ಲಾಕ್ ಡೌನ್ ನಿಂದ ಬಾಕಿಯಾಗಿದ್ದ ಯುವಕನಿಗೆ ವ್ಯವಸ್ಥೆ ಕಲ್ಪಿಸಿದ ಬಂಟ್ವಾಳ HRS ಕಾರ್ಯಕರ್ತರು

0
646

ಸನ್ಮಾರ್ಗ ವಾರ್ತೆ

ಬಂಟ್ವಾಳ: ಕರ್ನಾಟಕದಲ್ಲಿ ಸದ್ಯ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ನಡೆದುಕೊಂಡು ಆಂಧ್ರಕ್ಕೆ ತೆರಳುತ್ತಿದ್ದ ಯುವಕನೋರ್ವನಿಗೆ ಬಂಟ್ವಾಳ ಎಚ್ .ಆರ್.ಎಸ್(ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ) ಕಾರ್ಯಕರ್ತರು ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಸರಿಯಾದ ಆಹಾರ ವ್ಯವಸ್ಥೆ ಇಲ್ಲದವರಿಗಾಗಿ ಸದ್ಯ ಆಹಾರ ವಿತರಿಸಿ ಕಲ್ಲಡ್ಕ ಕಡೆಗೆ ಹೋಗುತ್ತಿರುವ ವೇಳೆ ಎಚ್ ಆರ್ ಎಸ್ ಬಂಟ್ವಾಳ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವನ ವೇಷಭೂಷಣ ಗಮನಿಸಿ ಮಾನಸಿಕ ಅಸ್ವಸ್ಥನಂತೆ ಕಂಡು ಬಂದದ್ದರಿಂದ ಆತನನ್ನು ನಿಲ್ಲಿಸಿ ವಿಚಾರಿಸಿದ್ದಾರೆ.

ವಿಚಾರಣೆಯ ವೇಳೆ ನನ್ನ ಹೆಸರು ಶರತ್ ಕುಮಾರ್. ಆಂಧ್ರ ಪ್ರದೇಶ ಮೂಲದವನು. ಎಂ.ಎ ಪದವೀಧರ. ನನ್ನ ತಂದೆ ತಾಯಿ ಜಗಳವಾಡಿ ಬೇರೆ ಬೇರೆ ಆಗಿರುವ ಕಾರಣ ಅವರು ಮೊದಲಿನಂತೆ ಸರಿಯಾಗಲು ಕೇರಳದ ಒಂದು ಪ್ರಸಿದ್ದ ದೇವಸ್ಥಾನಕ್ಕೆ ಹರಕೆ ಹೊತ್ತಿದ್ದೆ. ಆ ಹರಕೆ ತೀರಿಸಲು ಕೇರಳಕ್ಕೆ ಹೋಗಿದ್ದೆ. ಇದೇ ಸಮಯದಲ್ಲಿ ಹಿಂತಿರುಗಿ ಬರುವಾಗ ಕರ್ನಾಟಕದಲ್ಲಿ ಲಾಕ್ ಡೌನ್ ಬಿತ್ತು. ಇದ್ದ ಸ್ವಲ್ಪ ಹಣವೂ ಆಹಾರ ತಿಂದು ಖಾಲಿಯಾಗಿತ್ತು. ಆ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲೇ ಉಟ್ಟ ಬಟ್ಟೆಯೊಂದಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾನೆ.

ವಿಷಯ ತಿಳಿದ ಬಳಿಕ ಎಚ್ ಆರ್ ಎಸ್ ಬಂಟ್ವಾಳ ಕಾರ್ಯಕರ್ತರು ಆತನಿಗೆ ಆಹಾರ ಕೊಟ್ಟು, ಆತನನ್ನು ಬೋಳಂಗಡಿಯ ಹವ್ವಾ ಜುಮಾ ಮಸೀದಿಗೆ ಕರೆದುಕೊಂಡು ಬಂದು ಆತನಿಗೆ ಸ್ನಾನ ಮಾಡುವ ವ್ಯವಸ್ಥೆ ಕಲ್ಪಿಸಿ, ಹೊಸ ಬಟ್ಟೆ ನೀಡಿದ್ದಲ್ಲದೆ ಊಟ ತಿಂಡಿ ನೀಡಿ, ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತನ್ನ ಸಂಬಂಧಿಯೋರ್ವರು ಹಾಸನದಲ್ಲಿ ನೆಲೆಸಿದ್ದಾರೆ. ಅವರಲ್ಲಿಗೆ ತೆರಳುತ್ತೇನೆ. ಆ ಕಡೆಗೆ ತೆರಳುವ ಲಾರಿ ಏನಾದರೂ ಸಿಕ್ಕಲ್ಲಿ ಹತ್ತಿಕೊಂಡು ಹೋಗುವೆ. ನಿಮ್ಮ ಸಹಕಾರ ಮರೆಯುವುದಿಲ್ಲ ಎಂದು ಕೃತಜ್ಞತೆ ಸಲ್ಲಿಸಿದ್ದಾನೆ. ಎಚ್ ಆರ್ ಎಸ್ ಬಂಟ್ವಾಳ ತಾಲೂಕು ಗ್ರೂಪ್ ಲೀಡರ್ ಅಬ್ದುಲ್ ಸತ್ತಾರ್ ಗೂಡಿನಬಳಿ, ಮುಹ್ಸಿನ್ ಚೆಂಡಾಡಿ , ಮುಸ್ತಫಾ ಬೋಳಂಗಡಿ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.