ಉರಿಗೌಡ- ನಂಜೇಗೌಡ | ಒಕ್ಕಲಿಗ ಸಮುದಾಯವನ್ನು ಮುಸಲ್ಮಾನರ ಮೇಲೆ ಛೂ ಬಿಡಲು ಕಟ್ಟಿದ ನಂಜಿನ ಕಥೆ !

0
252


ಲೇಖಕರು : ಡಾ. ಹಂ. ಗು. ರಾಜೇಶ್‌, ಇತಿಹಾಸ ಪ್ರಾಧ್ಯಾಪಕರು, ಬೆಂಗಳೂರು
ಕೃಪೆ: ಈದಿನ.ಕಾಮ್

ಗ್ರೀಕ್‌ ದೇಶದ ಹೆರೊಡೊಟಸನು ರಚಿಸಿದ ‘ಹಿಸ್ಟೋರಿಯಾ’ ಎಂಬ ಕೃತಿಯಲ್ಲಿ ಗ್ರೀಕ್ ಮತ್ತು ಪರ್ಷಿಯನ್ನರ ನಡುವೆ ನಡೆದ ಸುದೀರ್ಘ ಯುದ್ಧದ ಐತಿಹಾಸಿಕ ಘಟನೆಗಳನ್ನು ವ್ಯವಸ್ಥಿತವಾಗಿ ವಿಚಾರಣೆ ನಡೆಸಿ, ಕ್ರಮಬದ್ಧವಾಗಿ ನಿರೂಪಿಸಿದನು. ಈ ಕೃತಿಯ ರಚನೆಯ ಸಂದರ್ಭದಲ್ಲಿ ಯುದ್ಧದಲ್ಲಿ ಪಾಲ್ಗೊಂಡವರನ್ನು, ಪ್ರತ್ಯಕ್ಷದರ್ಶಿಗಳನ್ನು ಸಂದರ್ಶಿಸಿ, ಅವರು ಹೇಳುವ ಸಂಗತಿಗಳನ್ನು ಬೇರೆ ಮೂಲಗಳಿಂದಲೂ ಖಾತ್ರಿಪಡಿಸಿಕೊಳ್ಳುವ ಮೂಲಕ ವಸ್ತುನಿಷ್ಠ ಚರಿತ್ರೆಯನ್ನು ಕಟ್ಟುವಲ್ಲಿ ಯಶಸ್ವಿಯಾದನು. ಆ ಕಾರಣಕ್ಕಾಗಿ ಹೆರೊಡೊಟಸನನ್ನು ‘ಇತಿಹಾಸದ ಪಿತಾಮಹ’ ಎಂದು ಪರಿಗಣಿಸಲಾಗಿದೆ. ಇವನ ಮಾರ್ಗವನ್ನೇ ಅನುಸರಿಸಿದ ಗ್ರೀಕಿನ ಮತ್ತೊಬ್ಬ ಇತಿಹಾಸಕಾರ ಥೂಸಿಡೈಡಸ್ ಕೂಡ ‘ಪೆಲೊಪನೇಷಿಯನ್ ವಾರ್’ ಎಂಬ ಕೃತಿಯನ್ನು ರಚಿಸಿದನು. ಆದರೆ ರೋಮನ್ ಇತಿಹಾಸಕಾರರು ಮೌಖಿಕ ಆಕರಗಳ ಬದಲು ಆಸ್ಥಾನದ ದಾಖಲೆಗಳನ್ನು, ವಂಶಾವಳಿಗಳನ್ನು ಆಕರಗಳಾಗಿ ಬಳಸಿಕೊಂಡು ರಾಜರ ವೀರಗಾಥೆಗಳನ್ನು ಬರೆಯತೊಡಗಿದರು. ಹೀಗೆ ಮೌಖಿಕ ಆಕರಗಳ ಕಡೆಗಣನೆ ಆರಂಭವಾಯಿತು. 19ನೇ ಶತಮಾನದ ಜರ್ಮನ್ ಇತಿಹಾಸಕಾರನಾದ ಲಿಯೋಪಾಲ್ಡ್ ವಾನ್ ರಾಂಕೆಯು ಲಿಖಿತ ದಾಖಲೆಗಳಿಗೆ ಆದ್ಯತೆ ನೀಡಿ, ಕಟುವಿಮರ್ಶೆಗೆ ಒಳಪಡಿಸುವ ಸಂಶೋಧನೆಯನ್ನು ವೈಜ್ಞಾನಿಕ ಇತಿಹಾಸ (Scientific History) ಎಂದು ಅರ್ಥೈಸುವ ಮೂಲಕ ಇತಿಹಾಸ ಸಂಶೋಧನಾ ವಿಧಾನಕ್ಕೊಂದು ಚೌಕಟ್ಟು ಹಾಕಿದನು. ರಾಂಕೆ ತೋರಿಸಿದ್ದು ಇತಿಹಾಸಕಾರರಿಗೆ ರಾಜಮಾರ್ಗವಾಯಿತು. ಇದೇ ಮಾದರಿ ಇಂದಿಗೂ ಸಂಪ್ರದಾಯವಾಗಿ ಮುಂದುವರೆದಿದೆ ಎಂದು ವಸು ಮಳಲಿ ಅವರು ದಾಖಲಿಸಿದ್ದಾರೆ (ವಸು ಎಂ.ವಿ. – ಮೌಖಿಕ ಕಥನ, 2004: 18).

ವಿದ್ಯುನ್ಮಾನ ತಂತ್ರಜ್ಞಾನದಲ್ಲಿನ ಅವಿಷ್ಕಾರಗಳು ಮೌಖಿಕ ಇತಿಹಾಸದ ಮರುಹುಟ್ಟಿಗೆ ಹೇಗೆ ಕಾರಣವಾದವೋ ಅದೇ ರೀತಿ ಮೌಖಿಕ ಇತಿಹಾಸದ ಅವನತಿಗೂ ಕಾರಣವಾಗಿದ್ದು ದುರದೃಷ್ಟಕರ. ರೆಕಾರ್ಡಿಂಗ್ ತಂತ್ರಜ್ಞಾನ 1877ರಲ್ಲಿ ಆವಿಷ್ಕಾರಗೊಂಡಿತು. 1930ರ ಹೊತ್ತಿಗೆ ಧ್ವನಿಯನ್ನು ಬಿತ್ತರಿಸುವ ತಂತ್ರಜ್ಞಾನ ಬೆಳೆಯಿತು. ನಂತರದ ದಶಕಗಳಲ್ಲಿ ಟೇಪ್ ರೆಕಾರ್ಡರ್ ಗಳ ಬಳಕೆ ಹೆಚ್ಚಾಯಿತು. ಇದು ಮೌಖಿಕ ಇತಿಹಾಸಕ್ಕೆ ಪ್ರೇರಣೆ ನೀಡಿತು. ಜೊತೆಗೆ ಒಂದನೇ ಮತ್ತು ಎರಡನೇ ಮಹಾಯುದ್ಧಗಳ ಇತಿಹಾಸ ಬರೆಯುವ ಸಂದರ್ಭದಲ್ಲಿ ಇತಿಹಾಸಕಾರರು ಲಿಖಿತ ಆಕರಗಳ ಜೊತೆಗೆ ಮೌಖಿಕ ಅಕರಗಳ ಮೊರೆ ಹೋಗಲು ಪ್ರೇರೇಪಿಸಿತು. ಹೀಗೆ ಇತಿಹಾಸಕಾರರ ಕಡೆಗಣನೆಗೆ ಒಳಗಾಗಿದ್ದ ಮೌಖಿಕ ಆಕರಗಳು ಮತ್ತೆ ಪ್ರಾಮುಖ್ಯತೆಯನ್ನು ಪಡೆದುಕೊಂಡವು.

ಕನ್ನಡದ ಸಂದರ್ಭದಲ್ಲಿ 1960-80ರ ದಶಕಗಳು ಜನಪದ ಅಧ್ಯಯನದ ಸಮೃದ್ಧ ಕಾಲವಾಗಿದೆ. ಜಾನಪದ ವಿದ್ವಾಂಸರು ಜನರ ಬಳಿಗೆ ತೆರಳಿ ಮೌಖಿಕ ಸಾಹಿತ್ಯವನ್ನು ದಾಖಲೀಕರಣ ಮಾಡಿ, ಅಧ್ಯಯನಕ್ಕೆ ಒಳಪಡಿಸಿದರು. ಅಪಾರ ಮೌಖಿಕ ಸಾಹಿತ್ಯಗಳು ಅಕ್ಷರ ರೂಪ ಪಡೆದುಕೊಂಡವು. 1990ರ ದಶಕದಲ್ಲಿ ಭಾರತ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಕ್ಕೆ ತೆರೆದುಕೊಂಡ ನಂತರ ವಿದ್ಯುನ್ಮಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಪ್ರಗತಿಯನ್ನು ಸಾಧಿಸಿತು. ರೇಡಿಯೋ ಮತ್ತು ಟಿ.ವಿ.ಗಳ ನೂರಾರು ಮನರಂಜನಾ ಚಾನಲ್ ಗಳು ಬಂದವು. ದೂರಸಂಪರ್ಕ ಕ್ಷೇತ್ರದಲ್ಲಿ ಮೊಬೈಲ್, ಇಂಟರ್‌ನೆಟ್‌ ವ್ಯವಸ್ಥೆಯಿಂದಾಗಿ ಕಲ್ಪನಾಸಾಧ್ಯ ಬೆಳವಣಿಗೆಗಳಾಗುತ್ತಿವೆ. ಇವುಗಳಿಂದಾಗಿ ವಿಶ್ವವೇ ಒಂದು ಕುಟುಂಬವಾಗಿದೆ. ಇದೇ ಹೊತ್ತಿನಲ್ಲಿ ಮನೆಯಲ್ಲಿನ ಮನಸ್ಸು ಮನಸ್ಸುಗಳ ನಡುವೆ ಕಂದಕಗಳು ಸೃಷ್ಠಿಯಾಗಿದೆ. 1990ರ ದಶಕಕ್ಕೆ ಪೂರ್ವದಲ್ಲಿ ಪುಟ್ಟ ಮಕ್ಕಳಿಗೆ ತಮ್ಮ ಅನುಭವ, ಕಥೆ, ಪೂರ್ವಿಕರ ವೃತ್ತಾಂತಗಳನ್ನು ಹೇಳಿ ಪ್ರೇರೇಪಿಸುತ್ತಿದ್ದ ಅಜ್ಜ, ಅಜ್ಜಿಯರೆಲ್ಲ ಈಗ ಟಿ.ವಿ.ಗಳ ಮುಂದೆ ಪ್ರತಿಷ್ಠಾಪನೆಯಾಗಿದ್ದಾರೆ. ಕಥೆ ಕೇಳಿ ಆನಂದಿಸಬೇಕಿದ್ದ ನಾವು ಮತ್ತು ನಮ್ಮ ಮಕ್ಕಳು ವಾಟ್ಸಾಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಡಿಜಿಟಲ್ ಗೇಮ್ ಗಳಲ್ಲಿ ಮುಳುಗಿದ್ದೇವೆ. ಪರಿಣಾಮವಾಗಿ, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಪ್ರಸಾರವಾಗಬೇಕಿದ್ದ ಪರಂಪರಾಗತವಾದ ಮೌಖಿಕ ಕಥನಗಳು ನಶಿಸಿ ಹೋಗುತ್ತಿವೆ. ಬದಲಿಗೆ, ಅದೇ ಸಾಮಾಜಿಕ ಜಾಲತಾಣಗಳು ನಮ್ಮಲ್ಲಿ ಮತ್ತು ನಮ್ಮ ಮಕ್ಕಳಲ್ಲಿ ಹುಸಿ ಕಥನಗಳನ್ನು ತುಂಬುತ್ತಿವೆ. ಇದಕ್ಕೊಂದು ತಾಜಾ ಉದಾಹರಣೆಯೇ ಇತ್ತೀಚೆಗೆ ರಾಜಕೀಯ ವಲಯದಲ್ಲಿ ರಾಡಿ ಎಬ್ಬಿಸಿರುವ ಟಿಪ್ಪು ಕೊಂದವರ ಬಗೆಗಿನ ಹುಸಿ ಕಥನಗಳು.

ಸಿ.ಟಿ ರವಿ, ಅಶ್ವತ್ಥನಾರಾಯಣ ಹರಡುತ್ತಿರುವ ಸುಳ್ಳುಗಳು

30 ಡಿಸೆಂಬರ್‌ 2022 ರಂದು ಮಂಡ್ಯದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಸಿ.ಟಿ. ರವಿ ಅವರು ಮಾತನಾಡಿ “ನಮ್ಮ ಮೈಯಲ್ಲಿ ಉರಿಗೌಡ, ದೊಡ್ಡ ನಂಜೇಗೌಡರ ರಕ್ತ ಹರಿಯುತ್ತಿದೆಯೇ ಹೊರತು ಟಿಪ್ಪು, ಅವನಪ್ಪನ ರಕ್ತವಲ್ಲ. ಟಿಪ್ಪು ಕೊಂದ ಗೌಡರೇ ನಿಜವಾದ ಹುಲಿಗಳು. ಅವರ ಪ್ರತಿಮೆ ನಿರ್ಮಾಣವಾಗಬೇಕು” ಎಂದಿರುವುದು ವರದಿಯಾಗಿದೆ. ಅದೇ ರೀತಿ ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ʼಉರಿಗೌಡ, ನಂಜೇಗೌಡರು ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಕಳುಹಿಸಬೇಕುʼ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟಿಪ್ಪುವನ್ನು ಕೊಂದರೆಂದು ಇತ್ತೀಚಿನ ದಿನಗಳಲ್ಲಿ ಹೇಳಲಾಗುತ್ತಿರುವ ಉರಿಗೌಡ ಮತ್ತು ನಂಜೇಗೌಡ ಎಂಬ ವ್ಯಕ್ತಿಗಳ ಬಗೆಗೆ ಯಾವುದೇ ಆಧಾರಗಳು ಈವರೆಗೂ ದೊರೆತಿಲ್ಲ. ಟಿಪ್ಪುವನ್ನು ಬ್ರಿಟಿಷ್ ಸಿಪಾಯಿಗಳು ಕೋವಿಯಿಂದ ಹೊಡೆದು ಕೊಂದ ಬಗ್ಗೆ ಸ್ಪಷ್ಟ ವಿವರಗಳಿವೆ (ವಿಲಿಯಂ ಡಾಲ್ರಿಂಪಲ್ – ಅನಾರ್ಕಿ, 2019:350). ಆದರೆ, ಎಲ್ಲಿಯೂ ಉರಿಗೌಡ ಮತ್ತು ಉಲ್ಲೇಖವಿಲ್ಲ! ಹಾಗಾದರೆ, ಈ ಉರಿ ಮತ್ತು ನಂಜಿನ ಕಥೆ ಹುಟ್ಟಿದ್ದು ಯಾವಾಗ…?

ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ 2015ರಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾರಂಭಿಸಿದ ನಂತರ ಮಂಡ್ಯದ ಒಕ್ಕಲಿಗ ಸಮುದಾಯವನ್ನು ಮುಸಲ್ಮಾನರ ಮೇಲೆ ಛೂ ಬಿಡಲು ಕಟ್ಟಿದ ನಂಜಿನ ಕಥೆ! ಆದ್ದರಿಂದ ಇತಿಹಾಸದ ವಿದ್ಯಾರ್ಥಿಯಾಗಿ, ಸಿ.ಟಿ. ರವಿ ಅವರು ಹೇಳಿರುವಂತೆ, ಮೈಯಲ್ಲಿ ಹರಿಯುತ್ತಿರುವ ರಕ್ತ ಯಾರದೆಂದು ಪರೀಕ್ಷೆ ಮಾಡುವ ಬದಲು, ನೈಜ ಇತಿಹಾಸ ಪರಿಶೀಲನೆ ಮಾಡುವುದು ಸೂಕ್ತವೆಂದು ಭಾವಿಸುತ್ತೇನೆ.

ಚರಿತ್ರೆಗೆ ಮಾಡುವ ಅಪಚಾರ

ಚಾರಿತ್ರಿಕ ಸಂದರ್ಭಗಳಲ್ಲಿ ಹಿತಾಸಕ್ತವರ್ಗವೊಂದು ಇತಿಹಾಸವನ್ನು ತಿರುಚುವ ಮೂಲಕ ಚಾರಿತ್ರಿಕ ಅಪಪ್ರಜ್ಞೆಯನ್ನು ಬಿತ್ತಿ, ಚಾರಿತ್ರಿಕ ರಾಜಕಾರಣವನ್ನು ನಡೆಸಲು ಪ್ರಯತ್ನಿಸುತ್ತಿರುತ್ತದೆ. ಅಂತಹ ಪ್ರಕರಣಕ್ಕೆ ಉರಿಗೌಡ, ನಂಜೇಗೌಡರ ಕಟ್ಟುಕಥೆಯೇ ಒಂದು ಸ್ಪಷ್ಟ ನಿದರ್ಶನವಾಗಿದೆ. ರಾಜಕಾರಣಿಗಳು ಇಂತಹ ಕಟ್ಟುಕಥೆಗಳನ್ನು ಪುಂಕಾನುಪುಂಕ ಪುನರುಚ್ಚರಿಸುವ ಮೂಲಕ ಚಾರಿತ್ರಿಕ ಸತ್ಯವೆಂದು ಜನಮಾನಸದಲ್ಲಿ ಸ್ಥಿರೀಕರಿಸಲು ಹೊರಟಿದ್ದಾರೆ. ಒಂದು ಸುಳ್ಳನ್ನೇ ಸಾವಿರ ಬಾರಿ ಪುನರುಚ್ಚರಿಸುವ ಮೂಲಕ ಸತ್ಯವೆಂದು ನಂಬಿಸುವ ಹಿಟ್ಲರನ ಪ್ರಚಾರ ಸಚಿವ ಗೊಬೆಲ್ಸನ ತಂತ್ರದಂತೆ ತೋರುತ್ತವೆ. ಇದು ಚರಿತ್ರೆಗೆ ಮಾಡುವ ಅಪಚಾರವಾಗಿದೆ. ಮಿಗಿಲಾಗಿ ಈ ಕಾಲ್ಪನಿಕ ವ್ಯಕ್ತಿಗಳನ್ನು ವೀರಾಗ್ರಣಿಗಳಂತೆ ಬಿಂಬಿಸುವ ಪ್ರತಿಮೆಗಳನ್ನು ಮಾಡಿಸಿ, ಮುಂದಿನ ತಲೆಮಾರುಗಳಿಗೆ ಕಾಲ್ಪನಿಕ ವ್ಯಕ್ತಿಗಳನ್ನೇ ವೀರರೆಂದು ನಂಬಿಸಿ, ಬಿಂಬಿಸಿ, ನಿಜವಾದ ವೀರರಿಗೆ ಅಪಚಾರ ಮಾಡುವುದು ಇದರ ಹಿಂದಿನ ಮತ್ತೊಂದು ಹುನ್ನಾರ.

ಇತ್ತೀಚೆಗೆ ಟಿಪ್ಪು ಕೊಂದವರ ಬಗ್ಗೆ ಉರಿಗೌಡ ಮತ್ತು ನಂಜೇಗೌಡರ ಕಥೆಯಂತೆಯೇ ಟಿಪ್ಪುವನ್ನು ಕೊಂದವರು ವೀರಾಗ್ರಣಿಗಳಾದ ರಾಮಭಟ್ಟ ಮತ್ತು ಶಾಮಭಟ್ಟ ಎಂಬ ಮತ್ತೊಂದು ನಮೂನೆಯ ಕಥೆಯನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈಗಾಗಲೇ ಈ ರೀತಿಯ ಅನೇಕ ಚಾರಿತ್ರಿಕ ಅಪಸವ್ಯಗಳನ್ನು ಚರಿತ್ರೆಯ ಒಳಗೆ ತುರುಕುವ ಪ್ರಯತ್ನಗಳು ನಡೆದಿವೆ. ಆಧಾರಗಳಿಲ್ಲದೆ ಇತಿಹಾಸ ಇಲ್ಲವಾದ್ದರಿಂದ ಅಂತಹ ಆಧಾರಗಳನ್ನು ಸೃಷ್ಠಿಸುವ ಪ್ರಯತ್ನ ಹಿತಾಸಕ್ತ ವರ್ಗದಿಂದ ನಡೆಯುತ್ತಲೇ ಇರುತ್ತದೆ. ಇತಿಹಾಸ ಸಂಶೋಧನೆಗೆ ನಿರ್ದಿಷ್ಟ ವೈಜ್ಞಾನಿಕತೆ ಇದೆಯಾದರೂ ಹೊಸಬಗೆಯ ಸವಾಲುಗಳಿಗೆ ತಕ್ಕಂತೆ ಇತಿಹಾಸ ಸಂಶೋಧಕರು ಸಂಶೋಧನಾ ವಿಧಾನಗಳನ್ನೂ ಮತ್ತಷ್ಟು ವೈಜ್ಞಾನಿಕವಾಗಿ ಪರಿಷ್ಕರಿಸಿ, ನೈಜ ಇತಿಹಾಸವನ್ನು ಸಮಾಜಕ್ಕೆ ತಿಳಿಸಿಕೊಡಬೇಕಾದ ತುರ್ತಿದೆ.

ಇಲ್ಲವಾದರೇ, ಸತ್ಯನಾರಾಯಣನ ಕಥೆಯಂತೆ ಮುಂದಿನ ದಿನಗಳಲ್ಲಿ ಮಂಡ್ಯ-ಮೈಸೂರು ಪರಿಸರದಲ್ಲಿ ಉರಿಗೌಡ, ನಂಜೇಗೌಡರ ಕಥೆಯ ಪಾರಾಯಣವೂ; ಕರಾವಳಿ ಪರಿಸರದಲ್ಲಿ ರಾಮಭಟ್ಟ ಮತ್ತು ಶಾಮಭಟ್ಟರ ಕಥೆಯ ಪಾರಾಯಣವೂ ನಡೆದರೆ ಯಾರೂ ಅಚ್ಚರಿ ಪಡಬೇಕಿಲ್ಲ!