ಕೆನಡ ಚುನಾವಣೆ: ಲಿಬರಲ್ ಪಕ್ಷದ ಜಸ್ಟಿನ್ ಟ್ರುಡೋಗೆ ಮತ್ತೆ ಪ್ರಧಾನಿ ಪಟ್ಟ

0
535

ಸನ್ಮಾರ್ಗ ವಾರ್ತೆ

ಮಾಂಟ್ರಿಯಲ್,ಅ.22: ಕೆನಡದ ಫೆಡರಲ್ ಚುನಾವಣೆಯಲ್ಲಿ ಸಾಕಷ್ಟು ಬಹುಮತವಿಲ್ಲದಿದ್ದರೂ ಎರಡನೆ ಬಾರಿ ಜಸ್ಟಿನ್ ಟ್ರುಡೊ ಪಕ್ಷ ಗೆದ್ದಿದೆ. ಇತರ ಪಕ್ಷಗಳೊಂದಿಗೆ ಸೇರಿ ಅವರು ಸರಕಾರ ರಚಿಸುವ ಸಾಧ್ಯತೆಗಳು ಕಂಡು ಬಂದಿದೆ. 304 ಸೀಟುಗಳ ಫಲಿತಾಂಶ ಹೊರಬಿದ್ದಿದ್ದು ಟ್ರುಡೋರವರ ಲಿಬರಲ್ ಪಾರ್ಟಿ ಆಫ್ ಕೆನಡಾ 146 ಸೀಟುಗಳನ್ನು ಪಡೆದುಕೊಂಡಿದೆ. ಆದರೆ ಸರಕಾರ ರಚಿಸಲು 170 ಸೀಟುಗಳ ಅಗತ್ಯವಿದೆ.

ಇದೇ ವೇಳೆ, ಟ್ರುಡೋ ಸರಕಾರ ರಚಿಸಲು ವಿಫಲರಾದರೆ ಕನ್ಸರ್‍ವೇಟಿವ್ ಪಾರ್ಟಿ ಸರಕಾರ ರೂಪಿಸಲು ಸಿದ್ಧ ಎಂದು ಆಂಡ್ರೂ ಸೀಚರ್ ಹೇಳಿದರು.

ಜಸ್ಟಿನ್ ಟ್ರುಡೋ ವಿಜಯದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂತಸ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಹೋರಾಟವಿತ್ತು. ಟ್ರುಡೊರಿಗೆ ಶುಭಾಷಯಗಳು, ಎರಡೂ ದೇಶದ ಪ್ರಗತಿಗೆ ತಮ್ಮ ಜೊತೆ ಕೆಲಸ ಮಾಡಲು ಬಯಸುವೆ ಎಂದು ಟ್ರಂಪ್ ಟ್ವೀಟ್ ಮಾಡಿದರು. ಕಳೆದ ವರ್ಷ ಜಿ7 ಶೃಂಗದಲ್ಲಿ ಟ್ರುಡೋರನ್ನು ಟ್ರಂಪ್ ಅಶಿಸ್ತಿನ ವ್ಯಕ್ತಿ ಎಂದು ಜರೆದಿದ್ದರು.

ತನ್ನನ್ನು ಮತ್ತು ತನ್ನ ಪಾರ್ಟಿಯನ್ನು ಗೆಲ್ಲಿಸಿದ್ದಕ್ಕಾಗಿ ಮತದಾರರಿಗೆ ಟ್ರುಡೋ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದು ಕೆನಡಾವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ತನ್ನ ಮೇಲೆ ವಿಶ್ವಾಸ ಇರಿಸಿದ ಕೆನಡಿಯನ್ ಜನತೆಗೆ ಕೃತಜ್ಞನಾಗಿರುವೆಂದು ಹೇಳಿದ್ದಾರೆ.