✍️ ಶಮೀರಾ ಜಹಾನ್
ಸಮುದಾಯ ಸುಧಾರಣೆಯ ನಿಜವಾದ ಕ್ರಮ ಹೆಣ್ಣು ಸಾರ್ವಜನಿಕ ರಂಗಕ್ಕೆ ಬರಬಾರದು ಎಂದು ಹೇಳುವುದಲ್ಲ. ಬದಲಾಗಿ ನಮ್ಮ ಶಾಲಾ ಕಾಲೇಜುಗಳನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸಿ,ನಂಬರ್ ವನ್ ಮಾಡುವುದರಲ್ಲಿ ಪೈಪೋಟಿ ಮಾಡುವುದನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಗೆ, ರೀಲ್ಸ್ ಗೆ ಮಾರು ಹೋಗದ ನೈತಿಕತೆಯನ್ನು ಕಲಿಸಿಕೊಡುವಂತಹ ಪ್ರಯತ್ನವನ್ನು ಮಾಡಬೇಕು. ಗ್ರಾಹಕ ಸಂಸ್ಕೃತಿ, ದುಂದು ವೆಚ್ಚ ಸಂಸ್ಕೃತಿ ಇವುಗಳ ಬಗ್ಗೆ ನಮ್ಮ ಶಾಲಾ-ಕಾಲೇಜುಗಳಲ್ಲಿ ಪಾಠ ಮಾಡಬೇಕು. ಪ್ರವಾದಿ ಮುಹಮ್ಮದ್(ಸ)ರ ಮಾದರಿ ಯಾವ ರೀತಿ ಎಂದರೆ ಒಳಿತಿನ ವಿಷಯದಲ್ಲಿ ನಾನು ಇಂತಹ ಕೃತ್ಯವನ್ನು ಎಸಗುವುದಿಲ್ಲ ಎಂಬ ಪ್ರತಿಜ್ಞೆ ಮಾಡುವುದು. ಇದುವೇ ಸುಧಾರಣೆಯ ಏಕೖಕ ವಿಧಾನ.
ಉದಾಹರಣೆಗೆ ಗಂಡು ಮಕ್ಕಳೊಡನೆ ವರದಕ್ಷಿಣೆ ತೆಗೆಯುವುದಿಲ್ಲ,ದುಡಿದು ಮನೆಮಂದಿಯನ್ನು ನೋಡುವ ಕಡ್ಡಾಯ ಕರ್ತವ್ಯವನ್ನು ಪಾಲಿಸುತ್ತೇನೆ ಎಂಬ ಪ್ರತಿಜ್ಞೆ ಮಾಡಿಸಬೇಕು.
ಹಾಗೆಯೇ ವ್ಯಬಿಚಾರ,ಕೊಲೆ,ಕಳ್ಳತನ ಹಿಂಸೆ,ವೇಶ್ಯಾವಾಟಿಕೆ, ಮಧ್ಯಪಾನ ಡ್ರಗ್ಸ್ ಮೊದಲಾದ ಕೆಡುಕುಗಳ ವಿಷಯದಲ್ಲಿ ತುಂಬಿದ ಸಭೆಯಲ್ಲಿ ಸಾರ್ವಜನಿಕವಾಗಿ ಪುರುಷರು ಮಹಿಳೆಯರು ಎಂಬ ಭೇದವಿಲ್ಲದೆ ಪ್ರತಿಜ್ಞೆ ಮಾಡಿಸಬೇಕು. ಪ್ರತಿಜ್ಞೆ ಮಾಡಿದ ವಿಷಯ ಕುರ್ಆನ್ನಲ್ಲಿದೆ.
ಪ್ರವಾದಿಯವರ ಕಾಲದಲ್ಲಿ ಮದೀನಾದ ಮಸ್ಜಿದುನ್ನಬವಿಗೆ ನಮಾಜಿಗಾಗಿ ಮಸೀದಿಗೆ ಮಹಿಳೆಯರು ಹೋಗುತ್ತಿದ್ದರು ಎಂಬುದಕ್ಕೆ ಆಧಾರವಿದೆ. ಪ್ರವಾದಿಯವರಿಗೆ ಮಹಿಳೆಯರು ಮನವಿ ಪತ್ರ ಸಲ್ಲಿಸಿದ ಬಗ್ಗೆ ಆಧಾರವಿದೆ. ಯುದ್ಧದಲ್ಲಿಯೂ ಭಾಗವಹಿಸಿದ್ದಾರೆ. ವ್ಯಾಪಾರ ಮಾಡಿದ್ದಾರೆ. ಈಗಲೂ ಮಹಿಳೆಯರು ಮಸೀದಿಗೆ ಹೋಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ನಾವಿರುವಾಗ ಇನ್ನು ಅವರನ್ನು ಮನೆಯ ಒಳಗೆ ಕುಳಿತುಕೊಳ್ಳುವಂತೆ ಮಾಡಲು ಸಾಧ್ಯವಿದೆಯೇ? ಆದರೆ ಯಾವುದು ಕೂಡ ಅತಿಯಾಗಲೂಬಾರದು. ಸಮತೋಲನವಿರಬೇಕುಶಿಕ್ಷಣ ಪಡೆಯುವುದು ಕೇವಲ ಉದ್ಯೋಗಕ್ಕಾಗಿ ಎಂಬ ನಮ್ಮ ಮುಸ್ಲಿಂ ಹೆಣ್ಣು ಮಕ್ಕಳ ನಿಲುವು ಬದಲಾಗಬೇಕು ಅವಶ್ಯಕತೆ ಇದ್ದಾಗ ಮಾತ್ರ ದುಡಿಯಲು ಹೋಗಬೇಕು ಯಾಕೆಂದರೆ ಅಲ್ಲಾಹನು ಮಹಿಳೆಗೆ ದುಡಿದು ಕುಟುಂಬವನ್ನು ನೋಡುವುದನ್ನು ಕಡ್ಡಾಯಗೊಳಿಸಿಲ್ಲ. ಸಾರ್ವಜನಿಕವಾಗಿರುವುದನ್ನು ನಿಷೇಧಿಸಿಯೂ ಇಲ್ಲ. ಇದಕ್ಕೆ ಸಾಕ್ಷಿ “ಮಹಿಳೆಯರು ತಮ್ಮ ದೃಷ್ಟಿಗಳನ್ನು ಕೆಳಗಿರಿಸಲಿ. ಪುರುಷರು ತಮ್ಮ ದೃಷ್ಟಿಗಳನ್ನು ಕೆಳಗಿರಿಸಲಿ” ಎಂಬ ಕುರಾನಿನ ಸೂಕ್ತ.
ಮನೆಯೊಳಗಿನ ವಿಷಯ ಅಲ್ಲ ಇದು. ಮನೆಯೊಳಗೆ ದೃಷ್ಟಿ ತಗ್ಗಿಸಬೇಕೆಂದು ಅಲ್ಲಾಹನು ಆಜ್ಞಾಪಿಸುವುದಾದರೂ ಯಾಕೆ?ನಮ್ಮವರನ್ನು ನಾವು ನೋಡದೆ ಇರುವುದಾದರೂ ಹೇಗೆ? ಇದು ಸಾರ್ವಜನಿಕ ರಂಗದಲ್ಲಿ ಪರಸ್ಪರ ಬೆರೆಯುವಾಗ ದೃಷ್ಟಿಗಳನ್ನು ತಗ್ಗಿಸುವ ಕುರಾನಿನ ಸೂಕ್ತ ಎಂಬುದರಲ್ಲಿ ಸಂಶಯವಿಲ್ಲ. ಸಮುದಾಯದ ನಾಯಕರು ಕೇವಲ ಮಹಿಳೆಯರ ಬಗ್ಗೆ ಮಾತನಾಡುವುದಕ್ಕಿಂತ ಮಹಿಳೆಯರ ದುಃಸ್ಥಿತಿಗೆ ಕಾರಣಕರ್ತರಾದ ಪುರುಷರ ಬಗ್ಗೆ ಕೂಡ ಮಾತನಾಡಬೇಕು. ಮನೆಯಲ್ಲಿ ಮಕ್ಕಳಿದ್ದು ಹಸಿವೆಯಿಂದ ನರಳುತ್ತಿದ್ದರೂ, ಶಾಲಾ ಫೀಸು ಕಟ್ಟಲಾಗದ, ಮಧ್ಯಪಾನಕ್ಕೆ ಬಲಿಯಾಗುವ, ಡ್ರಗ್ಸ್ ಗೆ ಬಲಿಯಾಗುವ, ದುಡಿಯದೇ ಮಹಿಳೆಯನ್ನು ಶೋಷಣೆಗೆ ಒಳಪಡಿಸುವ, ಮದುವೆಯಾದ ಬಳಿಕವು ಅನೈತಿಕ ಸಂಪರ್ಕ ಇರಿಸುವ, ವರದಕ್ಷಿಣೆ ಹೆಸರಿನಲ್ಲಿ ತಂದೆ-ತಾಯಿಗಳ ಮೇಲೆ ದೌರ್ಜನ್ಯ ಎಸಗುವ,ಮದುವೆಯಾಗುವ ಹುಡುಗಿಯ ಖರ್ಚು ತಂದೆ ತಾಯಿಗಳ ಮೇಲೆ ಹೊರೆಯಾಗುವ ಇತ್ಯಾದಿ ಎಲ್ಲಾ ವಿಷಯಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಅಥವಾ ಪುರುಷ ಸಮಾಜವನ್ನು ತುಂಬಿದ ಸಭೆಗಳಲ್ಲಿ ಎಚ್ಚರಿಸಿ ಪ್ರತಿಜ್ಞೆ ಮಾಡಿಸುವಂತಹ ಕೆಲಸ ಆದರೆ ಸಮಾಜ ಎಷ್ಟು ಒಳ್ಳೆಯದಾಗಬಹುದು.
ಉಸ್ತಾದರನ್ನು ಗೌರವಿಸುತ್ತಾ ಈ ಬರಹ.












