ಏ ಕೆ ಕುಕ್ಕಿಲ
ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರನ್ನು ಬಿಜೆಪಿ ಹೇಗೆ ದುರುಪಯೋಗಿಸುತ್ತಿದೆ ಅನ್ನುವುದಕ್ಕೆ ಚಿತ್ರನಟ ನಸೀರುದ್ದೀನ್ ಷಾ ಪ್ರಕರಣ ಅತ್ಯುತ್ತಮ ಪುರಾವೆ. ದೇಶದಲ್ಲಿರುವ ಅಸಹಿಷ್ಣುತೆಯ ವಾತಾವರಣದ ಬಗ್ಗೆ ನಸೀರುದ್ದೀನ್ ಷಾ ಮಾತಾಡಿದ್ದೇ ತಡ, ಅವರಿಗೆ ಉತ್ತರಿಸಲು ಬಿಜೆಪಿ ಆಯ್ದುಕೊಂಡದ್ದು ನಖ್ವಿಯವರನ್ನು. ಈ ಹಿಂದೆ ಅಮೀರ್ ಖಾನ್ ಇವೇ ಮಾತನ್ನು ಆಡಿದ್ದಾಗಲೂ ಬಿಜೆಪಿ ಇದೇ ನಖ್ವಿಯವರನ್ನು ಬಳಸಿಕೊಂಡಿತ್ತು. ತ್ರಿವಳಿ ತಲಾಕ್ ವಿಷಯದಲ್ಲೂ ಬಿಜೆಪಿ ಬಳಸಿಕೊಂಡಿದ್ದು ಇದೇ ನಖ್ವಿಯನ್ನು. ಆದರೆ, ದೇಶದಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳು, ಥಳಿತಗಳು, ಬಿಜೆಪಿ ನಾಯಕರಿಂದಲೇ ಹೊರಡುವ ಕೋಮು ಪ್ರಚೋದನಕಾರಿ ಹೇಳಿಕೆಗಳು, ಮುಜಫ್ಫರ್ ನಗರ್, ಗುಜರಾತ್ ಹತ್ಯಾಕಾಂಡಗಳು ಇತ್ಯಾದಿಗಳ ವಿಷಯದಲ್ಲಿ ನಖ್ವಿಯವರನ್ನು ಬಿಜೆಪಿ ಕಳುಹಿಸಿಕೊಡುವುದೇ ಇಲ್ಲ. ಬಹುಶಃ, ಎಲ್ಲಿ ದೌರ್ಜನ್ಯಕ್ಕೊಳಗಾದ ಸಮುದಾಯದ ಪರ ಅವರು ಬಾಯಿತಪ್ಪಿ ಅನುಕಂಪದ ಮಾತಾಡಿಬಿಟ್ಟಾರೋ ಎಂಬ ಭಯ ಬಿಜೆಪಿಗೆ ಇರಬೇಕು. ನಿಜವಾಗಿ ಇದೊಂದು ಯೋಜಿತ ತಂತ್ರ. ವ್ಯಕ್ತಿತ್ವದ ದುರುಪಯೋಗ. ಬಿಜೆಪಿ ಸರ್ಕಾರದ ನೀತಿಯನ್ನು ಮುಸ್ಲಿಮನೋರ್ವ ಪ್ರಶ್ನಿಸಿದರೆ, ಅದಕ್ಕೆ ಉತ್ತರಿಸಲು ಮುಸ್ಲಿಮನನ್ನೇ ಛೂ ಬಿಡುವುದರಿಂದ ಎರಡು ಉದ್ದೇಶಗಳು ಈಡೇರುತ್ತದೆ. ಒಂದು- ಇಡೀ ಪ್ರಕರಣವನ್ನು ಮುಸ್ಲಿಂ ಪ್ರಕರಣವಾಗಿ ಮೂಲೆಗೊತ್ತಲು ಮತ್ತು ಈ ಪ್ರಕರಣಕ್ಕೆ ರಾಷ್ಟ್ರೀಯ ಮಹತ್ವ ಇಲ್ಲವೆಂಬಂತೆ ಬಿಂಬಿಸಲು ಸಾಧ್ಯವಾಗುತ್ತದೆ. ಇನ್ನೊಂದು, ಮುಸ್ಲಿಂ ವರ್ಸಸ್ ಮುಸ್ಲಿಂ ಎಂಬಂತೆ ಪ್ರಕರಣವನ್ನು ಮಾರ್ಪಡಿಸುವುದರಿಂದ ನಿಜವಾದ ವಿಷಯ ಬದಿಗೆ ಸರಿಯುತ್ತದೆ ಮತ್ತು ಹೇಳಿಕೆ, ಪ್ರತಿಹೇಳಿಕೆಗಳ ಮೂಲಕ ಪ್ರಕರಣ ಮನರಂಜನೆಯ ಮಟ್ಟಕ್ಕೆ ಇಳಿದುಬಿಡುತ್ತದೆ. ವಿಷಯದ ಗಾಂಭೀರ್ಯತೆಯನ್ನು ತಗ್ಗಿಸುವ ಉದ್ದೇಶವೂ ಇದರ ಹಿಂದಿದೆ.
ನಖ್ವಿ ಸಾಹೇಬರೇ, ನೀವು ದುರುಪಯೋಗಿಸಲ್ಪಡುತ್ತಿದ್ದೀರಿ..












