“ಆನೆಯನ್ನು ನೋಡಲು ನಿಮಗೆ ಆಸೆ ಇಲ್ಲವೇ?”ಎಂದು ಇಮಾಮ್ ಮಾಲಿಕ್ ರು ಪ್ರಶ್ನಿಸಿದಾಗ…

0
810

➡ಡಾ| ಫರ್‌ಹತ್‌ ಹಾಶ್ಮಿ

ಪ್ರವಾದಿವರ್ಯ(ಸ)ರು ಹೇಳಿದರು: ಅಂಬಿಯಾಗಳು ದೀನಾರ್‌ ಮತ್ತು ದಿರ್ಹಮ್‌ಗಳನ್ನು ವಾರಿಸು ಸೊತ್ತಿನಲ್ಲಿ ಬಿಟ್ಟು ಹೋಗಿಲ್ಲ. ಬದಲಾಗಿ ಅವರು ಜ್ಞಾನದ ವಾರಸನ್ನು ಬಿಟ್ಟು ಹೋಗಿದ್ದಾರೆ. ಪ್ರವಾದಿವರ್ಯ(ಸ)ರಿಂದ ಶಿಕ್ಷಣ ಪಡೆಯಲು ಜನರು ನೂರಾರು ಮೈಲು ದೂರದಿಂದ ನಡೆದುಕೊಂಡು ಬರುತ್ತಿದ್ದರು.

ಪ್ರವಾದಿವರ್ಯ(ಸ)ರು ಹೇಳಿದರು:ಭಕ್ತನ ಮೇಲೆ ವಿದ್ವಾಂಸರ ಶ್ರೇಷ್ಠತೆಯು ಎಲ್ಲ ನಕ್ಷತ್ರಗಳ ಮೇಲೆ ಪೂರ್ಣ ಚಂದಿರನಿಗೆ ಶ್ರೇಷ್ಠತೆ ಇರುವಂತಿದೆ. ವಿದ್ವಾಂಸರು ಪ್ರವಾದಿಗಳ ವಾರಸುದಾರರಾಗಿದ್ದಾರೆ. ಹೌದು,ಅಂದು ಮುಸ್ಲಿಮರು ವಿದ್ಯೆ ಗಳಿಸುವ ಹಾದಿಯಲ್ಲಿ ಸಮರ್ಪಿಸಿದ ತ್ಯಾಗ ಬಲಿದಾನಗಳು ಎಷ್ಟು ಉನ್ನತವಾಗಿತ್ತು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.

ಇಮಾಮ್ ತಬ್ರಾನಿಯವರೊಂದಿಗೆ ಕೇಳಲಾಯಿತು,”ನೀವು ಜ್ಞಾನದ ಈ ಉನ್ನತ ಶಿಖರಕ್ಕೆ ಹೇಗೆ ತಲುಪಿದಿರಿ?”

ಅವರು ಹೇಳಿದರು: “ನನ್ನ ಪ್ರೀತಿಯ ಸಹೋದರಾ, ಕಳೆದ ಇಪ್ಪತ್ತು ವರ್ಷಗಳಿಂದ ನಾನು ಸುಖ ನಿದ್ದೆಯ ಹಾಸಿಗೆಯಲ್ಲಿ ಬಿದ್ದುಕೊಂಡಿರಲಿಲ್ಲ.”

ಇಬ್ನು ಜೌಸಿ ಹೇಳುತ್ತಾರೆ:”ಹರೀಸ ನನಗೆ ಬಹಳ ಇಷ್ಟದ ತಿನಿಸಾಗಿದೆ. ನಾನು ವಿದ್ಯಾರ್ಜನೆಗಾಗಿ ಹೋಗುತ್ತಿರುವಾಗ ಹರೀಸವನ್ನು ಬೇಯಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಅನೇಕ ವರ್ಷಗಳ ವರೆಗೆ ನನಗೆ ಹರೀಸ ತಿನ್ನಲು ಸಾಧ್ಯವಾಗಲಿಲ್ಲ. ಏಕೆಂದರೆ ಆ ಸಮಯದಲ್ಲಿ ಪಾಠ ಆರಂಭವಾಗುತ್ತಿತ್ತು. ಇದರಿಂದ ಹರೀಸ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಇಬ್ನು ಜೌಸಿಯವರು ಜ್ಞಾನ ಸಂಪಾದನೆಗಾಗಿ ತನ್ನ ಇಷ್ಟದ ತಿಂಡಿಯನ್ನು ಬಿಟ್ಟುಕೊಟ್ಟು, ತಾನು ತರುತ್ತಿದ್ದ ಒಣರೊಟ್ಟಿಯನ್ನು ತುಂಡು ಮಾಡಿ ನೀರಲ್ಲಿ ನೆನೆಸಿ ತಿನ್ನುತ್ತಿದ್ದರು. ತಮ್ಮಿಷ್ಟದ ಆಹಾರಕ್ಕಾಗಿ ಕಾಯುತ್ತಾ ಕುಳಿತ್ತಿದ್ದರೆ ವಿದ್ಯೆಯನ್ನು ಬಿಡಬೇಕಾಗಿತ್ತು.”

ಇಬ್ನು ತೈಮಿಯಾ ಬಹಳ ದೊಡ್ಡ ವಿದ್ವಾಂಸರಾಗಿದ್ದರು. ಆಡಳಿತದ ತಪ್ಪುಗಳನ್ನು ಆಕ್ಷೇಪಿಸಿ, ಜೈಲು ಸೇರಿದರು. ಅವರ ಶಿಷ್ಯರಾದ ಇಬ್ನು ಜೌಸಿಯವರು, ಅಧಿಕಾರಿಗಳೊಂದಿಗೆ ಭಿನ್ನವಿಸಿದರು:”ನನ್ನ ಗುರುಗಳನ್ನು ಜೈಲಿಗೆ ಹಾಕಲಾಗಿದೆ. ನನ್ನನ್ನೂ ಜೈಲಿಗೆ ಹಾಕಿರಿ”. ತನ್ನ ಕಲಿಯುವಿಕೆಗೆ ಭಂಗವಾಗದಿರಲೆಂದು ಅವರು ಗುರುಗಳು ಜೈಲಿನಲ್ಲಿರುವ ತನಕ ಅವರೊಂದಿಗೇ ಜೈಲಿನಲ್ಲಿ ಕಳೆದರು.

ಯಹ್ಯಾ ಬಿನ್‌ ಯಹ್ಯಾ ಸಮೂರಿಯವರು ಇಮಾಮ್ ಮಾಲಿಕ್‌ರ ಶಿಷ್ಯರಾಗಿದ್ದರು. ಒಂದು ದಿನ ಆನೆ ಬಂತೆಂದು ಶಿಷ್ಯರೆಲ್ಲರೂ ಎದ್ದು ಆನೆ ನೋಡಲು ಹೋದರು. ಆ ಕಾಲದಲ್ಲಿ ಯಾರೂ ಮದೀನಾದಲ್ಲಿ ಆನೆಯನ್ನು ಕಂಡಿರಲಿಲ್ಲ. ಇಂದಿನಂತೆ ಟಿ.ವಿ., ಮೊಬೈಲ್‌ನಲ್ಲಿ ನೋಡಲು ಸಾಧ್ಯವಾಗುತ್ತಿರಲಿಲ್ಲ‌.

ಅಂತಹ ಸನ್ನಿವೇಶದಲ್ಲಿ ಇಮಾಮ್ ಮಾಲಿಕ್‌ ಕೇಳಿದರು:”ಯಹ್ಯಾ ನಿಮಗೆ ಆನೆ ನೋಡುವ ಆಸೆಯಿಲ್ಲವೇ?”

ಆಗ ಯಹ್ಯಾ ಹೇಳಿದರು: “ಗುರುಗಳೇ, ನಾನು ಮೂರು ಸಾವಿರ ಮೈಲು ದೂರದಿಂದ ಬಂದಿರುವುದು, ಆನೆ ನೋಡಲಿಕ್ಕಲ್ಲ, ವಿದ್ಯೆ ಗಳಿಸಲಿಕ್ಕಾಗಿ ಅಲ್ಲವೇ?”

ಈ ತ್ಯಾಗಗಳೆಲ್ಲವೂ ಜ್ಞಾನದ ಬೆಲೆ ಅರಿತವರಿಂದ ಮಾತ್ರ ಸಾಧ್ಯ.

ಆದರೆ ನಮ್ಮ ಅವಸ್ಥೆ ಏನು? ತಿನ್ನಲು-ಕುಡಿಯಲು, ಆಟವಾಡಲು, ನಿದ್ದೆ ಮಾಡಲು, ಗಂಟೆಗಟ್ಟಲೆ ಹರಟೆ ಹೊಡೆಯಲು, ಟಿ.ವಿ.-ಮೊಬೈಲ್ ಮುಂದೆ ಸಮಯ ದೂಡಲು ಪ್ರತಿಯೊಂದಕ್ಕೂ ಪುರುಸೊತ್ತಿದೆ. ಆದರೆ ಅಲ್ಲಾಹನ ದೀನ್ ಕಲಿಯಲು ನಾವೆಷ್ಟು ಆಸಕ್ತಿ ವಹಿಸುತ್ತಿದ್ದೇವೆ? ಹತ್ತಾರು ನೆಪಗಳನ್ನು ಮುಂದಿಟ್ಟು ಆಯುಷ್ಯವನ್ನು ಕರಗಿಸುತ್ತಿದ್ದೇವಲ್ಲವೇ? ಖಂಡಿತ ಇದಂತೂ ಬಹಳ ಖೇದಕರ! ಪರಿತಾಪಕರ!