✍️ ತಲ್ಹಾ ಮನ್ನಾನ್
ರಾಷ್ಟ್ರೀಯ ಕಾರ್ಯದರ್ಶಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ
ನಾನು ಮತ್ತು ನನ್ನ ಸ್ನೇಹಿತರು ಕಳೆದ ಒಂದು ವಾರದಿಂದ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇವೆ. ಅಲ್ಲಿಗೆ ಯಾರೋ ಕರೆದರು ಎಂಬ ಕಾರಣಕ್ಕಲ್ಲ, ಬದಲಿಗೆ ತಮ್ಮನ್ನು ಕೈಬಿಟ್ಟಿರುವ ವ್ಯವಸ್ಥೆಯ ಬಗ್ಗೆ ತಮಗೂ ಇರುವ ಹತಾಶೆ ಮತ್ತು ಬಳಲಿಕೆ ಒಂದೇ ಆಗಿದ್ದ ಕಾರಣದಿಂದ ವಿವಿಧ ಸಾಂಸ್ಥಿಕ ಹಾಗೂ ಸೈದ್ಧಾಂತಿಕ ಹಿನ್ನೆಲೆಗಳ ವಿದ್ಯಾರ್ಥಿಗಳೊಂದಿಗೆ ನಾವು ನಿಂತಿದ್ದೇವೆ.
ನಾನು ಜಂತರ್ ಮಂತರ್ನಲ್ಲಿ ನಡೆದ ಹಲವು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದೇನೆ. ನಜೀಬ್ ನಾಪತ್ತೆಯ ವಿರುದ್ಧದ ಪ್ರತಿಭಟನೆ, ಗುಂಪು ಹಲ್ಲೆ ವಿರುದ್ಧ, ಫೆಲೆಸ್ತೀನ್ ಪರ ಐಕ್ಯತೆ, ವಕ್ಫ್ ತಿದ್ದುಪಡಿ ವಿರೋಧಿ ಪ್ರತಿಭಟನೆಗಳು ಇತ್ಯಾದಿ; ಈ ಎಲ್ಲ ಪ್ರತಿಭಟನೆಗಳ ಸಮಯದಲ್ಲಿ ಸಾಮಾನ್ಯವಾದ ಸಂಗತಿಯೆಂದರೆ ಅಲ್ಲಿಗೆ ಪ್ರವೇಶಿಸುವಾಗ ಕಂಡುಬರುವ ಭಯದ ಭಾವನೆ, ಆವೇಶ ಮತ್ತು ವಾತಾವರಣದಲ್ಲಿದ್ದ ತಳಮಳ. ಭಾರಿ ಪೊಲೀಸ್ ಉಪಸ್ಥಿತಿ, ಅರೆಸೈನಿಕ ಪಡೆಯ ನಿಯೋಜನೆ ಮತ್ತು ಎಚ್ಚರಿಕೆಗಳು ಒಟ್ಟಾಗಿ ಸುತ್ತಮುತ್ತಲಿನ ವಾತಾವರಣವನ್ನು ಹೆಚ್ಚು ಆತಂಕಕಾರಿ ಮತ್ತು ಭಯ ಹುಟ್ಟಿಸುವಂತೆ ಮಾಡುತ್ತವೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿತ್ತು. ನನಗೆ ಆ ಹಳೇಯ ಭಾವನೆ ಅನುಭವಕ್ಕೆ ಬರಲಿಲ್ಲ. ಇದು ಪ್ರತಿಭಟನೆಯು ಯಾವುದೇ ‘ಮುಸ್ಲಿಮ್’ ಪ್ರಶ್ನೆಗೆ ಸಂಬಂಧಿಸಿದ್ದಲ್ಲ ಎಂಬ ಕಾರಣಕ್ಕಾ? ಬಹುಶಃ ಹೌದು!
ನಮ್ಮ ಉಪಸ್ಥಿತಿಯು ಏನು ಮತ್ತು ಏನಲ್ಲ ಎಂಬುದನ್ನು ಚರ್ಚಿಸೋಣ.
ಮೊದಲನೆಯದಾಗಿ, NEET ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿನ ವ್ಯಾಪಕ ಬಿಕ್ಕಟ್ಟಿನ ಕುರಿತಾದ ಈ ಪ್ರತಿಭಟನೆಯಲ್ಲಿ ಯಾರೇ ಭಾಗವಹಿಸುವುದನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ಯನ್ನು ಒಪ್ಪುಪುವುದು ಎಂದು ಪರಿಗಣಿಸಬಾರದು. ಭಾಗವಹಿಸಿರುವ ಅನೇಕರಿಗೆ CJP, ಅದರ ರಾಜಕಾರಣ, ನಾಯಕತ್ವ ಮತ್ತು ಅದರ ಸಂಘಟನಾತ್ಮಕ ಕಾರ್ಯಶೈಲಿಯ ಬಗ್ಗೆ ಹಲವಾರು ಪ್ರಶ್ನೆಗಳಿವೆ. ಆದರೂ ನಾವು ಪ್ರಶ್ನೆಗಳನ್ನು ನಮ್ಮೊಂದಿಗೆ ಹೊತ್ತುಕೊಂಡೇ ಆ ಪ್ರತಿಭಟನೆಯ ಜೊತೆ ನಿಂತಿದ್ದೇವೆ.
ಯಾವುದೇ ನಿರ್ದಿಷ್ಟ ಸಂಘಟನೆಯೊಂದರ ಚೌಕಟ್ಟಿಗೆ ಸೀಮಿತಗೊಳ್ಳದ, ಅದರಾಚೆಗಿನ ಬೃಹತ್ ಒಮ್ಮತವೇ ನಮ್ಮನ್ನು ಜಂತರ್ ಮಂತರ್ಗೆ ಕರೆತಂದಿದೆ.
ಇದು ಕೇವಲ CJP ಪ್ರತಿಭಟನೆಯಲ್ಲ
ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಕಾಲಿಟ್ಟ ತಕ್ಷಣವೇ ಒಂದು ಸಂಗತಿ ಸ್ಪಷ್ಟವಾಗುತ್ತದೆ; ಇದು ಕೇವಲ ಸಿಜೆಪಿಯ (CJP) ಪ್ರತಿಭಟನೆಯಲ್ಲ. ಕಾರ್ಯಕ್ರಮದ ಸಂಘಟನೆ, ವೇದಿಕೆ ಹಾಗೂ ಮೈಕ್ ಸಿಜೆಪಿ ಕೈಯಲ್ಲಿದ್ದರೂ, ಅಲ್ಲಿ ಸೇರಿರುವ ಜನಸಮೂಹ ಬಿಂಬಿಸುತ್ತಿರುವ ಚಿತ್ರಣವೇ ಬೇರೆ.
ಎಡಪಕ್ಷಗಳ ಹಲವು ವಿದ್ಯಾರ್ಥಿ ಸಂಘಟನೆಗಳು, ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ಘಟಕ, ಜೆನ್-ಝೀ (Gen-Z) ತಲೆಮಾರಿನ ಯುವಕರ ಮನಸ್ಸಿಗೆ ನಾಟುವ ಶೈಲಿಯಲ್ಲಿಯೇ ಸ್ವಂತ ವೀಕ್ಷಕರನ್ನು ಸೃಷ್ಟಿಸಿಕೊಂಡಿರುವ ಸ್ವತಂತ್ರ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ಸ್ ಹಾಗೂ ಯಾವುದೇ ಸಂಘಟನೆಯೊಂದಿಗೆ ಗುರುತಿಸಿಕೊಳ್ಳದ ಸ್ವತಂತ್ರ ವಿದ್ಯಾರ್ಥಿಗಳೂ ಹಾಜರಿದ್ದಾರೆ. ಇವರೆಲ್ಲರ ಜತೆಗೆ ಸಿಜೆಪಿ ತಂಡ ಹಾಗೂ ಸ್ವಯಂಸೇವಕರೂ ಇದ್ದಾರೆ. ಇದ್ಯಾವುದೂ ಯಾದೃಚ್ಛಿಕವಲ್ಲ; ಬದಲಿಗೆ ಈ ಇಡೀ ಪ್ರತಿಭಟನೆಯ ಅತಿ ಮುಖ್ಯ ರಾಜಕೀಯ ವಾಸ್ತವವೇ ಇದಾಗಿದೆ.
ಹಾಗಾಗಿ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ನಾನು ಉತ್ತರಿಸಲು ಬಯಸುತ್ತೇನೆ:
- ಸೇರಿರುವ ವಿದ್ಯಾರ್ಥಿಗಳನ್ನು ಸಿಜೆಪಿ (CJP) ಸಂಘಟಿಸುತ್ತಿದೆಯೆ? ಪ್ರಾಥಮಿಕವಾಗಿ ಇಲ್ಲ
- ಅಭಿಜಿತ್ ದಿಪ್ಕೆ ಅವರ ಆಲೋಚನೆಗಳನ್ನು ಅಥವಾ ಸಿಜೆಪಿ ಎಂಬ ಸಂಘಟನೆಯ ಸಿದ್ಧಾಂತವನ್ನು ಅವರು ಒಪ್ಪಿಕೊಂಡಿದ್ದಾರೆಯೆ? ಇಲ್ಲ.
- ಸಿಜೆಪಿಯ ನಾಯಕತ್ವ ಅಥವಾ ಅದರ ರಾಜಕೀಯ ಪಥದ ಬಗ್ಗೆ ಅವರಿಗೆ ವಿಶ್ವಾಸವಿದೆಯೆ? ವಿಶೇಷವಾದ ಯಾವುದೇ ಭರವಸೆಯಿಲ್ಲ.
ಹಾಗಾದರೆ ಅವರು ಅಲ್ಲಿರುವುದೇಕೆ?
ಏಕೆಂದರೆ ಸರ್ಕಾರ ಹಾಗೂ ಅದರ ವ್ಯವಸ್ಥೆ ಅವರನ್ನು ವಂಚಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಳ ಕಾಲ ಶ್ರಮವಹಿಸಿ ಸಿದ್ಧತೆ ನಡೆಸಿದ್ದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಸಂಬಂಧಪಟ್ಟ ಸಚಿವರು ಇದರ ನೈತಿಕ ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ. ಯುವ ಭಾರತದ ಆಕ್ರೋಶ ಮತ್ತು ಹತಾಶೆ ಹೊರಹಾಕಲು ಒಂದು ವೇದಿಕೆ ಅಗತ್ಯವಿತ್ತು; ಸಿಜೆಪಿ (CJP) ಅಂತಹದೊಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.
ಕೋಪವೊಂದೇ ಸಿದ್ಧಾಂತವಾಗಲಾರದು
ಸಿಜೆಪಿ (CJP) ಸಂಘಟನೆಯ ಉದಯ ಹಾಗೂ ಅದರ ಪ್ರತಿಭಟನೆಯನ್ನು ವಿಶ್ಲೇಷಿಸುತ್ತಿರುವ ತಜ್ಞರು ಒಂದು ಗಂಭೀರ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ; ಕೇವಲ ಆಕ್ರೋಶದ ಬುನಾದಿಯ ಮೇಲೆ ಹುಟ್ಟಿಕೊಂಡ ಚಳುವಳಿಯೊಂದು ಶಾಶ್ವತವಾದದ್ದನ್ನು ಸಾಧಿಸಲು ಸಾಧ್ಯವೇ? ಈ ನಿಟ್ಟಿನಲ್ಲಿ ಭಾರತದ ರಾಜಕೀಯ ಇತಿಹಾಸ ನಮಗೆ ಸ್ಪಷ್ಟ ಪಾಠ ಕಲಿಸುತ್ತದೆ. ಕೇವಲ ಕೋಪಾವೇಶದಿಂದ ಮಾತ್ರ ಬಿಜೆಪಿ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿಲ್ಲ. ಬದಲಿಗೆ ಅದು ದಶಕಗಳ ಕಾಲ ಸೈದ್ಧಾಂತಿಕ ನೆಲೆಗಟ್ಟನ್ನು ರೂಪಿಸಿ, ತನ್ನ ಬೆಂಬಲಿಗರಿಗೆ ನಿರ್ದಿಷ್ಟ ರಾಜಕೀಯ ಗುರುತು, ಗುರಿ ಮತ್ತು ಬದ್ಧತೆಯ ಭಾವನೆಯನ್ನು ತುಂಬಿದೆ. ಆದರೆ ಸಿಜೆಪಿ ಮತ್ತು ಅಂತಹದ್ದೇ ಚಳುವಳಿಗಳು, ಸಾರ್ವಜನಿಕರ ಅಂದಿನ ನೈಜ ಆಕ್ರೋಶವನ್ನು ದೀರ್ಘಕಾಲಿಕ ಹಾಗೂ ಸುಸಂಬದ್ಧ ರಾಜಕೀಯ ಸಿದ್ಧಾಂತವನ್ನಾಗಿ ಪರಿವರ್ತಿಸಬೇಕಾದ ಕಠಿಣ ಸವಾಲನ್ನು ಎದುರಿಸುತ್ತಿವೆ.
ಆಕ್ರೋಶವೆಂಬುದು ಸಿದ್ಧಾಂತವಲ್ಲ, ಅದೊಂದು ಕಚ್ಚಾ ಸಾಮಗ್ರಿ ಅಷ್ಟೇ. ಆ ಸಾಮಗ್ರಿಯಿಂದ ನೀವೇನು ರೂಪಿಸುತ್ತೀರಿ ಮತ್ತು ಅದನ್ನು ಯಾರ ಹಿತಾಸಕ್ತಿಗಾಗಿ ನಿರ್ಮಿಸುತ್ತೀರಿ ಎಂಬುದು ಅತಿ ದೊಡ್ಡ ಪ್ರಶ್ನೆ. ಸಿಜೆಪಿ ವಿಚಾರದಲ್ಲಿ ನಮ್ಮ ಕಳಕಳಿಯೂ ಅತ್ಯಂತ ನಿರ್ಣಾಯಕವಾಗಿ ಇರುವುದೇ ಈ ಹಂತದಲ್ಲಾಗಿದೆ.
ನಾವು ಕೇಳುತ್ತಿರುವ ಪ್ರಶ್ನೆಗಳು
ವ್ಯವಸ್ಥೆಯ ವೈಫಲ್ಯ ಹಾಗೂ ರಾಜಿ ಧೋರಣೆಗಳ ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿದಿರುವ ಈ ಹೋರಾಟದಲ್ಲಿ, ನನ್ನ ಲಿಂಗ ನನ್ನ ಇಚ್ಛೆ” (mera gender meri marzi) ಯಂತಹ ಧ್ವನಿಗಳು ಮತ್ತು ಲಿಂಗ ಆಧಾರಿತ ಚರ್ಚೆಗಳು ರಾಜಕೀಯ ಹಕ್ಕಿನ ರೂಪದಲ್ಲಿ ಮುಂಚೂಣಿಗೆ ಬರುತ್ತವೆ. ಆದರೆ, ಇತರೆ ಗಂಭೀರ ಪ್ರಶ್ನೆಗಳ ವಿಚಾರದಲ್ಲಿ ಮಾತ್ರ ಕಣ್ಣಿಗೆ ರಾಚುವಂತಹ ಮೌನ ಆವರಿಸಿಕೊಂಡಿದೆ.
ಮುಸ್ಲಿಮ್ ಹುಡುಗಿಯೊಬ್ಬಳು ತನ್ನ ಮೈಮೇಲೆ ಸ್ಪಷ್ಟವಾಗಿ ಗೋಚರಿಸುವ ಹಿಜಾಬ್ ಧರಿಸಿದ್ದಾಳೆ ಎಂಬ ಕಾರಣಕ್ಕಾಗಿಯೇ ಆಕೆಯನ್ನು ನೀಟ್ ಪರೀಕ್ಷಾ ಹಾಲ್ನಿಂದ ಹೊರಹಾಕಲಾಯಿತು. ಸಿಜೆಪಿಯ ಈ ಹೋರಾಟವು ಶೈಕ್ಷಣಿಕ ನ್ಯಾಯ ಹಾಗೂ ವ್ಯವಸ್ಥೆಯ ವೈಫಲ್ಯದ ವಿರುದ್ಧವಾಗಿದ್ದರೆ, ಒಬ್ಬ ಮುಸ್ಲಿಮ್ ವಿದ್ಯಾರ್ಥಿನಿಯನ್ನು ಆಕೆಯ ಗುರುತಿನ ಕಾರಣದಿಂದ ಪರೀಕ್ಷೆಯಿಂದ ವಂಚಿತಳನ್ನಾಗಿ ಮಾಡುವುದನ್ನು ಸಣ್ಣ ವಿಷಯ ಅಂತ ಕಡೆಗಣಿಸಲು ಸಾಧ್ಯವಿಲ್ಲ. ಬದಲಿಗೆ ಅದು ಆ ಬಿಕ್ಕಟ್ಟಿನ ಅತಿ ದೊಡ್ಡ ಪ್ರಮುಖ ನಿದರ್ಶನವಾಗಿದೆ.
ಆ ಹೋರಾಟದ ವೇದಿಕೆಯಲ್ಲಿ ಲಿಂಗತ್ವ ಚರ್ಚೆಗೆ ಅವಕಾಶ ಸಿಗುವುದಾದರೆ, ಮುಸ್ಲಿಮರ ಕುರಿತಾದ ಚರ್ಚೆಗೂ ಖಂಡಿತಾ ಜಾಗ ಸಿಗಲೇಬೇಕು. ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುವುದು ತಪ್ಪಲ್ಲ. ಆದರೆ, ಅಂಚಿನಲ್ಲಿರುವವರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕುವ ತಾರತಮ್ಯವನ್ನು, ಮುಸ್ಲಿಮ್ ವಿದ್ಯಾರ್ಥಿಗಳ ಕೈಗೆ ಪ್ರಶ್ನೆ ಪತ್ರಿಕೆ ಸಿಗುವುದಕ್ಕೆ ಅಡೆತಡೆ ಇರುವಂತ ವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ರಾಜೀನಾಮೆಗೆ ಪಟ್ಟುಹಿಡಿಯುವುದು, ಹೊಣೆಗಾರಿಕೆಯ ಸೋಗಿನಲ್ಲಿ ಆಡುವ ರಾಜಕೀಯ ನಾಟಕವಷ್ಟೇ ಆಗಿದೆ.
ಭಾರತದಲ್ಲಿ ಶಿಕ್ಷಣದೊಂದಿಗೆ ನಿಜವಾಗಿಯೂ ಏನಾಗುತ್ತಿದೆ ಎಂಬುದು ಕೇವಲ ಪತ್ರಿಕೆ ಸೋರಿಕೆಗೆ ಮಾತ್ರ ಸೀಮಿತವಾಗಿಲ್ಲ. ಶೈಕ್ಷಣಿಕ ಸುಧಾರಣೆಗಾಗಿ ಎದ್ದು ನಿಲ್ಲುವುದಾಗಿ ಹೇಳಿಕೊಳ್ಳುವ ಚಳುವಳಿಯು ದೊಡ್ಡ ಚಿತ್ರಣವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಂಕುಚಿತಗೊಳ್ಳುತ್ತಿರುವ ವಿಶ್ವವಿದ್ಯಾಲಯದ ಆವರಣಗಳು, ಕ್ಯಾಂಪಸ್ಗಳಲ್ಲಿ ಭಿನ್ನ ಧ್ವನಿಗಳನ್ನು ದಮನ ಮಾಡುವುದು, ವಿದ್ಯಾರ್ಥಿಗಳ ಗುರುತನ್ನು ಗುರಿಯಾಗಿಸಿ ಅವರ ಧ್ವನಿಯನ್ನು ಅಪರಾಧವೆಂದು ಬಿಂಬಿಸುವುದು, ವಿದ್ಯಾರ್ಥಿ ಸಂಘಗಳ ಮೇಲಿನ ನಿಷೇಧ ಹಾಗೂ ಅಮಾನತು, ಸರ್ಕಾರದ ನೀತಿಗಳ ಮೂಲಕ ಕೇಸರಿ ಶಿಕ್ಷಣಕ್ರಮವನ್ನು ಹೇರುವುದು ಮತ್ತು ಶಿಕ್ಷಣದ ಸಂಪೂರ್ಣ ಕಲ್ಪನೆಯನ್ನು ವ್ಯಾಪಾರೀಕರಣಗೊಳಿಸುವುದು ಪ್ರತಿಭಟನೆಯ ಚರ್ಚೆಯ ಭಾಗವಾಗಬೇಕು.
ನಾವು ಹೊರಗೆ ನಿಂತು CJP ಗೆ ಈ ಪ್ರಶ್ನೆ ಮಾಡುತ್ತಿಲ್ಲ; ಬದಲಾಗಿ ಪ್ರತಿಭಟನೆಯ ಒಳಗೆ ನಿಂತು ಕೇಳುತ್ತಿದ್ದೇವೆ. ಈ ಪ್ರಶ್ನೆಗಳು ಚಳುವಳಿಯನ್ನು ವಿಭಜಿಸುವ ಪ್ರಯತ್ನಗಳಲ್ಲ. ಇದು ಅದನ್ನು ಇನ್ನಷ್ಟು ಆಳವಾಗಿಸುವ ಪ್ರಯತ್ನಗಳಾಗಿವೆ. ಇವುಗಳನ್ನು ನಿರ್ಲಕ್ಷಿಸುವುದರಿಂದ ಐಕ್ಯತೆ ಮೂಡುವುದಿಲ್ಲ; ಬದಲಿಗೆ ಅದು ಅಹಿತ ಚರ್ಚೆಯನ್ನು ಮುಂದೂಡುತ್ತದೆ ಅಷ್ಟೇ.
ಅದೇನೇ ಆದರೂ ಅಲ್ಲಿರಲು ನಾವು ಏಕೆ ಆರಿಸಿಕೊಂಡೆವು
ನಮ್ಮ ಈ ಉಪಸ್ಥಿತಿಗೆ ವಿವಿಧ ಕೋನಗಳಿಂದ ಅರ್ಥ ಕಲ್ಪಿಸಲಾಗುತ್ತದೆ ಎಂಬ ಅರಿವು ನಮಗಿದೆ. ಸಿಜೆಪಿ ರಾಜಕಾರಣಕ್ಕೆ ನಾವು ಮಾನ್ಯತೆ ತಂದುಕೊಡುತ್ತಿದ್ದೇವೆ ಎಂದು ಕೆಲವರು ವ್ಯಾಖ್ಯಾನಿಸಬಹುದು; ಇನ್ನು ಕೆಲವರು ಮುಸ್ಲಿಮ್ ವಿದ್ಯಾರ್ಥಿ ಸಂಘಟನೆಗೆ ಇಂಥ ಜಾಗದಲ್ಲಿ ಏನು ಕೆಲಸ ಎಂದು ಪ್ರಶ್ನಿಸಬಹುದು. ಆದರೆ ಈ ಎರಡೂ ಪೂರ್ವಗ್ರಹ ಪೀಡಿತ ನಿಲುವುಗಳನ್ನು ನಾವು ಸಂಪೂರ್ಣವಾಗಿ ತಳ್ಳಿಹಾಕುತ್ತೇವೆ.
ಜಂತರ್ ಮಂತರ್ನಲ್ಲಿ ನಮ್ಮ ಉಪಸ್ಥಿತಿಯು, ಭಾರತೀಯ ಶಿಕ್ಷಣ ರಂಗದ ಭವಿಷ್ಯದಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳೂ ಸಮಾನ ಪಾಲುದಾರರು ಎಂಬ ಗಟ್ಟಿಯಾದ ಘೋಷಣೆಯಾಗಿದೆ. ಇತರೆ ಎಲ್ಲ ವಿದ್ಯಾರ್ಥಿಗಳಂತೆ ನಾವೂ ಸಹ ಅಷ್ಟೇ ತೀವ್ರತೆಯಿಂದ ನೀಟ್ (NEET) ಪರೀಕ್ಷೆಗೆ ಸಿದ್ಧತೆ ನಡೆಸಿ, ಅದೇ ವ್ಯವಸ್ಥಿತ ದ್ರೋಹಕ್ಕೆ ಬಲಿಯಾಗಿದ್ದೇವೆ. ಭಾರತೀಯ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟು ನಮ್ಮದೇ ಬಿಕ್ಕಟ್ಟು; ಕೈಯಲ್ಲಿ ಮೈಕ್ ಹಿಡಿದಿರುವ ಸಂಘಟನೆ ಸದ್ಯಕ್ಕೆ ನಮ್ಮ ಕಾಳಜಿಗಳನ್ನು ಗಟ್ಟಿಯಾಗಿ ಹೊರಹಾಕಿಲ್ಲ ಎಂಬ ಮಾತ್ರಕ್ಕೆ ನಾವು ಈ ಹೋರಾಟದಿಂದ ದೂರ ಉಳಿಯುವುದಿಲ್ಲ.
CJP ಯ ಅಜೆಂಡಾಗೆ ರಬ್ಬರ್ ಸ್ಟಾಂಪ್ ಮಾಡಲು ನಾವು ಅಲ್ಲಿರುವುದಲ್ಲ. ಬದಲಾಗಿ ಅದನ್ನು ಇನ್ನಷ್ಟು ವಿಸ್ತರಿಸಲು ಹಾಜರಾಗಿದ್ದೇವೆ. ಆಯ್ದ ಒಟ್ಟುಗೂಡುವಿಕೆಯು ಯಾವುದನ್ನು ಅಳಿಸಿಹಾಕುತ್ತದೆಯೋ ಅದನ್ನು ಗೋಚರಿಸುವಂತೆ ಮಾಡಲು ನಾವು ಅಲ್ಲಿದ್ದೇವೆ. ಕೇವಲ ಕಳಪೆ ಆಡಳಿತಕ್ಕೆ ಒಳಗಾದವರಷ್ಟೇ ನೈಜ ವಂಚಿತರಲ್ಲ; ಬದಲಿಗೆ ಯಾರ ಹೊರಗಿಡುವಿಕೆಯನ್ನು ಹೊರಗಿಡುವಿಕೆ ಎಂದು ಪರಿಗಣಿಸಲಾಗುವುದಿಲ್ಲವೋ ಅವರೂ ವಂಚಿತರು ಎಂಬ ಕಾರಣಕ್ಕಾಗಿ ನಾವು ಅಲ್ಲಿದ್ದೇವೆ. ನಮ್ಮ ಭಾಗವಹಿಸುವಿಕೆಯು ಅದೃಶ್ಯರಾಗಲು ನಾವು ಮಾಡುವ ನಿರಾಕರಣೆಯಾಗಿದೆ.
ಮುಂದೆ ಸಾಗುತ್ತಾ
ನಮ್ಮ ನಿಲುವು ಏನೆಂಬುದರ ಸಂಪೂರ್ಣ ಅರಿವು ಮತ್ತು ಸ್ಪಷ್ಟತೆಯೊಂದಿಗೇ ಮುಸ್ಲಿಮರಾದ ನಾವು ಈ ಹೋರಾಟದಲ್ಲಿ ಭಾಗವಹಿಸಿದ್ದೇವೆ. ಧರ್ಮ, ಜಾತಿ ಅಥವಾ ಲಿಂಗ ಭೇದವಿಲ್ಲದೆ, ಪ್ರತಿಯೊಬ್ಬ ವಿದ್ಯಾರ್ಥಿಗೂ ನ್ಯಾಯಸಮ್ಮತವಾದ ಪರೀಕ್ಷಾ ವ್ಯವಸ್ಥೆ ಹಾಗೂ ಉತ್ತರದಾಯಿತ್ವ ಇರುವ ಆಡಳಿತ ವ್ಯವಸ್ಥೆ ಸಿಗಬೇಕು ಎಂಬ ಆಶಯದೊಂದಿಗೆ ನಾವು ಪ್ರತಿಯೊಬ್ಬ ವಿದ್ಯಾರ್ಥಿಯ ಪರವಾಗಿ ದೃಢವಾಗಿ ನಿಲ್ಲುತ್ತೇವೆ.
ಶೈಕ್ಷಣಿಕ ನ್ಯಾಯ ಎನ್ನುವುದು ಹಲವು ಆಯಾಮಗಳನ್ನು ಹೊಂದಿದೆ ಎಂಬ ಸತ್ಯದ ಮೇಲೆ ನಮ್ಮ ನಿಲುವಿದೆ. ಕೇವಲ ಪೇಪರ್ ಲೀಕ್ನಂತಹ ವಿಷಯಗಳನ್ನು ಮಾತ್ರ ಎತ್ತಿಕೊಂಡು, ಮನುಷ್ಯರ ಗುರುತನ್ನು ನೋಡಿ ಹೊರಹಾಕುವ ತಾರತಮ್ಯದ ವಿರುದ್ಧ ಮೌನವಾಗಿರುವ ಯಾವುದೇ ಹೋರಾಟವು ಇಡೀ ವಿದ್ಯಾರ್ಥಿ ಸಮುದಾಯದ ಹೋರಾಟವಾಗಲು ಸಾಧ್ಯವಿಲ್ಲ. ಬದಲಿಗೆ ಅದು ಈಗಾಗಲೇ ವ್ಯವಸ್ಥೆಯ ಬಾಗಿಲು ತಲುಪಲು ಸುಲಭವಾಗಿ ಹತ್ತಿರವಿರುವ ಕೆಲವೇ ಕೆಲವು ವರ್ಗದವರ ಪರವಾದ ಹೋರಾಟವಷ್ಟೇ ಆಗಿದೆ.
ಪ್ರತಿಯೊಂದು ಸಾಂಸ್ಥಿಕ ವೈಫಲ್ಯದ ಜೊತೆಗೆ ಮುಸ್ಲಿಮ್ ವಿರೋಧಿ ತಾರತಮ್ಯವನ್ನು ಕೂಡ ಈ ಪ್ರತಿಭಟನೆ ಪ್ರಶ್ನಿಸುತ್ತದೆಯೇ. ಮುಸ್ಲಿಮ್ ವಿದ್ಯಾರ್ಥಿಗಳ ಅನುಭವಗಳು ಈ ಹೋರಾಟದ ಮುಖ್ಯ ಚೌಕಟ್ಟಿನೊಳಗೆ ಸ್ಥಾನ ಪಡೆಯುತ್ತವೆಯೇ ಅಥವಾ ಅವುಗಳನ್ನು ನಿರ್ಲಕ್ಷಿಸಿ ಹೊರಗೆ ಉಳಿಸಲಾಗುತ್ತದೆಯೇ ಎಂದು ಕೇಳುವುದನ್ನು ನಾವು ಮುಂದುವರಿಸುತ್ತೇವೆ.
ಜಂತರ್ ಮಂತರ್ನ ಪ್ರತಿಭಟನಾ ಸ್ಥಳವು ವೈವಿಧ್ಯತೆಯಿಂದ ಕೂಡಿದೆ. ಎತ್ತಿಕೊಂಡಿರುವ ಕಾರಣವು ನ್ಯಾಯಸಮ್ಮತವಾಗಿದೆ. ನಮ್ಮ ಪಾಲ್ಗೊಳ್ಳುವಿಕೆಯೂ ನೈಜವಾದುದು. ಆದರೆ, ನಮ್ಮ ಪ್ರಶ್ನಗಳೂ ಅಷ್ಟೇ ಗಂಭೀರವಾದುದು.
ತಲ್ಹಾ ಮನ್ನಾನ್: ಪ್ರಸ್ತುತ ಹೈದರಾಬಾದ್ನ ಮೌಲಾನಾ ಆಝಾದ್ ನ್ಯಾಷನಲ್ ಉರ್ದು ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡುತ್ತಿದ್ದಾರೆ.












