ನಟ ವಿಜಯ್ ಸೇತುಪತಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಹಿನ್ನೆಲೆ: ಹೇಡಿಗಳು ಮಹಿಳೆಯರು, ಮಕ್ಕಳ ವಿರುದ್ಧ ಹೋರಾಡುತ್ತಾರೆ- ಕನಿಮೊಳಿ

0
495

ಸನ್ಮಾರ್ಗ ವಾರ್ತೆ

ಚೆನ್ನೈ,ಅ.20: ತಮಿಳು ನಟ ವಿಜಯ್ ಸೇತುಪತಿ ಪುತ್ರಿಗೆ ಅತ್ಯಾಚಾರ ಬೆದರಿಕೆಯೊಡ್ಡಲಾದ ಘಟನೆಯನ್ನು ಡಿಎಂಕೆ ಮಹಿಳಾ ವಿಭಾಗದ ಕಾರ್ಯದರ್ಶಿ ರಾಜ್ಯಸಭಾ ಸದಸ್ಯೆ ಕನಿಮೊಳಿ ಕಟುವಾಗಿ ಟೀಕಿಸಿದ್ದಾರೆ. ವಿಜಯ್ ಮಗಳಿಗೆ ಬೆದರಿಕೆ ಹಾಕಿದ್ದು ಕ್ರೌರ್ಯ ಮಾತ್ರವಲ್ಲ ನಮ್ಮ ಸಮಾಜದ ದೃಢತೆಗೆ ತುಂಬ ಅಪಾಯಕಾರಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಕ್ಕಳು ಮತ್ತು ಮಹಿಳೆಯರ ವಿರುದ್ಧ ಭಯೋತ್ಪಾದಕರ ಹೋರಾಟವಿದೆ. ಬೆದರಿಕೆ ಹಾಕಿರುವುದು ಲಜ್ಜಕರವಾಗಿದೆ. ಮಹಿಳೆಯರು ಮತ್ತು ಮಕ್ಕಳನ್ನು ಟ್ರೋಲ್ ಮಾಡುವವರನ್ನು ಶಿಕ್ಷೆಗೊಳಪಡಿಸಬೇಕು. ಅಪರಾಧಿಗಳ ವಿರುದ್ಧ ಕಠಿಣ ಕ್ರಮವನ್ನು ಪೊಲೀಸರು ಜರಗಿಸಬೇಕೆಂದು ಕನಿಮೊಳಿ ಆಗ್ರಹಿಸಿದರು.

ವಿಜಯ್ ಸೇತುಪತಿಯ ಪುತ್ರಿಯನ್ನು ಅತ್ಯಾಚಾರ ಮಾಡುವುದಾಗಿ ರಿತ್ವಿಕ್ ಎಂಬಾತ್ ಟ್ವೀಟ್ ಮಾಡಿ ಬೆದರಿಕೆ ಹಾಕಿದ್ದಾನೆ. ಮುತ್ತಯ್ಯ ಮುರಳೀಧರನ್‍ರ ಜೀವನಾಧಾರಿತ 800 ಎಂಬ ಸಿನೆಮಾದಿಂದ ನಟ ಹಿಂದೆ ಸರಿದ ನಂತರ ಟ್ವಿಟರ್ ಮೂಲಕ ಬೆದರಿಕೆ ಬಂದಿದೆ.

ಶ್ರೀಲಂಕಾದಲ್ಲಿ ತಮಿಳರು ಅನುಭವಿಸುತ್ತಿರುವ ಸಂಕಷ್ಟಕರ ಜೀವನವನ್ನು ವಿಜಯ್ ಸೇತುಪತಿ ಅರ್ಥಮಾಡಿಕೊಳ್ಳಲು ಅವರ ಪುತ್ರಿಯನ್ನು ಅತ್ಯಾಚಾರ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು. ಗಾಯಕಿ ಚಿನ್ಮಯಿ ಬೆದರಿಕೆ ಸಂದೇಶ ಬಂದ ಅಕೌಂಟಿನ ಕುರಿತು ಪೊಲೀಸರಿಗೆ ದೂರು ನೀಡಿದ್ದರು.

ಈ ಹಿಂದೆ ಧೋನಿ ಪುತ್ರಿಯ ವಿರುದ್ಧ ಇಂತಹುದೇ ಅತ್ಯಾಚಾರ ಬೆದರಿಕೆಯನ್ನು ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.