ಸರಕಾರಿ ಶಾಲಾ ವಿದ್ಯಾರ್ಥಿಗಳ ತಲೆ ಮೇಲೆ ಪುಸ್ತಕದ ಬಂಡಲ್…: ಇಬ್ಬರು ಮುಖ್ಯೋಪಾಧ್ಯಾಯರ ಅಮಾನತು

0
153

ಸನ್ಮಾರ್ಗ ವಾರ್ತೆ

ಸಮಷ್ಠಿಪುರ: ಬಿಹಾರದಲ್ಲಿ ವಿದ್ಯಾರ್ಥಿಗಳ ತಲೆಯ ಮೇಲೆ ಪುಸ್ತಕದ ಬಂಡಲ್‌ಗಳನ್ನು ಹೊರಿಸಿದ ಘಟನೆಗೆ ಸಂಬಂಧಿಸಿ ಸರಕಾರಿ ಶಾಲೆಗಳ ಇಬ್ಬರು ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿದೆ. ಸಮಷ್ಠಿಪುರ ಜಿಲ್ಲೆಯಲ್ಲಿ ಹನುಮಾನ್ ನಗರ ಮಿಡ್ಲ್ ಸ್ಕೂಲ್, ನಾರಾಯಣಪುರ ಮಿಡ್ಲ್ ಸ್ಕೂಲ್‍ಗಳ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಕೊಂಡು ಬರುವಂತೆ ನಿರ್ಬಂಧಿಸಲಾಗಿತ್ತು. ಸುಮಾರು ಒಂದು ಕಿಲೋ ಮೀಟರ್‌ನಷ್ಟು ದೂರ ಮಕ್ಕಳು ಪುಸ್ತಕಗಳನ್ನು ಹೊತ್ತು ನಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮೊಹಿಯುದ್ದೀನ್ ನಗರದ ಬಿ.ಆರ್ ಭವನ್ ಸ್ಕೂಲ್‍ನಿಂದ ಮಕ್ಕಳು ತಮ್ಮ ಸ್ಕೂಲ್‍ವರೆಗೆ ವಿದ್ಯಾರ್ಥಿಗಳು ಪುಸ್ತಕ ಹೊತ್ತುಕೊಂಡು ಬಂದಿದ್ದಾರೆ. ಪುಸ್ತಕವನ್ನು ಹೊತ್ತು ತರಲು ಮುಖ್ಯ ಅಧ್ಯಾಪಕರು ಹೇಳಿದ್ದರೆಂದು ಒಬ್ಬ ಮಹಿಳಾ ಟೀಚರ್ ಆರೋಪಿಸಿದ್ದಾರೆ.

ಘಟನೆಯ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಶಿಕ್ಷಣ ಇಲಾಖೆ ಎರಡೂ ಶಾಲೆಗಳ ಮುಖ್ಯ ಅಧ್ಯಾಪಕರನ್ನು ಅಮಾನತುಗೊಳಿಸಿದೆ. ಹನುಮಾನ್ ನಗರ ಮಿಡ್ಲ್ ಸ್ಕೂಲ್ ಮುಖ್ಯೋಪಾಧ್ಯಕಿ ಸುಚಿತ್ರ ರೇಖಾ ರಾಯ್, ನಾರಾಯಣಪುರ ಮಿಡ್ಲ್ ಸ್ಕೂಲ್ ಮುಖ್ಯೋಪಾಧ್ಯಾಯರಾದ ಸುರೇಶ್ ಪಾಸ್ವಾನ್‍ರನ್ನು ಜಿಲ್ಲಾ ಕಾರ್ಯಕ್ರಮಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.