ಮತ ಪ್ರಸಂಗ- ಸಣ್ಣ ಕತೆ

0
976

ಬಶೀರ್ ಅಹ್ಮದ್.ಕಿನ್ಯಾ

ಅಮ್ಮನ ಸನಿಹದಲ್ಲಿ ಕುಳಿತು ಮತ ಪ್ರವಚನ ಕೇಳುತ್ತಿದ್ದ ಆ ಹುಡುಗನಿಗೆ ಅದು ಅನಿವಾರ್ಯವಾಗಿರಲಿಲ್ಲ. ಆತನ ಗೆಳಯರು ತಾತ್ಕಾಲಿಕ ಪೇಟೆಯಲ್ಲಿ ಅಡ್ಡಾದಿಡ್ಡಿ ಓಡಾಡಿ, ಐಸ್ ಕ್ರೀಂ ಮೆಲ್ಲುತ್ತಾ ಉಲ್ಲಾಸಪಡುತ್ತಿದ್ದರೆ, ಆತ ಅಮ್ಮನ ಸೆರಗಿನಲ್ಲಿ ಆಸರೆ ಪಡೆದಿದ್ದ. ಅಬ್ಬ ತೀರಿಕೊಂಡ ನಂತರ ಅಮ್ಮ ಸುತ್ತುವ ಬೀಡಿಯೇ ಅವರ ಬದುಕಿಗೆ ಆಸರೆಯಾಗಿತ್ತು.

ಉಸ್ತಾದರು ಖಬರ್, ಮಹ್ಶರಾ ಬಗ್ಗೆ ವಿವರಿಸುತ್ತಾ, ಸ್ವರ್ಗ ತಲುಪಿದರು. “ಅಲ್ಲಿ ಫಲವತ್ತಾದ ಹಣ್ಣುಗಳಿವೆ” ಹೌಳುಲ್ ಕೌಸರ್ ಪೇಯವಿದೆ ಎಂದಾಗ ಆ ಹುಡುಗನ ಬಾಯಲ್ಲಿ ನೀರೂರತೊಡಗಿತು. ಪ್ರವಚನ ಮುಗಿದು ಮನೆ ಕಡೆ ನಡೆಯುವಾಗ ಆ ಅಮ್ಮನ ಮುಖದಲ್ಲಿ ಈ ಹಿಂದೆಂದೂ ಕಾಣದಂತಹ ಮಂದಹಾಸ ಕಂಡು ಕಂದನಿಗೂ ಉತ್ಸಾಹ.

“ಉಮ್ಮಾ ನಾವು ಕೂಡ ಸ್ವರ್ಗಕ್ಕೆ ಹೋದರೆ ಹೇಗೆ……?” ಪುಟ್ಟ ತುಟಿಗಳಲ್ಲಿ ದೊಡ್ಡ ಮಾತು ಕೇಳಿಸಿಕೊಂಡ ಅಮ್ಮ ಒಮ್ಮೆಗೆ ಹೈರಾನಾಗಿ ಬಿಟ್ಟರು.

‘ಇಲ್ಲ ಮಗೂ ಆತ್ಮಹತ್ಯೆ ಮಹಾಪಾಪ’ ಎನ್ನ ಬೇಕು ಎಂದೆಣಿಸಿದರೂ ಆಕೆ ಮೌನಕ್ಕೆ ಶರಣಾದಳು.

ಜನಜಂಗುಳಿಯಲ್ಲಿ ತನ್ನ ಮಾತು ಲೀನವಾದ ಬಗ್ಗೆ ಆತ ಮರುಕಪಟ್ಟರೂ ಮಗದೊಮ್ಮೆ ಕೇಳುವ ಸಾಹಸಕ್ಕೆ ಇಳಿಯದೆ ಅಮ್ಮನೆ ಹಿಂದೆ ಹೆಜ್ಜೆ ಹಾಕತೊಡಗಿದ.