ರಮಝಾನ್ ಗೆ ಭರ್ಜರಿ ರಿಯಾಯಿತಿ ಘೋಷಿಸಿದ ಕತಾರ್

0
4442

ಸನ್ಮಾರ್ಗ ವಾರ್ತೆ

✍ಇಷಲ್

ರಮಝಾನ್ ತಿಂಗಳಿಗೆ ಗಲ್ಫ್ ರಾಷ್ಟ್ರಗಳ ಸ್ಪಂದನೆ ವಿಶೇಷವಾಗಿರುತ್ತದೆ. ರಮಝಾನ್ ತಿಂಗಳ ಉಪವಾಸ ಆಚರಣೆಯನ್ನು ಸುಲಭಗೊಳಿಸುವುದಕ್ಕಾಗಿ ವಿವಿಧ ಕ್ರಮಗಳನ್ನು ಗಲ್ಫ್ ರಾಷ್ಟ್ರಗಳು ಕೈಗೊಳ್ಳುವುದಿದೆ. ಇದೀಗ ಕತರ್ ಅಂಥದ್ದೊಂದು ಕ್ರಮಕ್ಕೆ ಮುಂದಾಗಿದ್ದು ವ್ಯಾಪಕ ಶ್ಲಾಘನೆಗೆ ಒಳಗಾಗಿದೆ.

ರಮಝಾನ್ ತಿಂಗಳಲ್ಲಿ ಸಾವಿರಕ್ಕಿಂತಲೂ ಅಧಿಕ ಅಗತ್ಯ ವಸ್ತುಗಳ ಬೆಲೆಯನ್ನು ಕತಾರ್ ಇಳಿಸುವ ಮೂಲಕ ಅಲ್ಲಿ ವಾಸಿಸುತ್ತಿರುವ ಸ್ವದೇಶಿ ಮತ್ತು ವಿದೇಶಿಯರಾದ ಎಲ್ಲರ ಶ್ಲಾಘನೆಗೂ ಪಾತ್ರವಾಗಿದೆ.

ಕತರ್ ನ ಉದ್ದಕ್ಕೂ ಇರುವ ಪ್ರಮುಖ ರಿಟೇಲ್ ಅಂಗಡಿಗಳೊಂದಿಗೆ ಮಾತುಕತೆ ನಡೆಸಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಮತ್ತು ಈ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ.

ವಿಶೇಷವಾಗಿ ಮಾವಿನ ಹಣ್ಣು, ಸಕ್ಕರೆ, ಅಕ್ಕಿ, ಪಾಸ್ತಾ, ಚಿಕನ್, ಅಡುಗೆ ಎಣ್ಣೆ, ಹಾಲು ಇತ್ಯಾದಿ ಆಹಾರ ವಸ್ತುಗಳ ಬೆಲೆಯಲ್ಲಿ ಭಾರಿ ಇಳಿಕೆಗೆ ಕತರ್ ಮುಂದಾಗಿದೆ. ಹಾಗೆಯೇ ಟಿಶ್ಯೂ ಗಳು ಗ್ರಹೋಪಯೋಗಿ ವಸ್ತುಗಳ ಬೆಲೆಯಲ್ಲೂ ಇಳಿಕೆ ಮಾಡಲಾಗಿದೆ. ಹಾಗೆ ರಮಝಾನ್ ನಲ್ಲಿ ಅತ್ಯಂತ ಹೆಚ್ಚು ಉಪಯೋಗಿಸುವ ಇತರ ಅನೇಕ ವಸ್ತುಗಳ ಬೆಲೆಯನ್ನೂ ಕತಾರ್ ತಗ್ಗಿಸಿದೆ.

ಕತರ್ ಕೇವಲ ಬೆಲೆಯನ್ನು ಮಾತ್ರ ಇಳಿಸಿರುವುದಲ್ಲ. ಈ ಬೆಲೆ ತಗ್ಗಿಸಿರುವುದು ನಾಗರೀಕರ ಗಮನಕ್ಕೆ ಬರಬೇಕು ಎಂಬ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಮುಖ್ಯವಾಗಿ ಯಾವೆಲ್ಲ ವಸ್ತುಗಳಿಗೆ ಬೆಲೆ ಇಳಿಸಲಾಗಿದೆಯೋ ಅವುಗಳಿಗೆ ಪ್ರತ್ಯೇಕ ಬೋರ್ಡನ್ನು ಅಂಗಡಿಗಳು ಹಾಕಬೇಕು ಎಂದು ಅದು ನಿರ್ದೇಶಿಸಿದೆ. ರಮಝಾನ್ ತಿಂಗಳ ಉದ್ದಕ್ಕೂ ಈ ಬೆಲೆ ಇಳಿಕೆ ಮುಂದುವರೆಯಲಿದೆ ಮತ್ತು ಯಾರು ಕೂಡ ಈ ನಿರ್ದೇಶನಕ್ಕೆ ವಿರುದ್ಧವಾಗಿ ನಡಕೊಳ್ಳಬಾರದು ಎಂದು ಕೂಡ ಕತರ್ ಎಚ್ಚರಿಕೆ ನೀಡಿದೆ.

ಹಾಗೆಯೇ ಅಂಗಡಿಗಳು ಈ ಬೆಲೆ ಇಳಿಕೆಯ ಲಾಭವನ್ನು ನಾಗರಿಕರಿಗೆ ವರ್ಗಾಯಿಸುತ್ತದೋ ಇಲ್ಲವೋ ಅನ್ನೋದನ್ನು ಪರಿಶೀಲಿಸುವುದಕ್ಕಾಗಿ ಅಧಿಕಾರಿಗಳ ನೇತೃತ್ವದಲ್ಲಿ ತಂಡವನ್ನೂ ರಚಿಸಿದೆ. ಈ ತಂಡ ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಲಿದೆ ಮತ್ತು ಪರಿಶೀಲನೆ ಮಾಡಲಿದೆ. ಅಂಗಡಿಗಳು ಇಳಿಸಿದ ಬೆಲೆಯಲ್ಲಿ ವಸ್ತುಗಳನ್ನು ನೀಡದೇ ಇದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ.

ಕತರ್ ಆಡಳಿತದ ಈ ಕ್ರಮ ವಿಶೇಷವಾಗಿ ಅನಿವಾಸಿ ಭಾರತೀಯರ ಶ್ಲಾಘನೆಗೆ ಒಳಗಾಗಿದೆ. ರಮಝಾನ್ ನಲ್ಲಿ ಕಡಿಮೆ ಬೆಲೆಯಲ್ಲಿ ಆಹಾರ ವಸ್ತುಗಳನ್ನು ಖರೀದಿಸುವುದರಿಂದ ಖರ್ಚು ಕಡಿಮೆಯಾಗುತ್ತದೆ ಮತ್ತು ಉಳಿದ ಹಣವನ್ನು ತಮ್ಮ ಕುಟುಂಬಗಳಿಗೆ ಕಳುಹಿಸುವ ಸದವಕಾಶ ಒದಗಲಿದೆ ಎಂದವರು ಹರ್ಷ ವ್ಯಕ್ತಪಡಿಸಿದ್ದಾರೆ.