ಸನ್ಮಾರ್ಗ ವಾರ್ತೆ
✍️ಮಿಷಲ್
ಫೆಬ್ರವರಿ 22 ಸೌದಿ ಅರೇಬಿಯಾದ ಪಾಲಿಗೆ ಸಂಭ್ರಮದ ದಿನ. 1727ರಲ್ಲಿ ದರಇಯ್ಯ ಎಂಬ ಪ್ರದೇಶದಲ್ಲಿ ಇಮಾಮ್ ಮೊಹಮ್ಮದ್ ಬಿನ್ ಸಊದಿ ಎಂಬವರು ಮೊಟ್ಟ ಮೊದಲ ಬಾರಿ ಸೌದಿ ಎಂಬ ರಾಷ್ಟ್ರವನ್ನು ಸ್ಥಾಪಿಸಿದರು. ಈಗ ಸೌದಿ ಅರೇಬಿಯಾ ಸಾಕಷ್ಟು ಬೆಳೆದಿದೆ.
ಆದರೆ ಹಳತ್ತನ್ನ ಮರೆತಿಲ್ಲ ಆರಂಭದ ಸೌದಿ ರಾಷ್ಟ್ರದ ಬಗ್ಗೆ ವಿವರಿಸುವ ಹಸ್ತ ಬರಹಗಳಿಂದ ಪ್ರೇರಿತವಾಗಿ ಅದು ಲೋಗೋವನ್ನು ಡಿಸೈನ್ ಮಾಡಿರುವುದೇ ತಾನು ಸಾಗಿ ಬಂದ ಹಾದಿಯನ್ನು ಮರೆಯಲಾರೆ ಎಂಬ ಸೌದಿ ಅರೇಬಿಯಾದ ದೃಢ ನಿಶ್ಚಯವನ್ನು ಹೇಳುತ್ತದೆ. ಧ್ವಜ, ಖರ್ಜೂರ, ಮಜಿಲೀಸ್, ಅರೇಬಿಯಾದ ಕುದುರೆ ಮತ್ತು ಸೂಪ್ ಈ ಐದು ಚಿಹ್ನೆಗಳನ್ನು ಒಳಗೊಂಡ ಲೋಗೋವನ್ನು ತಯಾರಿಸಲಾಗಿದೆ.
ತನ್ನ ಹಳೆ ಕಾಲದ ಬದುಕು ಭಾವಗಳನ್ನು ಮರೆಯಬಾರದು ಎಂಬ ಕಾರಣಕ್ಕಾಗಿ ಸೌದಿ ಅರೇಬಿಯಾ ಈಗ ತನ್ನ ಉಡುಪು ವಿಧಾನವನ್ನು ಉದ್ಯೋಗ ಸ್ಥಳಗಳಲ್ಲಿ ಮತ್ತು ಇನ್ನಿತರ ಸಭೆ ಸಮಾರಂಭಗಳಲ್ಲಿ ಪ್ರೋತ್ಸಾಹಿಸುತ್ತಿದೆ. ಸೌದಿಯ ಪರಂಪರಾಗತ ನೃತ್ಯ, ಸಾಂಸ್ಕೃತಿಕ ಕಲೆಗಳನ್ನು ಅಧಿಕೃತ ಸಭೆ ಸಮಾರಂಭಗಳಲ್ಲಿ ಪ್ರದರ್ಶಿಸುವುದಕ್ಕೂ ಸರ್ಕಾರ ಕಟ್ಟುನಿಟ್ಟಿನ ಪ್ರಯತ್ನ ನಡೆಸುತ್ತಿದೆ. ಪ್ರಥಮ ಸೌದಿ ರಾಷ್ಟ್ರದ ರಾಜಧಾನಿ ದರಇಯ್ಯವನ್ನು ಕಾಪಿಡುವ ಉದ್ದೇಶದಿಂದ ದರಇಯ್ಯ ಗೇಟ್ ಯೋಜನೆ ಹಮ್ಮಿಕೊಳ್ಳಲಾಗಿದೆ.
ನಜ್ ದಿ ವಾಸ್ತು ಶಿಲ್ಪಗಳು ಪರಂಪರಾಗತ ರಸ್ತೆಗಳು, ಬದುಕು ಭಾವ ಇತ್ಯಾದಿಗಳನ್ನು ಮರು ರೂಪಿಸುವ ಮೂಲಕ ದರಇಯ್ಯವನ್ನು ಟೂರಿಸಮ್ ಕೇಂದ್ರವಾಗಿ ಮಾಡುವ ಉದ್ದೇಶವನ್ನ ಸೌದಿ ಅರೇಬಿಯಾ ಇಟ್ಟುಕೊಂಡಿದೆ.
ಇದೇ ವೇಳೆ ಜಗತ್ತಿನಲ್ಲಿಯೇ ಅತಿ ದೊಡ್ಡದೆಂದು ಹೇಳಲಾಗುವ ಅಲ್ ಅಹ್ ಸಾ ಓಯಸಿಸ್ ಅನ್ನು ಯುನೆಸ್ಕೊ ಪಟ್ಟಿಯಲ್ಲಿ ಈಗಾಗಲೇ ಸೇರಿಸಲಾಗಿದೆ. ಹಾಗೆಯೇ ಸೌದಿ ಅರೇಬಿಯಾದ ಪ್ರಾಚೀನ ಗ್ರಾಮಗಳು ಹಳೆಯ ಕೋಟೆಗಳು ಪರಂಪರಾಗತ ತೋಟಗಳನ್ನು ಕೂಡ ಟೂರಿಸಂಗಾಗಿ ತೆರೆದಿಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಯುನೆಸ್ಕೋ ಪಟ್ಟಿಯಲ್ಲಿ ಸೇರಿರುವ ಅಲ್ ಬಲದನ್ನು ಸಂರಕ್ಷಿಸುವ ಮತ್ತು ಹಳೆ ಹಿಜಾಝಿ ವಾಸ್ತುಶಿಲ್ಪಗಳು ಪರಂಪರಾಗತ ಕಟ್ಟಡಗಳು ಮಾರ್ಕೆಟ್ಗಳು ಇತ್ಯಾದಿಗಳನ್ನು ಪುನರ್ನವೀಕರಣಗೊಳಿಸಿ ಸಾಂಸ್ಕೃತಿಕ ಪರಂಪರೆಯನ್ನು ಮತ್ತೆ ವೈಭವಕ್ಕೆ ತರುವ ಮೂಲಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡುವ ಉದ್ದೇಶವನ್ನು ಕೂಡ ಸೌದಿ ಅರೇಬಿಯಾ ಇಟ್ಟುಕೊಂಡಿದೆ.
ಇತ್ತೀಚಿನ ವರ್ಷಗಳಲ್ಲಿ ಸೌದಿ ಅರೇಬಿಯಾ ಜಾಗತಿಕವಾಗಿಯೇ ಗಮನ ಸೆಳೆದಿರುವ ಮತ್ತು ಅತ್ಯಂತ ಪ್ರಭಾವಿ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಜಿಸಿಸಿ ರಾಷ್ಟ್ರಗಳಲ್ಲಿ ಐಕ್ಯತೆಯನ್ನು ತರುವಲ್ಲಿ ಸೌದಿ ಅರೇಬಿಯಾದ ಪಾತ್ರ ಬಹಳ ದೊಡ್ಡದು. ಹಾಗೆಯೇ ಯಮನ್ ಸಿರಿಯ ಲಬನಾನ್ ಮುಂತಾದ ರಾಷ್ಟ್ರಗಳ ಆಂತರಿಕ ಪರಿಸ್ಥಿತಿಯನ್ನು ಸುಧಾರಿಸುವುದಕ್ಕಾಗಿಯೂ ಅದು ಪ್ರಯತ್ನಿಸಿದೆ.
ಇದೇ ವೇಳೆ ರಷ್ಯಾ ಮತ್ತು ಯುಕ್ರೆನ್ ನಡುವೆ ಸಂಧಾನ ಮಾತುಕತೆಗೆ ಮುಂದಾಗಿರುವುದು ಮತ್ತು ಅದರಲ್ಲಿ ಯಶಸ್ವಿಯಾಗಿರುವುದು ಕೂಡ ಸೌದಿ ಅರೇಬಿಯಾದ ಸ್ಥಾನಮಾನವನ್ನ ಜಾಗತಿಕವಾಗಿ ಹೆಚ್ಚು ಗೊಳಿಸಿದೆ. ಇಸ್ರೇಲ್ ಮತ್ತು ಫೆಲಸ್ತೀನ್ ನಡುವಿನ ಸಂಘರ್ಷಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದಿಂದ ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರು ಸೌದಿ ಅರೇಬಿಯಾಕ್ಕೆ ಭೇಟಿ ಕೊಡುತ್ತಾರೆ ಎಂದು ಹೇಳಲಾಗುತ್ತಿದ್ದು ಇದರ ಬಗ್ಗೆ ಜಾಗತಿಕವಾಗಿಯೇ ಕುತೂಹಲ ಮೂಡಿದೆ.
ಸೌದಿ ಅರೇಬಿಯಾದ ಸ್ಥಾಪನೆಯ ದಿನವನ್ನು ಅಲ್ಲಿರುವ ಅನಿವಾಸಿ ಭಾರತೀಯರು ಕೂಡ ಬಹಳ ಸಡಗರದಿಂದ ಆಚರಿಸುತ್ತಾರೆ. ರಕ್ತದಾನದ ಮೂಲಕ ಈ ದಿನವನ್ನು ಸ್ಮರಣೀಯವಾಗಿಸುವ ಹಲವು ಅನಿವಾಸಿ ಭಾರತೀಯ ಸಂಘಟನೆಗಳು ಅಲ್ಲಿವೆ. ಲಕ್ಷಾಂತರ ಭಾರತೀಯರಿಗೆ ಅನ್ನದ ಬಟ್ಟಲಾಗಿರುವ ಸೌದಿ ಅರೇಬಿಯಾದ ಸ್ಥಾಪನಾ ದಿನವು ಅನಿವಾಸಿ ಭಾರತೀಯರ ಪಾಲಿಗೂ ಸಂಭ್ರಮದ ದಿನವಾಗಿರುವುದರಲ್ಲಿ ಅಚ್ಚರಿಯೇನಿಲ್ಲ.












