ಕೃಷಿ ಕಾನೂನು ಹಿಂಪಡೆಯಿರಿ: ಕೇಂದ್ರ ಸರಕಾರದೊಂದಿಗೆ ಚರ್ಚೆಗೆ ಸಿದ್ಧರಿದ್ದೇವೆ – ರಾಕೇಶ್ ಟಿಕಾಯತ್

0
381

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮೂರು ಕೃಷಿ ಕಾನೂನುಗಳ ಕುರಿತು ಕೇಂದ್ರ ಸರಕಾರದೊಂದಿಗೆ ಚರ್ಚೆಗೆ ಈಗಲೂ ಸಿದ್ಧ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದರು. ಕೃಷಿ ಕಾನೂನು ಹಿಂಪಡೆಯುವ ಕುರಿತು ಚರ್ಚೆ ಇದಾಗಿರಬೇಕೆಂದು ಅವರು ಹೇಳಿದ್ದಾರೆ.

ತಮ್ಮ ಬೇಡಿಕೆಗಳಿಗೆ ಕೇಂದ್ರ ಸರಕಾರ ಒಪ್ಪದೆ ಆಂದೋಲನ ಸ್ಥಳ ಬಿಟ್ಟು ಕದಲುವುದು ಇಲ್ಲ ಎಂದು ಅವರು ಮೊಹಾಲಿಯಲ್ಲಿ ಪತ್ರಕರ್ತರಿಗೆ ಹೇಳಿದರು. ಭಾರತ ಸ್ವಾಂತಂತ್ರ್ಯ ಹೋರಾಟಗಾರ ಭಗತ್ ಸಿಂಗ್‍ರ ಸಂಬಂಧಿಕ ಅಭಯ್ ಸಿಂಗ ಸಂಧುರ ಕುಟುಂಬವನ್ನು ಅವರು ಭೇಟಿ ಮಾಡಿದರು. ಕೊರೋನ ಪೀಡಿತ ಸಂಧು ಕೆಲವು ದಿನಗಳ ಹಿಂದೆ ನಿಧನರಾಗಿದ್ದರು.

ಸರಕಾರ ನಮ್ಮೊಂದಿಗೆ ಚರ್ಚೆ ಮಾಡಲು ಬಯಸುವುದಾದರೆ ಸಂಯುಕ್ತ ಕಿಸಾನ್ ಮೋರ್ಚಾ ಚರ್ಚೆಗೆ ಸಿದ್ಧವಿದೆ ಎಂದು ಟಿಕಾಯತ್ ಹೇಳಿದರು. ಚರ್ಚೆ ರೈತ ಕಾನೂನು ಹಿಂಪಡೆಯುವ ಕುರಿತು ಆಗಬೇಕು ಎಂದು ಅವರು ಹೇಳಿದರು. ಕೇಂದ್ರ ಸರಕಾರದ ರೈತ ವಿರೋಧಿ ಕಾನೂನು ಹಿಂದೆಗೆಯಲು ಆಗ್ರಹಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಆಂದೋಲನ ದಿಲ್ಲಿಯಲ್ಲಿ ಮುಂದುವರಿಯುತ್ತಿದೆ. 2020 ನವೆಂಬರಿನಲ್ಲಿ ಆರಂಭವಾದ ಪ್ರತಿಭಟನೆಯು ಕೃಷಿ ಕಾನೂನು ಹಿಂಪಡೆಯುವವರೆಗೂ ಮುಂದುವರಿಯಲಿದೆ ಎಂದು ರೈತರು ಬಲವಾಗಿ ನಿಂತಿದ್ದಾರೆ. ರೈತರು ಮತ್ತು ಕೇಂದ್ರ ಸರಕಾರದ ನಡುವೆ ಹಲವು ಬಾರಿ ಚರ್ಚೆ ನಡೆದಿತ್ತಾದರೂ ಎಲ್ಲವೂ ವಿಫಲವಾಯಿತು.