ದೇವಿಂದರ್ ಸಿಂಗ್ ಬಂಧನ: ಗಲ್ಲಿಗೇರಿಸಲ್ಪಟ್ಟ ಅಫ್ಝಲ್ ಗುರು ಈ ಹಿಂದೆ ಹೇಳಿದ್ದೇನು? ಆಗಲೇ ತನಿಖೆ ನಡೆಸಿರುತ್ತಿದ್ದರೆ ಫಲಿತಾಂಶ ಬೇರೆ ಇರುತ್ತಿತ್ತೇ?

0
2324

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ.13: ಪಾರ್ಲಿಮೆಂಟ್ ದಾಳಿ ಪ್ರಕರಣದಲ್ಲಿ ಗಲ್ಲಿಗೇರಿಸಲ್ಪಟ್ಟಿರುವ ಅಫ್ಝಲ್ ಗುರು, ಆರೋಪಿಗಳಿಗೆ ಸಹಾಯ ಮಾಡಲು ತನ್ನೊಡನೆ ಹೇಳಿದರೆಂದ ಡಿವೈಎಸ್ಪಿ ದೇವಿಂದರ್ ಸಿಂಗ್‍ರನ್ನು ಕಾಶ್ಮೀರದಲ್ಲಿ ಭಯೋತ್ಪಾದಕರೊಂಗಿರುವಾಗ ಬಂಧಿಸಲಾಗಿದ್ದು ಅವರು ಕಳೆದ ವರ್ಷ ಶೌರ್ಯ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಪಡೆದಿದ್ದರು. 2013ರಲ್ಲಿ ಅಫ್ಝಲ್ ಗುರು ಬಹಿರಂಗಪಡಿಸಿದ ವಿಷಯ ಆಧಾರದಲ್ಲಿ ತನಿಖೆ ನಡೆಸಲು ಅಂದು ತನಿಖೆ ಸಂಸ್ಥೆಗಳು ಸಿದ್ಧವಾಗಿರಲಿಲ್ಲ. ಆದರೆ ಇಂದು ಅಫ್ಝಲ್ ಗುರು ಹೇಳಿಕೆ ಪುನಃ ಚರ್ಚೆಗೆ ಬಂದಿದೆ. ಪಾರ್ಲಿಮೆಂಟು ದಾಳಿ ಪ್ರಕರಣದಲ್ಲಿ ದೇವಿಂದರ್ ಸಿಂಗ್‍ರಿಗೆ ಸಂಬಂಧ ಇದೆ ಎಂಬ ಆರೋಪದ ಕುರಿತು ತನಿಖೆ ನಡೆಸಲಾಗುವುದು ಎಂದು ಕಾಶ್ಮೀರದ ಐಜಿ ತಿಳಿಸಿದ್ದಾರೆ.

ತನ್ನನ್ನು ಸಿಕ್ಕಿಸಿ ಹಾಕಿದ್ದು ದೇವಿಂದರ್ ಸಿಂಗ್ ಎಂದು 2013ರಲ್ಲಿ ಅಫ್ಝಲ್ ಗುರು ವಕೀಲರಿಗೆ ತಿಹಾರ್ ಜೈಲಿನಿಂದ ಪತ್ರ ಬರೆದಿದ್ದ. ಇದನ್ನು ಅಫ್ಝಲ್ ಗುರುವಿಗಾಗಿ ಹಾಜರಾದ ಅಡ್ವೊಕೇಟ್ ಸುಶೀಲ್ ಕುಮಾರ್ ಬಹಿರಂಗಪಡಿಸಿದ್ದರು.
ಅವರು ನನ್ನನ್ನು ಹೂಂಹಾಮ ಪೊಲೀಸ್ ಶಿಬಿರಕ್ಕೆ ಕೊಂಡು ಹೋದರು. ಅಂದು ಕಾಶ್ಮೀರ ಸ್ಪೆಷಲ್ ಪೋರ್ಸ್‍ನಲ್ಲಿ ದೇವಿಂದರ್ ಕರ್ತವ್ಯದಲ್ಲಿದ್ದರು. ಅವರು ಮತ್ತು ಅವರ ತಂಡ ತನ್ನನ್ನು ಕ್ರೂರವಾಗಿ ಹಿಂಸಿಸಿತು. ನಗ್ನಗೊಳಿಸಿ ಮೂರು ಗಂಟೆಗಳ ಕಾಲ್ ಶಾಕ್ ನೀಡಿತು. ನಂತರ ದೇವಿಂದರ್ ಸಿಂಗ್ ಪಾರ್ಲಿಮೆಂಟ್ ದಾಳಿ ಪ್ರಕರಣದ ಆರೋಪಿಗಳಲ್ಲೊಬ್ಬನಿಗೆ (ಈತನ್ನು 2001 ಡಿಸೆಂಬರ್ 13ರಂದುಪಾರ್ಲಿಮೆಂಟ್ ದಾಳಿ ವೇಳೆ ಸುರಕ್ಷಾ ಸೇನೆ ಗುಂಡು ಹಾರಿಸಿ ಕೊಂದಿತ್ತು)  ದಿಲ್ಲಿಯಲ್ಲಿ ವಾಸ್ತವ್ಯ ಮತ್ತು ವಾಹನ ಸೌರ್ಕರ್ಯ ಮಾಡಿಕೊಡಲು ಒತ್ತಡ ಹಾಕಿದ್ದರು. ಈತನನ್ನು ದಿಲ್ಲಿಗೆ ಕರೆತಂದು ಪರಿಚಯಿಸಿದ್ದು ಅಲ್ತಾಫ್ ಎಂದು ಅಫ್ಝಲ್ ಗುರು ವಕೀಲರಿಗೆ ಕಳುಹಿಸಿದ ಪತ್ರದಲ್ಲಿ ಬರೆದಿದ್ದ. ಕಳೆದ ದಿವಸ ದೇವಿಂದರ್ ಸಿಂಗ್ ಬಂಧನ ನಡೆದಾಗ ಅವರೊಂದಿಗೆ ಹಿಝ್ಬುಲ್ ಮುಜಾಹಿದೀನ್ ಭಯೋತ್ಪಾದಕ ಅಲ್ತಾಫ್ ಕೂಡ ಇದ್ದ.

ಪಾರ್ಲಿಮೆಂಟ್ ಭಯೋತ್ಪಾದನಾ ದಾಳಿಯಲ್ಲಿ ದೇವಿಂದರ್ ಸಿಂಗ್‍ರ ಪಾತ್ರದ ಕುರಿತು ಪೊಲೀಸರಿಗೆ ಮಾಹಿತಿಯಿಲ್ಲ ಎಂದು ಕಳೆದ ದಿವಸ ಪತ್ರಿಕಾಗೋಷ್ಠಿಯಲ್ಲಿ ಐಜಿ ಹೇಳಿದ್ದರು. 2013ರಲ್ಲಿ ಅಫ್ಝಲ್ ಗುರು ಗಲ್ಲಿಗೇರಿಸಿದಾಗ ದೇವಿಂದರ್ ಸಿಂಗ್ ಪಾತ್ರ ಕುರಿತು ತನಿಖೆ ನಡೆಸಬೇಕೆನ್ನುವ ಬೇಡಿಕೆಯನ್ನು ಎತ್ತಿ ಜಮ್ಮುಕಾಶ್ಮೀರ ರಾಜಕೀಯ ಪಾರ್ಟಿಗಳು ರಂಗಪ್ರವೇಶಿಸಿದ್ದವು.

ಶನಿವಾರ ದಕ್ಷಿಣ ಕಾಶ್ಮೀರದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ದಿಲ್ಲಿಗೆ ಬರುವಾಗ ದೇವಿಂದರ್ ಸಿಂಗ್ ಬಂಧನವಾಗಿದೆ. ಜೊತೆಗೆ ಹಿಝ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಹಿತ ಇತರರು ಕಾರಿನಲ್ಲಿದ್ದರು. ಎಕೆ 47 ಬಂದೂಕು ಇವರಿಂದ ವಶಪಡಿಸಿಕೊಳ್ಳಲಾಗಿದೆ. ದೇವಿಂದರ್ ಸಿಂಗ್ ಭಯೋತ್ಪಾದಕರ ವಾಹಕನಾಗಿ ಕೆಲಸ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಮನವರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಉನ್ನತ ಪೊಲೀಸಧಿಕಾರಿ ಕಾರಿನಲ್ಲಿದ್ದರೆ ವಾಹನವನ್ನು ಚೆಕ್‍ಪೋಸ್ಟ್ ನಲ್ಲಿ ತಪಾಸಣೆ ಮಾಡುವುದಿಲ್ಲ ಎನ್ನುವುದು ತಂಡದ ಯೋಜನೆಯಾಗಿತ್ತು.

ಯಾವ ಉದ್ದೇಶದಿಂದ ತಂಡ ದಿಲ್ಲಿಗೆ ಬರುತ್ತಿತ್ತು ಎಂದು ಈವರೆಗೆ ಗೊತ್ತಾಗಿಲ್ಲ. ರಿಪಬ್ಲಿಕ್ ದಿನದಂದು ದಿಲ್ಲಿಯ ನಗರದಲ್ಲಿ ಭಯೋತ್ಪಾದನಾ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಇಂಟಲಿಜೆನ್ಸ್ ಮುನ್ನೆಚ್ಚರಿಕೆ ನೀಡಿತ್ತು. ದೇವಿಂದರ್ ಸಿಂಗ್‍ರ ಬಂಧನದ ಕುರಿತು ಪೊಲೀಸರು, ಐಬಿ, ಕ್ರೈಂ ಇನ್‍ವೆಸ್ಟಿಗೇಶನ್ ವಿಭಾಗ ರಾ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿವೆ.

ದೇವಿಂದರ್ ಸಿಂಗ್‍ರು ಈಗ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಅಪಹರಣ ತಡೆ ವಿಭಾಗದ ಮುಖ್ಯಸ್ಥನಾಗಿದ್ದಾರೆ. ವಿದೇಶದ ಪ್ರತಿನಿಧಿಗಳು ಕಾಶ್ಮೀರ ಸಂದರ್ಶಿಸಿದಾಗ ಸುರಕ್ಷಾ ಅಧಿಕಾರಿ ಎಂಬ ನೆಲೆಯಲ್ಲಿ ದೇವಿಂದರ್ ಸಿಂಗ್ ಅವರ ಜೊತೆಯಿದ್ದರು.