ಆತ್ಮ ನಿರ್ಭರವನ್ನು ನೋಡಿ ನಗುತ್ತಿರುವ ಪ್ರತಿಮೆಗಳು

0
208

ಸನ್ಮಾರ್ಗ ಸಂಪಾದಕೀಯ

ಪ್ರಧಾನಿ ನರೇಂದ್ರ ಮೋದಿಯವರ ಬೂಟಾಟಿಕೆಯನ್ನು 11ನೇ ಶತಮಾನದ ಸಂತ ರಾಮಾನುಜಾಚಾರ್ಯ ತೆರೆದಿಟ್ಟಿದ್ದಾರೆ. 2018ರ ಕೊನೆಯಲ್ಲಿ ಇದೇ ಕೆಲಸವನ್ನು ಈ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರೂ ಮಾಡಿದ್ದರು. 3 ಸಾವಿರ ಕೋಟಿ ರೂಪಾಯಿಯನ್ನು ಖರ್ಚು ಮಾಡಿ ನಿರ್ಮಿಸಲಾದ ಸರ್ದಾರ್ ಪಟೇಲ್ ಪ್ರತಿಮೆಯನ್ನು 2018ರ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು. ಅದನ್ನು ಸ್ಥಾಪಿಸಿದ್ದು ಗುಜರಾತ್‌ನಲ್ಲಿ. 182 ಮೀಟರ್ ಎತ್ತರದ ಈ ಪ್ರತಿಮೆಯು ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆಯಾಗಿ ಗುರುತಿಸಿಕೊಂಡಿದೆ. ಅಮೇರಿಕದ ಸ್ಟ್ಯಾಚ್ಯು ಆಫ್ ಲಿಬರ್ಟಿ ಪ್ರತಿಮೆಯ ಎರಡುಪಟ್ಟು ಮತ್ತು ಬ್ರೆಝಿಲ್‌ನ ಕ್ವೆಸ್ಟ್ ಇನ್ ರಿಡೀಮರ್‌ನ ನಾಲ್ಕು ಪಟ್ಟು ಎತ್ತರ ಈ ಪ್ರತಿಮೆಯ ನಿರ್ಮಾಣಕ್ಕಿಂತ ಮೊದಲೇ ಪ್ರಧಾನಿಯವರು ಆತ್ಮನಿರ್ಭರ್‌ನ ಬಗ್ಗೆ ಉಪದೇಶ ನೀಡುತ್ತಲೇ ಇದ್ದರು. ಚೀನಾದ ವಿರುದ್ಧ ಆರೋಪಗಳನ್ನು ಹೊರಿಸುತ್ತಲೂ ಇದ್ದರು. ಚೀನಿ ವಸ್ತುಗಳ ಬಹಿಷ್ಕಾರಕ್ಕೆ ಮೋದಿ ಬೆಂಬಲಿತ ಪರಿವಾರವು ಈ ದೇಶದಲ್ಲಿ ಕರೆ ಕೊಡುತ್ತಾ, ದೇಶೀಯ ವಸ್ತುಗಳ ಬಳಕೆಯನ್ನು ಉತ್ತೇಜಿಸುತ್ತಾ ಸಾಗುತ್ತಲೂ ಇತ್ತು. ಗಡಿ ತಂಟೆಯನ್ನು ಮಾಡುತ್ತಾ ಮತ್ತು ಭಾರತದ ನೆರೆಯ ರಾಷ್ಟ್ರಗಳಿಗೆ ಭಾರತ ವಿರೋಧಿ ನಿಲುವಿಗೆ ಕುಮ್ಮಕ್ಕು ಕೊಡುತ್ತಾ ಸಾಗುತ್ತಿರುವ ಚೀನಾದ ಬಗ್ಗೆ ಪ್ರಧಾನಿ ಒಂದು ಕಡೆ ಭಾಷಣ ಮಾಡುತ್ತಲೇ ಇದ್ದ ಈ ಸಂದರ್ಭದಲ್ಲೇ ಸರ್ದಾರ್ ಪಟೇಲ್‌ರ ಬೃಹತ್ ಪ್ರತಿಮೆಯ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ತರಿಸುತ್ತಿದ್ದುದು ಚೀನಾದಿಂದಲೇ ಎಂಬುದನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಬಹಿರಂಗ ಪಡಿಸಿತ್ತು. ಅಲ್ಲದೇ, ಈ ಪ್ರತಿಮೆ ನಿರ್ಮಾಣದ ಬಿಡ್ ಅನ್ನು ಪಡಕೊಂಡಿದ್ದ ಎಲ್‌ಆಂಡ್‌ಟಿ ಕಂಪೆನಿಯೇ ಸ್ವತಃ ಈ ಸತ್ಯವನ್ನು ಒಪ್ಪಿಕೊಂಡಿರುವುದಾಗಿಯೂ ಪತ್ರಿಕೆಯ ವರದಿಯಲ್ಲಿ ಹೇಳಲಾಗಿತ್ತು. ಆದ್ದರಿಂದಲೇ,

2018ರ ಕೊನೆಯಲ್ಲಿ ಪ್ರತಿಮೆ ಉದ್ಘಾಟನೆಯ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈ ಬಗ್ಗೆ ಪ್ರಧಾನಿಯ ಕಾಲೆಳೆದಿದ್ದರು. ಇದೀಗ ಹೈದರಾಬಾದ್‌ನಲ್ಲಿ ಉದ್ಘಾಟಿಸಲಾದ ರಾಮಾನುಜಾಚಾರ್ಯರ ಪ್ರತಿಮೆಯ ವಿಷಯದಲ್ಲೂ ಪ್ರಧಾನಿಯ ಈ ಚೀನಾ ಪ್ರೇಮ ಕಾಣಿಸಿಕೊಂಡಿದೆ. ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ 66 ಮೀಟರ್ ಎತ್ತರದ ಪ್ರತಿಮೆಯನ್ನು ಚೀನಾದ ಕಂಪೆನಿ ನಿರ್ಮಾಣ ಮಾಡಿದೆ ಎಂಬ ವರದಿಯಿದೆ. 2015ರಲ್ಲಿ ಈ ಪ್ರತಿಮೆ ನಿರ್ಮಾಣಕ್ಕೆ ಬಿಡ್ ಕರೆಯಲಾಗಿತ್ತು. ವಿಶೇಷ ಏನೆಂದರೆ,
ಈ ಬಿಡ್‌ನಲ್ಲಿ ಭಾರತೀಯ ಕಂಪೆನಿಗಳೂ ಭಾಗವಹಿಸಿದ್ದುವು. ಆದರೆ, ಅಂತಿಮವಾಗಿ ಬಿಡ್‌ನಿಂದ ಭಾರತೀಯ ಕಂಪೆನಿಗಳು ಹೊರಬಿದ್ದುವಲ್ಲದೇ ಚೀನಾ ಮೂಲದ ಆರೋನನ್ ಕಾರ್ಪೊರೇಶನ್ ಎಂಬ ಕಂಪೆನಿ ಪ್ರತಿಮೆ ನಿರ್ಮಾಣದ ಬಿಡ್ ಅನ್ನು ಪಡಕೊಂಡಿತು ಎಂದು ವರದಿಯಾಗಿದೆ. ಅಲ್ಲದೇ, ಈ ಪ್ರತಿಮೆಯನ್ನು ಸಂಪೂರ್ಣವಾಗಿ ಚೀನಾದಲ್ಲೆ ತಯಾರಿಸಲಾಗಿದ್ದು, ಬಳಿಕ 1600 ಭಾಗಗಳಾಗಿ ಪ್ರತ್ಯೇಕಿಸಿ ಭಾರತಕ್ಕೆ ತಂದು ಮರು ಜೋಡಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಈ ಜೋಡಣಾ ಕಾರ್ಯ ಎಷ್ಟು ಕಠಿಣವಾಗಿತ್ತೆಂದರೆ, ಸುಮಾರು 15ರಿಂದ 20 ತಿಂಗಳುಗಳು ಇದಕ್ಕೆ ಬೇಕಾದುವು ಎಂಬ ಮಾಹಿತಿಯೂ ಇದೆ. ಅಂದಹಾಗೆ,

ಒಂದು ಕಡೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗ ಪರಿವಾರವು ಸ್ವದೇಶಿ ಮಂತ್ರವನ್ನು ಸಿಕ್ಕಸಿಕ್ಕಲೆಲ್ಲ ಜಪಿಸುತ್ತಾ ಸಾಗುತ್ತಿದೆ. ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಸಂಘರ್ಷದ ಬಳಿಕವಂತೂ ಈ ಜಪ ಸಾವಿರಾರು ಪಟ್ಟು ಹೆಚ್ಚಿದೆ. ಭಾರತೀಯ ಭೂಭಾಗವನ್ನು ಚೀನಾ ಆಕ್ರಮಿಸಿಕೊಳ್ಳುತ್ತಿದೆ ಎಂಬ ವರದಿಗಳು ಮತ್ತು ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಚೀನಾ ತನ್ನದೇ ಆದ ಹೆಸರನ್ನಿಟ್ಟಿರುವ ಬಗ್ಗೆಯೂ ಈಗಾಗಲೇ ವರದಿಗಳು ಬಂದಿವೆ. ಭಾರತದ ಭೂಪ್ರದೇಶದಲ್ಲಿ ಗ್ರಾಮಗಳನ್ನು ನಿರ್ಮಿಸಿದ ಉಪಗ್ರಹ ಚಿತ್ರಗಳೂ ಈ ಹಿಂದೆ ಬಹಳ ಸುದ್ದಿ ಮಾಡಿತ್ತು. ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದ ಯುವಕನನ್ನು ಚೀನಾ ಸೇನೆ ಅಪಹರಿಸಿಕೊಂಡು ಹೋಗಿ ಆತನಿಗೆ ಚಿತ್ರಹಿಂಸೆ ಕೊಟ್ಟು ಕೆಲವು ದಿನಗಳ ಬಳಿಕ ಮರಳಿಸಿದ್ದೂ ನಡೆದಿದೆ. ಹಾಗಂತ,

ರಾಮಾನುಜಾಚಾರ್ಯರ ಪ್ರತಿಮೆ ನಿರ್ಮಾಣದ ಬಿಡ್‌ನ ವೇಳೆ ಗಲ್ವಾನ್ ಸಂಘರ್ಷವಾಗಲಿ, ಅರುಣಾಚಲ ಪ್ರದೇಶದ ಸ್ಥಳಗಳಿಗೆ ತನ್ನದೇ ಹೆಸರನ್ನಿಟ್ಟ ಬೆಳವಣಿಗೆಯಾಗಲಿ ಅಥವಾ ಯುವಕನ ಅಪಹರಣವಾಗಲಿ ನಡೆದಿರಲಿಲ್ಲ ಎಂದು ವಾದಿಸಬಹುದಾದರೂ ಚೀನಾದ ಮೇಲೆ ಅಸಹನೆಯನ್ನು ಮೋದಿ ಅಧಿಕಾರಕ್ಕೆ ಬರುವ ಮೊದಲೇ ಬಿಜೆಪಿ ವ್ಯಕ್ತಪಡಿಸುತ್ತಲೇ ಇತ್ತು. ಅಧಿಕಾರಕ್ಕೆ ಬಂದ ಬಳಿಕವಂತೂ ಈ ಅಸಹ ನೆಯ ಮಟ್ಟ ನೂರಾರು ಪಟ್ಟು ವೃದ್ಧಿಸಿತು. ಬಿಜೆಪಿ ಬೆಂಬಲಿಗರು ಪಾಕ್ ಮತ್ತು ಚೀನಾ ಎಂಬ ಹೆಸರನ್ನು ದಿನದಲ್ಲಿ ತಲೆಚಿಟ್ಟು ಹಿಡಿಯುವಷ್ಟು ಬಾರಿ ಜಪಿಸುತ್ತಿದ್ದರು. ಚೀನಾ ವಸ್ತುಗಳ ಬಹಿಷ್ಕಾರ, ಪಟಾಕಿಗಳ ಬಹಿಷ್ಕಾರ ಇತ್ಯಾದಿಗಳಿಗೆ ಕರೆ ಕೊಡುತ್ತಲೂ ಬಂ ದಿದ್ದರು. ಇದಕ್ಕೆ ಪೂರಕವಾಗಿ ಮೋದಿ ಸರ್ಕಾರವೇ ಚೀನಾದ ಸುಮಾರು 60ಕ್ಕಿಂತಲೂ ಅಧಿಕ ಆ್ಯಪ್‌ಗಳ ಮೇಲೆ ನಿಷೇಧವನ್ನು ಹೇರಿತು. ಅಲ್ಲದೇ, ಸ್ವದೇಶಿ ಚಿಂತನೆ, ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ ಇತ್ಯಾದಿ ಸ್ಲೋಗನ್‌ಗಳನ್ನು ಪ್ರಧಾನಿ ನರೇಂದ್ರ ಮೋ ದಿಯವರು ಚಾಲ್ತಿಗೂ ತಂದರು. ಮುಖ್ಯವಾಗಿ ಈ ಎಲ್ಲ ಸ್ಲೋಗನ್‌ಗಳ ಗುರಿ ಚೀನಾವೇ ಆಗಿತ್ತು. ಭಾರತ ವಿರೋಧಿ ಧೋರಣೆ ತಳೆ ದಿರುವ ಚೀನಾಕ್ಕೆ ಬುದ್ಧಿ ಕಲಿಸುವುದಕ್ಕೆ ಪ್ರಧಾನಿ ಮೋದಿ ಚಾಣಾಕ್ಷ ನೀತಿಯನ್ನು ಕೈಗೊಂಡಿದ್ದಾರೆ ಎಂಬ ಪುಳಕ ಅವರ ಅಭಿಮಾನಿಗಳ ಲ್ಲಿತ್ತು. ಇದೀಗ ಆ ಪುಳಕ ಮತ್ತು ಅಭಿಮಾನಗಳಿಗೆ ರಾಮಾನುಜಾಚಾರ್ಯರ ಪ್ರತಿಮೆ ಸಂಪೂರ್ಣ ಎಳ್ಳುನೀರು ಬಿಟ್ಟಿದೆ. ಈ ಪ್ರತಿಮೆಯನ್ನು ತಯಾರಿಸಿದ್ದು ಚೀನಾದ ಕಂಪೆನಿ ಎಂಬುದು ಬಯಲಾಗುತ್ತಿದೆ. ಅಷ್ಟಕ್ಕೂ,
ಸರ್ದಾರ್ ಪಟೇಲ್ ಆಗಲಿ, ರಾಮಾನುಜಾಚಾರ್ಯ ಆಗಲಿ ಚೀನಾದವರಲ್ಲ. ಪಟೇಲ್ ಗೃಹ ಸಚಿವರಾಗಿದ್ದುದು ಭಾರತದಲ್ಲಿ. ರಾಮಾನುಜಾಚಾರ್ಯ ತನ್ನ ಧಾರ್ಮಿಕ ಸುಧಾರಣಾ ಅಭಿಯಾನ ಕೈಗೊಂಡಿರುವುದೂ ಭಾರತದಲ್ಲೇ. ಅಪ್ಪಟ ಭಾರತೀಯ ವ್ಯಕ್ತಿತ್ವಗಳಾದ ಈ ಇಬ್ಬರ ಪ್ರತಿಮೆಗಳನ್ನು ತಯಾರಿಸುವ ಸಾಮರ್ಥ್ಯ ಭಾರತದ ಯಾವ ಕಂಪೆನಿಗಳಿಗೂ ಇಲ್ಲವೇ? ಒಂದು ಪ್ರತಿಮೆ ನಿರ್ಮಾಣಕ್ಕೂ ನಾವೇಕೆ ಚೀನಾವನ್ನು ಅವಲಂಬಿಸಬೇಕು? ಇದು ಅಸಾಧ್ಯ ಎಂದಾದರೆ ಮತ್ತೇಕೆ ಚೀನಿ ವಸ್ತುಗಳ ಬಹಿಷ್ಕಾರದ ಕೂಗನ್ನು ಕೂಗಬೇಕು? ಆತ್ಮ ನಿರ್ಭರ, ಮೇಕ್ ಇನ್ ಇಂಡಿಯಾ ಸ್ಲೋಗನ್‌ಗಳ ಅರ್ಥವೇನು? ಜನರನ್ನು ಪುಳಕಗೊಳಿಸುವ ಕಾರಣಕ್ಕಾಗಿಯೇ ಇಂಥ ಕಾನ್ಸೆಪ್ಟ್ಗಳನ್ನು ಜನರ ನಡುವೆ ಚಾಲ್ತಿಗೆ ತರಲಾಗುತ್ತಿದೆಯೇ? ಹೇಳುವುದೊಂದು, ಮಾಡುವುದೊಂದು ಎಂಬ ನೀತಿಯಿಂದ ಈ ದೇಶದ ಜನರನ್ನು ಎಲ್ಲಿಯವರೆಗೆ ಮೋಸಗೊಳಿಸಬಹುದು? ನಿಜವಾಗಿ,

ಬೆನ್ನು ತಿರುಗಿಸಿ ಬದುಕುವ ಕಾಲ ಇದಲ್ಲ. ಜಗತ್ತೇ ಒಂದು ಕುಟುಂಬವಾಗಿರುವ ಈ ದಿನಗಳಲ್ಲಿ ಯಾವ ರಾಷ್ಟçವೂ ಇನ್ನೊಂದಕ್ಕೆ ಅ ನ್ಯವಲ್ಲ. ಅದರಲ್ಲೂ ನೆರೆಯ ರಾಷ್ಟ್ರಗಳನ್ನು ಬಹಿಷ್ಕರಿಸಿಕೊಂಡು ಆಡಳಿತ ನಡೆಸುವುದು ಸುಲಭ ಸಾಧ್ಯವಲ್ಲ. ಜಗತ್ತಿಗೆ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುವ ರಾಷ್ಟ್ರಗಳ ಪೈಕಿ ಚೀನಾ ಜಾಗತಿಕವಾಗಿಯೇ ಅತ್ಯಂತ ಮುಂದಿದೆ. ಅತ್ಯಂತ ಅಗ್ಗದ ದರದಲ್ಲಿ ಈ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡುವ ಅದರ ಸಾಮರ್ಥ್ಯವೇ ಇದಕ್ಕೆ ಕಾರಣ. ಚೀನಾದ ಅತಿಕ್ರಮಣ ನೀತಿಯನ್ನು ಪ್ರಶ್ನಿಸುವುದು ಬೇರೆ, ಕೇವಲ ಜನರನ್ನು ಉನ್ಮಾದಗೊಳಿಸುವ ಉದ್ದೇಶದಿಂದ ಚೀನಾ ವಿರೋಧಿ ಸ್ಲೋಗನ್‌ಗಳನ್ನು ಘೋಷಿಸುತ್ತಾ ಸಾಗುವುದು ಬೇರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ದಕ್ಕೂ ಪೋಷಿಸಿಕೊಂಡು ಬಂದಿರುವುದು ಈ ಉನ್ಮಾದ ನೀತಿಯನ್ನೇ. ಪೊಳ್ಳು ಉನ್ಮಾದವನ್ನು ದೇಶದಲ್ಲಿ ಬಿತ್ತಿ ರಾಷ್ಟ್ರ ಪ್ರೇಮದ ಹುಸಿ ಪೋಷಾಕು ತೊಡುವುದರ ಹೊರತು ಮೋದಿ ಸರ್ಕಾರ ಆತ್ಮನಿರ್ಭರ್ ಭಾರತಕ್ಕೆ ಬೇಕಾದ ಏನನ್ನೂ ಮಾಡಿಲ್ಲ. ದೇಶದಲ್ಲಿ ಏನೇ ಸಮಸ್ಯೆ ಎದುರಾದರೂ ಪಾಕ್ ಮತ್ತು ಚೀನಾದತ್ತ ಕೈ ತೋರಿಸುತ್ತಾ ಮತ್ತು ಮೇಕ್ ಇನ್ ಇಂಡಿಯಾ, ಸ್ವದೇಶಿ ಮಂತ್ರಗಳನ್ನು ಜಪಿಸುತ್ತಾ ಜನರ ಭಾವನೆಗಳೊಂದಿಗೆ ಆಡುವುದನ್ನೇ ಈವರೆಗೂ ಮಾಡುತ್ತಾ ಬಂದಿದೆ. ಮೋದಿ ಸರ್ಕಾರಕ್ಕೆ ಚೀನಾ ಕೂಡಾ ಪಾಕ್‌ನಂತೆಯೇ ಒಂದು ರಾಜಕೀಯ ಅಸ್ತ್ರ. ಆಗಾಗ ಈ ಎರಡು ಅಸ್ತ್ರಗಳನ್ನು ಝಳಪಿಸುತ್ತಾ ತನ್ನ ವೈಫಲ್ಯಗಳನ್ನು ಅಡಗಿಸುವುದು ಅದರ ನೀತಿ. ಒಂದುರೀತಿಯಲ್ಲಿ,
ಚೀನಾ ಮತ್ತು ಪಾಕಿಸ್ತಾನ ನೆರೆ ರಾಷ್ಟ್ರವಾಗಿರುವುದಕ್ಕೆ ಈ ಸರ್ಕಾರ ಒಳಗೊಳಗೇ ಆನಂದ ಪಡುತ್ತಿರಬಹುದು. ಸಂಕಷ್ಟ ಎದುರಾದಾಗಲೆಲ್ಲ ಮತ್ತು ಚುನಾವಣೆ ಬಂದಾಗಲೆಲ್ಲ ಈ ಎರಡು ರಾಷ್ಟ್ರಗಳು ಬಹಳವೇ ಪ್ರಯೋಜನಕಾರಿ. ಸರ್ದಾರ್ ಪಟೇಲ್ ಮತ್ತು ರಾಮಾನುಜಾಚಾರ್ಯರ ಪ್ರತಿಮೆಗಳು ಈ ಸರ್ಕಾರದ ಈ ನೀತಿಗಳನ್ನು ನೋಡಿ ಖಂಡಿತ ನಗುತ್ತಿರಬಹುದು.