ಮುಸ್ಲಿಮರು ಆದರಿಸುವ ಜೀಸಸ್

0
638

✒ಹವ್ವಾ ಶಹಾದತ್, ದೋಹಾ

ಪವಿತ್ರ ಕುರ್‌ಆನ್‌ನಲ್ಲಿ ವಿವಿಧೆಡೆ ಸುಮಾರು 25 ಬಾರಿ ಏಸುವಿನ ಹೆಸರನ್ನು ಪ್ರಸ್ತಾಪಿಸಲಾಗಿದೆ. ಮಾತ್ರವಲ್ಲ, ಅವರನ್ನು ದೇವರ ‘ವಚನ’ ಮತ್ತು ‘ಆತ್ಮ’ ಎಂದು ವರ್ಣಿಸಲಾಗಿದೆ. ಕುರ್‌ಆನ್‌ನಲ್ಲಿ ಸ್ವತಃ ಪ್ರವಾದಿ ಮುಹಮ್ಮದ್(ಸ)ರ ಹೆಸರನ್ನು ಇಷ್ಟೊಂದು ಬಾರಿ ಪ್ರಸ್ತಾಪಿಸಲಾಗಿಲ್ಲ.

ಪ್ರಖ್ಯಾತ ಪತ್ರಕರ್ತ ಮೆಹದಿ ಹಸನ್, ತಮ್ಮ ಒಂದು ಲೇಖನದಲ್ಲಿ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ತನ್ನ ಕೆಲವು ಸಹೋದ್ಯೋಗಿಗಳ ಜತೆ ನಡೆದ ಸಂಭಾಷಣೆಯೊಂದನ್ನು ಪ್ರಸ್ತಾಪಿಸುತ್ತಾ ಬರೆಯುತ್ತಾರೆ:

‘‘ಏನು? ಪ್ರವಾದಿ ಮುಹಮ್ಮದ್‌ರ ಅನುಯಾಯಿಗಳಾಗಿರುವ ನೀವು ಏಸುವನ್ನು ನಂಬುತ್ತೀರಾ?’’

ನನ್ನ ಸಹೋದ್ಯೋಗಿಗಳು ಆಶ್ಚರ್ಯ ಚಕಿತರಾಗಿ ನನಗೆ ಕೇಳಿದ ಪ್ರಶ್ನೆ ಇದು. ಮುಸ್ಲಿಮರೆಲ್ಲ ಏಸುವನ್ನು ನಂಬುತ್ತಾರೆ ಎಂದು ನಾನು ಹೇಳಿದಾಗ, ಯಾವುದೋ ಬಾಂಬು ಸ್ಫೋಟವಾಯಿತೋ ಎಂಬಂತೆ ಅವರು ಬೆಚ್ಚಿ ಬಿದ್ದಿದ್ದರು. ‘‘ನಾವು ಏಸುವನ್ನು ನಂಬುತ್ತೇವೆ, ಮಾತ್ರವಲ್ಲ, ಅವರು ಒಬ್ಬ ಕನ್ಯೆಯ ಉದರದಲ್ಲಿ ಜನಿಸಿದವರೆಂದೂ ನಾವು ನಂಬುತ್ತೇವೆ’’ ಎಂದು ನಾನು ಹೇಳಿದಾಗಲಂತೂ ಅವರು ಮತ್ತಷ್ಟು ಚಕಿತರಾಗಿದ್ದರು. ಕ್ರೈಸ್ತರಲ್ಲಿ ಕೆಲವರು, ಏಸು ಕೇವಲ ತಮಗೆ ಮಾತ್ರ ಸೇರಿದವರು ಎಂಬಂತೆ ಮಾತನಾಡುತ್ತಾರೆ. ಜಗತ್ತಿನಲ್ಲಿ ದ್ವಿತೀಯ ಅತಿದೊಡ್ಡ ಧಾರ್ಮಿಕ ಸಮುದಾಯವಾಗಿರುವ ಮುಸ್ಲಿಮರು ಕೂಡಾ ಏಸುವನ್ನು ತಮ್ಮವರೆಂದು ಆದರಿಸುತ್ತಾರೆ ಎಂದು ಅರಿತಾಗ ಅವರು ಅಚ್ಚರಿ ಪಡುತ್ತಾರೆ. ಅರಬಿ ಭಾಷಿಗರಿಗೆ ಏಸು, ‘ಈಸಾ’ ಎಂಬ ಹೆಸರಿನಿಂದ ಪರಿಚಿತರು. ಮುಸ್ಲಿಮರು, ಏಸು ದೇವಪುತ್ರರಾಗಿದ್ದರೆಂದು ಅಥವಾ ದೇವರ ಅವತಾರವಾಗಿದ್ದರೆಂದು ನಂಬುವ ಬದಲು ದೇವದೂತರಾಗಿದ್ದರು ಎಂದು ನಂಬುತ್ತಾರೆ.

ಪವಿತ್ರ ಕುರ್‌ಆನ್‌ನಲ್ಲಿ ವಿವಿಧೆಡೆ ಸುಮಾರು 25 ಬಾರಿ ಏಸುವಿನ ಹೆಸರನ್ನು ಪ್ರಸ್ತಾಪಿಸಲಾಗಿದೆ. ಮಾತ್ರವಲ್ಲ, ಅವರನ್ನು ದೇವರ ‘ವಚನ’ ಮತ್ತು ‘ಆತ್ಮ’ ಎಂದು ವರ್ಣಿಸಲಾಗಿದೆ. ಕುರ್‌ಆನ್‌ನಲ್ಲಿ ಸ್ವತಃ ಪ್ರವಾದಿ ಮುಹಮ್ಮದ್(ಸ) ರ ಹೆಸರನ್ನು ಇಷ್ಟೊಂದು ಬಾರಿ ಪ್ರಸ್ತಾಪಿಸಲಾಗಿಲ್ಲ. ನಿಜವಾಗಿ ಇಸ್ಲಾಮ್ ಧರ್ಮದಲ್ಲಿ ಏಸುವಿಗೆ ಮಾತ್ರವಲ್ಲ, ಅವರ ಮಾತೆ ಮೇರಿಗೆ ಕೂಡಾ ಅಸಾಮಾನ್ಯ ಗೌರವದ ಸ್ಥಾನ ನೀಡಲಾಗಿದೆ. ಕುರ್‌ಆನ್‌ನಲ್ಲಿ ಮೇರಿಯನ್ನು ಮರ್ಯಮ್ ಎಂದು ಗುರುತಿಸಲಾಗಿದೆ. ಮರ್ಯಮ್ರ ಹೆಸರಲ್ಲಿ ಕುರ್‌ಆನ್‌ನಲ್ಲಿ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಮಲಕ್‌ಗಳು ಹೇಳಿದರು:‘‘ಓ ಮರ್ಯಮ್, ಅಲ್ಲಾಹನು ನಿಮ್ಮನ್ನು ಆರಿಸಿಕೊಂಡಿರುವನು ಹಾಗೂ ನಿಮ್ಮನ್ನು ನಿರ್ಮಲಗೊಳಿಸಿರುವನು ಮತ್ತು ಜಗತ್ತಿನ ಸರ್ವ ಮಹಿಳೆಯರ ಪೈಕಿ ನಿಮ್ಮನ್ನು ಆಯ್ದುಕೊಂಡಿರುವನು’’ (3:42) ಎನ್ನುವ ಮೂಲಕ ಕುರ್ ಆನ್‌ನಲ್ಲಿ ಮರ್ಯಮ್ರನ್ನು ವೈಭವೀಕರಿಸಲಾಗಿದೆ. ಏಸು ಓರ್ವ ಕನ್ಯೆಗೆ ಜನಿಸಿದವರೆಂಬ ಕಾರಣಕ್ಕಾಗಿ ಏಸು ದೇವರಾಗಿದ್ದರು ಎಂಬ ತರ್ಕವನ್ನು ಮುಸ್ಲಿಮರು ಒಪ್ಪುವುದಿಲ್ಲ. ಅವರು ದಿವ್ಯ ಮಾರ್ಗದರ್ಶನ ತಂದ ದೇವದೂತರಾಗಿದ್ದರೆಂಬ ಕಾರಣಕ್ಕಾಗಿ ಏಸುವನ್ನು ಮುಸ್ಲಿಮರು ಗೌರವಿಸುತ್ತಾರೆ. ತಂದೆ, ಪುತ್ರ ಮತ್ತು ಪವಿತ್ರಾತ್ಮ ಎಂಬ ಮೂವರು ದೇವರ ಅಥವಾ ದಿವ್ಯ ತ್ರಿಕೂಟದ ಕಲ್ಪನೆಯನ್ನು ಕೂಡಾ ಮುಸ್ಲಿಮರು ಒಪ್ಪುವುದಿಲ್ಲ. ಕ್ರೈಸ್ತರು ಏಸುವನ್ನು ಮತ್ತು ಮೇರಿಯನ್ನು ದೇವರ ಸ್ಥಾನಕ್ಕೆ ಏರಿಸಿದ್ದಕ್ಕಾಗಿ, ಅವರನ್ನು ಕುರ್‌ಆನ್‌ನಲ್ಲಿ ಟೀಕಿಸಲಾಗಿದೆ. ‘‘ಜನರು ತನ್ನನ್ನು ದೇವರಾಗಿಸಿದ್ದಕ್ಕೆ ತಾನು ಹೊಣೆಗಾರನಲ್ಲ ಎಂದು ಪರಲೋಕದಲ್ಲಿ ಸ್ವತಃ ಏಸು ಸ್ಪಷ್ಟೀಕರಿಸುವರು’’ ಎಂದು ಕುರ್‌ಆನ್ ಹೇಳಿದೆ. (‘‘ಪರಲೋಕದಲ್ಲಿ ಅಲ್ಲಾಹನು ಮರ್ಯಮರ ಪುತ್ರ ಈಸಾ, ನೀವೇನು ಜನರೊಡನೆ, ಅಲ್ಲಾಹನನ್ನು ಬಿಟ್ಟು ನನ್ನನ್ನು ಮತ್ತು ನನ್ನ ತಾಯಿಯನ್ನು ದೇವರಾಗಿಸಿಕೊಳ್ಳಿ ಎಂದು ಹೇಳಿದ್ದಿರಾ? ಎಂದು ಕೇಳಿದಾಗ ಅವರು(ಈಸಾ) ಹೇಳುವರು: ನೀನು ಪಾವನನು, ನನಗೆ ಹೇಳಲು ಹಕ್ಕೆ ಇಲ್ಲದಂತಹ ಮಾತನ್ನು ಹೇಳಲು ನನ್ನಿಂದ ಸಾಧ್ಯವಿಲ್ಲ. ಒಂದು ವೇಳೆ ನಾನು ಹಾಗೇನಾದರೂ ಹೇಳಿದ್ದರೆ ನಿನಗೆ ಅದರ ಅರಿವಿರುತ್ತಿತ್ತು….’’(5:116)

ಸಾಮಾನ್ಯವಾಗಿ ಜಗತ್ತಿನ ಎಲ್ಲ ಮುಸ್ಲಿಮರು ಈಸಾ ಅಥವಾ ಮರ್ಯಮ್ರ ಹೆಸರನ್ನು ಪ್ರಸ್ತಾವಿಸುವಾಗಲೆಲ್ಲ ಅವರ ಬಗೆಗಿನ ತಮ್ಮ ವಿಶೇಷ ಗೌರವವನ್ನು ಪ್ರಕಟಿಸುತ್ತಾರೆ. ಈಸಾ ರ ಹೆಸರೆತ್ತಿದಾಗ ‘ಅಲೈಹಿಸ್ಸಲಾಮ್’ (ಅವರಿಗೆ ಶಾಂತಿ ಸಿಗಲಿ) ಮತ್ತು ಮರ್ಯಮ್ರ ಹೆಸರೆತ್ತಿದಾಗಲೆಲ್ಲ ‘ಅಲೈಹಸ್ಸಲಾಮ್’ (ಆಕೆಗೆ ಶಾಂತಿ ಸಿಗಲಿ) ಎಂದು ಪ್ರಾರ್ಥಿಸುತ್ತಾರೆ. ಕಳೆದ ಸುಮಾರು ಒಂದೂವರೆ ಸಹಸ್ರಮಾನಗಳಿಂದ ಕ್ರೈಸ್ತರು ಮತ್ತು ಮುಸ್ಲಿಮರು ಜಗತ್ತಿನ ವಿವಿಧೆಡೆ ಜೊತೆಯಾಗಿ ಬಾಳುತ್ತಿದ್ದಾರೆ. ಇತಿಹಾಸದಲ್ಲೂ ವರ್ತಮಾನದಲ್ಲೂ ಹಲವು ಕಡೆ ಅವರ ನಡುವೆ ಉದ್ವಿಗ್ನತೆಗಳು ತಲೆದೋರಿ ಘರ್ಷಣೆಗಳು ಏರ್ಪಟ್ಟದ್ದೂ ಇದೆ. ಆದರೆ ಜಗತ್ತಿನ ಈ ಎರಡು ಅತಿ ದೊಡ್ಡ ಸಮುದಾಯಗಳನ್ನು ಜೋಡಿಸುವುದಕ್ಕೆ ಇಬ್ಬರೂ ಅಂಗೀಕರಿಸುವ ಹಲವಾರು ಸಮಾನ ಮೌಲ್ಯಗಳಿವೆ, ಇಬ್ಬರೂ ವೈಭವೀಕರಿಸುವ ಸಮಾನ ಪರಂಪರೆ ಇದೆ. ಇಬ್ಬರೂ ಪರಸ್ಪರ ಕೈಜೋಡಿಸಿದರೆ ಜಗತ್ತಿನ ಸಮಷ್ಟಿ ಕಲ್ಯಾಣಕ್ಕೆ ಕೊಡಬಹುದಾದ ಕೊಡುಗೆಗಳು ಬಹಳಷ್ಟಿವೆ.