ಹಥ್ರಾಸ್: ಪ್ರತಿಭಟನಾಕಾರರ ವಿರುದ್ಧ ಯುಪಿ ಪೊಲೀಸರಿಂದ ಎಫ್‌ಐಆರ್

0
783

ಸನ್ಮಾರ್ಗ ವಾರ್ತೆ

ಲಕ್ನೊ,ಅ.6: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹಥ್ರಾಸ್‍ನ ದಲಿತ ಯುವತಿ ಕೊಲೆಯಾದ ಘಟನೆಯನ್ನು ವಿರೋಧಿಸಿ ಪ್ರತಿಭಟಿಸಿದವರನ್ನು ಬೇಟೆಯಾಡಲು ಉತ್ತರ ಪ್ರದೇಶ ಪೊಲೀಸ್ ಕುಣಿಕೆಯೊಡ್ಡಿದೆ.

ದೇಶದ್ರೋಹ, ಜಾತಿ ಗಲಭೆಗೆ ಸಿದ್ಧತೆ ಮೊದಲಾದ ಆರೋಪಗಳನ್ನು ಅಜ್ಞಾತ ವ್ಯಕ್ತಿಗಳ ವಿರುದ್ಧ ಹಥ್ರಾಸ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಇದೇವೇಳೆ, ತನ್ನ ಸರಕಾರಕ್ಕೆ ಅಪವಾದ ಹಾಕಲು ಅಂತಾರಾಷ್ಟ್ರೀಯ ಗೂಢಾಲೋಚನೆ ನಡೆದಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಅಂತರಾಷ್ಟ್ರೀಯ ಫಂಡಿಂಗ್ ಮೂಲಕ ಜಾತಿ-ಕೋಮು ಗಲಭೆಗಳಿಗೆ ಪ್ರತಿಪಕ್ಷಗಳು ಯತ್ನಿಸುತ್ತಿದೆ ಯೋಗಿ ಆದಿತ್ಯನಾಥ್ ಆರೋಪಿಸಿದರು.

ಸಂಚು ಆರೋಪಿಸಿ ಜಸ್ಟಿಸ್ ಫಾರ್ ಹಥ್ರಾಸ್ ವಿಕ್ಟಿಂ ವೆಬ್‍ಸೈಟ್ ಕಾರ್ಯವೆಸಗದಂತೆ ಪೊಲೀಸರು ತಡೆದಿದ್ದಾರೆ. ಸರಕಾರದ ವಿರುದ್ಧ ಅಕ್ರಮಕ್ಕೆ ಪ್ರೇರೇಪಿಸುವುದು. ವಿವಿಧ ಧರ್ಮ ವಿಭಾಗಳ ನಡುವೆ ದ್ವೇಷ ಬೆಳೆಸುವುದು ಮುಂತಾದ ಹತ್ತೊಂಬತ್ತಕ್ಕೂ ಹೆಚ್ಚು ಆರೋಪಗಳನ್ನು ಚಾಂದ್‍ಪ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್‌ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಐಟಿ ಕಾನೂನು ಪ್ರಕಾರ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಅಪರಿಚಿತ ಆರೋಪಿಗಳು ಎಂದು ಹೇಳಲಾದರೂ ಪೌರತ್ವ ಕಾನೂನು ವಿರೋಧಿಸಿ ಪ್ರತಿಭಟಿಸಿದವರನ್ನು ದಿಲ್ಲಿ ಗಲಭೆ ಕೇಸಿನಲ್ಲಿ ಸಿಲುಕಿಸಿ ಹಾಕಿದಂತೆ ಲೈಂಗಿಕ ದುರಾಚಾರದ ವಿರುದ್ಧ ಪ್ರತಿಭಟಿಸಿದವರನ್ನು ದಮನಿಸಲು ಗುರಿಯಿಟ್ಟು ಎಫ್‍ಐಆರ್ ಮಾಡಲಾಗಿದೆ ಎಂದು ಶಂಕೆ ಎದ್ದಿದೆ.

ಇದೇವೇಳೆ, ಬಾಲಕಿಗೆ ಆದ ನ್ಯಾಯ ನಿರಾಕರಣೆ ಬಹಿರಂಗವಾಗಿರುವುದರಿಂದ ಆಗಿರುವ ದಿಗ್ಭ್ರಮೆ ಈ ಕ್ರಮದಲ್ಲಿ ಬಹಿರಂಗೊಂಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆರೋಪಿಸಿದ್ದಾರೆ.