ದಿಯೋಬಂದ್ ನ ಉಗುರಿನ ಬಣ್ಣದ ಫತ್ವಾ: ಸುಳ್ಳನ್ನು ಹೇಗೆಲ್ಲಾ ತಯಾರಿಸುತ್ತಾರೆ ಗೊತ್ತಾ?

0
994

 

ಆಂಗ್ಲ ಮೂಲ: ಸ್ಕ್ರೋಲ್ ಡಾಟ್ ಇನ್
ಕನ್ನಡಕ್ಕೆ: ಆಯಿಷತುಲ್ ಅಫೀಫ

“ದಾರುಲ್-ಉಲೂಮ್ ದಿಯೋಬಂದ್ ಮುಸ್ಲಿಂ ಮಹಿಳೆಯರು ಉಗುರಿಗೆ ಬಣ್ಣವನ್ನು ಬಳಸುವುದು ಅನಿಸ್ಲಾಮಿಕ ಮತ್ತು ಅಕ್ರಮವೆಂದು ಫತ್ವಾ ಹೊರಡಿಸಿದೆ…. “

ನವೆಂಬರ್ 5 ರ ಬೆಳಿಗ್ಗೆ ANI ಯಿಂದ ಹೊರಟ ಈ ಟ್ವೀಟ್ ನ ಹಿನ್ನೆಲೆಯಲ್ಲಿ ವ್ಯಂಗ್ಯಗಳು ದಾರಾಳವಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೆ, ವೆಬ್ ಪತ್ರಿಕೆ ಆಲ್ಟ್ ನ್ಯೂಸ್ ಫತ್ವಾದ ಜಾಡನ್ನು ಹುಡುಕಿದಾಗ ನಕಲಿ ಸುದ್ದಿ ತಯಾರಿಕೆಯ ಭಯಾನಕ ರೂಪವೊಂದು ಬಯಲಿಗೆ ಬಂತು.

ತಪ್ಪಾದ ಉಲ್ಲೇಖ

ANI ಟ್ವೀಟಿಸಿದ ಸ್ವಲ್ಪ ಸಮಯದ ನಂತರ, ಸಾಮಾಜಿಕ ಮಾಧ್ಯಮದ ಬಳಕೆದಾರರು ಈ ಚಿತ್ರದಲ್ಲಿನ ವ್ಯಕ್ತಿಯು ಮುಫ್ತಿಯಾಗಲಿ (ಇಸ್ಲಾಂಗೆ ಸಂಬಂಧಿಸಿದ ವಿಷಯಗಳ ಕುರಿತು ಫತ್ವಾ ಅಥವಾ ಅಭಿಪ್ರಾಯವನ್ನು ಪ್ರಕಟಿಸುವ ಅಧಿಕಾರವನ್ನು ಹೊಂದಿರುವ ಧಾರ್ಮಿಕ ವಿದ್ವಾಂಸ) ಅಥವಾ ದಾರುಲ್- ಉಲೂಮ್ ದಿಯೋಬಂದ್ ಉತ್ತರ ಪ್ರದೇಶದ ಶಹನ್ಪುರ್ ಜಿಲ್ಲೆಯ ಇಸ್ಲಾಮಿಕ ಶಾಲೆಗೆ ಸಂಬಂಧಿಸಿದ ವ್ಯಕ್ತಿಯಾಗಲಿ ಅಲ್ಲವೆಂದು ಪ್ರತಿಕ್ರಿಸಿದ್ದಾರೆ.

ಆಲ್ಟ್ ನ್ಯೂಸ್ ಅದನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ದಾರುಲ್-ಉಲೂಮ್ ದಿಯೋಬಂದ್ ಗೆ ಕರೆಮಾಡಿತು. ಅವರು ಫತ್ವಾ ಬಗ್ಗೆ ಸುದ್ದಿ ನೀಡಲು ನಿರಾಕರಿಸಿದರು. ಆದರೆ ANI ಯಲ್ಲಿ ಟ್ವೀಟಿಸಿದ ವ್ಯಕ್ತಿಗೂ ನಮಗೂ ಸಂಬಂಧವಿಲ್ಲ ಎಂದು ಅವರು ದೃಢಪಡಿಸಿದರು.

, ANI ಮುಫ್ತಿ ಎಂದು ಉಲ್ಲೇಖಿಸಿದ ಇಶ್ರತ್ ಗೌರಾ ಅವರನ್ನು ಸಂಪರ್ಕಿಸಿತು. ಅವರ ಹೆಸರು ಇಸಾಕ್ ಗೌರಾ ಮತ್ತು ಅವರು ಮುಫ್ತಿಯಲ್ಲ ಮತ್ತು ದಾರುಲ್ -ಉಲೂಮ್ ನೊಂದಿಗೆ ಅವರು ಸಂಬಂಧ ಹೊಂದಿಲ್ಲವೆಂದು ತಿಳಿದುಬಂತು .ಈ ಫತ್ವಾದ ಕುರಿತು ಈ ನಾಡು / ಈ ಟಿವಿ ಉರ್ದು ಪತ್ರಿಕೆಗಳು ಬರೆದ ಕಥೆಯ ಬಗ್ಗೆ ಅಭಿಪ್ರಾಯ ಪಡೆಯಲು ANI ಇಸಾಕ್ ಗೌರಾ ರನ್ನು ಸಂಪರ್ಕಿಸಿತ್ತು ಎಂದು ಅವರು ತಿಳಿಸಿದರು. ANI ಅವರನ್ನು ತಪ್ಪಾಗಿ ಉಲ್ಲೇಖಿಸಿದೆ ಎಂದು ಅವರು ಹೇಳಿದರು.

ಆಲ್ಟ್ ನ್ಯೂಸ್ ನಂತರ ಈ ಹೆಚ್ಚುವರಿ ಮಾಹಿತಿಯೊಂದಿಗೆ ANI ಸಂಪಾದಕನ್ನು ಸಂಪರ್ಕಿಸಿತು ಮತ್ತು ANI ತ್ವರಿತವಾಗಿ ದಾರುಲ್-ಉಲೂಮ್ ದಿಯೋಬಂದ್ ನೀಡಿದ ಫತ್ವಾದಲ್ಲಿ ಮಾತನಾಡಿದ ಸೈಯದ್ ಇಶಾಕ್ ಗೌರಾ ಅವರು ದಾರುಲ್-ಉಲೂಮ್ ದಿಯೋಬಂದನ್ನು ಪ್ರತಿನಿಧಿಸುತ್ತಿಲ್ಲವೆಂದು ತಿಳಿಸಿತು.

ಆನ್ಲೈನ್ ಸೇವೆ

ಈಗ ANI ತನ್ನ ಟ್ವೀಟ್ನಲ್ಲಿ ಉಲ್ಲೇಖಿಸಿದ ವ್ಯಕ್ತಿಯ ಗುರುತನ್ನು ಸರಿಪಡಿದೆ. ಆದರೆ ದಾರುಲ್ ಉಲೂಮ್ ಈ ಕುರಿತು ಫತ್ವಾ ನೀಡಿದೆಯೇ ಎಂಬುವುದು ಪ್ರಶ್ನೆಯಾಗಿ ಬಿಟ್ಟಿದೆ. ANI ಟ್ವೀಟ್ನಲ್ಲಿ ಹೇಳಿದಂತೆ ಉಗುರಿಗೆ ಬಣ್ಣವನ್ನು ಬಳಿಯುವುದು ಅನಿಸ್ಲಾಮಿಕ ಮತ್ತು ಕಾನೂನು ಬಾಹಿರವೆಂದು ಅದು ಹೇಳಿದೆಯೇ?

ವಿಷಯ ಏನೆಂದರೆ, ಯಾರಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಮುಫ್ತಿಯಿಂದ ಫತ್ವಾ ಅಥವಾ ಅಭಿಪ್ರಾಯವನ್ನು ಪಡೆಯಬಹುದಾದ ಆನ್ಲೈನ್ ಸೇವೆಯನ್ನು ದಾರುಲ್ ಉಲೂಮ್ ಹೊಂದಿದೆ. ಆದರೆ, ಉಗುರಿನ ಬಣ್ಣದ ಫತ್ವಾವು ಆನ್ಲೈನ್ನಲ್ಲಿ ಲಭ್ಯವಿಲ್ಲ. ಹೀಗಿರುವಾಗ ಇದು ಅಸ್ತಿತ್ವದಲ್ಲಿಲ್ಲ ಅಥವಾ ಅದನ್ನು ವ್ಯಕ್ತಿಯೊಬ್ಬರು ಬರವಣಿಗೆಯ ಮೂಲಕ ಕೇಳಿರಬಹುದೆಂದು ನಮಗೆ ತೋರಿತು.

ಆದ್ದರಿಂದ, ಫತ್ವಾದ ನಕಲನ್ನು ಕೊಡುವಂತೆ ಕೇಳಲು ಆಲ್ಟ್ ನ್ಯೂಸ್ ANI ಯನ್ನು ಮತ್ತೊಮ್ಮೆ ಸಂಪರ್ಕಿಸಿತು, ಅದರ ನಂತರ ANI ತಮ್ಮ ವೆಬ್ ಸೈಟ್ ನಲ್ಲಿ ಅದನ್ನು ಪ್ರಕಟಿಸಿತು. ಆದರೆ, ಈ ಹೊಸ ಟ್ವೀಟ್ ಮೂಲ ಟ್ವೀಟ್ ಗೆ ಭಿನ್ನವಾಗಿತ್ತು. “ಉಗುರಿಗೆ ಬಣ್ಣ ಬಳಿಯುವ ಮುಸ್ಲಿಂ ಮಹಿಳೆಯರ” ವಿರುದ್ಧದ ಫತ್ವಾ ಈಗ “ನಮಾಝ್ ಅಥವಾ ಪ್ರಾರ್ಥನೆಯನ್ನು ಸಮರ್ಪಿಸುವ ಸಮುದಾಯದ ಪುರುಷರು ಮತ್ತು ಸ್ತ್ರೀಯರು ಉಗುರಿಗೆ ಬಣ್ಣವನ್ನು ಬಳಿಯುವ ” ವಿರುದ್ಧ ಫತ್ವಾ ಎನಿಸಿಕೊಂಡಿತು. .

ಫತ್ವಾದ ಅಧಿಕೃತ ವ್ಯಾಖ್ಯಾನವೇನೆಂದರೆ, “ಉಗುರಿಗೆ ಬಣ್ಣವನ್ನು ಬಳಿಯಲು ಅನುಮತಿ ಇದೆಯೇ? ಸಮಾರಂಭಗಳು ಮತ್ತು ವಿವಾಹಗಳಿಗೆ ಹೋಗುವಾಗ ಅನೇಕ ಮಹಿಳೆಯರು ಉಗುರಿಗೆ ಬಣ್ಣವನ್ನು ಬಳಿಯುತ್ತಾರೆ. ಬಹಳಷ್ಟು ಮಹಿಳೆಯರು ಉಗುರನ್ನು ಬೆಳೆಸುತ್ತಾರೆ. ಪುರುಷರು ಮತ್ತು ಮಹಿಳೆಯರಿಗೆ ಉಗುರುಗಳನ್ನು ಬೆಳೆಸಲು ಮತ್ತು ಉಗುರಿಗೆ ಬಣ್ಣವನ್ನು ಬಳಿಯಲು ಅನುಮತಿ ಇದೆಯೇ? “

ಹೀಗೆ ಮುಜಾಫ್ಫರ್ ನಗರದ ಮೊಹಮ್ಮದ್ ತುಫೈಲ್ ಪ್ರಶ್ನೆ ಕೇಳಿದ್ದರು .

ಇದಕ್ಕೆ ಪ್ರತಿಕ್ರಿಯೆ ಹೀಗಿದೆ: “ಹೌದು, ಅವರು ಉಗುರಿಗೆ ಯಾವುದೇ ಅಶುದ್ಧ

ವಸ್ತುಗಳನ್ನು ಹೊಂದಿರದ ಬಣ್ಣವನ್ನು ಬಳಿಯಬಹುದು. ಇದಲ್ಲದೆ, ಉಗುರಿಗೆ ಬಣ್ಣವನ್ನು ಬಳಿಯುವ ಕ್ರಿಯೆ ಪದರವನ್ನು ಸೃಷ್ಟಿಸುತ್ತದೆಯಾದ್ದರಿಂದ, ಅದನ್ನು ಸ್ವಚ್ಛಗೊಳಿಸುವಾಗ ಉಗುರಿನವರೆಗೆ ನೀರು ತಲುಪುವುದಿಲ್ಲ. ಅದನ್ನು ತೆಗೆಯದ ಹೊರತು ವುಝು (ನಾಮಜ್ ಗೆ ಮುಂಚಿತವಾಗಿ ನಡೆಯುವ ಅಂಗಶುದ್ಧಿ ) ಅಥವಾ ಘುಸ್ಲ್ (ದೇಹವನ್ನುಶುದ್ದೀಕರಿಸುವ ಸ್ನಾನ )ಪರಿಪೂರ್ಣವಾಗದು.ಆದ್ದರಿಂದ ಈ ಪದರವನ್ನು ವುಜು ಅಥವಾ ಘುಸ್ಲ್ ಗೆ ಮುಂಚಿತವಾಗಿ ತೆಗೆದುಹಾಕುವುದು ಅವಶ್ಯಕ. ಪುರುಷರು ಮತ್ತು ಮಹಿಳೆಯರು 40 ದಿನಗಳ ವರೆಗೆ ಉಗುರುಗಳನ್ನು ಬೆಳೆಸಬಹುದು ಮತ್ತು ಅದರ ನಂತರ ನೀವು ಉಗುರುಗಳನ್ನು ಕತ್ತರಿಸಬೇಕು .. “

ANI ನ ಟ್ವೀಟ್ನಲ್ಲಿ ಹೇಳಿದಂತೆ ಉಗುರಿಗೆ ಬಣ್ಣವನ್ನು ಬಳಿಯುವುದು ಅನಿಸ್ಲಾಮಿಕ ಅಥವಾ ಅಕ್ರಮವೆಂದು ಫತ್ವಾವು ವಿವರಿಸುವುದಿಲ್ಲ. ANI ನ ಆನ್ಲೈನ್ ಕಥೆಯ ಶೀರ್ಷಿಕೆಯನ್ನು”ಹೊಸ ಫತ್ವಾ: ಉಗುರಿಗೆ ಬಣ್ಣ ಬಳಿಯಬಾರದು”ನಿಂದ ”ಉಗುರಿಗೆ ಬಣ್ಣ ಬಳಿದು ನಮಾಝ್ ಮಾಡುವ ವಿರುದ್ಧ ಫತ್ವಾ”ವಾಗಿ ತಿದ್ದುಪಡಿ ಮಾಡಿದೆ.

ತಯಾರಿಸಿದ ಕಥೆ

ಫತ್ವಾ ವಾಸ್ತವವಾಗಿ ಅಸ್ತಿತ್ವದಲ್ಲಿಲ್ಲವೆಂದು ದೃಢಪಡಿಸಿದ ನಂತರ, ಪ್ರಶ್ನೆಗೆ ಉತ್ತರವನ್ನು ನಾವು ಕಂಡುಕೊಂಡೆವು :

ಸಾರ್ವಜನಿಕ ಕ್ಷೇತ್ರದಲ್ಲಿಲ್ಲದ ಫತ್ವಾವನ್ನು ಇಟಿವಿ ಹೇಗೆ ಬಳಸಿತು? ಫತ್ವಾವು ಕೈಬರಹದಲ್ಲಿತ್ತು ಮತ್ತು ವೆಬ್ ಸೈಟ್ ನಲ್ಲಿ ಪ್ರಕಟಿಸಿರಲಿಲ್ಲ .ಇದು ವ್ಯಕ್ತಿಯೊಬ್ಬರು ಬಯಸಿದ ಸ್ಪಷ್ಟೀಕರಣವಾಗಿದ್ದರೆ, ಅದು ಮಾಧ್ಯಮಕ್ಕೆ ಹೇಗೆ ಸಿಕ್ಕಿತು? ಇಲ್ಲಿ ಕತೆಯು ಸ್ಪಷ್ಟವಾಗುತ್ತದೆ

ಈ ವಿಷಯದ ಬಗ್ಗೆ ದಾರುಲ್-ಉಲುಮ್ ಅಭಿಪ್ರಾಯವನ್ನು ಕೇಳಿದ್ದ ವ್ಯಕ್ತಿಯನ್ನು ಸಂಪರ್ಕಿಸಲು ಆಲ್ಟ್ ನ್ಯೂಸ್ ನಿರ್ಧರಿಸಿತು. ಫತ್ವಾವು ಮೊಹಮ್ಮದ್ ತುಫೈಲ್ ಎಂಬ ಹೆಸರನ್ನು ಮತ್ತು ದೂರವಾಣಿ ಸಂಖ್ಯೆಯನ್ನು ಹೊಂದಿತ್ತು . ಟ್ರೂ ಕಾಲರ್ ನಲ್ಲಿ ಸಂಖ್ಯೆಯನ್ನು ಹುಡುಕಿದಾಗ ಸೇವೆಯಲ್ಲಿರುವ ಹೆಸರು ತಸ್ಲೀಮ್ ಖುರೇಷಿ ಎಂದು ಸೂಚಿಸಿತು

ಆಲ್ಟ್ ನ್ಯೂಸ್ ಈ ಸಂಖ್ಯೆಗೆ ಕರೆಮಾಡಿದಾಗ , ತಸ್ಲೀಮ್ ಖುರೇಷಿ ಎಂಬ ವ್ಯಕ್ತಿ ಉತ್ತರಿಸಿದರು. ಸಂಭಾಷಣೆಯ ಸಂದರ್ಭದಲ್ಲಿ, ಖುರೇಷಿ ಇನಾಡು / ಇಟಿವಿ ಉರ್ದು ಮಾಧ್ಯಮದೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರು ಈ ಕತೆಯನ್ನು ಮಾಡಲು ಸಂಬಂಧಿಕರ ಹೆಸರಿನಲ್ಲಿ ಫತ್ವಾವನ್ನು ಕೇಳಿದ್ದರು ಎಂದು ನಾವು ಪತ್ತೆಹಚ್ಚಿದೆವು . ಅವರು ಪತ್ರಕರ್ತರಾಗಿ ದಾರುಲ್-ಉಲೂಮ್ ಅನ್ನು ಸಂಪರ್ಕಿಸಲಿಲ್ಲ ಬದಲಾಗಿ ಅವರು ತಮ್ಮ ಸಂಬಂಧಿಯ ಹೆಸರಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದರು.
ಖುರೇಷಿ ಅವರ ಇತರ YouTube ಚಾನಲ್ ಮತ್ತು Instagram ಖಾತೆಯಲ್ಲಿ – ಮಹಿಳೆಯರು ವಾಕಿಂಗ್ ಮಾಡಬಹುದಾ? ಮದರಂಗಿ ಹಚ್ಚಲು ಮಹಿಳೆ ಮಾರುಕಟ್ಟೆಗೆ ಹೋಗಬಹುದೇ ಎಂಬ ಫತ್ವಾ ಕಥೆಗಳಿಗೆ ಸಂಬಂಧಿಸಿದ ಕೊಂಡಿಗಳನ್ನು ನೀವು ಕಾಣಬಹುದು.

ನಾವು ಖುರೇಷಿ ಅವರನ್ನು ಪ್ರಶ್ನಿಸಿದಾಗ, “ನಾನು ಪತ್ರಕರ್ತ.” ನೆಂದು ಖುರೇಷಿ ಆಲ್ಟ್ ನ್ಯೂಸ್ ಗೆ ತಿಳಿಸಿದರು.”ಫತ್ವಾ ಕೇಳದಂತೆ ನನ್ನನ್ನು ನಿಷೇಧಿಸುವ ಯಾವುದೇ ನಿಯಮವಿದೆಯೇ? ನಾನು ಮುಸ್ಲಿಂ ಅಲ್ಲವೇ? ” ಎಂದು ಪ್ರಶ್ನಿಸಿದ ಆತ ANI ತನ್ನ ಕಥೆಯನ್ನು ತಪ್ಪಾಗಿ ವರದಿ ಮಾಡಿದೆಯೆಂದು ಪ್ರತಿಪಾದಿಸಿದರು.

ಒಂದು ಫತ್ವಾ ಯಾವಾಗಲೂ ದೊಡ್ಡ ಕಥೆಯನ್ನು ಸೃಷ್ಟಿಸುತ್ತದೆ ಮತ್ತು ಧರ್ಮದ ಮೇಲೆ ದೇಶದ ಗಮನವನ್ನು ಕೇಂದ್ರೀಕರಿಸಲು ಅವಕಾಶವನ್ನು ನೀಡುತ್ತದೆ. ಈ ಪತ್ರಕರ್ತ ಮಾಡಿದ್ದು ಇದನ್ನೇ.