ಗೋವಿಗೆ ಕಾಂಗ್ರೆಸ್, ಬಿಜೆಪಿ ಎಂಬ ಭೇದವಿಲ್ಲ

0
746

ಬಿಜೆಪಿಯ ಲೀಲಾಧರ ವಘೇಲ ಬಿಜೆಪಿಯ ಎಂಪಿ. ಅವರಿಗೆ ಗೋವು ಹಾಯ್ದು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಗುಜರಾತ್‍ನಲ್ಲಿ ನಡೆದಿದೆ. ಇವರು ಗೋವಿನ ಹೆಸರಲ್ಲಿ ರಾಜಕೀಯ ಮಾಡುವವರು ಮತ್ತು ಗೋರಕ್ಷಕರು ಇರುವ ಪರಿವಾರದ ವ್ಯಕ್ತಿ ಎನ್ನುವ ವಿಷಯವನ್ನು ಗೋವು ಪರಿಗಣಿಸಿಲ್ಲ.
ಗೋವು ಇಂದು ಅತಿರಂಜಿತ ರಾಜಕೀಯದ ಪ್ರಾಣಿ ಅಥವಾ ಜಾನುವಾರು. ಗೋ ಸಾಗಾಟಗಾರರನ್ನು ಗುಂಪುಗಳು ಹೊಡೆದು ಕೊಲ್ಲುತ್ತಿರುವುದು ಗೋ ಪ್ರೇಮದಿಂದ ಅಥವಾ ಗೋಭಕ್ತಿಯಿಂದಲೇ ಇರಬೇಕು. ಗುಜರಾತಿನ ಬೀಡಾಡಿ ದನ ಇವೆಲ್ಲವನ್ನೂ ಲೆಕ್ಕಿಸಿದಂತೆ ಕಾಣುವುದಿಲ್ಲ. ಗೋವನ್ನು ಸಾಗಿಸುವಾತ ಮನುಷ್ಯ ಪ್ರಾಣಿ ಎನ್ನುವ ಪರಿಗಣನೆ ಸಿಗುತ್ತಿಲ್ಲ. ಸಿಗುತ್ತಿದ್ದರೆ ಸಾಗಾಟಗಾರನನ್ನು ನಿರ್ದಯವಾಗಿ ಕಾನೂನನ್ನು ಕೈಗೆತ್ತಿಕೊಂಡು ಹತ್ಯೆ ಮಾಡಿ ಜನರು ನಿಶ್ಚಿಂತರಾಗುವಂತಿರಲಿಲ್ಲ.

ಕೇಂದ್ರ ಸರಕಾರ ಮತ್ತು ಹಲವು ರಾಜ್ಯ ಸರಕಾರಗಳ ನೀತಿ ಗೋರಕ್ಷಕರನ್ನು ನಿಶ್ಚಿಂತವಾಗಿರುವಂತೆ ಸಹಾಯ ಮಾಡುತ್ತಿದೆ. ಮತ್ತೆ ಇನ್ನೇನು? ಗೋವುಗಳು ಉಳಿಯಬೇಕು. ಜಾತಿ ನೋಡಿ ಗೋವನ್ನು ಸಾಗಿಸುವವನನ್ನು ಸಾಯಿಸಬೇಕು. ಇಂಥ ಋಣಾತ್ಮಕ ಮನೋಭಾವ ಇರುವಲ್ಲಿ ಗುಜರಾತ್‍ನ ಸಂಸದರ ಬಗ್ಗೆ ಗೋವೊಂದು ಧನಾತ್ಮಕವಾಗಿ ಚಿಂತಿಸಿಲ್ಲ ಎಂದು ಆರೋಪಿಸುವಂತಿಲ್ಲ.
ನೋವು ಯಾರಿಗಾದರೂ ನೋವೇ, ಗಾಯ ಯಾರಿಗಾದರೂ ಗಾಯವೇ. ಸಂಸದರು ಶೀಘ್ರ ಚೇತರಿಸಿ ಹುಷಾರಾಗಿ ಪಾರ್ಲಿಮೆಂಟು ಸೇರಿಕೊಳ್ಳಲಿ.
ಆದರೆ, ಗೋರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಅಡ್ಡಗಟ್ಟಿ ಕೊಲ್ಲಬಹುದೇ ಎನ್ನುವ ಕುರಿತು ಆಡಳಿತ ಕೇಂದ್ರಗಳ ಆತ್ಮಸಾಕ್ಷಿ ಇನ್ನು ಗರಿಬಿಚ್ಚಿಲ್ಲ. ಫೀನಿಕ್ಷ್ ಹಕ್ಕಿ ಶೂನ್ಯದಿಂದ ಮರು ಹುಟ್ಟು ಪಡೆಯುತ್ತದೆ ಯಂತೆ. ಗೋಸಾಗಾಟದ ಮನುಷ್ಯನನ್ನು ಮನುಷ್ಯ ಎಂದು ಗುರುತಿ ಸುವ ಫೀನಿಕ್ಷ್‍ಗಿರಿಯ ಮರುಹುಟ್ಟು ಯಾವಾಗಾಗುತ್ತೋ ಗೊತ್ತಿಲ್ಲ. ಗುಜರಾತಿನ ಅಲೆಮಾರಿ ದನಗಳನ್ನು ನಿಯಂತ್ರಿಸಬೇಕೆಂದು ನ್ಯಾಯಾ ಲಯದ ಆದೇಶವೇ ಇದೆ. ಆದರೆ ಸರಕಾರ ಸ್ಥಳೀಯಾಡಳಿತಗಳಿಗೆ ಇದು ಮುಖ್ಯ ಕಾರ್ಯವೆಂದು ಅನಿಸಿಲ್ಲ. ಆದ್ದರಿಂದ ಉದ್ರಿಕ್ತ ಗುಂಪು ಗಳು ಮನುಷ್ಯರನ್ನು ಗೋರಕ್ಷೆಯ ಹೆಸರಲ್ಲಿ ಹೊಡೆದು ಕೊಲ್ಲುತ್ತಿವೆ. ಅಲೆಮಾರಿಯಾಗಿ ಹಸಿವಿನಿಂದ ಬಳಲಿದ ಹಸುಗಳು ಹಾಯುತ್ತಿವೆ.
ಇಂದು ದನಗಳಿಗೆ ಗೋಶಾಲೆಗಳಿವೆ. ದನದ ರಾಜಕೀಯ ದಿಂದಾಗಿ ದನದ ಹೆಸರಲ್ಲಿ ಸಾಯುವವರು ಮತ್ತು ಸತ್ತವರ ಬಗ್ಗೆ ಕರಣೆಯೇ ಇಲ್ಲವಾಗಿದೆ. ಕರುಣೆ, ಸಾಹೋದರ್ಯ ಮತ್ತು ಭ್ರಾತೃತ್ವ ಎಂಬ ಫೀನಿಕ್ಸ್ ಎಂದು ಹುಟ್ಟು ಪಡೆಯುತ್ತೆ ಎಂದು ಊಹಿಸಲು ಅಸಾಧ್ಯವಿರುವಷ್ಟು ಭಾರತದ ಇಂದಿನ ಪರಿಸ್ಥಿತಿ ಆಶಾದಾಯಕವಾಗಿಲ್ಲ. ನೋಡಿ, ದನದ ಹೆಸರಲ್ಲಿ ಹೊಡೆದು ಕೊಲ್ಲುವುದರಲ್ಲಿ ಮುಂಪಕ್ತಿಯ ರಾಜ್ಯ ರಾಜಸ್ಥಾನ. ಫೆಹ್ಲೂಖಾನ್ ರಿಂದ ಉಮರ್ ಖಾನ್‍ವರೆಗೆ ಅಲ್ಲಿ ಕೊಂದ ಗೋರಕ್ಷಕರಿಗೆ ಶಿಕ್ಷೆಯಿಲ್ಲದಂತಾಗಿದೆ. ಇವರನ್ನೆಲ್ಲ ರಕ್ಷಿಸುವಲ್ಲಿ ಅಲ್ಲಿನ ವಸುಂಧರಾ ರಾಜೆ ಸಿಂಧಿಯಾರ ಬಿಜೆಪಿ ಸರಕಾರ ಬದ್ಧವಾಗಿದೆ ಎಂದರೆ ತಪ್ಪಿಲ್ಲ. ಆದರೆ ಅವರ ಸರಕಾರಕ್ಕೆ ಎಷ್ಟೇ ಪ್ರಯತ್ನಿಸಿದರೂ ಜನರಿಗೆ ಅಗತ್ಯವಿರುವಷ್ಟು ಕುಡಿಯುವ ನೀರನ್ನು ಕೊಡಲು ಸಾಧ್ಯವಾಗಿಲ್ಲ. ಮುಂದೆ ಈ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಾದು ಹೋಗುವಾಗ ಸರಕಾರದ ಅಸಾಮರ್ಥ್ಯಕ್ಕೆ ಜನರು ಹಾಯದಿದ್ದರೆ ಅದು ವಸುಂಧರೆಯ ಅದೃಷ್ಟ ಎಂದಾದೀತು.

ಇರಲಿ, ಗೋರಕ್ಷಣೆಗಾಗಿ ಓರ್ವ ಸಚಿವರನ್ನೇ ಹೊಂದಿದ ಮೊದಲ ರಾಜ್ಯ ಅದಲ್ಲವೇ. ಹೌದು, ಹೀಗೆ ಇಷ್ಟೆಲ್ಲ ಗೋವಿಗೆ ಪರಿಗಣನೆ ನೀಡುತ್ತಿರುವ ರಾಜ್ಯವೊಂದರಲ್ಲಿ ಗೋವುಗಳ ಸ್ಥಿತಿ ಶುಭ ಮಯವಲ್ಲ ಎನ್ನುವುದು ನಾವು ಒಪ್ಪಿ ಕೊಳ್ಳಬೇಕು. ಅಂದರೆ ಅಲ್ಲಿ ದನಸಾಗಾಟ ಗಾರರನ್ನು ಕೊಲ್ಲುವುದನ್ನು ಹೊರತು ಪಡಿಸಿದರೆ ನೆಪಮಾತ್ರಕ್ಕೆ ಗೋವಿನ ವಿಚಾರದಲ್ಲಿ ಬೇರೆಲ್ಲ ಅಲ್ಲಿ ನಡೆಯುತ್ತಿದೆ ಎಂದು ಇತ್ತೀಚೆಗಿನ ಸುದ್ದಿ ವಿವರಿಸುತ್ತಿವೆ.

ಅಲ್ಲಿ ಗೋರಕ್ಷಣೆಯ ಆವೇಶದಲ್ಲಿ ಒಂದೆಡೆ ಮನುಷ್ಯರನ್ನು ಕೊಲ್ಲಬಹುದು ಎಂಬ ಆಂತರ್ಯದ ಕಲ್ಪನೆ ಇದೆಯಲ್ಲ. ಗೋರಕ್ಷಣೆಯ ಪ್ರತಿಜ್ಞೆ ಕೈಗೊಂಡವರು ಮೊದಲು ಗೋವನ್ನು ಬಹಳವಾಗಿ ಪರಿಗಣಿಸಿದ್ದರು. ಗೋಶಾಲೆಗಳನ್ನು ಕಟ್ಟಿಸಿ ದ್ದರು. ಬೀಡಾಡಿ ದನಗಳು ಮತ್ತು ಹೋರಿಗಳನ್ನು ಅತ್ತ ಅಟ್ಟಿದ್ದರು. ಗೋ ಪಾಲಕರಾಗಿ ನೌಕರರನ್ನು ನೇಮಕಗೊಳಿಸಿ ದ್ದರು. ಆದರೆ ಗೋಭಕ್ತಿಯ ಪ್ರದರ್ಶನ ಇಷ್ಟಕ್ಕೇ ಅಲ್ಲಿ ಸೀಮಿತವಾಗಿದೆ ಎಂಬ ಸುದ್ದಿ ಈಗಿನದ್ದು. ಪೆಹ್ಲೂಖಾನ್‍ರನ್ನು ಕೊಂದ ಸ್ಥಳದಿಂದ 160 ಕಿಲೊ ಮೀಟರ್ ದೂರದ ಹಿಂಗೋಣಿ ಎಂಬ ಲ್ಲಿನ ಗೋಶಾಲೆಗಳಲ್ಲಿರುವ ಅವ್ಯವಸ್ಥೆಯ ಬಗೆಗಿನ ವರದಿಯಂತೂ ಸಹತಾಪಕರ ವಾದದ್ದೇ. ಗುಜರಾತ್‍ನಲ್ಲಿ ದನದ ಹಲ್ಲೆಗೊಳಗಾದ ಸಂಸದರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಇಲ್ಲಿನ ಗೋ ಶಾಲೆಗಳ ಸಿಬ್ಬಂದಿಗಳಿಗೆ ಗೋವುಗಳು ಹಾಯ್ದು ಗಾಯಗೊಂಡರೆ ಅವರಿಗೆ ಚಿಕಿತ್ಸೆ ಕೊಡಿಸಲು ಕೂಡ ಅಧಿಕಾರಿಗಳು ಸಿದ್ಧರಿಲ್ಲವಂತೆ
ಇದನ್ನು ಪ್ರತಿಭಟಿಸಿ ಇದೇ ಗೋ ಶಾಲೆಯ ನೌಕರರು ಎರಡು ಸಲ ಧರಣಿ ನಡೆಸಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ. ಹಿಂಗೋಣಿಯ ಗೋ ಶಾಲೆಯಲ್ಲಿ 13,166 ಗೋವುಗಳಿವೆ. ಅವುಗಳ ಉಪಚಾರಕ್ಕೆ 240 ಮಂದಿ ಕೆಲಸದಾಳುಗಳಿದ್ದಾರೆ. ಸರಕಾರದಲ್ಲಿ ಗೋರಕ್ಷಾ ಸಚಿವಾಲಯವೂ ಇದೆ. ಹೀಗಿದ್ದರೂ ಗೋಸಂರಕ್ಷಣೆಯ ಹೊಣೆ ಯನ್ನು ಖಾಸಗಿ ಏಜೆನ್ಸಿಗಳಿಗೆ ವಹಿಸ ಲಾಗಿದೆ ಎಂದರೆ ಹೇಗೆ?

ಇತ್ತಲಾಗಿ ಝಾರ್ಖಂಡಿನ ಗೋಶಾಲೆ ಯಲ್ಲಿ ಮೇಯಲು ಹುಲ್ಲಿಲ್ಲದೆ ಹಲವಾರು ದನಗಳು ಸತ್ತದ್ದು ವರದಿಯಾಗಿತ್ತಷ್ಟೇ. ಇಲ್ಲಿ ಗೋವುಗಳನ್ನು ನೋಡಿಕೊಳ್ಳಲು ಬಿಜೆಪಿ ವ್ಯಕ್ತಿಯ ಏಜೆನ್ಸಿಗೆ ವಹಿಸಿಕೊಡಲಾಗಿತ್ತು. ನಿಜಕ್ಕೂ ಗೋ ಶಾಲೆ ನಿರ್ವ ಹಣೆ ಹೆಚ್ಚು ಗೋಪ್ರೇಮ ತೋರಿಸು ವವರಿಗೇ ವಹಿಸಿಕೊಡುವುದು ಹೆಚ್ಚು ಸುರಕ್ಷಿತ. ಹೀಗೆಲ್ಲ ನ್ಯಾಯವನ್ನು ಹೇಳ ಬಹುದಾದರೆ ಇಂತಹ ಪ್ರೀತಿಯ ನಡುವೆ ಗೋವುಗಳೇಕೆ ಮೇವಿಲ್ಲದೆ ಗೋಶಾಲೆ ಗಳಲ್ಲಿ ಸತ್ತವು ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಇರಲಿ, ಹಿಂಗೋಣಿಯ ಗೋಶಾಲೆ ಯಲ್ಲಿ ನಿರ್ವಹಣೆಗೆ ಪ್ರತಿ ಗೋವಿಗೆ 70 ರೂಪಾಯಿ ಮತ್ತು ಕರುಗಳಿಗೆ 35 ರೂಪಾಯಿ ಸರಕಾರದ ಸಹಾಯಧನ ಏಜೆನ್ಸಿಗೆ ನೀಡುತ್ತದೆ. ಇನ್ನು ಗೋವುಗಳ ಮೇವನ್ನು ಗೋಭಕ್ತರೇ ತಂದು ಕೊಡುತ್ತಾರೆ. ಹಾಲುತ್ಪನ್ನಗಳಿಂದ ಸಿಗುವ ಹಣ ಎಲ್ಲವೂ ಏಜೆನ್ಸಿಗೆ ಸಲ್ಲುತ್ತದೆ. ಇಷ್ಟೆಲ್ಲ ಮಾಡಿಯೂ ಏಜೆನ್ಸಿ ಗೋವುಗಳನ್ನು ಮತ್ತು ಅಲ್ಲಿನ ನೌಕರರನ್ನು ಸರಿಯಾಗಿ ನೋಡಿಕೊಂಡಿಲ್ಲ. ಕಳೆದ ವರ್ಷ ಕೇವಲ ಒಂದು ತಿಂಗಳ ಅವಧಿಯಲ್ಲಿ ಗೋಶಾಲೆಯಲ್ಲಿ 500ರಷ್ಟು ಗೋವುಗಳು ಸತ್ತು ಹೋಗಿದ್ದುವು. ಈ ಘಟನೆಯ ನಂತರ ಗೋವುಗಳ ರಕ್ಷಣೆಯ ಹೊಣೆಯನ್ನು ಖಾಸಗಿ ಏಜೆನ್ಸಿಗಳಿಗೆ ಸರಕಾರ ವಹಿಸಿಕೊಟ್ಟಿತ್ತು.

ಆದರೆ, ಸಂಘಪರಿವಾರದ ಆಕ್ರಮಣ ಕಾರಿ ರಾಜಕೀಯಕ್ಕೆ ಗೊಬ್ಬರ ಹಾಕುವು ದನ್ನು ಹೊರತುಪಡಿಸಿ ಬೇರ್ಯಾವ ನ್ಯಾಯವೂ ಗೋಪರಿಪಾಲನೆಗಳಲ್ಲಿ ಇಲ್ಲ ಎಂದು ಗೋವು ಶಾಲೆಗಳ ಗೋವುಗಳ ದಯನೀಯ ಸ್ಥಿತಿ ಕೂಗಿ ಹೇಳುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸಾವಿರಾರು ಗೋವುಗಳು ಪ್ಲಾಸ್ಟಿಕ್ ಮಾಲಿನ್ಯವನ್ನು ತಿಂದು ಹೃದಯಸ್ತಂಭನದಿಂದ ಸತ್ತು ಹೋಗಿದೆ ಎಂದು ಪ್ರಾಣಿ ಸಂರಕ್ಷಣಾ ತಜ್ಞರು ಹೇಳುತ್ತಾರೆ. ಹೊರಗೆ ಅಲೆ ದಾಡುವ ಜಾನುವಾರುಗಳು ಅರ್ಥಾತ್ ಬೀಡಾಡಿ ದನಗಳು ಇಂತಹ ದುರಂತ ಅಂತ್ಯ ಕಂಡದ್ದು.. ಸತ್ತ ಕೆಲವು ಜಾನು ವಾರುಗಳ ಹೊಟ್ಟೆ ಸೀಳಿ ನೋಡಿದಾಗ 35 ಕಿಲೊ ಪ್ಲಾಸ್ಟಿಕ್ ವರೆಗೆ ಕಂಡು ಬಂದ ಅನುಭವವಿದೆ ಎಂದು ರಾಜಸ್ತಾನ ಗೋರಕ್ಷಣಾ ಸಚಿವ ಓತರಾಂ ದೇವಸಿ ಯವರೇ ಹೇಳಿದ್ದಾರೆ.

ಅಲ್ಲ, ಮನುಷ್ಯ ಗೋವಿನ ಹೆಸರಲ್ಲಿ ಮನುಷ್ಯನಿಗೆ ಹಾಯ ಹೊರಟರೆ, ಮನುಷ್ಯನಿಗೆ ಗೋ ಹಾಯಬಾರದೆನ್ನುವ ಕಾನೂನೇನಾದರೂ ಪ್ರಾಣಿಗಳ ರಾಜ್ಯ ದಲ್ಲಿದೆಯೇ? ಇಲ್ಲ. ಪ್ರಾಣಿಗಳು ಕೋಪ ಬಂದರೆ ಮನುಷ್ಯರನ್ನು ಹಾಯುತ್ತವೆ. ಆಗ ಖಂಡಿತ ಈತ ಬಿಜೆಪಿಯವ ಆತ ಕಾಂಗ್ರೆ ಸ್ಸಿಗ ಎಂದು ಅದು ಪರಿಗಣಿಸುವುದಿಲ್ಲ.
ಮನುಷ್ಯನನ್ನು ಮನುಷ್ಯ ಎಂದು ತಿಳಿದುಕೊಳ್ಳುವ ಮಾನವೀಯತೆ ಎಂಬ ಫೀನಿಕ್ಸ್ ಹಕ್ಕಿ ಯಾವಾಗ ಮರು ಹುಟ್ಟು ಪಡೆಯುತ್ತೋ ಗೊತ್ತಿಲ್ಲ. ಆದರೆ ಹುಟ್ಟಲೇಬೇಕು ಅನುವುದು ಒಂದು ಗಟ್ಟಿಯಾದ ವಾಸ್ತವವಾಗಿದೆ. ಆದರೆ ಪ್ರಾಣಿಗಳ ಮೇಲೆ ರಾಜಕೀಯ ಮಾಡು ವವರ ಮಧ್ಯೆ ಮಾನವೀಯತೆಯ ಫೀನಿಕ್ಸ್ ಬರೇ ಹುಟ್ಟಿದರೆ ಸಾಲದು ಅತ್ತಿತ್ತ ಗರಿಬಿಚ್ಚಿ ಹಾರಬೇಕು. ಆ ದಿನಗಳು ಎಂದು ಬಂದಾವೋ ಎಂದು ಕಣಿ ಹೇಳುವಂತಹ ಪರಿಸ್ಥಿತಿ ಭಾರತದಲ್ಲಿ ಈಗಿಲ್ಲ. ತೀರ ವಿಷಾದ ದ್ದಾದರೂ ಸದ್ಯಕ್ಕೆ ಅದೇ ಅಪ್ಪಟ ಸತ್ಯ.