✍ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ಈ ನಾಡಿನ ಸರ್ವ ಧರ್ಮೀಯರೊಂದಿಗೆ ವಿಶೇಷವಾಗಿ ಯುವಕರೊಂದಿಗೆ ನನ್ನ ಭಿನ್ನಹ ಇಷ್ಟೇ: ಯಾರ್ಯಾರ ಸುಳ್ಳುಗಳಿಗೆ ಆವೇಶಕ್ಕೊಳಗಾಗಿ ಮತ್ತು ಯಾರದೋ ಚಿಲ್ಲರೆ ಹಣದ ಎಂಜಲಿಗಾಗಿ ಮತ್ತೊಬ್ಬರ ಬದುಕುವ ಹಕ್ಕನ್ನು ಕೊಂದುಹಾಕದಿರಿ. ಸಾಮಾನ್ಯವಾಗಿ ಕೊಲ್ಲಲ್ಪಟ್ಟ ವ್ಯಕ್ತಿಯ ಕುಟುಂಬಿಕರು ಅಪರಾಧಿಯನ್ನು ಮಾತ್ರವಲ್ಲ ಆತನ ಪತ್ನಿ-ಮಕ್ಕಳು ಬರ್ಬಾತಾಗಿ, ಬೀದಿಯಲ್ಲಿ ಬಿದ್ದು ನಾಶವಾಗಲೆಂದು ಇಡೀ ಕುಟುಂಬವನ್ನೇ ಶಪಿಸುತ್ತದೆ. ಕೊಲ್ಲಲ್ಪಟ್ಟ ವ್ಯಕ್ತಿಯ ಹೆತ್ತವರ ಕಣ್ಣೀರು, ವಿಧವೆಯಳಾದ ಆತನ ಪತ್ನಿಯ ಮುಗಿಲು ಮುಟ್ಟುವ ಆಕ್ರಂಧನ, ಅನಾಥರಾದ ಆತನ ಮುದ್ದು ಮಕ್ಕಳ ಅಳಲು ಮತ್ತು ಒಟ್ಟು ಸಮಾಜದ ಶಾಪದ ಬೈಯ್ಗುಳಗಳು ಖಂಡಿತ ಅಪರಾಧಿಗಳನ್ನು ತಟ್ಟದಿರದು. *ಪ್ರವಾದಿಗಳು, ಸಜ್ಜನ ಮಹಾಪುರುಷರುಗಳು ಕೂಡಾ ಮರ್ದಿತರ ಶಾಪದಿಂದ ದೂರವಿರುವಂತೆ ಮುನ್ನೆಚ್ಚರಿಕೆ ನೀಡಿದ್ದಾರೆ. ಹಾಗೆಯೇ ರಾಜಕೀಯ ಶಿಫಾರಸು ಬಳಸಿ, ಕಾನೂನಿನ ಉರುಳಿನಿಂದ ತಪ್ಪಿಸಿ ಹೊರಬರಲು ಇಂದು ನಮಗೆ ಸಾಧ್ಯವಾಗಬಹುದು. ಆದರೆ ಆ ದೇವನ ಕ್ರೋಧದಿಂದ ತಪ್ಪಿಸಲು ಖಂಡಿತ ಸಾಧ್ಯವಾಗದು.* ತಮ್ಮ ರಾಜಕೀಯ ಬೇಳೆ ಬೇಯಿಸಲೋಸ್ಕರ ಸಮಯಕ್ಕೆ ಸರಿಯಾಗಿ ನಮಗೆ ಬಿರಿಯಾಣಿ, ಗಾಂಜಾ, ಶರಾಬು ಮತ್ತು ಜೈಲಿನೊಳಗೆ ಜೀನ್ಸ್ಪ್ಯಾಂಟ್-ಟೀಶರ್ಟ್ ತಂದುಕೊಟ್ಟು ಜಾಮೀನು ಒದಗಿಸಿ ಬೆನ್ನುತಟ್ಟುತ್ತಿದ್ದ ರಾಜಕೀಯ ಕುಲಗಳು ಅಂದು ನಮ್ಮ ಸನಿಹಕ್ಕೂ ಬಾರದೆ, ಬಹಳ ಜಾಣತನದಿಂದ ನುಣುಚಿಕೊಳ್ಳುವುದು. ಏನಿದ್ದರೂ ಮಾರಕ ರೋಗದಿಂದ ಹದಗೆಡುತ್ತಲೇ ಇರುವ ನಮ್ಮ ರಟ್ಟೆಬಲ, ಅವರ ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಮೆಟ್ಟಿಲುಗಳಾಗದೆಂದು ಅವರು ಅಂದಾಜಿಸುವರು ಮತ್ತು ನಮ್ಮನ್ನು ಆದಷ್ಟು ದೂರ ಸರಿಸುವರು. ಆಗ ನಾವು ಒಂಟಿಯಾಗುವೆವು. ಅಸಹಾಯಕರಾಗಿ ಹಾಸಿಗೆಯಲ್ಲಿ ಬಿದ್ದು ಖಂಡಿತ ಖೇದಿಸುವೆವು….
ಯಾರು ನಮಗೆ ಗಲಭೆ ಹರಡಲು ಮತ್ತು ತಲವಾರು ಬೀಸಲು, ಗುಂಪು ಹತ್ಯೆ ನಡೆಸಲು ಪ್ರಚೋದಿಸುತ್ತಿದ್ದರೋ ಅವರ ಮಕ್ಕಳಂತೂ ಪ್ರತಿಷ್ಟಿತ ಕಾಲೇಜಲ್ಲಿ ಡಾಕ್ಟರ್, ಇಂಜಿನಿಯರ್ ಹಾಗೂ ಉನ್ನತ ಪದವಿಗಳಿಸುತ್ತಿರುವುದು ಅಮ್ಮ ಹೇಳಿದ್ದೂ, ಆವಾಗ ನೆನಪಿಗೆ ಬರುವುದು… ಹೌದು, ಅವರ ಮಕ್ಕಳು ತಲವಾರು ಬೀಸಲೂ ಇಲ್ಲ, ಜೈಲಿಗೆ ಹೋಗಲೂ ಇಲ್ಲ. ಕೋರ್ಟ್ ಕಛೇರಿ ಅಲೆದಾಡಿದ್ದೂ ಇಲ್ಲ. ಈ ಮಧ್ಯೆ ಜಾತಿಯ ಮುಖ ನೋಡದೆ ಯಾರೋ ಪುಣ್ಯಾತ್ಮರು ಬಂದು ರಕ್ತದಾನ ಮಾಡಿ ನಮ್ಮನ್ನು ಸಮಾಧಾನಿಸುತ್ತಾರೆ. ಮನೆಮಂದಿಗೂ ನಾವು ಹೊರೆಯಾಗುವೆವು. ನಮ್ಮ ಬದುಕು ಶೋಚನೀಯವಾಗಿರುವುದು. ಜಾತಿ ದ್ವೇಷದ ವಿಷಬೀಜವನ್ನು ಬಿತ್ತಿ ಅಮಾಯಕರ ಬದುಕಿನೊಂದಿಗೆ ಚೆಲ್ಲಾಡಿದ ಕಾರಣಕ್ಕೆ ವಿಧವೆಯರ-ಅನಾಥರ ಆರ್ಥನಾದದ ಶಾಪವನ್ನು ಅನುಭವಿಸಲೇ ಬೇಕಾಗುತ್ತದೆ. ವಾಸ್ತವದಲ್ಲಿ ಇಲ್ಲಿ ಧರ್ಮದ ಹೆಸರಲ್ಲಿ ರಾಜಕೀಯದ ದೊಡ್ಡ ಚದುರಂಗದಾಟ ನಡೆಯುತ್ತಿದೆ. ರಕ್ತದ ಮಡುವಿನಲ್ಲಿ ಬಿದ್ದು ಚಡಪಡಿಸಿ ಹುತಾತ್ಮನಾದ ವ್ಯಕ್ತಿಯ ಶವವನ್ನು ಕೆದಕಿ ಓಟಿನ ಲೆಕ್ಕಾಚಾರ ನಡೆಸುವವರಿದ್ದಾರೆ. ಕ್ಷಣಮಾತ್ರದಲ್ಲೇ ಹಂತಕರ ಜಾತಿ ಯಾವುದೆಂದು ನೋಡಿ, ಧರ್ಮದ ಲೇಪ ಹಚ್ಚಿ ಕಡ್ಡಿಗೀರಲಾಗುತ್ತದೆ. ಅದೇ ವೇಳೆ ಆಯಾ ಜಾತಿಯವರೇ ಪರಸ್ಪರ ಹೊಡೆದಾಡಿದರೆ, ಯಾರೂ ಮಾತಾಡುವುದಿಲ್ಲ. ಹೋರಾಟಕ್ಕೆ ಯಾರೂ ಸಿಗುವುದಿಲ್ಲ. ಆದ್ದರಿಂದ, ಈ ರಾಜಕೀಯ ಕುಟಿಲತೆಗೆ ನಾವೆಂದೂ ಬಲಿಪಶುಗಳಾಗ ಬಾರದು. ಯುವಕರೇ, ಯಾವ ಕಾರಣಕ್ಕೂ ಈ ನಾಡಲ್ಲಿ ಹಿಂಸೆ ಹರಡದಿರಿ. ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಪ್ರಚೋದಿಸುವರು ಧಾರಾಳ ಇರಬಹುದು. ನಿಮ್ಮ ಬದುಕು ನಿಮ್ಮನ್ನು ಹೊತ್ತು ಹೆತ್ತು ಬೆಳೆಸಿದ ಕುಟುಂಬಕ್ಕೆ ಮತ್ತು ದೇಶದ ಬೆಳವಣಿಗೆಗೆ ಬಹಳ ಅಮೂಲ್ಯವಾದುದು.
ಮಾತ್ರವಲ್ಲ, ನಮ್ಮೊಳಗಿನ ಈ ಆಂತರಿಕ ಕಚ್ಚಾಟ ಇಡೀ ಸಮಾಜವನ್ನೇ ಮತ್ತೆಮತ್ತೆ ವಿಭಜಿಸಿ ದುರ್ಬಲವನ್ನಾಗಿಸುತ್ತದೆ. ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಹಿಂಸೆಯ, ವಿದ್ವೇಷದ, ಹಗೆತನದ ಸಮಾಜವನ್ನು ಹಸ್ತಾಂತರಿಸಿದರೆ ಮುಂದಿನ ಪೀಳಿಗೆ ಖಂಡಿತ ನಮ್ಮನ್ನು ಕ್ಷಮಿಸದು. ನಾಡಿನ ಹಿಂದೂ-ಮುಸ್ಲಿಮರ ಮೇಲೆ ಬಹಳಷ್ಟು ಬಾಧ್ಯತೆಗಳಿವೆ. ಕೊಲೆಗಡುಕರ ಕೈಗಳಿಂದ ಧರ್ಮಗಳನ್ನು ಮತ್ತೆ ಕಿತ್ತೆಗೆದು ಅದರ ಪಾವಿತ್ರ್ಯತೆಗಳನ್ನು ಉಳಿಸಬೇಕು. ಮಾತ್ರವಲ್ಲ ಧರ್ಮದ ನೈಜ ಸಂದೇಶಗಳನ್ನು ಪಸರಿಸಿ, ಶಾಂತಿ-ಸಾಮರಸ್ಯ-ಸಹಬಾಳ್ವೆಯ ಉದಾತ್ತ ಪರಂಪರೆಯನ್ನು ಮನುಷ್ಯರ ಮಧ್ಯೆ ಹರಡಬೇಕು. ಯಾರೋ ಕೆಲವು ಶಪಿಸಲ್ಪಟ್ಟ ಗೂಂಡಾಗಳು ಮಾಡುವ ಅಪರಾಧವನ್ನು, ಒಂದಿಡೀ ಸಮುದಾಯದ ತಲೆಗೆ ಕಟ್ಟಿ ವಿಭಜಿಸಿ ಬೇಟೆಯಾಡುವವರು ಈ ಮಣ್ಣಿಗೆ ಶಾಪ. ಇಲ್ಲಿ ಸಂವಿಧಾನವಿದೆ ಮತ್ತು ಕಾನೂನುಗಳಿವೆ. ಅದನ್ನು ಬಿಗಿಗೊಳಿಸಲು ಸಂಬಂಧಪಟ್ಟವರಿಗೆ ಒತ್ತಡ ಹೇರಬೇಕು. ಆ ಮೂಲಕ ಕೊಲೆಪಾತಕಿಗಳ ರುಂಡವನ್ನು ಸಾರ್ವಜನಿಕರ ಮುಂದೆ ಸರಕಾರವೇ ಕಡಿದು ಹಾಕಲಿ! ಒಟ್ಟಿನಲ್ಲಿ ಧರ್ಮದ ಮುಖವಾಡ ಧರಿಸಿ ಜೈ ಶ್ರೀರಾಮ್ ಅಥವಾ ಅಲ್ಲಾಹು ಅಕ್ಬರ್ ಎಂಬ ಪದಗಳನ್ನು ಬಳಸಿ, ಅಮಾಯಕರ ಅಮೂಲ್ಯ ಬದುಕನ್ನು ಹತ್ಯೆಗೈಯ್ಯುವ ಪಾತಕಿಗಳ ವಿರುದ್ಧ ನಾವೆಲ್ಲ ಒಗ್ಗೂಡ ಬೇಕಾಗಿದೆ. ಸಾರೇ ಜಹಾಂಸೆ ಅಚ್ಛಾ ಹಿಂದೂಸ್ಥಾನ್ ಹಮಾರಾ!












