ರಾಹುಲ್ ಅಮೇಠಿಗಾಗಿ ಏನೂ ಮಾಡಿಲ್ಲ; ವಯನಾಡಿಗೆ ಮುನ್ನೆಚ್ಚರಿಕೆ ನೀಡಿದ ಸ್ಮೃತಿ ಇರಾನಿ

0
475

ಹೊಸದಿಲ್ಲಿ,ಎ.4: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ ಕುರಿತು ಪ್ರತಿಕ್ರಿಯಿಸುತ್ತಾ ಬಿಜೆಪಿ ನಾಯಕಿ ಸಚಿವೆ ಸ್ಮೃತಿ ಇರಾನಿ ಅಮೇಠಿಗಾಗಿ ರಾಹುಲ್ ಕಳೆದ ಐದು ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಆದ್ದರಿಂದ ವಯನಾಡಿನ ಜನರು ಎಚ್ಚರಿಕೆ ವಹಿಸಬೇಕೆಂದು ಅವರು ಹೇಳಿದರು. ಇಲ್ಲಿ ರಾಹುಲ್ ಮಾಡಿದ ಅಭಿವೃದ್ಧಿಯ ಕೆಲಸ ಯಾವುದೆಂದು ವಯನಾಡಿನ ಜನರು ನೋಡಿ ತಿಳಿಯಲಿ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಅಮೇಠಿಯಲ್ಲಿ ರಾಹುಲ್ ಮಾಡಿಲ್ಲ ಎಂದು ಅವರು ಹೇಳಿದರು.

ಅಮೇಠಿಯ ಜನರ ಬೆಂಬಲದೊಂದಿಗೆ ಹದಿನೈದು ವರ್ಷಗಳ ಕಾಲ ರಾಹುಲ್ ಅಧಿಕಾರದಲ್ಲಿದ್ದರು. ಈಗ ರಾಹುಲ್ ಬೇರೊಂದು ಸ್ಥಳವನ್ನು ಹುಡುಕಿಕೊಂಡು ಹೋಗಿದ್ದಾರೆ. ಇದು ಅಮೇಠಿಯ ಜನರನ್ನು ಅಪಮಾನಿಸಿದ್ದಕ್ಕೆ ಸಮಾನವಾಗಿದೆ ಎಂದು ಸ್ಮೃತಿ ಇರಾನಿ ಹೇಳಿದರು. ಅಮೇಠಿಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಟ್ಟಿರುವುದಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರಮೋದಿಯವರಲ್ಲಿ ಕೃತಜ್ಞತೆಯಿದೆ ಎಂದು ಅವರು ಹೇಳಿದರು. ಅಮೇಠಿಯಲ್ಲಿ ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಪ್ರತಿಸ್ಪರ್ಧಿಯಾಗಿದ್ದಾರೆ.