ಮೃತ ತಂದೆಗೆ ವಿದಾಯ ಕೋರಲು ಕೊರೋನ ಶಂಕಿತ ಮಣಿಪುರಿ ಹುಡುಗಿಗೆ ಸಿಕ್ಕಿದ್ದು ಕೇವಲ ಮೂರು ನಿಮಿಷ

0
510

ಸನ್ಮಾರ್ಗ ವಾರ್ತೆ

ಕಾಂಗ್‌ಪೋಕ್‌ಪಿ,ಜೂ.5: ಮಂಗಳವಾರ ರಾತ್ರಿ ದೀರ್ಘಕಾಲದ ಅನಾರೋಗ್ಯದ ಬಳಿಕ ನಿಧನರಾದ ತನ್ನ ತಂದೆಗೆ ಅಂತಿಮ ವಿದಾಯ ಹೇಳಲು 22 ವರ್ಷದ ಅಂಜಲಿ ಹಮಾಂಗ್ಟೆ ಅವರನ್ನು ಇಂಫಾಲ್‌ನ ಕ್ವಾರಂಟೈನ್ ಕೇಂದ್ರದಿಂದ ಮಣಿಪುರದ ಕಾಂಗ್‌ಪೋಕ್‌ಪಿಗೆ ಕರೆತಂದಾಗ, ತನ್ನ ತಂದೆಗೆ ಅಂತಿಮ ವಿದಾಯ ಕೇವಲ ಮೂರು ನಿಮಿಷಗಳನ್ನು ಮಾತ್ರ ನೀಡಲಾಗಿತ್ತು.

COVID-19 ಶಂಕಿತ ಹುಡುಗಿ ಶವಪೆಟ್ಟಿಗೆಯ ಬಳಿ ಹೋಗಿ ಇಣುಕಿ ನೋಡುವ ದೃಶ್ಯಗಳು ಎಲ್ಲರನ್ನು ಭಾವುಕವಾಗಿಸಿತು. ಹುಡುಗಿ ತಂದೆಯ ಶವ ಪೆಟ್ಟಿಗೆಯ ಎದುರು ಬರುವಾಗ ಸಂಪೂರ್ಣ ರಕ್ಷಾಕವಚ ಧರಿಸಿದ್ದರೂ ಆಕೆಯ ತಾಯಿ, ಸಂಬಂಧಿಕರು ಅಥವಾ ನೆರೆಹೊರೆಯವರು ಆಕೆಯ ಹತ್ತಿರ ಹೋಗಿ ಅವಳನ್ನು ಸಮಾಧಾನಪಡಿಸಲು ಸಾಧ್ಯವಾಗಲಿಲ್ಲ. ಈ ನಡುವೆ ವೈದ್ಯರು ತಮ್ಮ ಸ್ಟಾಪ್‌ವಾಚ್‌ನತ್ತ ನೋಡುತ್ತಲೇ ಇದ್ದರು ಮತ್ತು ನಿಗದಿಪಡಿಸಿದ ಮೂರು ನಿಮಿಷಗಳು ಮುಗಿದ ಕೂಡಲೇ ಆಕೆಯನ್ನು ಆರೋಗ್ಯ ಅಧಿಕಾರಿಗಳು ಕರೆದುಕೊಂಡು ಹೋದರು.

ಬಾಲಕಿ ಚೆನ್ನೈನಿಂದ ಮೇ 25 ರಂದು ಶ್ರಮಿಕ್ ರೈಲಿನಲ್ಲಿ ಹಿಂದಿರುಗಿದ್ದಳು ಮತ್ತು ಆಕೆಯ ಜೊತೆಗೆ ಪ್ರಯಾಣಿಸಿದ ಇನ್ನೊಬ್ಬ ಪ್ರಯಾಣಿಕರಿಗೆ ಕೊರೋನಾ ಪಾಸಿಟಿವ್ ಎಂಬುದು ದೃಢಪಟ್ಟ ಬಳಿಕ ಆಕೆಯನ್ನು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿತ್ತು.

ಅಧಿಕಾರಿಗಳಿಂದ ಅನುಮತಿ ಪಡೆದು ಪೂರ್ಣ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್ ಧರಿಸಿದ ನಂತರವೇ ಬಾಲಕಿಗೆ ಬುಧವಾರ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು.

ಮಣಿಪುರದಲ್ಲಿ ಮತ್ತೆ 13 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 121 ಕ್ಕೆ ತಲುಪಿದೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.