ರೈತರ ಪ್ರತಿಭಟನೆ: ಹೋರಾಟ ನಿರತ ರೈತರ ಭೇಟಿಗೆ ಬಂದ ವಿರೋಧ ಪಕ್ಷಗಳ ನಾಯಕರನ್ನು ತಡೆದ ದೆಹಲಿ ಪೊಲೀಸರು

0
454

ಸನ್ಮಾರ್ಗ ವಾರ್ತೆ

ನವದೆಹಲಿ: ರೈತರು ಹೋರಾಟ ನಡೆಸುತ್ತಿರುವ ದೆಹಲಿಯ ಗಾಜಿಪುರ್ ಗಡಿಭಾಗ ಭೇಟಿ ನೀಡಲು ಗುರುವಾರ ಬೆಳಗ್ಗೆ ಹೊರಟಿದ್ದ ಡಿಎಂಕೆ, ಶಿರೋಮಣಿ ಅಕಾಲಿ ದಳ, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ 10 ವಿರೋಧ ಪಕ್ಷಗಳ 15 ಸಂಸದರನ್ನು ಪೊಲೀಸರು ತಡೆದ ಘಟನೆಯು ವರದಿಯಾಗಿದೆ.

ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಸಚಿವೆಯಾಗಿದ್ದ ಶಿರೋಮಣಿ ಅಕಾಲಿ ದಳ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಸಹ ಇಂದು ಗಾಜಿಪುರದಲ್ಲಿ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಲು ಹೊರಟಿದ್ದರು. ಆದರೆ ಪೊಲೀಸರು ಅವರನ್ನು ಬ್ಯಾರಿಕೇಡ್ ದಾಟಿ ಹೋಗಲು ಬಿಡಲಿಲ್ಲ. ಬಾದಲ್ ಅವರ ಜೊತೆಗೆ ಎನ್‌ಸಿಪಿಯ ಸುಪ್ರಿಯಾ ಸುಳೆ, ಡಿಎಂಕೆಯಿಂದ ಕನ್ನಿಮೋಳಿ, ತಿರುಚಿ ಶಿವಾ, ಟಿಎಂಸಿಯ ಸೌಗತ ರಾಯ್ ಕೂಡ ಇದ್ದರು. ಅಲ್ಲದೇ, ನ್ಯಾಷನಲ್ ಕಾನ್ಫರೆನ್ಸ್, ಆರ್‌ಎಸ್‌ಪಿ ಮತ್ತು ಐಯುಎಂಎಲ್ ನ ಸದಸ್ಯರು ಕೂಡ ನಿಯೋಗದಲ್ಲಿದ್ದರು.

ನಿನ್ನೆ ಸಂಸತ್ತಿನಲ್ಲಿ ರೈತರ ಪ್ರತಿಭಟನೆಯ ಬಗ್ಗೆ ನಡೆದ ಚರ್ಚೆಯ ವೇಳೆ ಹಲವು ವಿರೋಧ ಪಕ್ಷದ ನಾಯಕರು ಮೂರು ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಪ್ರತಿಭಟನಾ ನಿರತ ರೈತರನ್ನು ಶತ್ರುಗಳಂತೆ ಕಾಣಬೇಡಿ ಎಂಬ ಕೂಗು ಕೂಡ ಕೇಳಿ ಬಂದಿತ್ತು.