ಸಂವಾದ: ಪ್ರವಾದಿ ಮುಹಮ್ಮದ್(ಸ) ಶ್ರೇಷ್ಠ ಮಾರ್ಗದರ್ಶಕರಾಗಿದ್ದರು…

0
3292

ನವೆಂಬರ್ 16 ರಿಂದ 30ರ ವರೆಗೆ ಪ್ರವಾದಿ ಮುಹಮ್ಮದ್(ಸ) ಶ್ರೇಷ್ಠ ಮಾರ್ಗದರ್ಶಕ ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕವು ಹಮ್ಮಿಕೊಂಡಿರುವ ರಾಜ್ಯ ಅಭಿಯಾನದ ಪ್ರಯುಕ್ತ ಅಭಿಯಾನದ ಸಂಚಾಲಕರೂ ಜ.ಇ. ಹಿಂದ್ ರಾಜ್ಯ ಕಾರ್ಯದರ್ಶಿಯೂ ಆಗಿರುವ ಡಾ| ಸಅದ್ ಬೆಳಗಾಮಿ ಅವರ ಜೊತೆ ರಿಯಾಝ್ ರೋಣ ನಡೆಸಿರುವ ಸಂದರ್ಶನ ಇದು.- ಸಂಪಾದಕರು

? ಅಭಿಯಾನದ ಮೂಲಕ ಏನನ್ನು ಹೇಳಲು ಬಯಸುತ್ತೀರಿ?

√ ಸೀರತ್(ಸ) ಅಭಿಯಾನದ ಮೂರು ಪ್ರಮುಖ ಉದ್ದೇಶಗಳಿವೆ.

1. ದೇಶ ಬಾಂಧವರಲ್ಲಿ ಪ್ರವಾದಿ ಮುಹಮ್ಮದ್(ಸ)ರ ಸಮಗ್ರ ಪರಿಚಯ ಮಾಡಿಸುವುದು. ಪ್ರವಾದಿ(ಸ) ಅವರ ಶಿಕ್ಷಣ ಹಾಗೂ ಅವರ ಮೇಲೆ ಅವತೀರ್ಣಗೊಂಡ ಗ್ರಂಥ ಕುರ್‍ಆನ್ ನಮ್ಮ ನಡುವೆ ಇದೆ. ಇದೂ ಸೇರಿದಂತೆ ಎಲ್ಲವನ್ನೂ ಎದುರಿಟ್ಟು ಕೊಂಡು ಅವರನ್ನು(ಸ) ಪರಿಚಯಿಸುವುದಾಗಿದೆ.

2. ಮನುಷ್ಯ ಹಾಗೂ ಸಮಾಜದ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರವಾದಿ ಮುಹಮ್ಮದ್(ಸ) ಶಿಕ್ಷಣವನ್ನು ವ್ಯಾಪಕಗೊಳಿಸು ವುದಾಗಿದೆ. ಇಡೀ ವಿಶ್ವ ಒಬ್ಬ ಒಡೆಯನ ಆಜ್ಞೆಗಳನ್ನು ಪಾಲಿಸುತ್ತಿದೆ. ದೇವನ ಆದೇಶಗಳ ವಿರುದ್ಧ ನಡೆದು ಮಾನವ ಎಂದೂ ಯಶಸ್ಸುಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ದೇವನ ಆಜ್ಞೆಯಂತೆ ಬದುಕಿದರೇ ಮಾತ್ರ ಮನುಷ್ಯ ವಿಜಯಿಯಾಗಲು ಸಾಧ್ಯ, ಮನುಷ್ಯ ಸಚ್ಚಾರಿತ್ರ್ಯ ವಂತನಾಗದೇ ಸಮಾಜದಲ್ಲಿ ಶಾಂತಿ ನ್ಯಾಯ ಮತ್ತು ಸಮಾ ನತೆ ನೆಲೆಗೊಳ್ಳಲು ಸಾಧ್ಯವಿಲ್ಲ. ಚಾರಿತ್ರ್ಯದ ಕಾಪಾಡುವಿಕೆಗೆ ದೇವನ ಅಸ್ತಿತ್ವದಲ್ಲಿ ದೃಢವಿಶ್ವಾಸ ಹಾಗೂ ಉತ್ತರದಾಯಿತ್ವದ ಪ್ರಜ್ಞೆಯು ಬಹಳ ಮುಖ್ಯವಾಗಿದೆ. ಮಗದೊಂದೆಡೆ ಪ್ರಸಕ್ತ ಸಂದರ್ಭದಲ್ಲಿ ಆರ್ಥಿಕ ಶೋಷಣೆ, ಸಾಮಾಜಿಕ ಅಸಮಾನತೆ, ಉಚ್ಛ ನೀಚತೆ ಹಾಗೂ ವರ್ಗೀಯ ವಿಂಗಡನೆ, ಮಹಿಳಾ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಶರಾಬು, ಅನೈತಿಕತೆ, ಅತ್ಯಾಚಾರ ಇತ್ಯಾದಿ ಸಮಸ್ಯೆಗಳಿಗೆ ಇಸ್ಲಾಮಿನ ಮಾರ್ಗದರ್ಶನ ವೇನು, ಇಂತಹ ಕೆಡುಕುಗಳನ್ನು ಪ್ರವಾದಿ(ಸ) ತಮ್ಮ ಕಾಲದಲ್ಲಿ ಹೇಗೆ ನಿಯಂತ್ರಿಸಿದರು ಎಂಬುದರ ಕುರಿತು ವಿವರಿಸಬೇಕಾಗಿದೆ.

3. ಇಸ್ಲಾಮ್, ಪವಿತ್ರ ಕುರಆನ್ ಹಾಗೂ ಪ್ರವಾದಿ(ಸ)ರ ವಿರುದ್ಧ ತಪ್ಪುಕಲ್ಪನೆ ಮತ್ತು ಕೆಟ್ಟ ಗುಮಾನಿಗಳನ್ನು ಹರಡಲಾಗು ತ್ತಿರುವ ಈ ಕಾಲದಲ್ಲಿ ಪ್ರವಾದಿ(ಸ) ಮಾನವ ಕುಲಕ್ಕೆ ನೀಡಿರುವಂತಹ ಕೊಡುಗೆ, ಉಜ್ವಲ ಸಚ್ಚಾರಿತ್ರ್ಯವನ್ನು ವ್ಯಾಪಕಗೊಳಿಸುವುದು ಈ ಅಭಿಯಾನದ ಮೂರನೇ ಉದ್ದೇಶ ವಾಗಿದೆ. ಕೋಮುವಾದ ಹಾಗೂ ಸಮಾಜವನ್ನು ಒಡೆಯುವ ದುಷ್ಟ ಶಕ್ತಿಗಳ ಎದುರು ಪ್ರವಾದಿ(ಸ) ಶಿಕ್ಷಣದ ಬೆಳಕಿನಡಿ ಪ್ರೀತಿ, ನೆಮ್ಮದಿ, ಭರವಸೆ ಹಾಗೂ ಮಾನವೀಯತೆ ಸಂದೇಶವನ್ನು ಇಲ್ಲಿಯ ಜನರಿಗೆ ತಿಳಿಸುವುದಾಗಿದೆ.

?ಇವತ್ತಿನ ಇಂಟರ್ನೆಟ್ ಯುಗದಲ್ಲಿ ಯಾರು ಯಾರಿಗೂ ಅಪರಿಚಿತರಲ್ಲ. ಪ್ರವಾದಿಯವರನ್ನು ತಿಳಿಯುವುದಕ್ಕೆ ಗೂಗಲ್ ಇದೆ. ಸಾಮಾಜಿಕ ಜಾಲತಾಣಗಳಿವೆ. ಹೀಗಿ ರುವಾಗ ಪ್ರವಾದಿಯವರ ಬಗ್ಗೆ ಅಭಿಯಾನ ಬೇಕೇ?

√ನಿಸ್ಸಂದೇಹವಾಗಿಯೂ ತಾವು ಹೇಳಿದ ಹಾಗೇ ಇಂಟರ್‍ನೆಟ್ ಮೂಲಕ ಸಾಕಷ್ಟು ಮಾಹಿತಿಯನ್ನು ಇಂದು ವ್ಯಾಪಕ ಗೊಳಿಸಲಾಗುತ್ತಿದೆ. ಆದರೆ ಇದರಲ್ಲಿ ಹೆಚ್ಚಿನದ್ದು ತಪ್ಪು ಸಂದೇಶವನ್ನು ಹರಡು ತ್ತಿವೆ ಎಂಬ ಸತ್ಯವನ್ನು ಕೂಡಾ ಅಲ್ಲಗಳೆ ಯುವಂತಿಲ್ಲ. ಇಸ್ಲಾಮ್‍ನ್ನು ತನ್ನ ಶತ್ರು ಎಂದು ಪರಿಗಣಿಸಿರುವ ಕೆಲವು ವೆಬ್‍ಸೈಟ್ ಗಳು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ, ನಮ್ಮ ಕಾರ್ಯವು ಒಂದೆಡೆ ಪ್ರತಿಯೊಂದು ಕ್ಷೇತ್ರ(ಸಾಮಾಜಿಕ ಜಾಲತಾಣಗಳ ಲ್ಲಿಯೂ)ವನ್ನು ಸದುಪಯೋಗ ಪಡಿಸಿ ಕೊಳ್ಳುತ್ತ ಸರಿಯಾದ ಮಾಹಿತಿಯನ್ನು ತಿಳಿಸುವುದಾಗಿದೆ. ಮಗದೊಂದೆಡೆ ಇಸ್ಲಾವಿೂ ಆಂದೋಲನವನ್ನು ಸಮು ದಾಯ ಬಾಂಧವರಲ್ಲಿ ನೇರವಾಗಿ ತಲು ಪಿಸಿ ಅವರ ಆಲೋಚನೆಯ ಸುಧಾರಣೆ ಹಾಗೂ ತರಬೇತಿಯ ಕಾರ್ಯವನ್ನು ನಾವು ಮಾಡಲು ಬಯಸುತ್ತೇವೆ. ಸಂದೇಶ ಪ್ರಚಾರದೊಂದಿಗೆ ಈ ಸಂದೇಶವನ್ನು ತಲುಪಿಸುವವರ ಪಾತ್ರ ಹಾಗೂ ನಡುವಳಿ ಕೆಯಲ್ಲಿ ಸುಧಾರಣೆಯು ಅಷ್ಟೇ ಪ್ರಮುಖ ವಾಗಿದೆ. ಈ ಅಭಿಯಾನವು ಇವೆರಡರ ಸಂಯೋಜನೆಯ ಹೆಸರಾಗಿದೆ.

? ಮುಸ್ಲಿಮ್ ಸಮುದಾಯದ ಒಂದು ವಿಭಾಗ ರಬಿವುಲ್ ಅವ್ವಲ್ ಹನ್ನೆರಡನ್ನು ಪ್ರವಾದಿ ಜನ್ಮ ದಿನಾಚರಣೆಯಾಗಿ ಆಚರಿಸು ತ್ತಿದೆ. ತಿಂಗಳುದ್ದಕ್ಕೂ ಮೌಲಿದ್ ಇತ್ಯಾದಿ ಆಚರಣೆಗಳನ್ನು ಮಾಡುತ್ತಿದೆ. ಇವುಗಳ ಬಗ್ಗೆ ಸಹಮತವಿಲ್ಲದ ಜಮಾಅತೆ ಇಸ್ಲಾಮೀ ಹಿಂದ್ ರಬೀವುಲ್ ಅವ್ವಲ್‍ನಲ್ಲೇ ಅಭಿ ಯಾನ ಕೈಗೊಂಡಿರುವುದೇಕೆ?

√ ರಬೀವುಲ್ ಅವ್ವಲ್ ತಿಂಗಳಲ್ಲಿ ಪ್ರವಾದಿರವರ(ಸ) ಜನ್ಮ ದಿನಾಚರಣೆ ಯನ್ನು ಆಚರಿಸುವುದು ಸಮಂಜಸವಲ್ಲ, ಏಕೆಂದರೆ ಕೆಲವು ವರದಿಗಳ ಪ್ರಕಾರ ಪ್ರವಾದಿ(ಸ)ರವರ ನಿಧನವು ಇದೇ ದಿನ ಹಾಗೂ ತಿಂಗಳಲ್ಲಿ ಸಂಭವಿಸಿದೆ. ಜನ್ಮ ದಿನಾಚರಣೆ ಆಚರಿಸುವುದು ಇಸ್ಲಾಮಿನ ಪದ್ಧತಿಯಲ್ಲ. ಪ್ರವಾದಿ(ಸ)ರವರ ಸಂದೇಶ ಕೇವಲ ರಬೀವುಲ್ ಅವ್ವಲ್ ತಿಂಗಳಿಗೆ ಮಾತ್ರ ಸೀಮಿತವಾಗಿರದೇ ತಮ್ಮ ಸಂದೇಶವು ಇಡೀ ವರ್ಷ, ಪ್ರತಿಕ್ಷಣ ನೆನಪಿಡುವ, ಅನುಸರಿಸುವ ಹಾಗೂ ಇತರರಿಗೆ ತಲುಪಿಸುವ ನಮ್ಮೆಲ್ಲರ ಮೇಲಿನ ಪ್ರಮುಖ ಹೊಣೆಗಾರಿಕೆಯಾಗಿದೆ. ಸಾಮಾನ್ಯವಾಗಿ ಈ ತಿಂಗಳಲ್ಲಿ ಮುಸ್ಲಿಮ್ ಬಾಂಧವರಲ್ಲದೇ ಮುಸ್ಲಿಮೇತರರು ಕೂಡಾ ಪ್ರವಾದಿ(ಸ)ರ ಸಂದೇಶವನ್ನು ಕೇಳಲು ಬಹಳ ಉತ್ಸುಕರಾಗಿರುತ್ತಾರೆ, ಈ ವಾತಾ ವರಣದ ಲಾಭವನ್ನು ಪಡೆದುಕೊಳ್ಳಲು ಮತ್ತು ಪ್ರವಾದಿ(ಸ)ರವರ ಸಂದೇಶವನ್ನು ವ್ಯಾಪಕವಾಗಿ ಜನರಿಗೆ ತಲುಪಿಸಲು ಈ ಅಭಿಯಾನವನ್ನು ಈ ದಿನಗಳಲ್ಲಿ ಹಮ್ಮಿಕೊಳ್ಳಲಾಗಿದೆ.

? ಇವತ್ತು ರಾಷ್ಟ್ರೀಯತೆ, ದೇಶ ಪ್ರೇಮ, ಗೋವು ಇತ್ಯಾದಿಗಳು ಅಧಿಕಾರ ವನ್ನು ನಿರ್ಧರಿಸುವ ಹಂತಕ್ಕೆ ಬಂದಿವೆ. ಈ ಅಭಿಯಾನದಲ್ಲಿ ಈ ಬಗ್ಗೆ ಬೆಳಕು ಚೆಲ್ಲಲಾಗುತ್ತದೆಯೇ?

√ ಈ ವಿಷಯಗಳನ್ನು ರಾಜಕೀಯ ವಾಗಿ ಬಳಸುತ್ತ ಜನರನ್ನು ಉದ್ರೇಕಗೊಳಿಸ ಲಾಗುತ್ತಿದೆ. ಇವುಗಳು ಈ ಅಭಿಯಾನದ ವಿಷಯಗಳಲ್ಲ. ಅದಾಗಿಯೂ ಎಲ್ಲಿ ಮತ್ತು ಯಾವಾಗಲೆಲ್ಲ ಆವಶ್ಯಕತೆ ಎದುರಾಗುವುದೋ ನಾವು ದೇಶ ಪ್ರೇಮ, ದೇಶ ಸೇವೆ ಮತ್ತು ದೇಶ ಭಕ್ತಿ, ಅತಿ ರೇಕದ ಸ್ವಾರ್ಥ ಹಾಗೂ ಕೋಮುವಾದ ಇದರ ನೈಜತೆಯನ್ನು ಜನರಿಗೆ ಮನ ಗಾಣಿಸುವೆವು. ಬಹುಸಂಸ್ಕೃತಿಯ ಒಂದು ಸಮಾಜದಲ್ಲಿ ಎಲ್ಲರ ಆಹಾರ, ಭಾವನೆ ಹಾಗೂ ಆಚಾರ-ವಿಚಾರಗಳಿಗೆ ಗೌರವ ಹಾಗೂ ಸ್ವಾತಂತ್ರ್ಯವನ್ನು ನೀಡುವ ಆವಶ್ಯ ಕತೆಯ ಕುರಿತು ಒತ್ತು ನೀಡಬೇಕಾಗಿದೆ.

? ಇವತ್ತು ಪ್ರವಾದಿ(ಸ) ಎಷ್ಟು ಪ್ರಸ್ತುತ, ಯಾಕೆ ಪ್ರಸ್ತುತ?

√ ಸತ್ಯ ಏನೆಂದರೆ ಇಂದು ಸಾಕಷ್ಟು ಪ್ರಗತಿಯ ಹೊರತಾಗಿಯೂ ಮನುಷ್ಯ ಬದುಕಿನ ನೈಜ ದಾರಿ ತಪ್ಪಿದವನಾಗಿದ್ದಾನೆ. ಮನುಷ್ಯತ್ವ ಇಂದು ನರಳುತ್ತಿದೆ. ಜಗತ್ತು ಒಂದು ಗ್ಲೋಬಲ್ ವಿಲೇಜ್ ಆಗಿದೆ. ಆದರೆ ಶಾಂತಿ ಮತ್ತು ನ್ಯಾಯದೊಂದಿಗೆ ನಮ್ಮಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಸಚ್ಚಾರಿತ್ರ್ಯ ಇಂದು ಪಾತಾಳಕ್ಕಿಳಿದಿದೆ, ಎಲ್ಲೆಡೆ ಸಮಸ್ಯೆಗಳು ತಾಂಡವವಾಡುತ್ತಿವೆ. ಇಂತಹ ಸಂದರ್ಭ ದಲ್ಲಿ ಮನುಷ್ಯನನ್ನು ಮನುಷ್ಯನನ್ನಾಗಿ ಮಾಡಲು ಹಾಗೂ ಅವನ ಸಂಬಂಧವನ್ನು ಅವನ ನೈಜ ಸೃಷ್ಠಿಕರ್ತನೊಂದಿಗೆ ಜೋಡಿ ಸಲು ಹಾಗೂ ಒಂದು ವಿಶ್ವ ಭ್ರಾತೃತ್ವವನ್ನು ರೂಪಿಸಲು ಇಸ್ಲಾಮೀ ಸಿದ್ಧಾಂತದ ಪಾತ್ರವನ್ನು ಜನರ ಮುಂದೆ ತೆರೆದಿಡು ವುದು ನಮ್ಮ ಪ್ರಯತ್ನವಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು ಉದಾ ಹರಣೆಗೆ ಬಡವರ ಶೋಷಣೆ, ಉಳ್ಳವರ ಮತ್ತು ಇಲ್ಲದವರ ನಡುವಿನ ಬೆಳೆಯು ತ್ತಿರುವ ಅಂತರ, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ ಇತ್ಯಾದಿಗಳನ್ನು ಯಾವ ರೀತಿ ಪ್ರವಾದಿ(ಸ) ನಿಯಂತ್ರಿಸಿದರೋ ಇದರಲ್ಲಿ ನಮಗೆ ಒಂದು ದೊಡ್ಡ ಪಾಠ ಇದೆ.

? ಬಹುಪತ್ನಿತ್ವ, ತ್ರಿವಳಿ ತಲಾಕ್, ಸಮಾನ ನಾಗರಿಕ ಸಂಹಿತೆ ಇತ್ಯಾದಿ ಪ್ರಶ್ನೆ ಗಳ ಮೂಲಕ ಇಲ್ಲಿಯ ಒಂದು ವರ್ಗ ಮುಸ್ಲಿಮರನ್ನು ಮೂಲೆಗೆ ಸರಿಸುವ ಪ್ರಯತ್ನ ದಲ್ಲಿದೆ. ನಿಮ್ಮ ಅಭಿಯಾನವು ಈ ಪ್ರಶ್ನೆಗಳಿಗೆ ಉತ್ತರಿಸುವುದೇ?

√ ಸಮಾಜದಲ್ಲಿನ ನೈಜ ಸಮಸ್ಯೆಗಳನ್ನು ಮರೆಮಾಚಲು, ಮುಸ್ಲಿಮರನ್ನು ಕೆಟ್ಟ ದಾಗಿ ಚಿತ್ರಿಸಿ ಇಂತಹ ವಿಷಯಗಳಲ್ಲಿಯೇ ಅವರನ್ನು ಮಗ್ನರಾಗಿರಿಸಲು ಆಯ್ದುಕೊಂಡ ರಾಜಕೀಯ ಅಸ್ತ್ರಗಳಾಗಿವೆ ಇವುಗಳು. ಇದರ ಪರಿಧಿಯು ಬಹಳ ಸೀಮಿತವಾಗಿದೆ ಹಾಗೂ ನೈಜ ಪರಿಹಾರ ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುವುದಲ್ಲ ಬದಲಾಗಿ ಆಡಳಿತವು ಮುಸ್ಲಿಮ್‍ರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಉತ್ತಮ ಪಡಿಸುವತ್ತ ಇರುವಂತಹ ಸಮಸ್ಯೆಗಳನ್ನು ಪರಿಹರಿಸಿ ಈ ಕುರಿತು ರಚನಾತ್ಮಕ ಸಹಕಾರ ನೀಡಬೇಕಾಗಿದೆ. ಅಶ್ಲೀಲತೆ, ಕೆಟ್ಟ ನಡವಳಿಕೆ ಹಾಗೂ ಮಹಿಳಾ ದೌರ್ಜನ್ಯ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಸ್ಲಾಮಿನ ಬಹುಪತ್ನಿತ್ವದ ಕಾನೂನು ನ್ಯಾಯ ಮತ್ತು ಸಂತುಲನೆಯನ್ನು ಜನಸಾಮಾನ್ಯರಿಗೆ ಪರಿಚಯಿಸಬೇಕಾಗಿದೆ.

? ಜಮಾಅತ್‍ನ ಅಭಿಯಾನವು ಹಳ್ಳಿ ಗ್ರಾಮಗಳಿಗೆ ತಲುಪುವುದಿಲ್ಲ ಎಂಬ ಆರೋಪ ಇದೆ. ಈ ಅಭಿಯಾನವನ್ನು ಈ ಅಪವಾದದಿಂದ ಮುಕ್ತಗೊಳಿಸುತ್ತೀರಾ?

√ ನಮ್ಮ ಸಂದೇಶವು ನಗರ ಮತ್ತು ಹಳ್ಳಿವಾಸಿಗಳಿಬ್ಬರಿಗೂ ತಲುಪಿಸುವುದಾಗಿದೆ. ನಗರ ಪ್ರದೇಶಗಳಷ್ಟೇ ಅಲ್ಲದೇ ಹಳ್ಳಿಗಳನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದ ಮೂಲಕ ತಲುಪುವುದು ನಮ್ಮ ಪ್ರಯತ್ನವಾಗಿದೆ.

? ಈ ಅಭಿಯಾನದಲ್ಲಿ ಜಮಾಅತ್ ಬಂಧುಗಳ ಪಾತ್ರ ಏನು?

√ ಈ ಅಭಿಯಾನದಲ್ಲಿ ಜಮಾಅತಿನ ಪುರುಷ ಮತ್ತು ಮಹಿಳಾ ಕಾರ್ಯ ಕರ್ತರು ಪ್ರತಿದಿನ ವೈಯಕ್ತಿಕ ಭೇಟಿಯ ಕಾರ್ಯಕ್ರಮವನ್ನು ರಚಿಸಿ ತಂಡದ ರೂಪದಲ್ಲಿಯೂ ಇದನ್ನು ನೆರವೇರಿಸುವರು. ಈ ಸಂದರ್ಭದಲ್ಲಿ ಪ್ರವಾದಿ ಚರ್ಯೆ ಕುರಿತು ಮಾತುಕತೆ ನಡೆಸುವುದು, ದೇಶಬಾಂಧವರೊಂದಿಗೆ ನೆರೆಕೆರೆಯ ಸಂಬಂಧದ ಹಕ್ಕನ್ನು ಈಡೇರಿಸಬೇಕು, ನಿಸ್ವಾರ್ಥ ಸಂಬಂಧ ಬೆಳೆಸಬೇಕು. ಪ್ರವಾದಿ(ಸ) ಜೀವನ ಮತ್ತು ಸಂದೇಶ, ಆಯ್ದ ಪ್ರವಾದಿ(ಸ) ವಚನ, ಪಾಕೆಟ್ ಸೈಝ್ ಹಾಗೂ ಸರ್ವರೆ ಆಲಂ(ಸ) ನಂತಹ ಖ್ಯಾತ ಪುಸ್ತಕಗಳನ್ನಲ್ಲದೆ ಪ್ರವಾದಿ(ಸ) ಕುರಿತು ಅಭಿಪ್ರಾಯಗಳ ನ್ನೊಳಗೊಂಡ ಕಿರುಪುಸ್ತಕ ಹಾಗೂ ಆಯ್ದ ಪ್ರಬಂಧಗಳ ಸಂಕಲನಗಳನ್ನು ದೊಡ್ಡ ಪ್ರಮಾಣದಲ್ಲಿ ಗಣ್ಯ ವ್ಯಕ್ತಿಗಳಿಗೆ, ಶಿಕ್ಷಕ ವೃಂದದವರಿಗೆ ಹಾಗೂ ಸಾಹಿತಿಗಳಿಗೆ ಉಡುಗೊರೆ ರೂಪದಲ್ಲಿ ತಲುಪಿಸುವುದಾಗಿದೆ. ಇತರ ಫೋಲ್ಡರ್ ಕೈಪಿಡಿಗಳನ್ನು ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಗೆ ಮುಟ್ಟಿಸುವುದಾಗಿದೆ. ಚಿಕ್ಕಪುಟ್ಟ ಸಭೆಗಳು, ಕಾಲೇಜ್ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಹಾಗೂ ಶಾಲಾ ಸಮಾರಂಭ, ಪ್ರದರ್ಶನ, ಪ್ರಬಂಧ ಸ್ಪರ್ಧೆ, ಹಾಗೂ ಪತ್ರಿಕಾಗೋಷ್ಟಿಗಳನ್ನು ಸಾಧ್ಯ ವಾದ ಕಡೆಗಳೆಲ್ಲ ಹಮ್ಮಿಕೊಳ್ಳಲಾಗುವುದು. ಬೃಹತ್ ಸಾರ್ವಜನಿಕ ಸಮಾರಂಭವನ್ನು ಸೀರತ್(ಸ) ಪ್ರವಚನದ ರೂಪದಲ್ಲಿ ಎಲ್ಲ ಕಡೆ ಆಯೋಜಿಸಲು ಪ್ರಯತ್ನಿಸಲಾಗುವುದು. ಅರ್ಧದಷ್ಟು ಪ್ರಮಾಣದಲ್ಲಿರುವ ಮಹಿಳೆ ಯರು ತಮ್ಮದೇ ವಿಶೇಷ ಕಾರ್ಯಕ್ರಮ ವನ್ನು ರೂಪಿಸಿ ಸಾಧ್ಯವಾದಷ್ಟು ಮಹಿಳಾ ಬಾಂಧವರಲ್ಲಿ ತಲುಪಿಸುವ ಅವಶ್ಯಕತೆ ಇದೆ. ಪ್ರತಿಯೊಂದು ಸ್ಥಳಗಳಲ್ಲಿಯೂ ಯೋಜನಾಬದ್ಧವಾಗಿ ಈ ಅಭಿಯಾನ ವನ್ನು ನಡೆಸಲು ನಮ್ಮ ಕಾರ್ಯಕರ್ತರು ಪ್ರಯತ್ನಿಸುವರೆಂದು ನಂಬಿಕೆ ನನಗಿದೆ. ಸಮುದಾಯ ಬಾಂಧವರಿಗೂ ಇದರಲ್ಲಿ ಪಾಲ್ಗೊಳ್ಳುವಂತೆ ಪ್ರರೇಪಿಸಬೇಕಾಗಿದೆ.

? ನಿಮ್ಮ ಸಂದೇಶ?

√  ಅಲ್ಲಾಹನ ಗ್ರಂಥ ಹಾಗೂ ಅಂತಿಮ ಪ್ರವಾದಿ(ಸ)ರ ಶಿಕ್ಷಣ ನಮ್ಮ ಬಳಿ ಸಮಸ್ತ ಮಾನವರಿಗಾಗಿ ವಿಶ್ವಸ್ಥ ನಿಧಿಯ(ಅಮಾನತ್‍ನ) ರೂಪದಲ್ಲಿವೆ. ಇದೇ ನಮ್ಮ ಗುರುತು ಹಾಗೂ ಸಾಮರ್ಥ್ಯದ ಗುಟ್ಟಾಗಿದ್ದು ನಮ್ಮ ಈ ಸ್ಥಾನ ಮಾನದ ಅರಿವು ಸದಾ ನಮಗಿರಬೇಕು. ಸಂದೇಶ ಪ್ರಚಾರದ ಜವಾಬ್ದಾರಿಯನ್ನು ನಿರ್ವಹಿಸಲು ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸ ಬೇಕಾಗಿದೆ. ಇದು ನಮ್ಮ ಸೌಭಾಗ್ಯ ಹಾಗೂ ಯಶಸ್ಸಿನ ಖಚಿತ ಮತ್ತು ಏಕೈಕ ಮಾರ್ಗವಾಗಿದೆ.

ಕೀ ಮುಹಮ್ಮದ್(ಸ) ಸೇ ವಫಾ ತೂನೆ ತು ಹಮ್ ತೇರೆ ಹೈ
ಏ ಜಹಾಂ ಚೀಝ್ ಹೈ ಕ್ಯಾ ಲೂಹ್ ವ ಕಲಮ್ ತೇರೆ ಹೈ
ಕುವತೆ ಇಶ್ಕ್ ಸೇ ಹರ್ ಪಸ್ತಕೊ ಬಾಲಾ ಕರ್‍ದೇ
ದಹರ್ ಮೇ ಇಸ್ಮೇ ಮುಹಮ್ಮದ್(ಸ) ಸೇ ಉಜಾಲಾ ಕರ್‍ದೇ.

ನೀನು ಪ್ರವಾದಿ ಮುಹಮ್ಮದ್(ಸ)ರಿಗೆ ನಿಷ್ಠನಾಗಿದ್ದರೆ ನಾನು ನಿನ್ನವನು,    ಈ ಲೋಕ ಮಾತ್ರವೇಕೆ, ಅದೃಷ್ಟದ ಕೀಲಿಗಳೆಲ್ಲವೂ ನಿನ್ನದೇ ಪ್ರೀತಿಯ ಶಕ್ತಿಯಿಂದ ಪ್ರತಿಯೊಂದು ನೀಚತೆಯನ್ನು ತಳಮಟ್ಟಕ್ಕೆ ತಲುಪಿಸು,     ಅಂಧಕಾರವನ್ನು ಮುಹಮ್ಮದ್(ಸ)ರ ಹೆಸರಿನಿಂದ ಬೆಳಗಿಸು

ಬನ್ನಿ ಈ ಅಭಿಯಾನದ ಮೂಲಕ ನಾವು ಇಸ್ಲಾಮಿನ ಪ್ರವಾದಿ(ಸ)ಯ ವ್ಯಾಪಕ ಪರಿಚಯವನ್ನು ಮಾಡಿಸೋಣ ಮತ್ತು ತಮ್ಮ(ಸ) ಪ್ರೀತಿ ಹಾಗೂ ಅನುಸರಣೆಯ ಹಕ್ಕನ್ನು ಈಡೇರಿಸಲು ಪ್ರಯತ್ನಿಸೋಣ.