. ಊಟ ಕಾಲಿಯಾಗಿದೆ ಎನ್ನುವುದು ಕೇಳಿ ಬಾಡಿದ ಮುಖದಲ್ಲಿ ಹೊರಟು ಹೋಗತ್ತಿರುವ ಜನಗಳು ಇನ್ನೊಂದೆಡೆ. ಏನು ಸಾದಿಸಲಿದ್ದಾರೆ ಈ ಆಡಂಬರ ಶ್ರೀಮಂತಿಕೆ ಪ್ರದರ್ಶಿಸಿ ಜನಗಳು..? ಮದುವೆಗೆ ಉಣ್ಣಲೆಂದೇ ಹೋಗುವ ಜನರೂ ಇರಬಹುದು..ಹಾಗೆಯೇ ನಮ್ಮಂತವರು ಮದುವೆ ಮನೆಯಲ್ಲಿ ಉಣ್ಣಲು ಬಹಳ ಹಿಂಜರಿವವರೂ ಇದ್ದೇವೆ. ಆದರೂ…. ಅತಿಯಾದ ಹಸಿವು ಸಹಿಸದಾದಾಗ ಎಷ್ಟೋ ದೂರದಿಂದ ಏಷ್ಟೆಲ್ಲಾ ಕಷ್ಟಪಾಡಿನಲ್ಲಿ ಬರುವವರ ಬಗ್ಗೆ ಇಂತಹಾ ಮದುವೆ ತೆಗೆಯವವರಿಗೇನು ಗೊತ್ತು..?

ಆಹ್ವಾನದಲ್ಲಿ ಪ್ರೀತಿಯ ಮಾತನ್ನಾಡುವವರು

..ಹಾಗೆಯೇ ಮದುವೆಯಲ್ಲಿ ಕಂಡಾಗ ಬೇಕಾ.. ಬೇಡವಾ.. ಎನ್ನುವ ಒಂದು ಮುಗಳು ನಗೆ ಎಸೆದು ತಮ್ಮದೇ ಲೋಕದಲ್ಲಿ ತಲ್ಲೀನವಾಗಿಬಿಡುವರು. ಬಂದವರನ್ನು ಸರಿಯಾಗಿ ಉಪಚರಿಸಲು ಕಷ್ಟವಾದಲ್ಲಿ ಈ ಅಸಂಖ್ಯಾತ ಜನರನ್ನು ಕರೆದು ರಾಶಿಹಾಕಿ ತಮ್ಮ ಶ್ರೀಮಂತಿಕೆಯ, ಅಲಂಕಾರದ, ದರ್ಪದ ಪ್ರದರ್ಶನವನ್ನೇಕೆ ಮಾಡುವರು.??

ಬಂದುಗಳೇ ಕೇಳಿ ನಮ್ಮ ಮನ ವಿಶಾಲವಾಗಿದ್ದರೇ..

‘ಬಡವರದೇ… ಮನೇ ನೋಟವೂ ಚಂದ, ಊಟವೂ ಚಂದ….

ತಿಳಿಯಿರಿ ಎಲ್ಲರೂ ಇದನ್ನು.