ಕೊರೋನಾವನ್ನು ಹಿಂದೂ- ಮುಸ್ಲಿಮ್ ಎಂದು ವಿಭಜಿಸಬೇಡಿ; ಒಗ್ಗಟ್ಟಿನಿಂದ ಹೋರಾಡೋಣ: ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಬೆಳಗಾಮಿ ಮುಹಮ್ಮದ್ ಸಾದ್

0
969

ಸನ್ಮಾರ್ಗ ವಾರ್ತೆ

ಬೆಂಗಳೂರು, ಎಪ್ರಿಲ್ 1- ಕೋರೋನಾ ಜಾಗತಿಕ ಪಿಡುಗಾಗಿದೆ. ಸ್ವಶಿಸ್ತು ಮತ್ತು ಒಗ್ಗಟ್ಟಿನ ಹೋರಾಟದ ಹೊರತು ಇದನ್ನು ಮಣಿಸಲು ಸಾಧ್ಯವಿಲ್ಲ. ಆದ್ದರಿಂದ ಜನರು ಅತ್ಯವಶ್ಯಕ ಎಂದು ಕಂಡುಬಂದಾಗ ಮಾತ್ರ ಮನೆಯಿಂದ ಹೊರ ಬರಬೇಕು. ಈ ವಿಷಯದಲ್ಲಿ ಸರಕಾರ ನೀಡಿರುವ ಎಚ್ಚರಿಕೆಯನ್ನು ಪಾಲಿಸಬೇಕು. ಹಾಗೆಯೇ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ತಬ್ ಲೀಗ್ ಜಮಾಅತಿನವರು ನಡೆಸಿದ ಸಮ್ಮೇಳನದ ನೆಪದಲ್ಲಿ ಮುಸ್ಲಿಮರನ್ನು ಕೋರೋನಾ ಹಂಚುವವರಂತೆ ಬಿಂಬಿಸುವುದು ಮತ್ತು ಕಾಯಿಲೆಯನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದು ಮಾನವ ವಿರೋಧಿಯಾಗಿದ್ದು, ಈ ಬಗೆಯ ಅಪಪ್ರಚಾರ ಮಾಡುವವರ ವಿರುದ್ಧ ಸರಕಾರ ನಿಗಾವಹಿಸಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಬೆಳಗಾಮಿ ಮುಹಮ್ಮದ್ ಸಾದ್ ಆಗ್ರಹಿಸಿದ್ದಾರೆ.

ಲಾಕ್ ಡೌನ್ ನಿಂದಾಗಿ ದಿನಗೂಲಿಗಳು, ವಲಸಿಗರು, ಬಡವರು ನೋಟು ನಿಷೇಧದ ಸಮಯಕ್ಕಿಂತಲೂ ಹೆಚ್ಚಿನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ದಿಢೀರಾಗಿ ಲಾಕ್ ಡೌನ್ ಘೋಷಿಸಿರುವುದು ಇದಕ್ಕೆ ಕಾರಣ. ವಲಸೆ ಕಾರ್ಮಿಕರು ತಮ್ಮೂರಿಗೆ ಹೋಗಲಾಗದೆ ಬರಿಹೊಟ್ಟೆಯಲ್ಲಿ ದಿನದೂಡುವ ಸ್ಥಿತಿ ಎದುರಾಗಿದೆ. ನೋಟು ನಿಷೇಧದ ಸಂದರ್ಭದಲ್ಲಾದರೆ ಕೆಲಸ ಸಿಗುತ್ತಿತ್ತು. ಈಗ ಕೆಲಸ ಮಾಡುವುದಕ್ಕೂ ಅವಕಾಶ ಇಲ್ಲ. ಸರಕಾರ ಒಂದಷ್ಟು ವಿವೇಚನೆಯಿಂದ ನಡೆದು ಕೊಂಡಿರುತ್ತಿದ್ದರೆ ಈಗಿನ ಸಮಸ್ಯೆಯನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಬಡವರ ಸೇವೆಗೆ ಸದಾ ಸಿದ್ಧವಾಗಿದ್ದು ಈಗಾಗಲೇ ರಾಜ್ಯಾದ್ಯಂತ ತನ್ನ ಸಾವಿರಾರು ಕಾರ್ಯಕರ್ತರು ಸೇವಾ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಅಕ್ಕ ಪಕ್ಕದಲ್ಲಿರುವವರ ಬಗ್ಗೆ ಕ್ಷೇಮ ವಿಚಾರ ನಡೆಸಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಜಮಾಅತ್ ಇತರ ಸಂಘಟನೆಗಳ ಜೊತೆ ಸೇರಿ ರಾಜ್ಯದಲ್ಲಿ ಸೇವಾ ಚಟುವಟಿಕೆ ನಡೆಸುತ್ತಿದೆ. ಮುಖ್ಯವಾಗಿ ಲಾಕ್ ಡೌನ್ ಇರುವವರೆಗೆ ಈ ಸೇವಾ ಚಟುವಟಿಕೆಯನ್ನು ನಾವು ಮುಂದುವರಿಸಲಿದ್ದೇವೆ. ಆ ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು ಯೋಜನೆ ರೂಪಿಸಲಿದ್ದೇವೆ. ಇಂತಹ ಸಂದರ್ಭದಲ್ಲಿ ಸರಕಾರ ಒಂಟಿಯಾಗಿ ಕೆಲಸ ನಿರ್ವಹಿಸುವುದಕ್ಕೆ ಸಾಧ್ಯವಿಲ್ಲ. ಸರಕಾರ ಇತರ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ನಿರ್ವಹಿಸಬೇಕು ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

ಹಾಗೆಯೇ ಲಾಕ್ ಡೌನ್ ನಿಂದಾಗಿ ಈಗಾಗಲೇ ಜನರು ಸಂಕಷ್ಟ ಎದುರಿಸುತ್ತಿದ್ದು ಇದು ಎಷ್ಟು ದಿನಗಳವರೆಗೆ ಮುಂದುವರೆಯುತ್ತದೆ ಎನ್ನುವ ಸ್ಪಷ್ಟತೆ ಇಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಸಾಮಾನ್ಯ ಜನರ ಮುಂದಿನ ಬದುಕಿಗೆ ಪೂರಕವಾದ ಆರ್ಥಿಕ ಯೋಜನೆಗಳನ್ನು ಈಗಲೇ ಹಾಕಿಕೊಳ್ಳಬೇಕು. ಜಮಾಅತ್ ತನ್ನಿಂದಾದಷ್ಟು ಜೀವಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.