ಮಾನವೀಯತೆ

0
1285

ಅಬ್ಬರಿಸಿ ಬೊಬ್ಬಿರಿದ
ವರುಣನ ಅಟ್ಟಹಾಸಕ್ಕೆ
ನಲುಗಿದವರ ನೋವಿಗೆ
ನಮ್ಮವರೇ ಸಾಂತ್ವನವಾದಾಗ
ಮಾನವೀಯತೆ ಇನ್ನೂ
ಜೀವಂತವಾಗಿರುವುದನ್ನು ಕಂಡೆ

ರೌದ್ರವತಾರವ ತಾಳಿ
ಅಟ್ಟಹಾಸಗೈದು ಹೆಮ್ಮರಗಳ
ಧರೆಗುರುಳಿಸಿದ ಮಹಾಮಾರುತಕ್ಕೆ
ಸಿಲುಕಿದ ಬಡಜೀವಗಳಿಗೆ
ಆಸರೆಯಾದ ನಮ್ಮವರನ್ನು
ಕಂಡಾಗ ಮನಷ್ಯತ್ವ
ಇನ್ನೂ ಉಸಿರಾಡುವುದನ್ನು ಕಂಡೆ.

ಭೋರ್ಗರೆದು ಅಡೆತಡೆಗಳನ್ನು
ಲೆಕ್ಕಿಸದೆ ಉಕ್ಕುಕ್ಕಿ ಹರಿದ ನೀರಿನ
ಸೆಳೆತಕ್ಕೆ ಸಿಕ್ಕಿದವರ ಕೈಚಾಚಿ
ಎಳೆದ ನಮ್ಮವರನ್ನು ಕಂಡಾಗ
ಇನ್ನೂ ಸಹೋದರಭಾವದ ತುಡಿತ ಕಂಡೆ.

ಆಕಾಶದೆತ್ತರದ ಗುಡ್ಡಬೆಟ್ಟಗಳ
ಕುಸಿತದಡಿ ಬಿದ್ದು ನರಳಾಡುವವರ
ಬಳಿಗೆ ತೆರಳಿ ಹೆಗಲೊಡ್ಡಿ ಹೊತ್ತು
ತಂದ ನಮ್ಮವರ ಕಂಡಾಗ
ಮನುಜ ರಕ್ತ ಒಂದೇ ಎಂಬ ಭಾವಕಂಡೆ.

ಹಸಿದ ಜೀವಗಳ ಕಂಡು
ಎಲೆ ಮೂಲೆ ಮೂಲೆಗಳಿಂದ
ಅನ್ನ ಉಡುಪು ಹೊತ್ತು ಸಾಗಿಸಿ
ತಂದು ರಾಶಿಹಾಕಿದ ನಮ್ಮವರ
ಕಂಡಾಗ ಇನ್ನೂ ಸೌಹಾರ್ದದದ ಪ್ರೀತಿ ಕಂಡೆ.

                                                                                         -ಹಸು. ಒಡ್ಡಂಬೆಟ್ಟು